ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಎಷ್ಟೇ ದುಡ್ಡು ಕೊಟ್ಟರೂ ಪಾನ್‌ ಮಸಾಲ ಜಾಹೀರಾತುಗಳನ್ನು ನಟ ಸನ್ನಿ ಡಿಯೋಲ್‌ ಒಪ್ಪಿಕೊಳ್ಳೋದಿಲ್ಲ! ಇದರ ಹಿಂದಿದೆ ಬಲವಾದ ಕಾರಣ

ಬಾಲಿವುಡ್ ನಟ ಸನ್ನಿ ಡಿಯೋಲ್‌ ಅವರು ತಂಬಾಕು ಮತ್ತು ಪಾನ್ ಮಸಾಲ ಉತ್ಪನ್ನಗಳ ಜಾಹೀರಾತುಗಳಲ್ಲಿ ಎಂದಿಗೂ ನಟಿಸುವುದಿಲ್ಲವೆಂದು ಕಟ್ಟುನಿಟ್ಟಾಗಿ ಸ್ಪಷ್ಟಪಡಿಸಿದ್ದಾರೆ. ಸಮಾಜಕ್ಕೆ ಮಾರಕವಾದ ವಸ್ತುಗಳ ಪ್ರಚಾರಕ್ಕೆ ತಮ್ಮ ಮನಸ್ಸಾಕ್ಷಿ ಒಪ್ಪುವುದಿಲ್ಲವೆಂದು ಹಲವು ಆಫರ್‌ಗಳನ್ನು ತಿರಸ್ಕರಿಸಿದ್ದಾರೆ.

ನಟ ಸನ್ನಿ ಡಿಯೋಲ್‌ ಪಾನ್‌ ಮಸಾಲ ಜಾಹೀರಾತುಗಳನ್ನು ಒಪ್ಪದಿರಲು ಕಾರಣವೇನು?

-

Avinash GR
Avinash GR Aug 16, 2026 1:52 PM

"ತಂಬಾಕು ಹಾಗೂ ಪಾನ್ ಮಸಾಲ ಉತ್ಪನ್ನಗಳ ಜಾಹೀರಾತುಗಳಲ್ಲಿ ನಟಿಸುವುದಿಲ್ಲ" ಎಂದು ಬಾಲಿವುಡ್‌ನ ಖ್ಯಾತ ನಟ ಸನ್ನಿ ಡಿಯೋಲ್ ಸ್ಪಷ್ಟಪಡಿಸಿದ್ದಾರೆ. ತಮಗೆ ನಂಬಿಕೆಯಿಲ್ಲದ ಮತ್ತು ಸಮಾಜಕ್ಕೆ ಹಾನಿಕಾರಕವಾದ ವಸ್ತುಗಳನ್ನು ಪ್ರಚಾರ ಮಾಡಲು ತಮ್ಮ ಮನಸ್ಸಾಕ್ಷಿ ಒಪ್ಪುವುದಿಲ್ಲ ಎಂದು ಹೇಳಿರುವ ಅವರು, ಈ ಕಾರಣಕ್ಕಾಗಿಯೇ ಬಂದ ಹಲವು ಪ್ರಮುಖ ಆಫರ್‌ಗಳನ್ನು ನೇರವಾಗಿ ತಿರಸ್ಕರಿಸಿರುವುದಾಗಿ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಮನಸ್ಸಿಗೆ ಸರಿ ಎನಿಸುವ ಕೆಲಸ ಮಾಡುತ್ತೇನೆ

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ ಅವರು, "ನಾನು ಪಾನ್ ಮಸಾಲ ಜಾಹೀರಾತುಗಳಲ್ಲಿ ಎಂದಿಗೂ ನಟಿಸಿಲ್ಲ ಮತ್ತು ಭವಿಷ್ಯದಲ್ಲೂ ನಟಿಸುವುದಿಲ್ಲ. ಇಂತಹ ಉತ್ಪನ್ನಗಳನ್ನು ಪ್ರಚಾರ ಮಾಡುವುದು ಸರಿಯಲ್ಲ ಎಂಬ ಬಲವಾದ ಭಾವನೆ ನನಗಿದೆ. ನನ್ನ ಮನಸ್ಸಿಗೆ ಸರಿ ಎನಿಸುವ ಮತ್ತು ಜನರಿಗೆ ಒಳಿತನ್ನು ಮಾಡುವ ಕೆಲಸಗಳನ್ನು ಮಾತ್ರ ನಾನು ಆಯ್ಕೆ ಮಾಡಿಕೊಳ್ಳುತ್ತೇನೆ" ಎಂದು ತಮ್ಮ ನೈತಿಕ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಹೃತಿಕ್ ರೋಷನ್ ಹಾಗೂ ಅಜಯ್ ದೇವಗನ್ ಮುಂತಾದ ಪ್ರಮುಖ ತಾರೆಯರು ಇಂತಹ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಸಂದರ್ಭದಲ್ಲೇ, ಸನ್ನಿ ಡಿಯೋಲ್ ಅವರ ಈ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿವೆ.

ನೋಟಿಸ್‌ ನೀಡಿರುವ ಎಫ್‌ಡಿಎ

ಇನ್ನೊಂದೆಡೆ, ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ (FDA) ಸಂಸ್ಥೆಯು 'ವಿಮಲ್ ಎಲೈಚಿ' ಜಾಹೀರಾತಿನ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲದ ಪರೋಕ್ಷ ಪ್ರಚಾರ ನಡೆಸಿದ ಆರೋಪದ ಮೇಲೆ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ನಿಯಮಗಳ ಉಲ್ಲಂಘನೆಗಾಗಿ ವಿವರಣೆ ನೀಡುವಂತೆ ಸೂಚಿಸಲಾಗಿದ್ದು, ಈ ವಿವಾದದ ನಡುವೆಯೇ ಸನ್ನಿ ಅವರ ಹೇಳಿಕೆ ಮತ್ತಷ್ಟು ಮಹತ್ವ ಪಡೆದುಕೊಂಡಿದೆ.

ವಯಸ್ಸು 65 ದಾಟಿದರೂ ಬಾಕ್ಸ್‌ ಆಫೀಸ್‌ನಲ್ಲಿ ಕುಗ್ಗಿಲ್ಲ ಇವರ ಹವಾ! ಚಿರಂಜೀವಿ, ರಜನಿಕಾಂತ್‌, ಸನ್ನಿ ಡಿಯೋಲ್‌ಗೆ ಏಜ್‌ ಈಸ್‌ ಎ ಜಸ್ಟ್‌ ನಂಬರ್!‌

ಸನ್ನಿ ನಟನೆಯ ಮುಂದಿನ ಸಿನಿಮಾಗಳು

ವೃತ್ತಿಜೀವನದ ವಿಚಾರಕ್ಕೆ ಬಂದರೆ, ಸನ್ನಿ ಡಿಯೋಲ್ ಪ್ರಸ್ತುತ ದೇಶ ವಿಭಜನೆಯ ಹಿನ್ನೆಲೆಯುಳ್ಳ 'ಬಟ್ವಾರಾ 1947' ಚಿತ್ರದಲ್ಲಿ ಪ್ರೀತಿ ಜಿಂಟಾ, ಶಬಾನಾ ಆಜ್ಮಿ, ಕರಣ್ ಡಿಯೋಲ್ ಮತ್ತು ಅಲಿ ಫಜಲ್ ಅವರೊಂದಿಗೆ ನಟಿಸುತ್ತಿದ್ದಾರೆ. ಇದರ ಜೊತೆಗೆ, ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಚಿತ್ರದಲ್ಲಿ ಹನುಮಂತನ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ.