ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ajay Devgn: ʼಸು ಫ್ರಮ್‌ ಸೋʼ ವೀಕ್ಷಿಸಿದ ಬಾಲಿವುಡ್‌ ಸ್ಟಾರ್‌ ಅಜಯ್‌ ದೇವಗನ್‌; ಬಾಲಿವುಡ್‌ಗೆ ರಿಮೇಕ್‌ ಆಗುತ್ತಾ?

Su From So Movie: ಕಡಿಮೆ ಬಜೆಟ್‌ನಲ್ಲಿ ತಯಾರಾದ ಸ್ಯಾಂಡಲ್‌ವುಡ್‌ನ ʼಸು ಫ್ರಮ್‌ ಸೋʼ ಚಿತ್ರ ಇದೀಗ ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದಿದೆ. ಕರಾವಳಿ ಕರ್ನಾಟಕದ ಊರೊಂದರ ಕಥೆಯನ್ನು ರಸವತ್ತಾಗಿ ತೆರೆ ಮೇಲೆ ಮೂಡಿಸಿದ ಈ ಸಿನಿಮಾ ಮಲಯಾಳಂ ಮತ್ತಯ ತೆಲುಗಿಗೆ ಡಬ್‌ ಆಗಿ ಅಲ್ಲೂ ಮೆಚ್ಚು ಪಡೆದುಕೊಂಡಿದೆ. ಇದೀಗ ಹಿಂದಿಗೆ ರಿಮೇಕ್‌ ಆಗಲಿದೆ ಎನ್ನುವ ಮಾತು ಕೇಲಿ ಬಂದಿದೆ.

ʼಸು ಫ್ರಮ್‌ ಸೋʼ ವೀಕ್ಷಿಸಿದ ಬಾಲಿವುಡ್‌ ಸ್ಟಾರ್‌ ಅಜಯ್‌ ದೇವಗನ್‌

Ramesh B Ramesh B Aug 12, 2025 10:06 PM

ಮುಂಬೈ: ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದು ಮುನ್ನುಗ್ಗುತ್ತಿರುವ ಸ್ಯಾಂಡಲ್‌ವುಡ್‌ನ 'ಸು ಫ್ರಮ್‌ ಸೋ' ಚಿತ್ರ (Su From So Movie) ಹೊಸದೊಂದು ದಾಖಲೆ ಬರೆದಿದೆ. ಯಾವುದೇ ಸ್ಟಾರ್‌ಗಳಿಲ್ಲದೆ, ಅಬ್ಬರದ ಪ್ರಚಾರವಿಲ್ಲದೆ ತೆರೆಕಂಡ ಈ ಕಡಿಮೆ ಬಜೆಟ್‌ನ ಚಿತ್ರ ಈಗಾಗಲೇ 50 ಕೋಟಿ ರೂ. ಕ್ಲಬ್‌ ದಾಟಿ ಮುನ್ನಡೆದಿದೆ. ಮಲಯಾಳಂ ಮತ್ತು ತೆಲುಗಿಗೂ ಡಬ್‌ ಆಗಿದ್ದು, ಅಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಮಧ್ಯೆ ಹಿಂದಿಗೆ ರಿಮೇಕ್‌ ಆಗುವ ಬಗ್ಗೆ ವದಂತಿ ಹರಡಿದೆ. ಬಾಲಿವುಡ್‌ ಸೂಪರ್‌ ಸ್ಟಾರ್‌ ಅಜಯ್‌ ದೇವಗನ್‌ (Ajay Devgn) ಚಿತ್ರ ನೋಡಿ ಮೆಚ್ಚುಗೆ ಸೂಚಿಸಿದ್ದು, ನಿರ್ದೇಶಕ, ನಟ ಜೆ.ಪಿ. ತುಮಿನಾಡ್‌ (J.P. Tuminad) ಜತೆ ಜರ್ಚೆ ನಡೆಸಿದ್ದಾರೆ. ಸದ್ಯ ಅಜಯ್‌ ದೇವಗನ್‌ ಮತ್ತು ಜೆ.ಪಿ. ತುಮಿನಾಡ್‌ ಒಟ್ಟಿಗೆ ನಿಂತಿರುವ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿಂಗಂ ರಿಮೇಕ್‌ ಮಾಡುತ್ತಾರಾ ಎನ್ನುವ ಸಂಶಯ ಹುಟ್ಟು ಹಾಕಿದೆ.

ಅಜಯ್‌ ದೇವಗನ್‌ ಅವರನ್ನು ಭೇಟಿಯಾಗಿರುವ ಬಗ್ಗೆ ಜೆ.ಪಿ. ತುಮಿನಾಡ್‌ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ʼʼಅಜಯ್‌ ದೇವಗನ್‌ ನಮ್ಮ ಚಿತ್ರ ʼಸು ಫ್ರಮ್‌ ಸೋʼ ಮೆಚ್ಚಿದ್ದಾರೆ ಮತ್ತು ಇದರ ಬಗ್ಗೆ ಮಾತನಾಡಲು ನಮ್ಮನ್ನು ಮುಂಬೈಗೆ ಆಹ್ವಾನಿಸಿದರು. ಅವರೊಬ್ಬ ಅದ್ಭುತ ವ್ಯಕ್ತಿ ಎನ್ನುವುನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ನನ್ನ ಹೃತ್ಪೂರ್ವಕ ಗೌರವಗಳು ಅಜಯ್‌ ಸರ್‌ʼʼ ಎಂದು ಜೆ.ಪಿ. ತುಮಿನಾಡ್‌ ತಿಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Su From So Movie: ಸ್ಯಾಂಡಲ್‌ವುಡ್‌ನಲ್ಲಿ ʼಸು ಫ್ರಮ್‌ ಸೋʼ ಸುನಾಮಿ; ಮತ್ತೊಂದು ʼಕಾಂತಾರʼ ಎಂದ ಫ್ಯಾನ್ಸ್‌

ಅಜಯ್ ದೇವಗನ್ ನಟನೆಯ ಜತೆಗೆ ನಿರ್ಮಾಣ ಸಂಸ್ಥೆಯನ್ನೂ ಹೊಂದಿದ್ದು, ಸಿನಿಮಾ ವಿತರಣೆಯನ್ನೂ ಮಾಡುತ್ತಾರೆ. ಹೀಗಾಗಿ ಅವರು ರಿಮೇಕ್‌ ಮಾಡುತ್ತಾರಾ ಎನ್ನುವ ಬಗ್ಗೆ ಅನುಮಾನ ಬಲವಾಗಿ ಮೂಡಿದೆ. ಇತ್ತೀಚೆಗಷ್ಟೇ ʼಸು ಫ್ರಮ್‌ ಸೋʼ ನಿರ್ಮಾಪಕರಲ್ಲಿ ಒಬ್ಬರಾದ ರಾಜ್‌ ಬಿ. ಶೆಟ್ಟಿ, ʼʼಹಿಂದಿಯಲ್ಲಿ ರಿಮೇಕ್‌ ಮಾಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಅವರು ಯಾವ ರೀತಿ ಚಿತ್ರವನ್ನು ತೆರೆ ಮೇಲೆ ತರುತ್ತಾರೆ ಎನ್ನುವ ಬಗ್ಗೆ ನನಗೂ ಕುತೂಹಲವಿದೆʼʼ ಎಂದಿದ್ದರು. ಹೀಗಾಗಿ ಅಜಯ್‌ ದೇವಗನ್‌ ಭೇಟಿ ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.

ತಗ್ಗಿಲ್ಲ ಸುಲೋಚನಾ ಹವಾ

ಒಟ್ಟು 5.5 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಹಾರರ್‌ ಕಾಮಿಡಿ ಈಗಾಗಲೇ ಬಾಕ್ಸ್‌ ಆಫೀಸ್‌ನಲ್ಲಿ 60 ಕೋಟಿ ರೂ.ಗಿಂತ ಅಧಿಕ ಕಲೆಕ್ಷನ್‌ ಮಾಡಿದೆ. ಜುಲೈ 25ರಂದು ಬಿಡುಗಡೆಯಾದ ಈ ಚಿತ್ರ 18ನೇ ದಿನವಾದ ಆಗಸ್ಟ್‌ 11ರಂದು 1.82 ಕೋಟಿ ರೂ. ಗಳಿಸಿದೆ. ಈ ಪೈಕಿ ಕನ್ನಡದಲ್ಲಿ 1.58 ಕೋಟಿ ರೂ., ಮಲಯಾಳಂ ವರ್ಷನ್‌ನಿಂದ 17 ಲಕ್ಷ ರೂ., ತೆಲುಗಿನಿಂದ 7 ಲಕ್ಷ ರೂ. ಹರಿದುಬಂದಿದೆ. ಆ ಮೂಲಕ ಒಟ್ಟು 65.92 ಕೋಟಿ ರೂ. ಬಾಚಿಕೊಂಡಿದೆ.

ಸುಲೋಚನ ಫ್ರಮ್‌ ಸೋಮೇಶ್ವರ ಅರ್ಥಾತ್‌ ʼಸು ಫ್ರಮ್‌ ಸೋʼ ಚಿತ್ರ ಯಾವುದೇ ಅಬ್ಬರ ಇಲ್ಲದೆ ರಿಲೀಸ್‌ ಆಗಿದ್ದು, ಸರಳವಾದ ಕಥೆಯನ್ನು ತೆರೆಮೇಲೆ ತಂದಿದೆ. ಕರಾವಳಿ ಕರ್ನಾಟಕದ ಊರೊಂದರಲ್ಲಿ ನಡೆಯುವ ಜನ ಜೀವನವನ್ನು ನಿರ್ದೇಶಕ ಜೆ.ಪಿ. ತುಮಿನಾಡ್‌ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ. ನಿರ್ದೇಶನದ ಜತೆಗೆ ನಾಯಕನಾಗಿಯೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಾಜ್‌ ಬಿ. ಶೆಟ್ಟಿ, ಪ್ರಕಾಶ್ ತುಮಿನಾಡ್‌, ಶನೀಲ್ ಗೌತಮ್‌, ಸಂಧ್ಯಾ ಅರೆಕೆರೆ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.