`ದಿ ಕೇರಳ ಸ್ಟೋರಿ 2' ಸಿನಿಮಾವನ್ನು ವೀಕ್ಷಿಸಲಿರುವ ಹೈಕೋರ್ಟ್ ನ್ಯಾಯಾಧೀಶರು; ನಿರ್ಮಾಪಕರಿಗೆ ಜಡ್ಜ್ ಕೇಳಿದ ಪ್ರಶ್ನೆಗಳೇನು?
The Kerala Story 2 Movie Controversy: ಬಾಲಿವುಡ್‌ನ ದಿ ಕೇರಳ ಸ್ಟೋರಿ 2 ಸಿನಿಮಾದ ಬಿಡುಗಡೆಗೂ ಮುನ್ನವೇ ಭಾರಿ ಕಾನೂನು ಸಂಘರ್ಷಕ್ಕೆ ಕಾರಣವಾಗಿದೆ. ಕೇರಳದ ಘನತೆಗೆ ಧಕ್ಕೆ ಮತ್ತು ಕೋಮು ದ್ವೇಷದ ಆರೋಪದ ಹಿನ್ನೆಲೆಯಲ್ಲಿ, ಕೇರಳ ಹೈಕೋರ್ಟ್ ನ್ಯಾಯಾಧೀಶರು ಫೆಬ್ರವರಿ 25ರಂದು ಈ ಸಿನಿಮಾವನ್ನು ವೀಕ್ಷಿಸಿ ಮುಂದಿನ ಆದೇಶ ನೀಡಲಿದ್ದಾರೆ.
-
ಕೇರಳ ರಾಜ್ಯವನ್ನು ನಕಾರಾತ್ಮಕವಾಗಿ ಚಿತ್ರಿಸಲಾಗಿದೆ ಎಂಬ ಆರೋಪಕ್ಕೆ ಗುರಿಯಾಗಿರುವ 'ದಿ ಕೇರಳ ಸ್ಟೋರಿ 2' ಸಿನಿಮಾವನ್ನು ಬುಧವಾರ (ಫೆ.25) ವೀಕ್ಷಿಸುವುದಾಗಿ ಕೇರಳ ಹೈಕೋರ್ಟ್ ಮಂಗಳವಾರ ತಿಳಿಸಿದೆ. ಚಿತ್ರಕ್ಕೆ ನೀಡಲಾದ ಸೆನ್ಸಾರ್ ಪ್ರಮಾಣಪತ್ರವನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್ ಅವರ ಪೀಠವು ಈ ನಿರ್ಧಾರ ಕೈಗೊಂಡಿದೆ.
ಕೇರಳದ ಜನರ ಕಳವಳಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ!
"ಸಾಮಾನ್ಯವಾಗಿ ನ್ಯಾಯಾಲಯಗಳು ಕಲಾತ್ಮಕ ಅಭಿವ್ಯಕ್ತಿಯಲ್ಲಿ ಹಸ್ತಕ್ಷೇಪ ಮಾಡಲು ಹಿಂಜರಿಯುತ್ತವೆ. ಅದು ಕಲಾತ್ಮಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ್ದು. ಆದರೆ ಚಿತ್ರದ ಶೀರ್ಷಿಕೆಯಲ್ಲಿ ರಾಜ್ಯದ ಹೆಸರನ್ನು ಬಳಸಿರುವುದರಿಂದ, ಕೇರಳದ ಜನರು ವ್ಯಕ್ತಪಡಿಸಿರುವ ಕಳವಳಗಳನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಕೇರಳವು ಸಂಪೂರ್ಣ ಸೌಹಾರ್ದತೆಯಿಂದ ಬದುಕುತ್ತಿದೆ. ಆದರೆ ಇಡೀ ಕೇರಳದಲ್ಲಿ ಇಂತಹ ಘಟನೆಗಳು ನಡೆಯುತ್ತಿವೆ ಎಂದು ನೀವು ಚಿತ್ರಿಸಿದ್ದೀರಿ. ಇದು ತಪ್ಪು ಸಂದೇಶ ರವಾನಿಸುವುದಲ್ಲದೆ, ಭಾವನೆಗಳನ್ನು ಕೆರಳಿಸಬಹುದು. ಸೆನ್ಸಾರ್ ಮಂಡಳಿಯು ಈ ಅಂಶವನ್ನು ಪರಿಗಣಿಸಿದೆಯೇ" ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಸಿನಿಮಾ ವೀಕ್ಷಣೆ ಬಳಿಕ ತೀರ್ಪು
"ಇದು ಸತ್ಯ ಘಟನೆಗಳಿಂದ ಪ್ರೇರಿತವಾಗಿದೆ ಎಂದು ನೀವು ಹೇಳಿಕೊಳ್ಳುತ್ತಿದ್ದೀರಿ ಮತ್ತು ಕೇರಳದ ಹೆಸರನ್ನು ಬಳಸಿದ್ದೀರಿ. ಇದು ಕೋಮು ಉದ್ವಿಗ್ನತೆಗೆ ಕಾರಣವಾಗಬಹುದು. ಆದ್ದರಿಂದ ನಾಳೆ ನಾವು ಸಿನಿಮಾವನ್ನು ವೀಕ್ಷಿಸಿದ ನಂತರ ಮುಂದಿನ ಆದೇಶ ನೀಡುತ್ತೇವೆ" ಎಂದು ನ್ಯಾಯಾಧೀಶರು ತಿಳಿಸಿದ್ದಾರೆ. ಅಲ್ಲದೆ, ಸಿನಿಮಾ ವೀಕ್ಷಣೆಗೆ ಸಮಯ ಮತ್ತು ಸ್ಥಳವನ್ನು ನಿಗದಿಪಡಿಸುವಂತೆ ನಿರ್ಮಾಪಕರಿಗೆ ಸೂಚಿಸಲಾಗಿದೆ.
'ದಿ ಕೇರಳ ಸ್ಟೋರಿ 2' ಚಿತ್ರತಂಡದ ವಿರುದ್ಧ ಪಿಣರಾಯಿ ವಿಜಯನ್ ಕೆಂಡ; ʻಸಿನಿಮಾ ಅಲ್ಲ, ಸುಳ್ಳು ಪ್ರಚಾರʼ ಎಂದ ಸಿಎಂ!
"ಚಿತ್ರದಲ್ಲಿ 'ಲವ್ ಜಿಹಾದ್ ಸಂತ್ರಸ್ತರು' ಎಂದು ತೋರಿಸಲಾಗಿರುವ ಯುವತಿಯರಲ್ಲಿ ಒಬ್ಬರೂ ಕೇರಳದವರಲ್ಲ. ಆದರೂ ಚಿತ್ರಕ್ಕೆ 'ದಿ ಕೇರಳ ಸ್ಟೋರಿ 2' ಎಂದು ಹೆಸರಿಡುವ ಮೂಲಕ ಕೇರಳ ಸಮಾಜವನ್ನು ಕೆಟ್ಟದಾಗಿ ಬಿಂಬಿಸಲಾಗಿದೆ" ಎಂದು ಅರ್ಜಿದಾರರ ವಕೀಲರು ವಾದಿಸಿದರು. ಆದರೆ ಅತ್ತ ನಿರ್ಮಾಪಕರ ಪರ ವಕೀಲರು ಮಾತ್ರ, "ನಮ್ಮ ಚಿತ್ರದಲ್ಲಿ ಧರ್ಮ ಅಥವಾ ಪಂಥಕ್ಕೆ ಧಕ್ಕೆ ತರುವಂತಹ ಯಾವುದೇ ಅಂಶಗಳಿಲ್ಲ. ಯಾವುದೇ ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಸಿನಿಮಾ ಮಾಡಿಲ್ಲ" ಎಂದು ಹೇಳಿದ್ದಾರೆ.
'ದಿ ಕೇರಳ ಸ್ಟೋರಿ 2' ರಿಲೀಸ್ ಯಾವಾಗ?
'ದಿ ಕೇರಳ ಸ್ಟೋರಿ 2' ಚಿತ್ರವನ್ನು ಫೆ.27ರಂದು ರಿಲೀಸ್ ಮಾಡಲು ನಿರ್ಮಾಪಕರು ಸಜ್ಜಾಗಿದೆ. ಕೇರಳ, ರಾಜಸ್ಥಾನ ಮತ್ತು ಮಧ್ಯಪ್ರದೇಶದ ಹಿನ್ನೆಲೆಯಲ್ಲಿ ನಡೆಯುವ ಬಲವಂತದ ಮತಾಂತರದಂತಹ ವಿಷಯಗಳ ಸುತ್ತ ಈ ಸಿನಿಮಾ ಸುತ್ತುತ್ತದೆ. ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಮತ್ತು ಐಶ್ವರ್ಯ ಓಝಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರಕ್ಕೆ ಸೆನ್ಸಾರ್‌ನಿಂದ ಈಗಾಗಲೇ ಯು/ಎ ಪ್ರಮಾಣಪತ್ರ ಸಿಕ್ಕಿದೆ.