ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bail Review: ಸಮಾಜಘಾತುಕರಿಗೆ ಪರ್ಯಾಯ ನ್ಯಾಯದ ಪಂಚ್‌ ನೀಡುವ ಶಿವಣ್ಣ!

ʻಕರುನಾಡ ಚಕ್ರವರ್ತಿʼ ಶಿವರಾಜ್‌ಕುಮಾರ್ ಮತ್ತು ನಿರ್ದೇಶಕ ಪವನ್ ಒಡೆಯರ್ ಕಾಂಬಿನೇಷನ್‌ನಲ್ಲಿ ‘ಬೇಲ್’ ಸಿನಿಮಾ ತೆರೆಕಂಡಿದೆ. ಈ ಚಿತ್ರ ಹೇಗಿದೆ? ಸಿನಿಪ್ರಿಯರ ನಿರೀಕ್ಷೆಯನ್ನು ʻಬೇಲ್‌ʼ ಸಿನಿಮಾ ಫುಲ್‌ಫಿಲ್‌ ಮಾಡಿದೆಯಾ? ಇಲ್ಲಿದೆ ಓದಿ ಸಂಪೂರ್ಣ ಸಿನಿಮಾ ವಿಮರ್ಶೆ.

Bail Review: ಶಿವಣ್ಣ, ಜಯರಾಮ್‌, ಯೋಗಿ ನಟನೆಯ ʻಬೇಲ್ʼ‌ ಸಿನಿಮಾ ಹೇಗಿದೆ?

-

Avinash GR
Avinash GR Oct 2, 2026 4:39 PM

ಸಿನಿಮಾ: ಬೇಲ್

ತಾರಾಗಣ: ಶಿವರಾಜ್‌ಕುಮಾರ್, ಸಾಯಿಕುಮಾರ್, ಜಯರಾಮ್, ದೀಕ್ಷಿತ್ ಶೆಟ್ಟಿ, ಲೂಸ್‌ ಮಾದ ಯೋಗಿ, ಸಂಗೀತಾ, ಸಂಜನಾ ಆನಂದ್‌, ಗೋಪಾಲ್‌ ಕೃಷ್ಣ ದೇಶಪಾಂಡೆ ಮುಂತಾದವರು

ನಿರ್ದೇಶನ: ಪವನ್‌ ಒಡೆಯರ್‌

ನಿರ್ಮಾಣ: ವೆಂಕಟ್‌ ಕೆ. ನಾರಾಯಣ

ಸಂಗೀತ: ಅಜನೀಶ್‌ ಲೋಕನಾಥ್‌

ಅವಧಿ: 2 ಗಂಟೆ 38‌ ನಿಮಿಷ‌

ರೇಟಿಂಗ್: 3.5/5

‘ಹ್ಯಾಟ್ರಿಕ್ ಹೀರೋ’ ಶಿವರಾಜ್‌ಕುಮಾರ್ ಮತ್ತು ನಿರ್ದೇಶಕ ಪವನ್ ಒಡೆಯರ್ ಕಾಂಬಿನೇಷನ್‌ನಲ್ಲಿ ‘ಬೇಲ್’ ಸಿನಿಮಾ ಘೋಷಣೆಯಾದಾಗಿನಿಂದಲೂ ಸಿನಿಪ್ರಿಯರು ಈ ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇಟ್ಟುಕೊಂಡಿದ್ದರು. ಅಲ್ಲದೆ, ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ಸ್ ಇದನ್ನು ನಿರ್ಮಾಣ ಮಾಡುತ್ತಿದೆ ಎಂದಾಗ ಕುತೂಹಲ ದುಪ್ಪಟ್ಟಾಗಿತ್ತು. ಇದೀಗ ‘ಬೇಲ್’ ಸಿನಿಮಾ ತೆರೆಕಂಡಿದೆ. ಸಿನಿಪ್ರಿಯರ ನಿರೀಕ್ಷೆಯನ್ನು ಈ ಚಿತ್ರ ಈಡೇರಿಸಿದೆಯಾ? ಮುಂದೆ ಓದಿ.

‘ಬೇಲ್’ ಸಿನಿಮಾದ ಕಥೆ ಏನು?

ಪೊಲೀಸ್ ಅಧಿಕಾರಿ ವಿಜಯ್‌ಕುಮಾರ್ (ಶಿವರಾಜ್‌ಕುಮಾರ್) ತನ್ನ ರಾಜಕಾರಣಿ ಮಾವನ ಪ್ರಭಾವದಿಂದಾಗಿ ಕಮಿಷನರ್‌ವರೆಗೂ ಬಡ್ತಿ ಪಡೆದು ನಿವೃತ್ತನಾಗಿರುತ್ತಾನೆ. ಅಲಿ (ಸಾಯಿಕುಮಾರ್) ಎಂಬ ನಿವೃತ್ತ ನ್ಯಾಯಾಧೀಶ ಹಾಗೂ ರಾಬರ್ಟ್ (ಜಯರಾಮ್) ಎಂಬ ನಿವೃತ್ತ ವಿಜ್ಞಾನಿಯೊಂದಿಗೆ ಆತ ವಿಶ್ರಾಂತ ಜೀವನ ಕಳೆಯುತ್ತಿರುತ್ತಾನೆ. ಆದರೆ, ಅದೇ ಸಮಯದಲ್ಲಿ ಉಗ್ರನೊಬ್ಬ ಬೇಲ್ ಪಡೆದು ಜೈಲಿನಿಂದ ಹೊರಬರುತ್ತಾನೆ. ಆತನನ್ನು ಯಾರಿಗೂ ಸಣ್ಣ ಸುಳಿವು ಕೂಡ ಸಿಗದಂತೆ ವಿಜಯ್‌ಕುಮಾರ್ ಹತ್ಯೆ ಮಾಡುತ್ತಾನೆ.

ಕರ್ತವ್ಯದಲ್ಲಿದ್ದಾಗ ಒಬ್ಬ ಕಳ್ಳನನ್ನೂ ಬಂಧಿಸದ ವಿಜಯ್‌ಕುಮಾರ್, ಇದ್ದಕ್ಕಿದ್ದಂತೆ ಮೋಸ್ಟ್-ವಾಂಟೆಡ್ ಉಗ್ರನನ್ನು ಹುಡುಕಿಕೊಂಡು ಹೋಗಿ ಕೊಲ್ಲುವುದೇಕೆ? ಆನಂತರ ಕಥೆಯಲ್ಲಿ ಎದುರಾಗುವ ತಿರುವುಗಳೇನು? ಆ ಉಗ್ರನಿಗೂ ವಿಜಯ್‌ಕುಮಾರ್‌ಗೂ ಏನು ಸಂಬಂಧ? ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಸಾಗುತ್ತದೆ ‘ಬೇಲ್’ ಸಿನಿಮಾ. ಉಗ್ರನ ಹತ್ಯೆಯ ನಂತರ ವಿಜಯ್‌ಕುಮಾರ್ ಮುಂದಿನ ಗುರಿ ಯಾರಾಗುತ್ತಾರೆ? ವಿಜಯ್‌ಕುಮಾರ್ ಮಾಡುವ ಕ್ರೈಮ್‌ ಅನ್ನು ಪೊಲೀಸರು ಪತ್ತೆಹಚ್ಚುತ್ತಾರಾ? ಎಂಬುದೇ ಇಲ್ಲಿನ ಕುತೂಹಲಕಾರಿ ಅಂಶ!

ʻಬೀರ್‌ಬಲ್‌ʼ ಶ್ರೀನಿ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಶಿವರಾಜ್‌ಕುಮಾರ್;‌ ಕೆವಿಎನ್‌ ಪ್ರೊಡಕ್ಷನ್ಸ್‌ನಂದ ದಸರಾ ಹಬ್ಬಕ್ಕೆ ಭರ್ಜರಿ ಗಿಫ್ಟ್!‌

ಗಮನಸೆಳೆದ ಶಿವಣ್ಣ ಟೀಮ್

ಶಿವರಾಜ್‌ಕುಮಾರ್, ಸಾಯಿಕುಮಾರ್ ಮತ್ತು ಜಯರಾಮ್ ನಡುವಿನ ಕೆಮಿಸ್ಟ್ರಿ ಇಡೀ ಸಿನಿಮಾದ ಪ್ರಮುಖ ಆಕರ್ಷಣೆ. ಈ ಮೂವರು ತೆರೆಯ ಮೇಲೆ ಕಾಣಿಸಿಕೊಂಡಾಗ ಮೂಡಿಬರುವ ಕಾಮಿಡಿ, ಡೈಲಾಗ್‌ ಹಾಗೂ ಅವರ ಚಾಣಾಕ್ಷತನ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತವೆ. ಎಂದಿನಂತೆ ಶಿವಣ್ಣ ಭಾವನಾತ್ಮಕ ಸನ್ನಿವೇಶಗಳು ಮತ್ತು ಆ್ಯಕ್ಷನ್ ದೃಶ್ಯಗಳಲ್ಲಿ ಮಿಂಚಿದ್ದಾರೆ. ಅವರ ಸ್ಕ್ರೀನ್ ಪ್ರೆಸೆನ್ಸ್ ಇಡೀ ಚಿತ್ರಕ್ಕೆ ಕಳೆ ತಂದಿದೆ. ಅಲ್ಲದೆ, ಮೊದಲ ಬಾರಿಗೆ ವಯಸ್ಸಾದ ತಂದೆಯ ಪಾತ್ರವನ್ನು ನಿಭಾಯಿಸಿದ್ದಾರೆ. ಪಾತ್ರಕ್ಕೆ ವಯಸ್ಸಾಗಿದ್ದರೂ ಆ ಎನರ್ಜಿ ಮಾತ್ರ ಹಾಗೇ ಇದೆ. ಹೆಚ್ಚು ಹೊಡೆದಾಟಗಳಿಗೆ ಇಲ್ಲಿ ಅವಕಾಶವಿಲ್ಲ; ಬದಲಿಗೆ ಬುದ್ಧಿವಂತಿಕೆಯಿಂದಲೇ ಖಳರನ್ನು ಸಂಹರಿಸುತ್ತಾರೆ ಶಿವಣ್ಣ.

ಇನ್ನು ಸದಾ ಆತಂಕದಲ್ಲಿರುವ ಅಲಿ ಪಾತ್ರ ಸಾಯಿಕುಮಾರ್ ಅವರಿಗೆ ಅಚ್ಚುಕಟ್ಟಾಗಿ ಒಪ್ಪಿದೆ. ಜಯರಾಮ್ ಈ ಸಿನಿಮಾದ ಬೋನಸ್ ಎನ್ನಬಹುದು; ಪಾತ್ರಕ್ಕೆ ಸ್ವತಃ ಅವರೇ ಡಬ್ ಮಾಡಿದ್ದು, ಆಗಾಗ ನಗಿಸುತ್ತಾ ಚಿತ್ರದ ತೂಕ ಹೆಚ್ಚಿಸಿದ್ದಾರೆ.

ಪೊಲೀಸ್ ಅಧಿಕಾರಿಯಾಗಿ ದೀಕ್ಷಿತ್ ಶೆಟ್ಟಿ ತಮ್ಮ ಖಡಕ್ ಮ್ಯಾನರಿಸಂ ಮೂಲಕ ಜೀವ ತುಂಬಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ ಮತ್ತು ರಮೇಶ್ ಇಂದಿರಾ ನಿಭಾಯಿಸಿರುವ ಪಾತ್ರಗಳು ಪವರ್‌ಫುಲ್ ಆಗಿವೆ. ಈ ಚಿತ್ರದ ನಿಜವಾದ ಅಚ್ಚರಿ ಎಂದರೆ ನಟ ‘ಲೂಸ್ ಮಾದ’ ಯೋಗಿ. ಖಳನಾಯಕನಾಗಿ ಅವರದ್ದು ಖಡಕ್ ನಟನೆ. ದ್ವಿತೀಯಾರ್ಧದಲ್ಲಿ ಸಿನಿಮಾಕ್ಕೊಂದು ವೇಗ ತಂದುಕೊಡುವಲ್ಲಿ ಅವರು ಯಶಸ್ವಿಯಾಗಿದ್ದಾರೆ. ಕೊನೆಯವರೆಗೂ ಆ ಪಾತ್ರದಲ್ಲೊಂದು ಕುತೂಹಲ ಉಳಿದುಕೊಂಡಿದ್ದು, ಅದನ್ನು ತೆರೆಯ ಮೇಲೆಯೇ ನೋಡಬೇಕು. ಸಂಜನಾ ಆನಂದ್, ಸಂಗೀತಾ ಮುಂತಾದವರು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.

ಪವನ್ ಒಡೆಯರ್ ನಿರ್ದೇಶನ ಹೇಗಿದೆ?

ಕೇವಲ ಕ್ರೈಮ್ ಥ್ರಿಲ್ಲರ್ ಮಾತ್ರವಲ್ಲದೆ ಭಾವನೆಗಳು, ಪ್ರೀತಿ, ವಿಜ್ಞಾನ, ಹಾಸ್ಯ, ಪ್ರತೀಕಾರ ಹಾಗೂ ಆ್ಯಕ್ಷನ್‌ಗಳನ್ನು ಸಮಪ್ರಮಾಣದಲ್ಲಿ ಬೆರೆಸಿ ಕುಟುಂಬ ಸಮೇತ ನೋಡಬಹುದಾದ ಮನರಂಜನಾತ್ಮಕ ಚಿತ್ರವನ್ನಾಗಿ ರೂಪಿಸಿದ್ದಾರೆ ನಿರ್ದೇಶಕ ಪವನ್ ಒಡೆಯರ್. ವ್ಯವಸ್ಥೆಯಲ್ಲಿನ ಲೋಪದೋಷಗಳ ಬಗ್ಗೆ ‘ಬೇಲ್’ ಚಿತ್ರದ ಮೂಲಕ ಗಂಭೀರವಾದ ಪ್ರಶ್ನೆಯನ್ನೇ ಎತ್ತಿದ್ದಾರೆ. ಇದು ಕಾನೂನಿಗೆ ವಿರುದ್ಧವಾದರೂ, ‘ಪರ್ಯಾಯ ನ್ಯಾಯ’ ಎಂಬ ಪರಿಕಲ್ಪನೆಯ ಮೂಲಕ ದುಷ್ಟರ ಸಂಹಾರ ಹೇಗೆ ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಸಿನಿಮಾದ ಅವಧಿ ಕೊಂಚ ದೀರ್ಘವಾಯಿತೇನೋ ಎನಿಸಿದರೂ, ಜಯರಾಮ್ ಅವರ ಹಾಸ್ಯ ಸನ್ನಿವೇಶಗಳು ರಿಲೀಫ್‌ ನೀಡುತ್ತವೆ. ಟೆಕ್ನಿಕಲಿ ಸಿನಿಮಾ ಉತ್ತಮ ಮಟ್ಟದಲ್ಲಿದೆ. ಅಜನೀಶ್ ಲೋಕನಾಥ್ ಅವರ ಹಿನ್ನೆಲೆ ಸಂಗೀತ ಚಿತ್ರಕಥೆಗೆ ವೇಗ ತಂದಿದೆ. ವೈದಿ ಅವರ ಛಾಯಾಗ್ರಹಣ ಆಕರ್ಷಕವಾಗಿದೆ. ‘ಕುಮಾರಿ’ ಹಾಡು ಚಿತ್ರಕ್ಕೆ ಕಿಕ್ ನೀಡಿದ್ದು, ನಿವೇದಿತಾ ಗೌಡ ಸಖತ್‌ ಹೈಲೈಟ್‌ ಆಗುತ್ತಾರೆ. ಆದರೆ ಸಂಜನಾ-ದೀಕ್ಷಿತ್ ನಡುವಿನ ಡ್ಯುಯೆಟ್‌ ಸಾಂಗ್ ಅಷ್ಟಾಗಿ ಪರಿಣಾಮ ಬೀರುವುದಿಲ್ಲ; ಬದಲಿಗೆ ಕಥೆಯ ಓಟಕ್ಕೆ ಅಡ್ಡಿಯುಂಟುಮಾಡಿದಂತೆ ಭಾಸವಾಗುತ್ತದೆ.

ಹೊಸತನದ ಕ್ರೈಮ್ ಥ್ರಿಲ್ಲರ್ ನಿರೀಕ್ಷಿಸುವ ಚಿತ್ರಪ್ರೇಮಿಗಳಿಗೆ ‘ಬೇಲ್’ ಖಂಡಿತ ಇಷ್ಟವಾಗುತ್ತದೆ. ಜೊತೆಗೆ ಶಿವರಾಜ್‌ಕುಮಾರ್, ಸಾಯಿಕುಮಾರ್ ಹಾಗೂ ಜಯರಾಮ್ ಅವರ ಕಾಂಬಿನೇಷನ್ ಭರ್ಜರಿ ಮನರಂಜನೆ ನೀಡುವುದು ಖಚಿತ.