'ರಿಯಲ್ ಸ್ಟಾರ್' ಉಪೇಂದ್ರ ನಟನೆಯ 'ನೆಕ್ಸ್ಟ್ ಲೆವೆಲ್' ಚಿತ್ರಕ್ಕೆ ಮುಹೂರ್ತ: ಉಪ್ಪಿಗೆ ಜೋಡಿಯಾದ ಆರಾಧನಾ ರಾಮ್, ಸಾಥ್ ನೀಡಿದ ನಿರಂಜನ್!
'ರಿಯಲ್ ಸ್ಟಾರ್' ಉಪೇಂದ್ರ ಅಭಿನಯದ, ಅರವಿಂದ್ ಕೌಶಿಕ್ ನಿರ್ದೇಶನದ 'ನೆಕ್ಸ್ಟ್ ಲೆವೆಲ್' ದ್ವಿಭಾಷಾ ಸಿನಿಮಾದ ಮುಹೂರ್ತ ಧರ್ಮಗಿರಿ ಮಂಜುನಾಥ ದೇವಸ್ಥಾನದಲ್ಲಿ ನೆರವೇರಿದೆ. 'ಕಾಟೇರ' ಖ್ಯಾತಿಯ ಆರಾಧನಾ ರಾಮ್ ನಾಯಕಿಯಾಗಿದ್ದು, ಉಪೇಂದ್ರ ಅವರ ಸಹೋದರನ ಮಗ ನಿರಂಜನ್ ಸುಧೀಂದ್ರ ಪ್ರಮುಖ ಪಾತ್ರದಲ್ಲಿದ್ದಾರೆ.
-
'ರಿಯಲ್ ಸ್ಟಾರ್' ಉಪೇಂದ್ರ ಅಭಿನಯದ 'ನೆಕ್ಸ್ಟ್ ಲೆವೆಲ್' (Next Level) ಸಿನಿಮಾದ ಅದ್ಧೂರಿ ಮುಹೂರ್ತ ಸಮಾರಂಭವು ಬೆಂಗಳೂರಿನ ಶ್ರೀ ಧರ್ಮಗಿರಿ ಮಂಜುನಾಥಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ನೆರವೇರಿತು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ಇದಾಗಿದೆ.
ಉಪೇಂದ್ರ ಅವರ ಪುತ್ರ ಆಯುಷ್ ಮೊದಲ ದೃಶ್ಯಕ್ಕೆ ಕ್ಲ್ಯಾಪ್ ಮಾಡುವ ಮೂಲಕ ಚಿತ್ರಕ್ಕೆ ಶುಭ ಕೋರಿದರು. ಈ ಮುಹೂರ್ತ ಸಮಾರಂಭದಲ್ಲಿ ಪ್ರಿಯಾಂಕಾ ಉಪೇಂದ್ರ ಹಾಗೂ ಹಿರಿಯ ನಟಿ ಮಾಲಾಶ್ರೀ ಸೇರಿದಂತೆ ಹಲವು ಗಣ್ಯರು ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಉಪ್ಪಿಗೆ ಜೋಡಿಯಾದ 'ಕಾಟೇರ' ಖ್ಯಾತಿಯ ಆರಾಧನಾ ರಾಮ್!
ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ಹಿರಿಯ ನಟಿ ಮಾಲಾಶ್ರೀ ಅವರ ಪುತ್ರಿ ಆರಾಧನಾ ರಾಮ್ ಜೋಡಿಯಾಗಿದ್ದಾರೆ. ದರ್ಶನ್ ಅಭಿನಯದ 'ಕಾಟೇರ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಆರಾಧನಾ ಅವರಿಗೆ ಇದು ಎರಡನೇ ಸಿನಿಮಾವಾಗಿದೆ. 'ಕಾಟೇರ' ಚಿತ್ರದಲ್ಲಿ ಪಕ್ಕಾ ಹಳ್ಳಿ ಹುಡುಗಿಯ ಪಾತ್ರದಲ್ಲಿ ಮಿಂಚಿದ್ದ ಆರಾಧನಾ, ಈ ಚಿತ್ರದಲ್ಲಿ ತೀರಾ ಭಿನ್ನವಾದ ಬೋಲ್ಡ್ ಹಾಗೂ ಗ್ಲಾಮರಸ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದಲ್ಲಿ ಅವರು ಮುಖ್ಯಮಂತ್ರಿಯ ಮಗಳ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಚಿಕ್ಕಪ್ಪನ ಜೊತೆ ಅಖಾಡಕ್ಕಿಳಿದ ನಿರಂಜನ್!
ಉಪೇಂದ್ರ ಅವರ ಜೊತೆಗೆ ಅವರ ಸಹೋದರನ ಮಗ, ನಟ ನಿರಂಜನ್ ಸುಧೀಂದ್ರ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ಒಂದೇ ಸಿನಿಮಾದಲ್ಲಿ ಚಿಕ್ಕಪ್ಪ-ಮಗನ ಜುಗಲ್‌ಬಂದಿ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
Actor Upendra: ಸಿಲಿಂಡರ್‌ಗೂ ನನಗೂ ಲಿಂಕ್ ಇಲ್ಲ; ಮತ್ತೆ ತಲೆಗೆ ಹುಳ ಬಿಟ್ಟ ನಟ ಉಪೇಂದ್ರ
'ಎ' ಹಾಗೂ 'ಉಪೇಂದ್ರ' ಶೈಲಿಯ ಸಿನಿಮಾ
'ವಿಕ್ಟರಿ-2' ಮತ್ತು 'ಛೂ ಮಂತರ್'ನಂತಹ ಯಶಸ್ವಿ ಸಿನಿಮಾಗಳನ್ನು ನಿರ್ಮಿಸಿರುವ ತರುಣ್ ಶಿವಪ್ಪ, ತಮ್ಮದೇ 'ತರುಣ್ ಸ್ಟುಡಿಯೋಸ್' ಬ್ಯಾನರ್ ಅಡಿಯಲ್ಲಿ ಬೃಹತ್ ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಿರ್ದೇಶಕ ಅರವಿಂದ್ ಕೌಶಿಕ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಉಪೇಂದ್ರ ಅವರ ಕ್ಲಾಸಿಕ್ ಹಿಟ್‌ಗಳಾದ 'ಎ', 'ಉಪೇಂದ್ರ' ಮತ್ತು 'ರಕ್ತಕಣ್ಣೀರು' ಶೈಲಿಯ ಸಿನಿಮಾವಾಗಿದ್ದು, ಇಂದಿನ ತಲೆಮಾರಿಗೆ ತಕ್ಕಂತೆ ಉಪ್ಪಿ ಅವರ ವಿಶಿಷ್ಟ ಶೈಲಿಯ ಪಾತ್ರವನ್ನು ರೂಪಿಸಲಾಗಿದೆ.
ಅತ್ಯಂತ ವೈವಿಧ್ಯಮಯ ಕಥಾಹಂದರ ಹಾಗೂ ತಾರಾಗಣವನ್ನು ಹೊಂದಿರುವ ‘ನೆಕ್ಸ್ಟ್ ಲೆವೆಲ್’ ಸಿನಿಮಾ, ಮುಹೂರ್ತದ ಹಂತದಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿದೆ.