ಗಮನಸೆಳೆದ ಸುಜನಿತ್ ಶೆಟ್ಟಿ ನಟನೆಯ ‘ಎ ಡೇಟ್’ ಚಿತ್ರದ ಟ್ರೇಲರ್; ರಿಲೀಸ್ ಡೇಟ್ ಘೋಷಿಸಿದ ಚಿತ್ರತಂಡ
‘ಎ ಡೇಟ್’ ಚಿತ್ರದ ಹೊಸತನದ ನಿರೂಪಣೆಯೊಂದಿಗೆ ಸೆಪ್ಟೆಂಬರ್ 4ರಂದು ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಈ ಹಿಂದೆ ಅಂತರ್ಜಾಲದಲ್ಲಿ ಅಪಾರ ಜನಮೆಚ್ಚುಗೆ ಗಳಿಸಿದ್ದ ಕಿರುಚಿತ್ರವೇ ಈಗ ಪೂರ್ಣ ಪ್ರಮಾಣದ ಸಿನಿಮಾಗೆ ಹೊರಹೊಮ್ಮಿದೆ. ಬೆಂಗಳೂರು ಮತ್ತು ದೆಹಲಿಯ ಜೋಡಿಯ ನಡುವೆ ಒಂದೇ ದಿನದಲ್ಲಿ ಸಾಗುವ ಕುತೂಹಲಕಾರಿ ಕಥಾಹಂದರವನ್ನು ಈ ಸಿನಿಮಾ ಹೊಂದಿದೆಯಂತೆ.
-
ಹೊಸತನದ ಕಥಾಹಂದರದ ಮೂಲಕ ಸದ್ದು ಮಾಡುತ್ತಿರುವ ‘ಎ ಡೇಟ್’ (A Date) ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಚಿತ್ರವು ಇದೇ ಸೆಪ್ಟೆಂಬರ್ 4ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಭಾಗವಹಿಸಿ ಸಿನಿಮಾ ಕುರಿತಾದ ಹಲವು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿತು.
ಇದು ಬೆಂಗಳೂರು ಹುಡುಗ - ದೆಹಲಿ ಹುಡುಗಿಯ ಕಥೆ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ವಿಮಲ್ ರಾಜ್ ಎನ್, "ಹಿಂದೆ ನಿರ್ಮಾಪಕರನ್ನು ಹುಡುಕುವ ಉದ್ದೇಶದಿಂದ ಇದೇ ಹೆಸರಿನಲ್ಲಿ ಇಂಗ್ಲಿಷ್ ಕಿರುಚಿತ್ರವೊಂದನ್ನು ಮಾಡಿದ್ದೆವು. ನಿರ್ಮಾಪಕರು ಸಿಗದಿದ್ದಾಗ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದ ಆ ಕಿರುಚಿತ್ರಕ್ಕೆ 72 ಲಕ್ಷಕ್ಕೂ ಅಧಿಕ ವೀಕ್ಷಣೆಗಳು ಲಭಿಸಿ, ಅಪಾರ ಮೆಚ್ಚುಗೆ ವ್ಯಕ್ತವಾಯಿತು. ಆ ಯಶಸ್ಸು ನೀಡಿದ ಆತ್ಮವಿಶ್ವಾಸದಿಂದಲೇ ಈಗ ಸುಜನೀತ್ ಶೆಟ್ಟಿ ಹಾಗೂ ಅಶ್ವಿನಿ ಶೆಣೈ ಜೋಡಿಯನ್ನು ಪ್ರಮುಖ ಪಾತ್ರಗಳಲ್ಲಿಟ್ಟುಕೊಂಡು ಈ ಪೂರ್ಣಪ್ರಮಾಣದ ಸಿನಿಮಾ ಮಾಡಿದ್ದೇವೆ. ಇದು ಬೆಂಗಳೂರಿನ ಹುಡುಗ ಮತ್ತು ದೆಹಲಿ ಮೂಲದ ಹುಡುಗಿಯ ನಡುವೆ ಒಂದೇ ದಿನದಲ್ಲಿ ನಡೆಯುವ ಕಥೆಯಾಗಿದೆ" ಎಂದು ತಿಳಿಸಿದರು.
ಸುಜನೀತ್ ಶೆಟ್ಟಿಗೆ ಹೀರೋ ಪಟ್ಟ
2016ರಿಂದ ಹಲವು ಜನಪ್ರಿಯ ಕಿರುಚಿತ್ರಗಳನ್ನು ರೂಪಿಸಿರುವ ವಿಮಲ್ ರಾಜ್ ಎನ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ‘ಹೋಪ್’, ‘ಲಾಫಿಂಗ್ ಬುದ್ಧ’ ಚಿತ್ರಗಳಲ್ಲಿ ಅಭಿನಯಿಸಿದ್ದ ಸುಜನೀತ್ ಶೆಟ್ಟಿ ಈ ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕನಾಗಿ ನಟಿಸಿದ್ದು, ಆಡಿಷನ್ ಮೂಲಕ ಆಯ್ಕೆಯಾದ ನವಪ್ರತಿಭೆ ಅಶ್ವಿನಿ ಶೆಣೈ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ.
ಮೋಕ್ಷ ಬೀಟ್ಸ್ ಸಂಗೀತ ಸಂಯೋಜನೆ
ವೀಕೆಂಡ್ ಶಾರ್ಟ್ಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಸಮಾನ ಮನಸ್ಕರ ತಂಡ ಈ ಚಿತ್ರವನ್ನು ನಿರ್ಮಿಸಿದ್ದು, ಖ್ಯಾತ ‘ಪಿವಿಆರ್ ಐನಾಕ್ಸ್’ ಸಂಸ್ಥೆ ಚಿತ್ರವನ್ನು ಅರ್ಪಿಸಿ ವಿತರಣೆಯ ಹೊಣೆ ಹೊತ್ತುಕೊಂಡಿದೆ. ಚಿತ್ರಕ್ಕೆ ಮೋಕ್ಷ ಬೀಟ್ಸ್ ಸಂಗೀತ ಸಂಯೋಜನೆ, ವಡ್ಡೆ ದೇವೇಂದ್ರ ರೆಡ್ಡಿ ಛಾಯಾಗ್ರಹಣ, ವಿಮಲ್ ರಾಜ್ ಎನ್ ಸಂಕಲನ ಹಾಗೂ ಸುಜನಿತ್ ಶೆಟ್ಟಿ ಮತ್ತು ವಿಮಲ್ ರಾಜ್ ಅವರ ಸಾಹಿತ್ಯವಿದೆ. ಗೋಷ್ಠಿಯಲ್ಲಿ ಛಾಯಾಗ್ರಾಹಕ ದೇವೇಂದ್ರ ರೆಡ್ಡಿ ಸೇರಿದಂತೆ ಚಿತ್ರತಂಡದ ಪ್ರಮುಖರು ಉಪಸ್ಥಿತರಿದ್ದರು.