Ayogya 2 Review: ಸಿದ್ಧ ಸೂತ್ರದ ಗುಂಗಿನಲ್ಲಿ ಹಳ್ಳಿ ರಾಜಕಾರಣದ ಸುತ್ತ ತಿರುಗುವ ಸಿದ್ದೇಗೌಡ!
Ayogya 2 Movie Review: ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ನಟನೆಯ 'ಅಯೋಗ್ಯ 2' ಸಿನಿಮಾ ಇಂದು (ಆಗಸ್ಟ್ 7, 2026) ತೆರೆಕಂಡಿದೆ. ಪಂಚಾಯಿತಿ ಸದಸ್ಯನಾಗಿರುವ ಸಿದ್ಧೇಗೌಡ ಈಗ ಅಧ್ಯಕ್ಷ ಸ್ಥಾನಕ್ಕಾಗಿ ಪುನಃ ಬಚ್ಚೇಗೌಡನ ವಿರುದ್ಧ ನಡೆಸುವ ಹೋರಾಟವೇ ಚಿತ್ರದ ಕಥೆಯಾಗಿದೆ.
-
ಚಿತ್ರ: ಅಯೋಗ್ಯ 2
ಬಿಡುಗಡೆ ದಿನಾಂಕ: ಆಗಸ್ಟ್ 7, 2026
ಭಾಷೆ: ಕನ್ನಡ
ಪ್ರಕಾರ (Genre): ಕಾಮಿಡಿ, ಡ್ರಾಮಾ
ನಿರ್ದೇಶನ: ಎಸ್. ಮಹೇಶ್ ಕುಮಾರ್
ತಾರಾಗಣ: ಸತೀಶ್ ನೀನಾಸಂ, ರಚಿತಾ ರಾಮ್, ರವಿಶಂಕರ್, ರವಿಚಂದ್ರನ್, ಅರುಣಾ ಬಾಲರಾಜ್, ಶಿವರಾಜ್ ಕೆ. ಆರ್. ಪೇಟೆ, ಗಿರಿ ಶಿವಣ್ಣ, ಮಂಜು ಪಾವಗಡ, ಸುಂದರ್ ರಾಜ್, ಸಾಧು ಕೋಕಿಲ
ಅವಧಿ: 152 ನಿಮಿಷಗಳು
ರೇಟಿಂಗ್: 2.5/5
ಎಸ್. ಮಹೇಶ್ ಕುಮಾರ್ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದ ‘ಅಯೋಗ್ಯ’ ಸಿನಿಮಾ 2018ರಲ್ಲಿ ರಿಲೀಸ್ ಆಗಿ ಗಮನ ಸೆಳೆದಿತ್ತು. ಅದರಲ್ಲೂ ಆ ಸಿನಿಮಾದ ಹಾಡುಗಳು ಆ ಕಾಲಕ್ಕೆ ದೊಡ್ಡ ಟ್ರೆಂಡ್ ಸೃಷ್ಟಿಸಿದ್ದವು. ನಟ ಸತೀಶ್ ನೀನಾಸಂ ಅವರ ವೃತ್ತಿಜೀವನಕ್ಕೆ ಈ ಸಿನಿಮಾ ದೊಡ್ಡ ಗೆಲುವು ತಂದುಕೊಟ್ಟಿತ್ತು. ರಚಿತಾ ರಾಮ್‌ಗೂ ‘ಅಯೋಗ್ಯ’ ಗೆಲುವಿನ ಸಿಹಿ ನೀಡಿದ್ದ. ಮೊದಲ ಯತ್ನದಲ್ಲೇ ಯಶಸ್ಸು ಕಂಡ ನಿರ್ದೇಶಕ ಮಹೇಶ್, ಅಂದು ಪ್ರೇಕ್ಷಕರಲ್ಲಿ ಬೆರಗು ಮೂಡಿಸಿದ್ದರು. ಇದೀಗ 8 ವರ್ಷಗಳ ಬಳಿಕ ‘ಅಯೋಗ್ಯ’ ಸಿನಿಮಾಗೆ ಸೀಕ್ವೆಲ್ ಮಾಡಲಾಗಿದ್ದು, ಇಂದು (ಆ.7) ತೆರೆಕಂಡಿದೆ. ಹಾಗಾದರೆ, ‘ಅಯೋಗ್ಯ 2’ ಹೇಗಿದೆ? ಮೊದಲ ಭಾಗದಂತೆಯೇ ಮಜಾ ನೀಡುತ್ತದೆಯೇ? ಇಲ್ಲಿದೆ ಸಿನಿಮಾ ವಿಮರ್ಶೆ.
‘ಅಯೋಗ್ಯ 2’ರ ಕಥೆ ಏನು?
ಊರಿನ ಪ್ರಮುಖ ಹಾಗೂ ಪ್ರಭಾವಿಯಾದ ಬಚ್ಚೇಗೌಡನ (ರವಿಶಂಕರ್) ಎದುರು ಸಿದ್ಧೇಗೌಡ (ಸತೀಶ್ ನೀನಾಸಂ) ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪ್ರಚಂಡ ಗೆಲುವು ಸಾಧಿಸುತ್ತಾನೆ ಮತ್ತು ಪ್ರೇಯಸಿ ನಂದಿನಿಯ (ರಚಿತಾ ರಾಮ್) ಜೊತೆಯಾಗುತ್ತಾನೆ. ಅಲ್ಲಿಗೆ ‘ಅಯೋಗ್ಯ’ ಮೊದಲ ಭಾಗ ಮುಕ್ತಾಯಗೊಂಡಿತ್ತು. ಎಲ್ಲಿಗೆ ಸಿನಿಮಾ ನಿಂತಿತ್ತೋ, ಅಲ್ಲಿಂದಲೇ ಪಾರ್ಟ್ 2 ಆರಂಭವಾಗಿದೆ. ಅಂದು ಗ್ರಾಮ ಪಂಚಾಯಿತಿ ಸದಸ್ಯನಾದ ಸಿದ್ಧೇಗೌಡ, ಸದ್ಯ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾನೆ. ಇನ್ನೊಂದೆಡೆ ನಂದಿನಿಯ ಜೊತೆ ಮದುವೆಯಾದ ಮೇಲೆ ಮೊದಲ ರಾತ್ರಿಯ ಕನಸು ಕಾಣುತ್ತಿದ್ದಾನೆ. ಇವೆರಡೂ ಅಂಶಗಳ ಮೇಲೆಯೇ ಕಥೆ ಸಾಗುತ್ತದೆ. ನಂತರ ನಂದಿನಿಯ ಜೊತೆಗಿನ ಸಂಸಾರಕ್ಕಿಂತ ಪಂಚಾಯಿತಿ ಅಧ್ಯಕ್ಷಗಿರಿಯ ಮೇಲೆಯೇ ಹೆಚ್ಚು ಗಮನ ನೀಡುವ ಸಿದ್ಧೇಗೌಡ, ಮತ್ತೆ ಬಚ್ಚೇಗೌಡನ ಜೊತೆಗೆ ಮುಖಾಮುಖಿಯಾಗುತ್ತಾನೆ. ಆದರೆ, ಗ್ರಾಮ ಪಂಚಾಯಿತಿ ಸದಸ್ಯನಾದಷ್ಟು ಸುಲಭವಾಗಿ ಅಧ್ಯಕ್ಷಗಿರಿ ಸಿದ್ಧೇಗೌಡನಿಗೆ ಒಲಿಯುವುದಿಲ್ಲ! ಹಾಗಾದರೆ, ಸಿದ್ಧೇಗೌಡನಿಗೆ ಎದುರಾಗುವ ಸವಾಲುಗಳೇನು? ಈ ಬಾರಿ ಬಚ್ಚೇಗೌಡ ಏನೆಲ್ಲಾ ರಣತಂತ್ರ ಹೂಡುತ್ತಾನೆ ಎಂಬುದನ್ನು ಪಾರ್ಟ್ 2ರಲ್ಲಿ ಹೇಳಲಾಗಿದೆ.
ಮೇಕಿಂಗ್ ಹೇಗಿದೆ? ಮಹೇಶ್ ನಿರ್ದೇಶನ ಇಷ್ಟವಾಗುತ್ತಾ?
ನಿರ್ದೇಶಕ ಎಸ್. ಮಹೇಶ್ ಕುಮಾರ್ ಈ ಬಾರಿ ಕಥೆ ಹಾಗೂ ಚಿತ್ರಕಥೆಯ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಲು ಹೋಗಿಲ್ಲ; ಸಿದ್ಧಸೂತ್ರಕ್ಕೇ ಹೆಚ್ಚು ಮನ್ನಣೆ ನೀಡಿದ್ದಾರೆ. ‘ಅಯೋಗ್ಯ’ ಚಿತ್ರದಲ್ಲಿ ಬಳಸಿದ್ದ ಪ್ಯಾಟ್ರನ್ ಅನ್ನೇ ಇಲ್ಲೂ ಮುಂದುವರಿಸಿದ್ದಾರೆ. ಆ ಸಿದ್ಧಸೂತ್ರದ ಸುಳಿವು ಆರಂಭದಲ್ಲೇ ಸಿಗುತ್ತದೆ. ಹೀರೋ ಪಾತ್ರದ ಎಂಟ್ರಿ ಆಗುತ್ತಿದ್ದಂತೆಯೇ, ಒಂದು ಮಾಸ್ ಡೈಲಾಗ್ ಮತ್ತು ಫೈಟ್ ಬರುತ್ತದೆ. ಜೊತೆಗೆ ಇಂಟ್ರೊಡಕ್ಷನ್ ಹಾಡು ಕೂಡ ಇದೆ.
‘ಅಯೋಗ್ಯ’ ಚಿತ್ರದಲ್ಲಿ ಹೆಚ್ಚೇನೂ ಜವಾಬ್ದಾರಿ ಇಲ್ಲದ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಿದ್ಧೇಗೌಡ, ಸದಸ್ಯನಾದ ಮೇಲೆಯೂ ಬದಲಾಗಿಲ್ಲ. ಗ್ರಾಮ ಪಂಚಾಯಿತಿ ಸದಸ್ಯನಾದ ಮೇಲೆ ಆ ಪಾತ್ರವನ್ನು ಒಂಚೂರು ಹೊಣೆಗಾರಿಕೆಯಿಂದ ಬರೆಯಬಹುದಾಗಿತ್ತು. ಗ್ರಾಮ ಪಂಚಾಯಿತಿ ಸದಸ್ಯನಾಗಿ ಒಂದಷ್ಟು ಕೆಲಸಗಳನ್ನು ಮಾಡಿಸುವಂತಹ ಹಾಗೂ ಸಮಾಜಕ್ಕೆ ಸಂದೇಶ ನೀಡುವಂತಹ ದೃಶ್ಯಗಳನ್ನು ಜೋಡಿಸಬಹುದಾಗಿತ್ತು. ಅದೆಲ್ಲವೂ ಇಲ್ಲಿ ಮಿಸ್ಸಿಂಗ್ ಎನಿಸುತ್ತದೆ.
ನಾಯಕಿ ನಂದಿನಿಯ ಪಾತ್ರಕ್ಕೆ ಜಾಸ್ತಿ ಸ್ಕೋಪ್ ಇಲ್ಲ. ಅಲ್ಲಲ್ಲಿ ಕಾಣಿಸಿಕೊಂಡು, ಹಾಡೊಂದರಲ್ಲಿ ಹೆಜ್ಜೆ ಹಾಕುವುದಕ್ಕಷ್ಟೇ ಆ ಪಾತ್ರ ಸೀಮಿತವಾಗಿದೆ. ಫಸ್ಟ್ ಹಾಫ್‌ನಲ್ಲಿ ಒಂಚೂರು ಲಯಬದ್ಧವಾಗಿ ಸಾಗುವ ಕಥೆಯು, ದ್ವಿತೀಯಾರ್ಧದಲ್ಲಿ ಅಡ್ಡಾದಿಡ್ಡಿಯಾಗುತ್ತದೆ. ಕೊನೆಯಲ್ಲಿ ಸಾಧು ಕೋಕಿಲ ಎಂಟ್ರಿ ರಿಲೀಫ್ ನೀಡಿದರೆ, ರವಿಚಂದ್ರನ್ ಅವರ ಅತಿಥಿ ಪಾತ್ರ ಕುತೂಹಲ ಹೆಚ್ಚಿಸುತ್ತದೆ.
‘ಅಯೋಗ್ಯ’ ಸಿನಿಮಾ ಫೇಮಸ್ ಆಗಿದ್ದೇ ಅದರ ಹಾಡುಗಳಿಂದ. ಆದರೆ, ಈ ಬಾರಿ ಅರ್ಜುನ್ ಜನ್ಯ ಅವರ ಸಂಗೀತ ನಿರೀಕ್ಷೆಗೆ ತಕ್ಕಂತೆ ಇಲ್ಲ! ‘ಮುದ್ಮುದ್ದು ಪುಟ್ಟ ಲಕ್ಷ್ಮೀ’ ಹಾಡು ಚೆನ್ನಾಗಿದ್ದರೂ, ಸಿಡ್ ಶ್ರೀರಾಮ್ ಧ್ವನಿ ಸರಿಹೊಂದುವುದಿಲ್ಲ ಎನಿಸುತ್ತದೆ. ಉಳಿದ ಹಾಡುಗಳು ಅಷ್ಟೇನೂ ಹಿಡಿಸುವುದಿಲ್ಲ. ಕೆಲ ದೃಶ್ಯಗಳ ಹಿನ್ನೆಲೆಯಲ್ಲಿ ಆಗಾಗ ‘ಏನಮ್ಮಿ ಏನಮ್ಮಿ’ ಹಾಡಿನ ಟ್ಯೂನ್ ಪ್ಲೇ ಆಗುತ್ತಲೇ ಇರುತ್ತದೆ. ನಟಿ ಪ್ರಜ್ಞಾ ಕಾಣಿಸಿಕೊಂಡಿರುವ ಐಟಂ ಸಾಂಗ್‌ನಿಂದ ಸಿನಿಮಾಕ್ಕೇನೂ ಲಾಭವಾಗಿಲ್ಲ!
ಸತೀಶ್ ನೀನಾಸಂ ನಟನೆ ಹೇಗಿದೆ?
ಸಿದ್ಧೇಗೌಡನ ಪಾತ್ರದಲ್ಲಿ ಸತೀಶ್ ನೀನಾಸಂ ಹಿಂದಿನ ಚಾರ್ಮ್ ಅನ್ನೇ ಮುಂದುವರಿಸಿದ್ದಾರೆ. ಪಂಚಿಂಗ್ ಡೈಲಾಗ್ ಹೇಳುತ್ತಾ, ರವಿಶಂಕರ್ ಪಾತ್ರಕ್ಕೆ ಟಕ್ಕರ್ ಕೊಡುತ್ತಾ, ನಾಯಕಿಯ ಜೊತೆ ಮರ ಸುತ್ತುತ್ತಾ ಮಿಂಚಿದ್ದಾರೆ ಸತೀಶ್. ಇನ್ನು, ಈ ಸಲ ಸರ್ಕಾರಿ ಉದ್ಯೋಗಿಯಾಗಿರುವ ರಚಿತಾ ರಾಮ್ ಸಖತ್ ಬ್ಯುಸಿ! ಹಾಗಾಗಿ, ಸಿನಿಮಾದಲ್ಲೂ ಜಾಸ್ತಿ ಕಾಣಿಸುವುದಿಲ್ಲ; ಆಗಾಗ ಬಂದು ಮಿಂಚಿ ಮರೆಯಾಗುತ್ತಾರೆ! ರವಿಶಂಕರ್ ಅವರ ಖಡಕ್ ನಟನೆ ಮುಂದುವರಿದಿದೆ. ಕಳೆದ ಬಾರಿ ಬೈರತಿ ಗುಂಡುಕಲ್ ಆಗಿ ನಗಿಸಿದ್ದ ಸಾಧು ಕೋಕಿಲ, ಈ ಸಲ ರಾಗಿ ಭಾಯ್ ಆಗಿ ಹಾಸ್ಯದ ಹೊಳೆ ಹರಿಸಿದ್ದಾರೆ. ಗಿರಿ ಶಿವಣ್ಣ ಮತ್ತು ಶಿವರಾಜ್ ಕೆ.ಆರ್. ಪೇಟೆ ಪ್ರೇಕ್ಷಕರನ್ನು ನಗಿಸಲು ತುಂಬಾ ಕಷ್ಟಪಟ್ಟಿದ್ದಾರೆ. ಅರುಣಾ ಬಾಲರಾಜ್ ಹಾಗೂ ಸುಂದರ್ ರಾಜ್ ನಟನೆ ಎಂದಿನಂತೆ ಲೀಲಾಜಾಲ. ಕ್ಲೈಮ್ಯಾಕ್ಸ್‌ನಲ್ಲಿ ಎಂಟ್ರಿ ಕೊಡುವ ರವಿಚಂದ್ರನ್ ಅವರ ಅತಿಥಿ ಪಾತ್ರ ಸಿನಿಮಾದ ಮೈಲೇಜ್ ಅನ್ನು ತಕ್ಕಮಟ್ಟಿಗೆ ಹೆಚ್ಚಿಸಲು ನೆರವಾಗಿದೆ.
ಈ ಹಿಂದೆ ‘ಅಯೋಗ್ಯ’ ಸಿನಿಮಾವನ್ನು ಇಷ್ಟಪಟ್ಟಿದ್ದರೆ, ಹೆಚ್ಚೇನೂ ನಿರೀಕ್ಷೆ ಇಟ್ಟುಕೊಳ್ಳದೇ ಇದ್ದರೆ ‘ಅಯೋಗ್ಯ 2’ ಸಿನಿಮಾವನ್ನು ಒಮ್ಮೆ ನೋಡಬಹುದು.