ʼಕೂಲಿʼಗೂ ತಗ್ಗಿಲ್ಲ; ʼವಾರ್ 2'ಗೂ ಬಗ್ಗಿಲ್ಲ: ಬಾಕ್ಸ್ ಆಫೀಸ್‌ನಲ್ಲಿ ನಾಗಾಲೋಟ ಮುಂದುವರಿಸಿದ ʼಸು ಫ್ರಮ್ ಸೋʼ: 100 ಕೋಟಿ ರೂ. ಕ್ಲಬ್‌ಗೆ ಸೇರ್ಪಡೆ
Su From So Movie: ಸತತ ಸೋಲಿನಿಂದ ಕಂಗೆಟ್ಟಿದ್ದ ಸ್ಯಾಂಡಲ್‌ವುಡ್ ಚಿಗಿತುಕೊಂಡಿದೆ. ಕಳೆದ ತಿಂಗಳು ಬಿಡುಗಡೆಯಾದ ʼಸು ಫ್ರಮ್ ಸೋʼ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದ್ದು, 100 ಕೋಟಿ ರೂ. ಕ್ಲಬ್ ಸೇರಿದೆ. ಸ್ಟಾರ್ ನಟರ ಚಿತ್ರಗಳ ನಡುವೆಯೂ ಉತ್ತಮ ಗಳಿಕೆ ಕಾಣುತ್ತಿದೆ.


ಬೆಂಗಳೂರು: ಉತ್ತಮ ಕಥೆ ಇದ್ದರೆ, ಗಮನ ಸೆಳೆಯುವ ಸಂಭಾಷಣೆ ಇದ್ದರೆ, ಕುತೂಹಲ ಕೆರಳಿಸುವ ಚಿತ್ರಕಥೆ ಇದ್ದರೆ, ಸ್ಟಾರ್ ಇಲ್ಲದೆಯೂ, ಅಬ್ಬರದ ಪ್ರಚಾರದ ಸಹಾಯವೂ ಇಲ್ಲದೆಯೂ, ಗಿಮಕ್ ಇಲ್ಲದೆಯೂ ಚಿತ್ರವೊಂದು ಯಶಸ್ವಿಯಾಗುತ್ತದೆ ಎನ್ನುವುದನ್ನು ಸ್ಯಾಂಡಲ್‌ವುಡ್‌ನ ʼಸು ಫ್ರಮ್ ಸೋʼ (Su From So Movie) ಸಾಬೀತುಪಡಿಸಿದೆ. ಜುಲೈ 25ರಂದು ತೆರೆಗೆ ಬಂದ ಈ ಚಿತ್ರ ಈಗಲೂ ಹಲವೆಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ ಎಂದರೆ ಇದರ ಜನಪ್ರಿಯತೆಯ ಆಳ ಅರಿವಾಗುತ್ತದೆ. ಗ್ಲ್ಯಾಮರ್ ತುರುಕದೆ ಸರಳವಾಗಿ ಈ ನೆಲದ ಅಪ್ಪಟ ದೇಸಿ ಕಥೆಯನ್ನು ಹೇಳಿ ನಿರ್ದೇಶಕ ಜೆ.ಪಿ. ತುಮಿನಾಡ್ (J. P. Thuminad) ಜಯಭೇರಿ ಭಾರಿಸಿದ್ದಾರೆ. ಸಿನಿಮಾ ರಿಲೀಸ್ ಆಗಿ 24 ದಿನ ಕಳೆದಿದ್ದು, ಕಲೆಕ್ಷನ್ ಕೊಂಚವೂ ತಗ್ಗಿಲ್ಲ. ಈಗಾಗಲೇ 100 ಕೋಟಿ ರೂ. ಕ್ಲಬ್ ಸೇರಿದೆ ಎನ್ನಲಾಗುತ್ತಿದೆ.
ಕರಾವಳಿಯ ಮರ್ಲೂರು ಎನ್ನುವ ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆಯೇ ʼಸು ಫ್ರಮ್ ಸೋʼ ಅಥವಾ ಸುಲೋಚನಾ ಫ್ರಮ್ ಸೋಮೇಶ್ವರ. ಕರಾವಳಿಯ ಗ್ರಾಮೀಣ ಭಾಗಗಳಲ್ಲಿ ಸಾಮಾನ್ಯವಾಗಿ ಕಾಣ ಸಿಗುವ ಜನ ಜೀವನವನ್ನೇ ಜೆ.ಪಿ. ತುಮಿನಾಡ್ ತೆರೆಮೇಲೆ ತಂದಿರುವುದು ವಿಶೇಷ. ಜತೆಗೆ ಕರಾವಳಿ ಭಾಗದ ಭಾಷೆ ಸಹಜವಾಗಿ, ನೈಜವಾಗಿ ಬಳಕೆಯಾಗಿದ್ದು ಚಿತ್ರದ ತೂಕ ಹೆಚ್ಚಿಸಿದೆ.
ಈ ಸುದ್ದಿಯನ್ನೂ ಓದಿ: Ajay Devgn: ʼಸು ಫ್ರಮ್ ಸೋʼ ವೀಕ್ಷಿಸಿದ ಬಾಲಿವುಡ್ ಸ್ಟಾರ್ ಅಜಯ್ ದೇವಗನ್; ಬಾಲಿವುಡ್‌ಗೆ ರಿಮೇಕ್ ಆಗುತ್ತಾ?
ಕರಾವಳಿಗೆ ಸೀಮಿತವಾಗಿಲ್ಲ
ಕರಾವಳಿಯ ಕಥೆಯಾದರೂ ಈ ಚಿತ್ರ ಆ ಭಾಗಕ್ಕೇ ಸೀಮಿತವಾಗಿಲ್ಲ. ರಾಜ್ಯಾದ್ಯಂತ ಪ್ರೇಕ್ಷಕರು ಎರಡೂ ಕೈಚಾಚಿ ಸ್ವಾಗತಿಸಿದ್ದಾರೆ. ತಮ್ಮ ಊರಿನಲ್ಲೇ, ತಮ್ಮೆದುರೇ, ತಮ್ಮ ಮನೆಯಲ್ಲೇ ನಡೆಯುವ ಘಟನೆಯೇನೋ ಎನ್ನುವಂತೆ ವೀಕ್ಷಕರು ಬೆರಗುಗಣ್ಣಿನಿಂದ ವೀಕ್ಷಿಸುತ್ತಿದ್ದಾರೆ. ಕೃತಕತೆ ಇಲ್ಲದೆ ಸಹಜವಾಗಿಯೇ ಮೂಡಿಬಂದಿರುವುದು ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್. ಗೆಲವಿನಲ್ಲಿ ಇದೇ ಅಂಶ ಪ್ರಮುಖ ಪಾತ್ರವಹಿಸಿದ್ದು ಸುಳ್ಳಲ್ಲ.
ಕಲೆಕ್ಷನ್ ಎಷ್ಟಾಯ್ತು?
ಆರಂಭದಲ್ಲಿ ಕನ್ನಡದಲ್ಲಿ ಮಾತ್ರ ತೆರೆಕಂಡ ʼಸು ಫ್ರಮ್ ಸೋʼ ಬಳಿಕ ಮಲಯಾಳಂ ಮತ್ತು ತೆಲುಗಿಗೂ ಡಬ್ ಆಗಿ ಬಿಡುಗಡೆಗೊಂಡಿದೆ. ಅಲ್ಲೂ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಇದು ಕಲೆಕ್ಷನ್ ಮೇಲೂ ಪರಿಣಾಮ ಬೀರಿದೆ. ಬಿಡುಗಡೆ ಆಗಿ 24 ದಿನ ಕಳೆದರೂ ‘ಸು ಫ್ರಮ್ ಸೋ’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿಯಾಗಿ ಪ್ರದರ್ಶನ ಕಾಣುತ್ತಿದ್ದು ಕರ್ನಾಟಕದಲ್ಲಿ 70 ಕೋಟಿ ರೂ. ಕಲೆಕ್ಷನ್ ಮಾಡಿದೆ. ಮಲಯಾಳಂನಿಂದ 5.07 ಕೋಟಿ ರೂ., ತೆಲುಗಿನಿಂದ 1.23 ಕೋಟಿ ರೂ. ಹರಿದು ಬಂದಿದೆ. ಇನ್ನು ವಿದೇಶದಲ್ಲಿಯೂ ವಿವಿಧ ಭಾಷೆಗಳಲ್ಲಿ ತೆರೆಕಂಡಿದ್ದು, ಅಲ್ಲಿನ ಗಳಿಕೆಯನ್ನೂ ಸೇರಿಸಿದರೆ 100 ಕೋಟಿ ರೂ. ದಾಟುತ್ತದೆ ಎಂದು ವರದಿಯೊಂದು ತಿಳಿಸಿದೆ.
ರಜನಿಕಾಂತ್-ಹೃತಿಕ್ ರೋಷನ್ ಅಬ್ಬರದ ಮಧ್ಯೆಯೂ ಸುಲೋಚನಾ ಹವಾ
ಆಗಸ್ಟ್ 14ರಂದು ಅದ್ಧೂರಿ ಬಜೆಟ್‌ನ, ಈ ವರ್ಷದ ಬಹುನಿರೀಕ್ಷಿತ ರಜನಿಕಾಂತ್ ನಟನೆಯ ʼಕೂಲಿʼ ತಮಿಳು ಚಿತ್ರ ಮತ್ತು ಹೃತಿಕ್ ರೋಷನ್-ಜೂ. ಎನ್‌ಟಿಆರ್ ಅಭಿನಯದ ʼವಾರ್ 2ʼ ಹಿಂದಿ ಸಿನಿಮಾ ತೆರೆಕಂಡಿದೆ. ಈ ಚಿತ್ರಗಳ ಭರಾಟೆ ನಡೆಯುವೆಯೂ ʼಸು ಫ್ರಮ್ ಸೋʼ ಕಳೆಗುಂದಿಲ್ಲ ಎನ್ನುವುದು ವಿಶೇಷ.
ಅಪರೂಪದ ದಾಖಲೆ ಬರೆದ ಜೆ.ಪಿ. ತುಮಿನಾಡ್
ರಂಗಭೂಮಿ ಹಿನ್ನೆಲೆಯ ಜೆ.ಪಿ. ತುಮಿನಾಡ್ ನಿರ್ದೇಶನದ ಮೊದಲ ಕನ್ನಡ ಸಿನಿಮಾ ಇದು. ಈ ಹಿಂದೆ ʼಕಟಪಾಡಿ ಕಟ್ಟಪ್ಪʼ ಎನ್ನವ ತುಳು ಚಿತ್ರ ನಿರ್ದೇಶಿಸಿದ್ದ ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿ ಇದು ಮೊದಲ ಪ್ರಯತ್ನ. ಈ ಹಿಂದೆ ಅವರು ಹಲವು ಕನ್ನಡ ಚಿತ್ರಗಳಲ್ಲಿ ನಟಿಸಿದ್ದರೂ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಮೊದಲ ಅನುಭವ. ಹೀಗೆ ಮೊದಲ ಎಸತವನ್ನೇ ಅವರು ಸಿಕ್ಸರ್‌ಗೆ ಅಟ್ಟಿದ್ದು, ಚೊಚ್ಚಲ ಪ್ರಯತ್ನದಲ್ಲೇ 100 ಕೋಟಿ ರೂ. ಕ್ಲಬ್ ಸೇರಿದ ಅಪರೂಪದ ದಾಖಲೆ ಬರೆದಿದ್ದಾರೆ. ಜತೆಗೆ ಈ ಸಾಧನೆ ಮಾಡಿದೆ ಕನ್ನಡದ ಕೆಲವೇ ಕೆಲವು ನಿರ್ದೇಶಕರ ಸಾಲಿಗೆ ಸೇರಿದ್ದಾರೆ.
ಜೆ.ಪಿ. ತುಮಿನಾಡ್ ನಿರ್ದೇಶನದ ಜತೆಗೆ ಮುಖ್ಯ ಪಾತ್ರದಲ್ಲಿಯೂ ನಟಿಸಿದ್ದಾರೆ. ರಾಜ್ ಬಿ. ಶೆಟ್ಟಿ, ದೀಪಕ್ ರೈ ಪಾಣಾಜೆ, ಪ್ರಕಾಶ್ ತುಮಿನಾಡು, ಸಂಧ್ಯಾ ಅರಕೆರೆ, ಶನೀಲ್ ಗೌತಮ್, ಮೈಮ್ ರಾಮದಾಸ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಸುಮೇಧ್ ಸಂಗೀತ ನಿರ್ದೇಶನವಿದ್ದು, ಕೇವಲ 5.50 ಕೋಟಿ ರೂ. ಬಜೆಟ್‌ನಲ್ಲಿ ತಯಾರಾಗಿದೆ. ತಮಿಳು ಮತ್ತು ಹಿಂದಿಗೆ ರಿಮೇಕ್ ಆಗುವ ಬಗ್ಗೆ ಮಾತುಕತೆ ನಡೆಯುತ್ತಿದೆ.