ʻಧುರಂಧರ್ʼ ಸಿನಿಮಾದ ರೆಹಮಾನ್ ಡಕಾಯಿತ್ ಪಾತ್ರವನ್ನ ರಿಜೆಕ್ಟ್ ಮಾಡಿದ್ರಾ ನಾಗಾರ್ಜುನ? ಅಕ್ಷಯ್ ಖನ್ನಾ ಬಗ್ಗೆ ಹೇಳಿದ್ದೇನು?
ಧುರಂಧರ್ ಚಿತ್ರದ ರೆಹಮಾನ್ ಡಕಾಯಿತ್ ಪಾತ್ರ ಆಫರ್ ಆನ್ನು ನಾಗಾರ್ಜುನ ತಿರಸ್ಕರಿಸಿದ್ದರು ಎಂಬ ವದಂತಿ ಸುಳ್ಳೆಂದು ಸಾಬೀತಾಗಿದೆ. ಸಂದರ್ಶನವೊಂದರಲ್ಲಿ ಮಾತನಾಡಿದ ನಾಗಾರ್ಜುನ, ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಮತ್ತು ಅಕ್ಷಯ್ ಖನ್ನಾ ಅವರ ನಟನೆಯನ್ನು ಶ್ಲಾಘಿಸಿದ್ದಾರೆ.
-
ಇಂಡಿಯನ್ ಬಾಕ್ಸ್ ಆಫೀಸ್ ಅನ್ನು ಚಿಂದಿ ಉಡಾಯಿಸಿರುವ ʻಧುರಂದರ್ʼ ಸಿನಿಮಾವು ಸದ್ಯ ಓಟಿಟಿಯಲ್ಲೂ ಟ್ರೆಂಡಿಂಗ್ ಇದೆ. ರಣವೀರ್ ಸಿಂಗ್ ಪಾತ್ರದ ಜೊತೆಗೆ ಬಾಲಿವುಡ್ ನಟ ಅಕ್ಷಯ್ ಖನ್ನಾ ನಿಭಾಯಿಸಿದ್ದ ರೆಹಮಾನ್ ಡಕಾಯಿತ್ ಪಾತ್ರವು ಧುರಂಧರ್ ಸಿನಿಮಾದ ಹೈಲೈಟ್‌ಗಳಲ್ಲಿ ಒಂದು. ಅಂದಹಾಗೆ, ಈ ಪಾತ್ರವನ್ನು ಮಾಡುವಂತೆ ತೆಲುಗು ನಟ ನಾಗಾರ್ಜುನ ಅಕ್ಕಿನೇನಿ ಅವರಿಗೆ ಆಫರ್ ನೀಡಲಾಗಿತ್ತು ಎಂಬ ಟಾಕ್ ಕೇಳಿಬಂದಿದೆ.
ಹೌದು, ರೆಹಮಾನ್ ಡಕಾಯಿತ್ ಪಾತ್ರವನ್ನು ಮಾಡಬೇಕು ಎಂದು ನಾಗಾರ್ಜುನ ಅವರನ್ನು ಚಿತ್ರತಂಡ ಸಂಪರ್ಕಿಸಿತ್ತು. ಆದರೆ ಅವರು ರಿಜೆಕ್ಟ್ ಮಾಡಿದ್ದರು ಎಂದು ವದಂತಿ ಹಬ್ಬಿದೆ. ಇದು ನಿಜವೇ ಎಂದು ಹುಡಕುತ್ತಾ ಹೋದರೆ, ಅದು ಸುಳ್ಳು ಎಂಬುದು ಗೊತ್ತಾಗಿದೆ. ಸ್ವತಃ ನಾಗಾರ್ಜುನ ಅವರೇ ಈ ವದಂತಿಗಳಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ. "ನನಗೆ ಆ ರೀತಿ ಯಾವುದೇ ಆಫರ್ ಬಂದಿರಲೇ ಇಲ್ಲ" ಎಂದಿದ್ದಾರೆ ನಾಗಾರ್ಜುನ!
Dhurandhar OTT: ಬ್ಯಾನ್ ಆದ್ರೂ ಪಾಕಿಸ್ತಾನದಲ್ಲಿ ನೆಟ್‌ಫ್ಲಿಕ್ಸ್ ಟ್ರೆಂಡಿಂಗ್‌ನಲ್ಲಿ ಧುರಂಧರ್ ನಂಬರ್ 1!
ಸಂದರ್ಶನದಲ್ಲಿ ನಾಗಾರ್ಜುನ ಹೇಳಿದ್ದೇನು?
ಈಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ನಾಗಾರ್ಜುನ ಅವರು, "ಖಂಡಿತವಾಗಿಯೂ ನನಗೆ ರೆಹಮಾನ್ ಡಕಾಯಿತ್ ಪಾತ್ರದ ಆಫರ್ ಬಂದಿಲ್ಲ. ನನಗೆ ಆ ಪಾತ್ರವನ್ನು ಯಾರೂ ಆಫರ್ ಮಾಡಿರಲಿಲ್ಲ. ಆದರೆ ನನಗೆ ಆಫರ್ ಸಿಕ್ಕಿದ್ದರೆ ಚೆನ್ನಾಗಿರುತ್ತಿತ್ತು ಎಂದು ಈಗ ನನಗೆ ಅನಿಸಿದೆ. 'ಧುರಂಧರ್' ಒಂದು ಅದ್ಭುತ ಸಿನಿಮಾ" ಎಂದು ಹೇಳಿದ್ದಾರೆ.
"ನಿರ್ದೇಶಕ ಆದಿತ್ಯ ಧರ್ ಅವರ ಕೆಲಸ ನಿಜಕ್ಕೂ ನಂಬಲಾಗದಂತಿದೆ. ಅವರ ಹಿಂದಿನ ಚಿತ್ರ 'ಉರಿ: ದ ಸರ್ಜಿಕಲ್ ಸ್ಟ್ರೈಕ್' ಕೂಡ ನನಗೆ ತುಂಬಾ ಇಷ್ಟವಾಗಿತ್ತು. ಈ ಚಿತ್ರದಲ್ಲಿ ಎಲ್ಲರ ಅಭಿನಯ ಅದ್ಭುತವಾಗಿದೆ. ರೆಹಮಾನ್ ಡಕಾಯಿತ್ ಪಾತ್ರ ಮಾಡಿರುವ ಅಕ್ಷಯ್ ಖನ್ನಾ ಅವರಂತೂ ಟೆರಿಫಿಕ್. ನಾನು ಇದರ ಮುಂದುವರಿದ ಭಾಗಕ್ಕಾಗಿ ಕಾಯುತ್ತಿದ್ದೇನೆ. ಮುಂಬರುವ ಪಾರ್ಟ್ 2 ಕೂಡ ದೊಡ್ಡ ಬ್ಲಾಕ್‌ಬಸ್ಟರ್ ಯಶಸ್ಸು ಪಡೆಯಲಿ" ಎಂದು ಹಾರೈಸಿದ್ದಾರೆ ನಾಗಾರ್ಜುನ.
100ನೇ ಸಿನಿಮಾದ ತಯಾರಿಯಲ್ಲಿ ನಾಗಾರ್ಜುನ
ಸದ್ಯನ ನಾಗಾರ್ಜುನ ಅವರು ವೃತ್ತಿ ಬದುಕಿನ 100ನೇ ಸಿನಿಮಾದ ತಯಾರಿಯಲ್ಲಿ ಇದ್ದಾರೆ. ತಮ್ಮ 100ನೇ ಸಿನಿಮಾದ ಮೂಲಕ ಅಭಿಮಾನಿಗಳನ್ನು ರಂಜಿಸಬೇಕು ಎಂದುಕೊಂಡಿರುವ ಅವರು ಸಾಕಷ್ಟು ಸಿದ್ಧತೆಗಳಲ್ಲಿ ತೊಡಗಿಕೊಂಡಿದ್ದಾರೆ. "ನಾವು ಯಾವುದನ್ನೂ ಅವಸರ ಮಾಡುತ್ತಿಲ್ಲ. ಅದನ್ನು ಪೂರ್ಣಗೊಳಿಸುವ ಆತುರವಿಲ್ಲ, ಉತ್ತಮ ಸಿನಿಮಾ ಮಾಡುವುದಕ್ಕೆ ಸಿದ್ಧತೆಗಳು ಆರಂಭವಾಗಿವೆ" ಎಂದು ಹೇಳಿದ್ದಾರೆ.