ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

'ಎ ಡೇಟ್‌' ಚಿತ್ರದ ರ‍್ಯಾಪ್ ಶೈಲಿಯ 'ಬ್ಯಾಡ್ ಗೈ' ಆಂಥಮ್ ಸಾಂಗ್ ಬಿಡುಗಡೆ; ತೆರೆಗೆ ಬರಲು ಸಜ್ಜಾದ ಹೊಸಬರ ಪ್ರಯೋಗಾತ್ಮಕ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ಪ್ರಯೋಗಶೀಲ ಕಥಾಹಂದರ ಹೊಂದಿರುವ ‘ಎ ಡೇಟ್’ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಬೆಂಗಳೂರಿನ ಹಿನ್ನೆಲೆಯಲ್ಲಿ ಉತ್ತರ ಮತ್ತು ದಕ್ಷಿಣ ಭಾರತದ ಇಬ್ಬರು ಅಪರಿಚಿತರ ಒಂದು ದಿನದ ಪಯಣವನ್ನು ರೊಮ್ಯಾಂಟಿಕ್ ಡ್ರಾಮಾ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ.

ಹೊಸಬರ 'ಎ ಡೇಟ್‌' ಚಿತ್ರದ 'ಬ್ಯಾಡ್ ಗೈ' ಆಂಥಮ್ ಸಾಂಗ್ ಬಿಡುಗಡೆ

-

Avinash GR
Avinash GR Aug 15, 2026 5:50 PM

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ಪ್ರಯೋಗಶೀಲ ಕಥಾಹಂದರ ಹೊಂದಿರುವ ಸಿನಿಮಾಗಳ ಸಾಲಿಗೆ ಹೊಸ ಸೇರ್ಪಡೆಯಾಗಿ ‘ಎ ಡೇಟ್’ (A DATE) ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಬೆಂಗಳೂರಿನ ಹಿನ್ನೆಲೆಯಲ್ಲಿ ಒಂದೇ ದಿನದ ಅವಧಿಯಲ್ಲಿ ನಡೆಯುವ ಕಥೆಯನ್ನು ಹೊಂದಿರುವ ಈ ಚಿತ್ರದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರತಂಡ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದೆ. ಇದರ ಭಾಗವಾಗಿ ಯುವ ಸಮುದಾಯವನ್ನು ಸೆಳೆಯುವ ಉದ್ದೇಶದಿಂದ ಚಿತ್ರದ 'ಬ್ಯಾಡ್ ಗೈ' (Bad Guy) ಎಂಬ ರ್ಯಾಪ್ ಶೈಲಿಯ ಆಂಥಮ್ ಸಾಂಗ್ ಬಿಡುಗಡೆ ಮಾಡಲಾಗಿದೆ.

ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದ ವಿಮಲ್ ರಾಜ್

ಈ ವಿಶೇಷ ಹಾಡಿಗೆ ಸುಜನಿತ್ ಶೆಟ್ಟಿ ಮತ್ತು ವಿಮಲ್ ರಾಜ್ ಎನ್ ಸಾಹಿತ್ಯ ರಚಿಸಿದ್ದು, ಮೋಕ್ಷ ಬೀಟ್ಸ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೂಲತಃ ಐಟಿ ಉದ್ಯೋಗಿಯಾಗಿದ್ದು, ಯೂಟ್ಯೂಬ್‌ನಲ್ಲಿ ಹಲವು ಕಿರುಚಿತ್ರಗಳ ಮೂಲಕ ಗಮನ ಸೆಳೆದಿದ್ದ ವಿಮಲ್ ರಾಜ್ ಎನ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಕಲನ ಹಾಗೂ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಕಿರುಚಿತ್ರಗಳ ಯಶಸ್ಸಿನ ನಂತರ ಅವರು ಈ ಚಿತ್ರದ ಮೂಲಕ ಪೂರ್ಣಪ್ರಮಾಣದ ನಿರ್ದೇಶಕರಾಗಿ ಹಿರಿತೆರೆಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ರೊಮ್ಯಾಂಟಿಕ್ ಡ್ರಾಮಾ ಶೈಲಿಯ ಸಿನಿಮಾ

ಬೆಂಗಳೂರಿನಲ್ಲಿ ಅನಿರೀಕ್ಷಿತವಾಗಿ ಭೇಟಿಯಾಗುವ ಉತ್ತರ ಭಾರತದ ಯುವತಿ ಹಾಗೂ ದಕ್ಷಿಣ ಭಾರತದ ಯುವಕನ ನಡುವಿನ ಒಂದು ದಿನದ ಪಯಣವೇ ಈ ಚಿತ್ರದ ಮುಖ್ಯ ಕಥಾವಸ್ತು. ವಿಭಿನ್ನ ಭಾಷೆ, ಸಂಸ್ಕೃತಿ ಮತ್ತು ಹಿನ್ನೆಲೆಯ ಇಬ್ಬರು ವ್ಯಕ್ತಿಗಳ ನಡುವಿನ ಭಯ, ಕುತೂಹಲ, ಹಿಂಜರಿಕೆ, ನಂಬಿಕೆ ಹಾಗೂ ಭಾವನಾತ್ಮಕ ಸಂಘರ್ಷಗಳನ್ನು ರೊಮ್ಯಾಂಟಿಕ್ ಡ್ರಾಮಾ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ಚಿತ್ರದಲ್ಲಿ ಕೇವಲ ಎರಡು ಪ್ರಮುಖ ಪಾತ್ರಗಳಿದ್ದು, ಸುಜನಿತ್ ಶೆಟ್ಟಿ ಮತ್ತು ಅಶ್ವಿನಿ ಶೆಣೈ ಪ್ರಮುಖ ಭೂಮಿಕೆಯಲ್ಲಿ ನಟಿಸಿದ್ದಾರೆ.

ಬೆಂಗಳೂರಿನ ಒಂದು ಪಾತ್ರ

ಬೆಂಗಳೂರಿನ ಸುಮಾರು 55ಕ್ಕೂ ಹೆಚ್ಚು ನೈಜ ತಾಣಗಳಲ್ಲಿ ಚಿತ್ರೀಕರಣ ನಡೆಸಿರುವುದು ಈ ಸಿನಿಮಾದ ಮತ್ತೊಂದು ಪ್ರಮುಖ ವಿಶೇಷತೆಯಾಗಿದ್ದು, ನಗರದ ವಾತಾವರಣವೇ ಕಥೆಯ ಒಂದು ಪಾತ್ರದಂತೆ ಮೂಡಿಬಂದಿದೆ. ವೀಕೆಂಡ್ ಶಾರ್ಟ್ಸ್ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗಿದ್ದು, ವಡ್ಡೆ ದೇವೇಂದ್ರ ರೆಡ್ಡಿ ಅವರ ಛಾಯಾಗ್ರಹಣವಿದೆ. ಪ್ರತಿಷ್ಠಿತ ಪಿವಿಆರ್ ಐನಾಕ್ಸ್ (PVR INOX) ಸಂಸ್ಥೆ ಚಿತ್ರದ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದ್ದು, ಶೀಘ್ರದಲ್ಲೇ ‘ಎ ಡೇಟ್’ ಚಿತ್ರದ ಅಧಿಕೃತ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಪ್ರಕಟಿಸಲಿದೆ.