ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ತಮಿಳಿನ ಆ ಸ್ಟಾರ್‌ ನಿರ್ದೇಶಕನಿಗಾಗಿ 24 ವರ್ಷಗಳ ಬಳಿಕ ಒಂದಾದ ಉಪೇಂದ್ರ - ಪ್ರಭುದೇವ; ನೆಟ್‌ಫ್ಲಿಕ್ಸ್‌ನಿಂದ ಬಿಗ್‌ ಪ್ರಾಜೆಕ್ಟ್!‌

ಉಪೇಂದ್ರ - ಪ್ರಭುದೇವ ಬರೋಬ್ಬರಿ ಎರಡು ದಶಕಗಳ ಬಳಿಕ ಒಟ್ಟಿಗೆ ನಟಿಸಲು ಸಜ್ಜಾಗಿದ್ದು, ಕಾಲಿವುಡ್‌ನ ಪ್ರತಿಭಾವಂತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಒಟಿಟಿ ದೈತ್ಯ ನೆಟ್‌ಫ್ಲಿಕ್ಸ್ ನಿರ್ಮಾಣದ ಈ ಚಿತ್ರದಲ್ಲಿ ನಟ ಅಥರ್ವ ಕೂಡ ಬಣ್ಣಹಚ್ಚಲಿದ್ದಾರೆ.

Netflix ಪ್ರಾಜೆಕ್ಟ್‌ಗಾಗಿ 24 ವರ್ಷಗಳ ಬಳಿಕ ಒಂದಾದ ಉಪೇಂದ್ರ - ಪ್ರಭುದೇವ!

-

Avinash GR
Avinash GR Oct 1, 2026 4:03 PM

ಕಾಲಿವುಡ್‌ನ ಖ್ಯಾತ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಸಾರಥ್ಯದಲ್ಲಿ ಭಾರತೀಯ ಚಿತ್ರರಂಗದ ಇಬ್ಬರು ಬಹುಮುಖ ಪ್ರತಿಭೆಗಳಾದ ‘ರಿಯಲ್ ಸ್ಟಾರ್’ ಉಪೇಂದ್ರ ಹಾಗೂ ‘ಮೈಕಲ್ ಜಾಕ್ಸನ್ ಆಫ್ ಇಂಡಿಯಾ’ ಪ್ರಭುದೇವ ಬರೋಬ್ಬರಿ 24 ವರ್ಷಗಳ ಬಳಿಕ ಒಟ್ಟಿಗೆ ತೆರೆಹಂಚಿಕೊಳ್ಳಲು ಸಜ್ಜಾಗಿದ್ದಾರೆ. 2004ರಲ್ಲಿ ಇವರಿಬ್ಬರು ʻಎಚ್‌2ಓʼ ಸಿನಿಮಾಕ್ಕಾಗಿ ತೆರೆಹಂಚಿಕೊಂಡಿದ್ದರು. ಇದೀಗ ಒಟಿಟಿ ದೈತ್ಯ ‘ನೆಟ್‌ಫ್ಲಿಕ್ಸ್’ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ ಒಂದನ್ನು ನಿರ್ಮಿಸುತ್ತಿದ್ದು, ಇದು ನೇರವಾಗಿ ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಸ್ವತಃ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಅಧಿಕೃತವಾಗಿ ಖಚಿತಪಡಿಸಿದ್ದಾರೆ.

ಒಂದು ಹಂತದ ಶೂಟಿಂಗ್‌ ಆಗಲೇ ಪೂರ್ಣ!

ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ 10ನೇ ತಮಿಳು ಚಿತ್ರವಾದ ‘ಡೊರೊಥಿ’ ವಿಮರ್ಶಾತ್ಮಕವಾಗಿ ಪ್ರಶಂಸೆ ಪಡೆದು ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ ಬೆನ್ನಲ್ಲೇ, ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಹೊಸ ಪ್ರಾಜೆಕ್ಟ್‌ನ ವಿವರಗಳನ್ನು ಬಹಿರಂಗಪಡಿಸಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮವಾಗದ ಈ ಬಹುತಾರಾಗಣದ ಚಿತ್ರದಲ್ಲಿ ಉಪೇಂದ್ರ ಹಾಗೂ ಪ್ರಭುದೇವ ಅವರ ಜೊತೆಗೆ ನಟ ಅಥರ್ವ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಡೊರೊಥಿ’ ಚಿತ್ರದ ರಿಲೀಸ್‌ಗೂ ಮುನ್ನವೇ ಈ ನೂತನ ಸಿನಿಮಾದ ಮೊದಲ ಹಂತದ ಚಿತ್ರೀಕರಣವನ್ನು ರಹಸ್ಯವಾಗಿ ಪೂರ್ಣಗೊಳಿಸಲಾಗಿತ್ತು ಎಂಬ ಅಚ್ಚರಿಯ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದಾರೆ.

Actor Upendra: ಉಪೇಂದ್ರ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್: ‘ನೆಕ್ಸ್ಟ್ ಲೆವೆಲ್’ ಫಸ್ಟ್ ಲುಕ್ ಔಟ್‌

ಹುಲಿ ವೇಷದ ಕುರಿತ ಸಿನಿಮಾ

"ನಮ್ಮ ಚಿತ್ರತಂಡ ಈಗಾಗಲೇ ಯಶಸ್ವಿಯಾಗಿ ಮೊದಲ ಶೆಡ್ಯೂಲ್ ಮುಗಿಸಿದೆ. ಶೀಘ್ರದಲ್ಲೇ ಮುಂದಿನ ಹಂತದ ಚಿತ್ರೀಕರಣ ಪುನರಾರಂಭಗೊಳ್ಳಲಿದೆ. ಈ ಚಿತ್ರವು ತಮಿಳುನಾಡಿನ ಸಾಂಪ್ರದಾಯಿಕ ಜಾನಪದ ಕಲೆಯಾದ 'ಪುಲಿಯಾಟ್ಟಂ' (ಹುಲಿ ವೇಷ) ಹಿನ್ನೆಲೆಯನ್ನು ಒಳಗೊಂಡಿದೆ. ಕಲಾವಿದರು ಹುಲಿಯ ವೇಷ ಧರಿಸಿ, ಮೈಮೇಲೆ ಬಣ್ಣ ಬಳಿದುಕೊಂಡು ಪ್ರದರ್ಶಿಸುವ ಈ ನೃತ್ಯ ಪ್ರಕಾರವು ತೆರೆಯ ಮೇಲೆ ಅತ್ಯದ್ಭುತ ದೃಶ್ಯ ವೈಭವವನ್ನು ಕಟ್ಟಿಕೊಡಲಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದರೆ ಇದು ವಿಶುವಲ್ ಟ್ರೀಟ್ ಆಗಿರುತ್ತಿತ್ತು. ಆದರೆ ನೆಟ್‌ಫ್ಲಿಕ್ಸ್ ಸಂಸ್ಥೆಯು ಆರಂಭದಿಂದಲೂ ಈ ಚಿತ್ರದ ಜೊತೆಗಿದ್ದು, ಭಾರಿ ಮಟ್ಟದಲ್ಲೇ ಇದನ್ನು ವೀಕ್ಷಕರ ಮುಂದಿಡಲು ಸಿದ್ಧತೆ ನಡೆಸಿದೆ" ಎಂದು ಕಾರ್ತಿಕ್‌ ಸುಬ್ಬರಾಜ್‌ ತಿಳಿಸಿದ್ದಾರೆ.

ಕಾದಂಬರಿಯೊಂದರ ಸಿನಿಮಾರೂಪ ಇದು

ಇದಲ್ಲದೆ, ಈ ಪ್ರಾಜೆಕ್ಟ್ ಜನಪ್ರಿಯ ಕಾದಂಬರಿಯೊಂದರ ರೂಪಾಂತರವಾಗಿದೆ ಎಂಬುದನ್ನೂ ಅವರು ಸ್ಪಷ್ಟಪಡಿಸಿದ್ದಾರೆ. "ನಾನು ಪ್ರಸಿದ್ಧ ಕಾದಂಬರಿಯೊಂದರ ಅಧಿಕೃತ ಹಕ್ಕುಗಳನ್ನು ಪಡೆದುಕೊಂಡಿದ್ದು, ಅದನ್ನು ಸಿನಿಮಾ ಮಾಧ್ಯಮಕ್ಕೆ ಒಗ್ಗುವಂತೆ ನನ್ನದೇ ಆದ ಕಥನ ಶೈಲಿ ಹಾಗೂ ವಿಶಿಷ್ಟ ಅಂಶಗಳನ್ನು ಸೇರಿಸಿ ಚಿತ್ರಕಥೆ ಹೆಣೆದಿದ್ದೇನೆ" ಎಂದು ಕಾರ್ತಿಕ್ ಸುಬ್ಬರಾಜ್ ಹೇಳಿದ್ದಾರೆ. ಉಪೇಂದ್ರ ಮತ್ತು ಪ್ರಭುದೇವ ಅವರ ಈ ಹೊಸ ಕಾಂಬಿನೇಷನ್‌ ಬಗ್ಗೆ ಕನ್ನಡಿಗರು ಸೇರಿದಂತೆ ದಕ್ಷಿಣ ಭಾರತದ ಚಿತ್ರಪ್ರೇಮಿಗಳಲ್ಲಿ ಭಾರಿ ಕುತೂಹಲ ಮನೆ ಮಾಡಿದೆ.