ʻಪೆದ್ದಿ ಚಿತ್ರದ ನಟನೆಗಾಗಿ ರಾಮ್ ಚರಣ್‌ಗೆ ನ್ಯಾಷನಲ್ ಅವಾರ್ಡ್ ಸಿಗಬೇಕುʼ ಎಂದ ನಟ ಶಿವರಾಜ್‌ಕುಮಾರ್
ಬೆಂಗಳೂರಿನಲ್ಲಿ ಜರುಗಿದ ‘ಪೆದ್ದಿ’ ಚಿತ್ರದ ಭರ್ಜರಿ ಪ್ರಚಾರ ಕಾರ್ಯಕ್ರಮದಲ್ಲಿ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಅವರು ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅವರ ನಟನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಚಿತ್ರದಲ್ಲಿ ರಾಮ್ ಚರಣ್ ಅವರ ಕುಸ್ತಿ ಕೋಚ್ 'ಗೌರನಾಯ್ಡು' ಪಾತ್ರದಲ್ಲಿ ನಟಿಸಿರುವ ಶಿವಣ್ಣ, ರಾಮ್ ಚರಣ್ ತಮಗೆ ಅಪ್ಪು (ಪುನೀತ್) ತರಹದ ಸ್ವಂತ ಸಹೋದರನಿದ್ದಂತೆ ಎಂದು ಭಾವುಕರಾಗಿದ್ದಾರೆ.
-
ʻಗ್ಲೋಬಲ್ ಸ್ಟಾರ್ʼ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾದ ಪ್ರಚಾರ ಕಾರ್ಯಗಳು ಭರದಿಂದ ಸಾಗುತ್ತಿವೆ. ಮುಂಬೈನಲ್ಲಿ ಅದ್ದೂರಿಯಾಗಿ ಟ್ರೇಲರ್ ಲಾಂಚ್ ಮಾಡಿದ್ದ ಚಿತ್ರತಂಡ, ಸೋಮವಾರ (ಮೇ 25) ಸಿಲಿಕಾನ್ ಸಿಟಿ ಬೆಂಗಳೂರಿಗೆ ಆಗಮಿಸಿ ಭರ್ಜರಿ ಪ್ರಚಾರ ನಡೆಸಿದೆ. ಪತ್ರಿಕಾಗೋಷ್ಠಿಯಲ್ಲಿ ರಾಮ್ ಚರಣ್ ತೇಜ, ನಾಯಕಿ ಜಾಹ್ನವಿ ಕಪೂರ್ ಹಾಗೂ ವಿಶೇಷ ಪಾತ್ರ ಮಾಡಿರುವ ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ಭಾಗವಹಿಸಿದ್ದರು.
ರಾಮ್ ಚರಣ್‌ಗೆ ಗುರುವಾದ ಶಿವಣ್ಣ
ಈ ಚಿತ್ರದಲ್ಲಿ ಶಿವರಾಜ್ ಕುಮಾರ್ ಅವರು 'ಗೌರನಾಯ್ಡು' ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ರಾಮ್ ಚರಣ್ ಅವರ ಗುರುವಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ರಾಮ್ ಚರಣ್ ಕುಸ್ತಿಪಟುವಾಗಿದ್ದು, ಅವರಿಗೆ ಕುಸ್ತಿ ವಿದ್ಯೆ ಹೇಳಿಕೊಡುವ ರಗಡ್ ಕೋಚ್ ಪಾತ್ರದಲ್ಲಿ ಶಿವಣ್ಣ ಅಬ್ಬರಿಸಲಿದ್ದಾರೆ.
ʻರಾಮ್ ಚರಣ್ ನನಗೆ ಪುನೀತ್‌ನಂತೆಯೇ ತಮ್ಮʼ ಎಂದ ಶಿವಣ್ಣ
"ಮೆಗಾಸ್ಟಾರ್ ಚಿರಂಜೀವಿ ಸರ್ ಕುಟುಂಬಕ್ಕೂ ನಮ್ಮ ಕುಟುಂಬಕ್ಕೂ ದಶಕಗಳ ಅವಿನಾಭಾವ ಸಂಬಂಧವಿದೆ. ನಿರ್ದೇಶಕ ಬುಚ್ಚಿಬಾಬು ಸನಾ ಅವರು 'ಪೆದ್ದಿ' ಚಿತ್ರದ ಕಥೆ ಹೇಳಿದಾಗ ನಾನು ತಕ್ಷಣ ಒಪ್ಪಿಕೊಂಡೆ. ಅದಕ್ಕೆ ಚಿರಂಜೀವಿ ಫ್ಯಾಮಿಲಿ ಮೇಲಿರುವ ಗೌರವ ಮತ್ತು ರಾಮ್ ಚರಣ್ ಮೇಲಿರುವ ಪ್ರೀತಿಯೇ ಕಾರಣ. ಈ ಸಿನಿಮಾಗೆ ರಾಮ್ ಹಾಕಿರುವ ಎಫರ್ಟ್ ನೋಡಿದರೆ ಅವರಿಗೆ ಖಂಡಿತ ರಾಷ್ಟ್ರಪ್ರಶಸ್ತಿ ಸಿಗಬೇಕು, ಅಷ್ಟು ಅದ್ಭುತವಾಗಿ ಸಿನಿಮಾ ಬಂದಿದೆ. ರಾಮ್ ಚರಣ್ ನನ್ನ ಸ್ವಂತ ಸಹೋದರನಿದ್ದಂತೆ. ಅಪ್ಪು (ಪುನೀತ್ ರಾಜಕುಮಾರ್) ನಂತರ ರಾಮ್ ಚರಣ್ ನನಗೆ ಮತ್ತೊಬ್ಬ ಬ್ರದರ್ ಆಗಿದ್ದಾರೆ" ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
ಶಿವಣ್ಣ ಇಲ್ಲದಿದ್ದರೆ ಈ ಪಾತ್ರಕ್ಕೆ ಮಜಾ ಇರುತ್ತಿರಲಿಲ್ಲ
"ಪೆದ್ದಿ ಸಿನಿಮಾದಲ್ಲಿ ಶಿವಣ್ಣ ಸರ್ ನನ್ನ ಗುರುಗಳಾಗಿ ನಟಿಸಿದ್ದು ನನ್ನ ಸೌಭಾಗ್ಯ. ಒಂದು ವೇಳೆ ಅವರು ಒಪ್ಪದಿದ್ದರೆ ಈ ಪಾತ್ರಕ್ಕೆ ಇಷ್ಟು ತೂಕ ಬರುತ್ತಿರಲಿಲ್ಲ. ಅವರು ಬೆಂಗಳೂರಿನ ಪ್ರಚಾರ ಕಾರ್ಯಕ್ರಮಕ್ಕೆ ಬಂದಿರುವುದು ನನಗೆ ತಂಬಾ ಸಂತೋಷ ತಂದಿದೆ. ಚಿತ್ರದಲ್ಲಿ ಜಗಪತಿ ಬಾಬು, ಬೊಮ್ಮನ್ ಇರಾನಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಸಿನಿಮಾ ಜೂನ್ 4ಕ್ಕೆ ತೆರೆಕಾಣುತ್ತಿದ್ದು, ಅಭಿಮಾನಿಗಳು ಬೆಂಬಲಿಸಬೇಕು" ಎಂದು ರಾಮ್ ಚರಣ್ ಮನವಿ ಮಾಡಿದರು.
ಕನ್ನಡದಲ್ಲೇ ಮಾತನಾಡಿ ಮನಗೆದ್ದ ಜಾನು
ವೇದಿಕೆಯಲ್ಲಿ ಕನ್ನಡದಲ್ಲೇ ಮಾತನಾಡುವ ಮೂಲಕ ಎಲ್ಲರ ಗಮನ ಸೆಳೆದ ಜಾಹ್ನವಿ ಕಪೂರ್, "ನನಗೆ ಬೆಂಗಳೂರು ಎಂದರೆ ತುಂಬಾ ಇಷ್ಟ. ಇದೊಂದು ವಿಭಿನ್ನ ಸಿನಿಮಾವಾಗಿದ್ದು, ರಾಮ್ ಚರಣ್ ಸರ್ ಜೊತೆ ಕೆಲಸ ಮಾಡಿದ್ದು ಅತ್ಯುತ್ತಮ ಅನುಭವ ನೀಡಿದೆ. ರಾಮ್ ಚರಣ್ ಡ್ಯಾನ್ಸ್ ಎನರ್ಜಿ ಎಂಥದ್ದು ಎಂದರೆ, ಅವರ ಜೊತೆ ಒಂದು ಸಿನಿಮಾದಲ್ಲಿ ಡ್ಯಾನ್ಸ್ ಮಾಡಿದರೆ ಸಾಕು, ಯಾರು ಬೇಕಾದರೂ ಸಣ್ಣಗಾಗಬಹುದು" ಎಂದು ರಾಮ್ ಚರಣ್ ನೃತ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ʻನನಗೆ ರಾಮ್ ಚರಣ್, ನನ್ನ ತಮ್ಮ ಅಪ್ಪು ಥರ..ʼ ಎಂದ ಶಿವಣ್ಣ
@AlwaysRamCharan
— 🌟RCharan🔥🌟 REDDY 🔥⭐PRECIDENT OF RAM CHARAN FAN (@CharanR12520030) May 25, 2026
నాకు నా తమ్ముడు పునీత్ రాజ్ కుమార్ ఎలానో Ram Charan కూడా అంతే..చరణ్ మరియు అతని యాక్టింగ్ అంటే నాకు చాలా ఇష్టం.❤️
- Shivanna❤️🔥#peddi #Ramcharan #shivanna pic.twitter.com/Evl3XiLgLE
ಜೂನ್ 4ಕ್ಕೆ ಪೆದ್ದಿ ಗ್ರಾಂಡ್ ರಿಲೀಸ್
ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಸಂಗೀತ ನಿರ್ದೇಶನವಿದೆ. ಸದ್ಯ ಟ್ರೇಲರ್ ಮೂಲಕ ಹೊಸ ದಾಖಲೆ ಬರೆಯುತ್ತಿರುವ 'ಪೆದ್ದಿ' ಸಿನಿಮಾ ಜೂನ್ 4ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.