ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಟಾಕ್ಸಿಕ್‌ʼ ಬಗ್ಗೆ ಮಗಳು ರಿಷಿಕಾ ಸಿಂಗ್‌ ಟೀಕೆ, ತಂದೆಯಿಂದ ಭಾರಿ ಹೊಗಳಿಕೆ; ʻಯಶ್‌ ಕೊಹಿನೂರ್‌ ವಜ್ರʼ ಎಂದ ನಿರ್ದೇಶಕ ಎಸ್‌. ವಿ. ರಾಜೇಂದ್ರ ಸಿಂಗ್‌ ಬಾಬು

ʻರಾಕಿಂಗ್‌ ಸ್ಟಾರ್‌ʼ ಯಶ್‌ ಅಭಿನಯದ ‘ಟಾಕ್ಸಿಕ್’ ಚಿತ್ರದ ವಿರುದ್ಧ ನಟಿ ರಿಷಿಕಾ ಸಿಂಗ್ ಮಾಡಿದ್ದ ಗಂಭೀರ ಟೀಕೆಗಳಿಗೆ ಅವರ ತಂದೆ, ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಪ್ರತಿಕ್ರಿಯೆ ನೀಡಿದ್ದಾರೆ. ಮಗಳ ಮಾತನ್ನು ವೈಯಕ್ತಿಕ ಎಂದಿರುವ ಅವರು, ಯಶ್ ಅವರನ್ನು ಚಿತ್ರರಂಗದ ‘ಕೊಹಿನೂರ್ ವಜ್ರ’ ಎಂದು ಕೊಂಡಾಡಿದ್ದಾರೆ.

ʻಟಾಕ್ಸಿಕ್‌ʼ ಸಿನಿಮಾದ ಬಗ್ಗೆ ಮಗಳು ರಿಷಿಕಾ ಟೀಕೆ, ತಂದೆಯಿಂದ ಭಾರಿ ಹೊಗಳಿಕೆ

-

Avinash GR
Avinash GR Aug 20, 2026 7:40 PM

ʻರಾಕಿಂಗ್‌ ಸ್ಟಾರ್‌ʼ ಯಶ್‌ ನಟನೆಯ ಬಹುನಿರೀಕ್ಷಿತ ʻಟಾಕ್ಸಿಕ್ʼ‌ ಸಿನಿಮಾವು ತೆರೆಗೆ ಬರಲು ಸಜ್ಜಾಗಿದೆ. ಆಗಸ್ಟ್‌ 26ರಂದು ವಿಶ್ವಾದ್ಯಂತ ಈ ಸಿನಿಮಾ ರಿಲೀಸ್‌ ಆಗಲಿದ್ದು, ನಾಳೆಯಿಂದ (ಆ.21) ಈ ಚಿತ್ರದ ಅಡ್ವಾನ್ಸ್‌ ಟಿಕೆಟ್‌ ಬುಕಿಂಗ್‌ ಶುರುವಾಗಲಿದೆ. ಈ ಮಧ್ಯೆ ʻಟಾಕ್ಸಿಕ್‌ʼ ಚಿತ್ರದ ಟ್ರೇಲರ್‌ ಮತ್ತು ಸಾಂಗ್ಸ್‌ ಬಗ್ಗೆ ಹಿರಿಯ ನಿರ್ದೇಶಕ ಎಸ್‌ ವಿ ರಾಜೇಂದ್ರ ಸಿಂಗ್‌ ಬಾಬು ಅವರ ಪುತ್ರಿ, ಕನ್ನಡ ನಟಿ ರಿಷಿಕಾ ಸಿಂಗ್‌ ಅವರು ಟೀಕ್‌ ಮಾಡಿದ್ದು ಗೊತ್ತೇ ಇದೆ. ಇದೀಗ ಆ ಬಗ್ಗೆ ಸ್ವತಃ ರಾಜೇಂದ್ರ ಸಿಂಗ್‌ ಬಾಬು ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಯಶ್‌ ಬಗ್ಗೆ ನಾವು ಹೆಮ್ಮೆ ಪಡಬೇಕು

"ಟಾಕ್ಸಿಕ್‌ ಸಿನಿಮಾ ಹಾಗೂ ಯಶ್‌ ವಿರುದ್ಧ ನಿಮ್ಮ ಪುತ್ರಿ ರಿಷಿಕಾ ಸಿಂಗ್‌ ಆಕ್ರೋಶ ಹೊರಹಾಕಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವೇನು?" ಎಂದು ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್‌ ಬಾಬು ಅವರಿಗೆ ಮಾಧ್ಯಮಗಳು ಪ್ರಶ್ನೆ ಮಾಡಿವೆ. ಇದಕ್ಕೆ ಪ್ರತಿಕ್ರಿಯಿಸಿದ ಹಿರಿಯ ನಿರ್ದೇಶಕರು, "ಅದು ಅವರ (ರಿಷಿಕಾ) ವೈಯಕ್ತಿಕ ಅಭಿಪ್ರಾಯ. ನಾನು ಈ ಹಿಂದೆಯೇ ಹೇಳಿದಂತೆ, ಯಶ್‌ ಮಾಡುತ್ತಿರುವ ಸಿನಿಮಾಗಳ ಬಗ್ಗೆ ನಾವೆಲ್ಲರೂ ಹೆಮ್ಮೆಪಡಬೇಕು. ಇಂದು ಅಂತಹ ಬೃಹತ್ ಚಿತ್ರವನ್ನು ಕೈಗೆತ್ತಿಕೊಂಡು, ಅದರಲ್ಲಿ 'ರಾವಣ'ನ ಪಾತ್ರ ಮಾಡುವ ಮೂಲಕ ಕನ್ನಡ ಚಿತ್ರರಂಗದ ಮಾರುಕಟ್ಟೆ ಎಷ್ಟು ವಿಸ್ತಾರವಾಗಿದೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ. ಇಡೀ ಭಾರತವೇ ‘ಟಾಕ್ಸಿಕ್‌’ ಚಿತ್ರಕ್ಕಾಗಿ ಕಾಯುತ್ತಿದೆ. ನಾವು ಇದರ ಬಗ್ಗೆ ಹೆಮ್ಮೆಪಡಬೇಕು" ಎಂದು ಹೇಳಿದ್ದಾರೆ.

Toxic Movie: 'ತಬಾಹಿ ಹಾಡು ಕಾಂಡೋಮ್‌ ಜಾಹೀರಾತಿನ ಥರ ಇದೆʼ ಎಂದವರಿಗೆ 'ರಾಕಿ ಭಾಯ್‌' ಯಶ್ ಖಡಕ್ ಉತ್ತರ!

ಯಶ್‌ ನಮಗೆ ಕೋಹಿನೂರ್‌ ವಜ್ರ!

ಯಶ್ ಬೆಳವಣಿಗೆಯನ್ನು ಮುಕ್ತವಾಗಿ ಶ್ಲಾಘಿಸಿರುವ ಹಿರಿಯ ನಿರ್ದೇಶಕ ಎಸ್. ವಿ. ರಾಜೇಂದ್ರ ಸಿಂಗ್ ಬಾಬು, "ಯಶ್ ನಮ್ಮ ಚಿತ್ರರಂಗದ ಕೊಹಿನೂರ್ ವಜ್ರ" ಎಂದಿದ್ದಾರೆ. ಕನ್ನಡ ಸಿನಿಮಾವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ದ ಯಶ್ ಬಗ್ಗೆ ತಮಗೆ ಹೆಮ್ಮೆಯಿದೆ ಎಂದು ಅವರು ಹೇಳಿದ್ದಾರೆ. ತಮ್ಮ ಪುತ್ರಿ ʻಟಾಕ್ಸಿಕ್‌ʼ ಚಿತ್ರದ ಬಗ್ಗೆ ಈ ಹಿಂದೆ ಟೀಕೆ ಮಾಡಿದ್ದರೂ, ತಂದೆಯಾಗಿ ತಮ್ಮದೇ ಆದ ಪ್ರತ್ಯೇಕ ನಿಲುವು ತಳೆದು ಯಶ್ ಅವರ ಪರಿಶ್ರಮ ಹಾಗೂ ಸಾಧನೆಯನ್ನು ಬಾಬು ಬೆಂಬಲಿಸಿರುವುದು ಸದ್ಯ ಗಮನ ಸೆಳೆದಿದೆ.

ರಿಷಿಕಾ ಸಿಂಗ್‌ ಏನೆಲ್ಲಾ ಹೇಳಿದ್ದರು?

ಯಶ್‌ ಅಭಿನಯದ ಮುಂಬರುವ ‘ಟಾಕ್ಸಿಕ್‌’ ಚಿತ್ರದ ದೃಶ್ಯಗಳ ಕುರಿತು ರಿಷಿಕಾ ಸಿಂಗ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು. ‘ಟಾಕ್ಸಿಕ್’ ಚಿತ್ರದಲ್ಲಿ ಮಹಿಳೆಯರನ್ನು ಗೌರವಯುತವಾಗಿ ತೋರಿಸಲಾಗಿಲ್ಲ ಎಂದು ಆರೋಪಿಸಿದ್ದ ಅವರು, "ಯಶ್‌ ಒಬ್ಬ ಜವಾಬ್ದಾರಿಯುತ ಪತಿ ಮತ್ತು ತಂದೆಯಾಗಿದ್ದುಕೊಂಡು ಮಹಿಳೆಯರಿಗೆ ಅಗೌರವ ತರುವಂತಹ ದೃಶ್ಯಗಳಲ್ಲಿ ನಟಿಸಲು ಹೇಗೆ ಒಪ್ಪಿಕೊಂಡರು? ಸಿನಿಮಾಗಳಲ್ಲಿ ಮಹಿಳೆಯರಿಗೆ ಸೂಕ್ತ ಗೌರವ ನೀಡದಿದ್ದರೆ ನಿಮ್ಮನ್ನು ಕರ್ನಾಟಕದಿಂದಲೇ ಹೊರಗೆ ಹಾಕಬೇಕಾಗುತ್ತದೆ" ಎಂದೆಲ್ಲಾ ಎಚ್ಚರಿಕೆ ನೀಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಯಶ್ ಅಭಿಮಾನಿಗಳು ರಿಷಿಕಾ ಸಿಂಗ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.