Rajasthan Horror: ಮನೆಯ ಟೆರೇಸ್‌ನ ಡ್ರಮ್‌ನಲ್ಲಿ ವ್ಯಕ್ತಿಯ ಶವ ಪತ್ತೆ; ಪತ್ನಿ, ಮಕ್ಕಳು ನಾಪತ್ತೆ
Crime News: ಬಾಡಿಗೆ ಮನೆಯ ಟೆರೇಸ್ ಮೇಲೆ ಡ್ರಮ್‌ನಲ್ಲಿ ವ್ಯಕ್ತಿಯೋರ್ವನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಅಲ್ಲದೆ ಆತನ ಮೂವರು ಮಕ್ಕಳು ಮತ್ತು ಪತ್ನಿ ನಾಪತ್ತೆಯಾಗಿದ್ದಾರೆ. ತಿಜಾರಾ ಜಿಲ್ಲೆಯ ಅಲ್ವಾರ್‌ನ ಆದರ್ಶ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.


ಜೈಪುರ: ರಾಜಸ್ಥಾನದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಬಾಡಿಗೆ ಮನೆಯ ಟೆರೇಸ್ ಮೇಲೆ ಡ್ರಮ್‌ನಲ್ಲಿ ವ್ಯಕ್ತಿಯೋರ್ವನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಜತೆಗೆ ಆತನ ಮೂವರು ಮಕ್ಕಳು ಮತ್ತು ಪತ್ನಿ ನಾಪತ್ತೆಯಾಗಿದ್ದಾರೆ (Crime News). ತಿಜಾರಾ ಜಿಲ್ಲೆಯ ಅಲ್ವಾರ್‌ನ ಆದರ್ಶ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ವ್ಯಕ್ತಿಯನ್ನು ಕೊಲೆ ಮಾಡಿ ಪತ್ನಿ ಮತ್ತು ಮಕ್ಕಳನ್ನು ಅಪಹರಿಸುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ಊಹಿಸಿದ್ದಾರೆ (Rajasthan Horror). ಸದ್ಯ ಈ ನಿಗೂಢ ಕೊಲೆ ಪ್ರಕರಣ ಸ್ಥಳದಲ್ಲಿ ಆತಂಕದ ವಾತಾವರಣ ಉಂಟು ಮಾಡಿದೆ.
ಮನೆಯ ಮಾಲಕಿ ಯಾವುದೋ ಕೆಲಸ ನಿಮಿತ್ತ ಮೊದಲ ಮಹಡಿಗೆ ಬಂದಿದ್ದರು. ಈ ವೇಳೆ ಟೆರೇಸ್‌ನಿಂದ ಕೊಳೆತ ವಾಸನೆ ಬರತೊಡಗಿತು. ಅನುಮಾನಗೊಂಡ ಅವರು ಪೊಲೀಸರಿಗೆ ಕರೆ ಮಾಡಿದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಈ ಸುದ್ದಿಯನ್ನೂ ಓದಿ: Crime News: ಛೇ ಎಂಥಾ ಕೃತ್ಯ; ಅಳುತ್ತದೆ ಎಂದು ಹೆತ್ತ ಮಗುವನ್ನೇ ಕೊಂದ ತಾಯಿ!
ಘಟನೆ ವಿವರ
ಮೃತನನ್ನು ಉತ್ತರ ಪ್ರದೇಶ ಮೂಲದ ಹಂಸರಾಜ್ ಎಂದು ಗುರುತಿಸಲಾಗಿದೆ. ಈತ ಇಲ್ಲಿ ಇಟ್ಟಿಗೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಡ್ರಮ್ ಒಳಗೆ ತುರುಕಿಸಿ ವಾಸನೆ ಹೊರ ಬಾರದಂತೆ ಅದರ ಬಾಯಿಯನ್ನು ಮುಚ್ಚಿ ಅದರ ಮೇಲೆ ಕಲ್ಲನ್ನು ಇಡಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
"ಆದರ್ಶ ಕಾಲೋನಿಯ ಮನೆಯಿಂದ ದುರ್ವಾಸನೆ ಬರುತ್ತಿದೆ ಎಂಬ ವರದಿ ಬಂದಿತ್ತು. ಪೊಲೀಸ್ ತಂಡ ಸ್ಥಳಕ್ಕೆ ತಲುಪಿದಾಗ, ಮನೆಯ ಛಾವಣಿಯ ಮೇಲೆ ನೀಲಿ ಬಣ್ಣದ ಡ್ರಮ್‌ನಲ್ಲಿ ವ್ಯಕ್ತಿಯ ಶವ ಪತ್ತೆಯಾಗಿತ್ತು. ಮೃತ ವ್ಯಕ್ತಿಯನ್ನು ಹಂಸರಾಜ್ ಅಲಿಯಾಸ್ ಸೂರಜ್ ಎಂದು ಗುರುತಿಸಲಾಗಿದೆ" ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಕುಮಾರ್ ತಿಳಿಸಿದ್ದಾರೆ.
"ಸಂತ್ರಸ್ತ ವ್ಯಕ್ತಿ ಉತ್ತರ ಪ್ರದೇಶದ ನಿವಾಸಿಯಾಗಿದ್ದು, ಕಿಶನ್‌ಗಢ್ ಬಾಸ್ ಪ್ರದೇಶದ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದ. ಇವರು ಒಂದೂವರೆ ತಿಂಗಳ ಹಿಂದೆ ಈ ಮನೆಯನ್ನು ಬಾಡಿಗೆ ಪಡೆದಿದ್ದರು. ಆತ ತನ್ನ ಮೂವರು ಮಕ್ಕಳು ಮತ್ತು ಪತ್ನಿಯೊಂದಿಗೆ ಇಲ್ಲಿ ವಾಸಿಸುತ್ತಿದ್ದ. ಘಟನೆಯ ನಂತರ ಹಂಸರಾಜ್‌ನ ಪತ್ನಿ ಮತ್ತು ಮಕ್ಕಳು ಮನೆಯಿಂದ ಕಾಣೆಯಾಗಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯದ ತಂಡವೂ ಸ್ಥಳಕ್ಕೆ ಧಾವಿಸಿದೆ. ಪೊಲೀಸರು ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.
ಕೊಲೆ ಯಾವಾಗ ಆಗಿದೆ ಎನ್ನುವುದು ತಿಳಿದು ಬಂದಿಲ್ಲ. ಸಂತ್ರಸ್ತರ ಮನೆಯವರನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.