ಆಂಧ್ರಪ್ರದೇಶದ ಶಾಲೆಯಲ್ಲಿನ ಭೀಕರ ದಾಳಿ; ʻಸಿನಿಮಾಗಳಲ್ಲಿನ ಹಿಂಸೆಯೇ ಇದಕ್ಕೆ ಕಾರಣʼ ಎಂದವರಿಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ತಿರುಗೇಟು!
ಆಂಧ್ರಪ್ರದೇಶದ ಶಾಲೆಯಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಚೈನ್ಸಾ ದಾಳಿಗೆ ಸಿನಿಮಾಗಳೇ ಕಾರಣ ಎಂದು ದೂಷಿಸಿದವರಿಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರು ತೀಕ್ಷ್ಣ ತಿರುಗೇಟು ನೀಡಿದ್ದಾರೆ. ಅಪರಾಧಗಳಿಗೆ ಸೃಜನಶೀಲ ಸಿನಿಮಾ ಮಾಧ್ಯಮವನ್ನು ಬಲಿಪಶು ಮಾಡುವುದು ಅವಕಾಶವಾದಿತನ ಎಂದು ಅವರು ಹೇಳಿದ್ದಾರೆ.
-
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಶಾಲೆಯೊಂದರಲ್ಲಿ 10ನೇ ತರಗತಿಯ ವಿದ್ಯಾರ್ಥಿನಿಯ ಮೇಲೆ ನಡೆದ ಭೀಕರ ಹಲ್ಲೆ ಪ್ರಕರಣವು ಇದೀಗ ಸಿನಿಮಾಗಳಲ್ಲಿನ ಹಿಂಸಾಚಾರದ ಕುರಿತಾದ ಹೊಸ ಚರ್ಚೆಗೆ ನಾಂದಿ ಹಾಡಿದೆ. ಈ ಅಮಾನುಷ ಕೃತ್ಯಕ್ಕೆ 'ಅನಿಮಲ್' ನಂತಹ ಸಿನಿಮಾಗಳೇ ಪ್ರೇರಣೆ ಎಂದು ಟೀಕಿಸಿದವರಿಗೆ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಹಾಗೂ ರಾಮ್ಗೋಪಾಲ್ ವರ್ಮಾ ತೀವ್ರ ಆಕ್ರೋಶ ವ್ಯಕ್ತಪಡಿಸಿ, ತಕ್ಕ ತಿರುಗೇಟು ನೀಡಿದ್ದಾರೆ.
ಆರೋಪಿ ಕಾಲಿಗೆ ಗುಂಡೇಟು
ಅನಂತಪುರ ಜಿಲ್ಲೆಯ ರಾಪ್ತಾಡು ಗ್ರಾಮದ ಪ್ರೌಢಶಾಲೆಯಲ್ಲಿ 10ನೇ ತರಗತಿ ಓದುತ್ತಿರುವ ಗೋಪಿಕಾ ಎಂಬ ಬಾಲಕಿಯ ಮೇಲೆ ಆಕೆಯ ಸಂಬಂಧಿಯೂ ಆಗಿದ್ದ ಹೇಮಂತ್ ಎಂಬಾತ ಚೈನ್ಸಾ ಬಳಸಿ ಮನಸೋಇಚ್ಛೆ ದಾಳಿ ನಡೆಸಿದ್ದ. ತನ್ನನ್ನು ಮದುವೆಯಾಗುವಂತೆ ನಿರಂತರವಾಗಿ ಪೀಡಿಸುತ್ತಿದ್ದ ಆತ, ಕೊನೆಗೆ ಶಾಲೆಗೇ ನುಗ್ಗಿ ಈ ಕೃತ್ಯ ಎಸಗಿದ್ದನು. ದಾಳಿಯ ಬಳಿಕ ಪರಾರಿಯಾಗಿದ್ದ ಆರೋಪಿಯನ್ನು ಆತ್ಮಕೂರು ಸಮೀಪದ ಅರಣ್ಯದಲ್ಲಿ ಸೆರೆಹಿಡಿಯಲು ಪೊಲೀಸರು ಮುಂದಾದಾಗ, ಆತ ಪೊಲೀಸರ ಮೇಲೆ ಚಾಕುವಿನಿಂದ ದಾಳಿ ನಡೆಸಲು ಯತ್ನಿಸಿದ್ದಾನೆ. ಈ ವೇಳೆ ಆತ್ಮರಕ್ಷಣೆಗಾಗಿ ಪೊಲೀಸರು ಆತನ ಕಾಲಿಗೆ ಆರು ಸುತ್ತು ಗುಂಡು ಹಾರಿಸಿದ್ದಾರೆ. ಅತ್ತ ಸಂತ್ರಸ್ತ ಬಾಲಕಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾಳೆ.
ಸಿನಿಮಾವನ್ನು ಬಲಿಪಶು ಮಾಡುವುದಲ್ಲ
ಈ ಘಟನೆ ತೆಲುಗು ರಾಜ್ಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾದ ಬೆನ್ನಲ್ಲೇ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಈ ಅಪರಾಧವನ್ನು 'ಅನಿಮಲ್' ಸಿನಿಮಾದ ಹಿಂಸಾತ್ಮಕ ದೃಶ್ಯಗಳಿಗೆ ತಳುಕು ಹಾಕಲು ಆರಂಭಿಸಿದರು. ಸಿನಿಮಾಗಳಲ್ಲಿ ಶಾಲಾ ಹಂತದ ಹಿಂಸೆಯನ್ನು ವೈಭವೀಕರಿಸುವುದೇ ಯುವಜನತೆ ದಾರಿ ತಪ್ಪಲು ಕಾರಣ ಎಂದು ಆರೋಪಿಸಿದ್ದರು. ಈ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ, "ಸಮಾಜದಲ್ಲಿ ಇಂತಹ ಘಟನೆಗಳು ನಡೆದಾಗ ಸಂತ್ರಸ್ತರಿಗೆ ಸಾಂತ್ವನ ಹೇಳುವುದು ಮತ್ತು ಸಮಸ್ಯೆಯ ಮೂಲವನ್ನು ಶೋಧಿಸುವುದು ಮೊದಲ ಆದ್ಯತೆಯಾಗಬೇಕೇ ಹೊರತು, ಪ್ರತಿಯೊಂದಕ್ಕೂ ಸಿನಿಮಾ ಮಾಧ್ಯಮವನ್ನು ಬಲಿಪಶು ಮಾಡುವುದಲ್ಲ" ಎಂದು ಕಿಡಿಕಾರಿದ್ದಾರೆ.
ಧನುಷ್ ನಟನೆಯ 'ಓಂ' ಸಿನಿಮಾದಲ್ಲಿ 2015ರಲ್ಲಿ ಆಂಧ್ರಪ್ರದೇಶದಲ್ಲಿ ನಡೆದ ಆ ಭೀಕರ ಎನ್ಕೌಂಟರ್ ಕಥೆ ಇದೆಯಾ?
ಇಂತಹ ದುರಂತವನ್ನೇ ನೆಪ ಮಾಡಿಕೊಂಡಿದ್ದಾರೆ
"ಸಂತ್ರಸ್ತ ಕುಟುಂಬದ ನೋವಿನ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದ ಕೆಲವರು ಇಂತಹ ದುರಂತವನ್ನೇ ನೆಪವಾಗಿಸಿಕೊಂಡು ತಮ್ಮ ವೈಯಕ್ತಿಕ ದ್ವೇಷ ತೀರಿಸಿಕೊಳ್ಳಲು ಇಳಿದಿದ್ದಾರೆ. ಇತರರ ಸೃಜನಶೀಲ ಕೆಲಸದ ಮೇಲೆ ಕೆಸರೆರಚಲು ಹೊಂಚು ಹಾಕುವ ಕೆಲ ವಿಫಲ, ಅಸಹನೆ ತುಂಬಿದ ನಟರು, ನಿರ್ದೇಶಕರು ಹಾಗೂ ನಿರ್ಮಾಪಕರೇ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ. ಒಂದು ದುರಂತಕ್ಕೆ ಬೇಕಾಗಿರುವುದು ಸಾಂತ್ವನವೇ ಹೊರತು ನಿಮ್ಮ ಅವಕಾಶವಾದಿತನವಲ್ಲ" ಎಂದು ಖಾರವಾಗಿ ಎಚ್ಚರಿಸಿದ್ದಾರೆ ಸಂದೀಪ್.
ಆರ್ಜಿವಿ ಏನಂದ್ರು?
ಮತ್ತೊಂದೆಡೆ ನಿರ್ದೇಶಕ ರಾಮ್ಗೋಪಾಲ್ ವರ್ಮಾ ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು, ವಾಸ್ತವ ಅಪರಾಧಗಳಿಗೆ ಕಾಲ್ಪನಿಕ ಸಿನಿಮಾಗಳನ್ನು ಹೊಣೆ ಮಾಡುವುದು ಅವಿವೇಕತನ ಎಂದಿದ್ದಾರೆ. "ಸಿನಿಮಾಗಳನ್ನು ನೋಡಿ ಅಪರಾಧಗಳು ನಡೆಯುತ್ತವೆ ಎನ್ನುವುದಾದರೆ, ಸಮಾಜದಲ್ಲಿ ನಡೆಯುವ ಅಪಹರಣಗಳಿಗೆ ರಾಮಾಯಣವನ್ನು ದೂಷಿಸಬೇಕಾಗುತ್ತದೆ. ಸಿನಿಮಾಗಳು ಕೇವಲ ಮನರಂಜನೆಗಾಗಿ ಸೃಷ್ಟಿಸುವ ಕಾಲ್ಪನಿಕ ಕಥೆಗಳಾಗಿದ್ದು, ವ್ಯಕ್ತಿಗಳ ವಿಕೃತ ಮನಸ್ಥಿತಿಗೆ ಕಲಾ ಪ್ರಕಾರಗಳನ್ನು ಹೊಣೆ ಮಾಡುವುದು ಹಾಸ್ಯಾಸ್ಪದ" ಎಂದು ಹೇಳುವ ಮೂಲಕ ಸಂದೀಪ್ ರೆಡ್ಡಿ ವಂಗಾ ಪರವಾಗಿ ನಿಂತಿದ್ದಾರೆ.