ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

LK Advani: ಎಲ್‌.ಕೆ.ಅಡ್ವಾಣಿ ಮನೆಗೆ ಭೇಟಿ ನೀಡಿದ ಗಾಯಕ ಸೋನು ನಿಗಮ್‌

Sonu Nigam: ಮಾಜಿ ಉಪಪ್ರಧಾನಿ, ಬಿಜೆಪಿ ನಾಯಕ, ಭಾರತ ರತ್ನ ಎಲ್‌.ಕೆ.ಅಡ್ವಾಣಿ ಅವರ ದಿಲ್ಲಿಯಲ್ಲಿರುವ ಮನೆಗೆ ಇತ್ತೀಚೆಗೆ ಬಹುಭಾಷಾ ಗಾಯಕ ಸೋನು ನಿಗಮ್‌ ಭೇಟಿ ನೀಡಿದ್ದಾರೆ. ಅಡ್ವಾಣಿ ಮತ್ತು ಅವರ ಪುತ್ರಿ ಪ್ರತಿಭಾ ಅಡ್ವಾಣಿ ಅವರೊಂದಿಗೆ ಸೋನು ನಿಗಮ್‌ ಮಾತುಕತೆ ನಡೆಸಿದ್ದಾರೆ. ಜತೆಗೆ ಇವರೆಲ್ಲ ಸಿಂಧಿ ಆಹಾರ ಸೇವಿಸಿ ಖುಷಿಯಿಂದ ಸಮಯ ಕಳೆದಿದ್ದಾರೆ.

ಎಲ್‌.ಕೆ.ಅಡ್ವಾಣಿ ಮನೆಗೆ ಭೇಟಿ ನೀಡಿದ ಗಾಯಕ ಸೋನು ನಿಗಮ್‌

ಸೋನು ನಿಗಮ್‌, ಪ್ರತಿಭಾ ಅಡ್ವಾಣಿ ಮತ್ತು ಎಲ್‌.ಕೆ.ಅಡ್ವಾಣಿ. -

Ramesh B
Ramesh B Mar 29, 2025 5:25 PM

ಹೊಸದಿಲ್ಲಿ: ಮಾಜಿ ಉಪಪ್ರಧಾನಿ, ಬಿಜೆಪಿ ನಾಯಕ, ಭಾರತ ರತ್ನ ಎಲ್‌.ಕೆ.ಅಡ್ವಾಣಿ (LK Advani) ಅವರ ದಿಲ್ಲಿಯಲ್ಲಿರುವ ಮನೆಗೆ ಇತ್ತೀಚೆಗೆ ಬಹುಭಾಷಾ ಗಾಯಕ ಸೋನು ನಿಗಮ್‌ (Sonu Nigam) ಭೇಟಿ ನೀಡಿದ್ದಾರೆ. ಅಡ್ವಾಣಿ ಮತ್ತು ಅವರ ಪುತ್ರಿ ಪ್ರತಿಭಾ ಅಡ್ವಾಣಿ (Pratibha Advani) ಅವರೊಂದಿಗೆ ಸೋನು ನಿಗಮ್‌ ಮಾತುಕತೆ ನಡೆಸಿದ್ದಾರೆ. ಸೋನು ನಿಗಮ್‌ ತಮ್ಮ ಇನ್‌ಸ್ಟಾಗ್ರಾಮ್‌ ಪೇಜ್‌ನಲ್ಲಿ ಅಡ್ವಾಣಿ ಅವರನ್ನು ಭೇಟಿಯಾದ ಫೋಟೊ ಮತ್ತು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಎಲ್‌.ಕೆ.ಅಡ್ವಾಣಿ ಮತ್ತು ಪ್ರತಿಭಾ ಅಡ್ವಾಣಿ ಅವರೊಂದಿಗೆ ತುಂಬಾ ವರ್ಷಗಳ ಬಾಂಧವ್ಯ ಹೊಂದಿದ್ದೇನೆ. ಹೀಗಾಗಿ ಅವರನ್ನು ಭೇಟಿಯಾಗುವುದು ಎಂದಿಗೂ ಖುಷಿ ನೀಡುತ್ತದೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಅವರು ಬರೆದುಕೊಂಡಿದ್ದಾರೆ.

ಗಾಯಕ ಸೋನು ನಿಗಮ್‌ ಹಂಚಿಕೊಂಡ ಪೋಸ್ಟ್‌ ಇಲ್ಲಿದೆ:

ಈ ಸುದ್ದಿಯನ್ನೂ ಓದಿ: Sonu Nigam Concert: ಗಾಯಕ ಸೋನು ನಿಗಂನತ್ತ ಕಲ್ಲು, ಬಾಟಲ್‌ ಎಸೆದ ಪ್ರೇಕ್ಷಕರು; ಕಾರಣವೇನು?

ಸೋನು ನಿಗಮ್‌ ಹೇಳಿದ್ದೇನು?

ʼʼಹಲವು ವರ್ಷಗಳಿಂದ ಎಲ್‌.ಕೆ.ಅಡ್ವಾಣಿ ಮತ್ತು ಪ್ರತಿಭಾ ಅಡ್ವಾಣಿ ನನ್ನ ಜೀವನದ ಭಾಗವೇ ಆಗಿದ್ದಾರೆ. ಹೀಗಾಗಿ ಡಿಟಿಯು ಕಾನ್ಸೆರ್ಟ್‌ ಮುಗಿಸಿ ಅವರೊಂದಿಗೆ ಒಂದಷ್ಟು ಸಮಯ ಕಳೆದೆ. ನನ್ನ ತಾಯಿ ಸಿಂಧಿಗಳ ನಡುವೆ ಬೆಳೆದಾಗಿನಿಂದ ಸಿಂಧಿ ಆಹಾರವು ನಮ್ಮ ಬಾಲ್ಯದ ಪ್ರಮುಖ ಭಾಗವಾಗಿದೆ. ಪ್ರತಿಭಾ ಅವರಿಗೆ ಅದು ತಿಳಿದಿದೆ ಮತ್ತು ಅದಕ್ಕಾಗಿಯೇ ಅವರು ದಾಲ್ ಪಕ್ವಾನ್ ಜತೆಗೆ ನನಗಾಗಿ ಸಿಂಧಿ ಕಡಿಯನ್ನು ತಯಾರಿಸಿದ್ದರು. 97 ವರ್ಷದ ಅಡ್ವಾಣಿ ಅವರು ಈಗಲೂ ಆರೋಗ್ಯವಂತರಾಗಿದ್ದಾರೆ. ಅವರು ನಮ್ಮ ಕುಟುಂಬದ ಭಾಗʼʼ ಎಂದು ಬರೆದುಕೊಂಡಿದ್ದಾರೆ.

ವಿಡಿಯೊದಲ್ಲಿ ಅಡ್ವಾಣಿ ಅವರು ಸೋನು ನಿಗಮ್‌ ಅವರೊಂದಿಗೆ ಖುಷಿಯಿಂದ ನಗು ನಗುತ್ತಾ ಸಮಯ ಕಳೆದಿರುವುದು ಕಂಡು ಬಂದಿದೆ. ಜತೆಗೆ ಅಡ್ವಾಣಿ ಅವರು ಸೋನು ನಿಗಮ್‌ ಧ್ವನಿ ನೀಡಿರುವ ʼಅಗ್ನಿಪತ್‌ʼ ಚಿತ್ರದ ಅಭಿ ಮುಜೆ ಮೇ ಕಹೀನ್‌ ಹಾಡಿನ ತುಣುಕನ್ನು ವೀಕ್ಷಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.

ಕಾನ್ಸೆರ್ಟ್‌ಗಾಗಿ ದಿಲ್ಲಿಗೆ ಆಗಮಿಸಿದ್ದ ಸೋನು ನಿಗಮ್‌ ಅವರು ತಮ್ಮ ಸ್ನೇಹಿತರನ್ನೂ ಭೇಟಿಯಾಗಿದ್ದರು. ಈ ಮೂಲಕ ಬಾಲ್ಯದ ನೆನಪನ್ನು ಮೆಲುಕು ಹಾಕಿದ್ದಾಗಿ ತಿಳಿಸಿದ್ದಾರೆ.

ಕರ್ನಾಟಕ ಬಗ್ಗೆ ವಿಶೇಷ ಅಭಿಮಾನ

ಬಾಲಿವುಡ್‌ ಹಿನ್ನೆಲೆ ಗಾಯಕರಾಗಿ ಚಿತ್ರರಂಗ ಪ್ರವೇಶಿಸಿದ ಸೋನು ನಿಗಮ್‌ 1990ರ ದಶಕದಲ್ಲಿ ಜನಪ್ರಿಯರಾದರು. ಹರಿಯಾಣ ಮೂಲದ ಸೋನು ಹಿಂದಿಯ ಜತೆಗೆ ಭಾರತ ವಿವಿಧ ಭಾಷೆಗಳ ಹಾಡಿಗೆ ಧ್ವನಿ ನೀಡಿದ್ದಾರೆ. 2004ರಲ್ಲಿ ತೆರೆಕಂಡ ʼಕಲ್‌ ಹೊ ನಾ ಹೊʼ ಬಾಲಿವುಡ್‌ ಚಿತ್ರದ ಹಾಡಿಗಾಗಿ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಜತೆಗೆ ನೂರಾರು ಕನ್ನಡದ ಹಾಡನ್ನೂ ಹಾಡಿದ್ದಾರೆ. ಕನ್ನಡಿಗರ ಪ್ರೀತಿ, ಪ್ರೋತ್ಸಾಹಕ್ಕೆ ಮನ ಸೋತಿರುವ ಅವರು ಕರ್ನಾಟಕ ತಮ್ಮ 2ನೇ ಮನೆ ಎಂದೇ ಪರಿಗಣಿಸಿದ್ದಾರೆ. ಇತ್ತೀಚೆಗೆ ಹೊರ ಬಂದಿರುವ ಸಂಜಿತ್‌ ಹೆಗಡೆ ಜತೆಗಿನ ʼಮಾಯಾವಿʼ ಕನ್ನಡ ಆಲ್ಬಂ ಹಾಡು ಹಿಟ್‌ ಆಗಿದೆ. ಸೋನು ನಿಗಮ್‌ ಕನ್ನಡದ ಜತೆಗೆ ತುಳು ಚಿತ್ರಗಳಿಗೂ ಹಾಡಿದ್ದಾರೆ.