ʻವಧುʼ ಸೀರಿಯಲ್ ಖ್ಯಾತಿಯ ದುರ್ಗಶ್ರೀಗೆ ಅನಾರೋಗ್ಯ; ಅಭಿಮಾನಿಗಳ ಜೊತೆ ಮಾಹಿತಿ ಹಂಚಿಕೊಂಡ ನಟಿ
ಕನ್ನಡದ 'ವಧು' ಮತ್ತು ತೆಲುಗಿನ 'ಸಂಧ್ಯಾರಾಗಂ' ಧಾರಾವಾಹಿಗಳ ಖ್ಯಾತಿಯ ನಟಿ ದುರ್ಗಶ್ರೀ ತಮ್ಮ ಆರೋಗ್ಯದ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ. ಗರ್ಭಾಶಯದಲ್ಲಿ ಸಿಸ್ಟ್ (Uterus Cyst) ಕಾಣಿಸಿಕೊಂಡಿದ್ದರಿಂದ ಅವರಿಗೆ ತುರ್ತು ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಆ ಕಾರಣಕ್ಕಾಗಿಯೇ ಅವರು 'ಸಂಧ್ಯಾರಾಗಂ' ಸೀರಿಯಲ್‌ನಿಂದ ಹೊರಬರಬೇಕಾಯಿತು.
-
ಉದಯ ಟಿವಿಯ ಜನಪ್ರಿಯ ಧಾರಾವಾಹಿ ‘ನೇತ್ರಾವತಿ’ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿ, ‘ವಧು’ ಧಾರಾವಾಹಿ ಮೂಲಕ ಫೇಮಸ್ ಆದ ನಟಿ ದುರ್ಗಶ್ರೀ, ಆನಂತರ ಅವರು ತೆಲುಗು ಕಿರುತೆರೆಯತ್ತ ಮುಖ ಮಾಡಿದರು. ‘ಅರ್ಧಾಂಗಿ’, ‘ಮಧುರಾ ನಗರಿಯಲೋ’ ಸೀರಿಯಲ್‌ಗಳಲ್ಲೂ ಮಿಂಚಿದರು. ಸದ್ಯ ತೆಲುಗಿನ ‘ಸಂಧ್ಯಾರಾಗಂ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವನ್ನು ದುರ್ಗಶ್ರೀ ಮಾಡುತ್ತಿದ್ದರು. ಅಲ್ಲಿನ ವೀಕ್ಷಕರು ಕೂಡ ಅವರ ರೋಲ್ ಅನ್ನು ಸಾಕಷ್ಟು ಮೆಚ್ಚಿಕೊಂಡಿದ್ದರು.
ಆದರೆ, ಒಂದಷ್ಟು ಸಂಚಿಕೆಗಳು ಪ್ರಸಾರವಾದ ಬಳಿಕ ‘ಸಂಧ್ಯಾರಾಗಂ’ ಸೀರಿಯಲ್‌ನಿಂದ ಹಠಾತ್ತನೇ ಅವರು ಹೊರನಡೆದಿದ್ದು ಅಭಿಮಾನಿಗಳಲ್ಲಿ ಅಚ್ಚರಿ ಮತ್ತು ಕುತೂಹಲ ಮೂಡಿಸಿತ್ತು. ಅದು ಯಾಕೆ ಎಂಬುದು ಯಾರಿಗೂ ಗೊತ್ತಾಗಿರಲಿಲ್ಲ. ಸದ್ಯ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಒಂದು ವಿಡಿಯೋ ಹಂಚಿಕೊಂಡಿರುವ ದುರ್ಗಶ್ರೀ, ತಾನೇಕೆ ‘ಸಂಧ್ಯಾರಾಗಂ’ ಸೀರಿಯಲ್‌ನಿಂದ ಹೊರಬಂದೆ ಎಂಬುದನ್ನು ತಿಳಿಸಿದ್ದಾರೆ.
ವಿಡಿಯೋ ಮೂಲಕ ಉತ್ತರ ನೀಡಿದ ನಟಿ
"ಸಂಧ್ಯಾರಾಗಂ ಶುರುವಾಗಿ ಇಂದಿಗೆ ಸರಿಯಾಗಿ ಒಂದು ವರ್ಷ ತುಂಬಿದೆ. ಈ ಧಾರಾವಾಹಿಯಿಂದ ನೀವ್ಯಾಕೆ ಹೊರಬಂದ್ರಿ ಎಂದು ಸಾಕಷ್ಟು ಮಂದಿ ಕೇಳುತ್ತಿದ್ದರು. ತುಂಬಾ ಚೆನ್ನಾಗಿ ನಟಿಸುತ್ತಿದ್ದಿರಿ, ಆದರೆ ಯಾಕೆ ನೀವು ಸೀರಿಯಲ್ ಬಿಟ್ರಿ? ನಿಮ್ಮ ನಿರ್ಧಾರಕ್ಕೆ ಕಾರಣ ಏನು ಎಂಬುದರ ಬಗ್ಗೆಯೂ ಸ್ಪಷ್ಟನೆಯನ್ನೂ ಕೊಟ್ಟಿಲ್ಲ ಅಂತ ಬಹಳ ಜನ ಬೇಸರ ವ್ಯಕ್ತಪಡಿಸಿದ್ದರು. ಆದರೆ, ಆ ಸಮಯದಲ್ಲಿ ನಾನು ಯಾವುದಕ್ಕೂ ಉತ್ತರ ನೀಡುವಂತಹ ಸ್ಥಿತಿಯಲ್ಲಿ ಇರಲಿಲ್ಲ" ಎಂದು ದುರ್ಗಶ್ರೀ ತಾವು ಹಂಚಿಕೊಂಡ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಒಂದೂವರೆ ತಿಂಗಳು ಬೆಡ್ ರೆಸ್ಟ್
"ಸಂಧ್ಯಾರಾಗಂ ಅದ್ಭುತವಾದ ತಂಡ ಹಾಗೂ ನನ್ನ ಕನಸಿನ ಪ್ರಾಜೆಕ್ಟ್ ಆಗಿತ್ತು. ಈ ಅವಕಾಶ ಸಿಕ್ಕಾಗ ನನ್ನ ಕನಸು ನನಸಾದಂತೆ ಸಂಭ್ರಮಿಸಿದ್ದೆ. ಆದರೆ, ದುರದೃಷ್ಟವಶಾತ್ ನನ್ನ ಆರೋಗ್ಯ ಸಮಸ್ಯೆಯಿಂದಾಗಿ ನಾನು ಈ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಹೈದರಾಬಾದ್‌ನಲ್ಲಿ ಒಂದು ಶೆಡ್ಯೂಲ್ ಶೂಟಿಂಗ್ ಮುಗಿಸಿ ಬೆಂಗಳೂರಿಗೆ ಬಂದ ತಕ್ಷಣ ನನ್ನ ಆರೋಗ್ಯ ತೀವ್ರವಾಗಿ ಕ್ಷೀಣಿಸಿತು. ತಕ್ಷಣ ಆಸ್ಪತ್ರೆಗೆ ದಾಖಲಾದಾಗ, ವೈದ್ಯರು ನನ್ನನ್ನು ಐಸಿಯುಗೆ (ICU) ಶಿಫ್ಟ್ ಮಾಡಿದರು. ತಪಾಸಣೆಯ ನಂತರ ಗರ್ಭಾಶಯದಲ್ಲಿ ಸಿಸ್ಟ್ (Uterus Cyst) ಇರುವುದು ಪತ್ತೆಯಾಯಿತು. ತುರ್ತಾಗಿ ಶಸ್ತ್ರಚಿಕಿತ್ಸೆಯ ಅಗತ್ಯವಿತ್ತು. ಆಪರೇಷನ್ ನಂತರ ಸುಮಾರು ಒಂದೂವರೆ ತಿಂಗಳ ಕಾಲ ಸಂಪೂರ್ಣ ಬೆಡ್ ರೆಸ್ಟ್‌ನಲ್ಲಿ ಇರಬೇಕಾಯಿತು" ಎಂದು ದುರ್ಗಶ್ರೀ ಹೇಳಿಕೊಂಡಿದ್ದಾರೆ.
ನಟಿ ದುರ್ಗಶ್ರೀ ಶೇರ್ ಮಾಡಿರುವ ವಿಡಿಯೋ ಇಲ್ಲಿದೆ
ಸಂಧ್ಯಾರಾಗಂ ತಂಡಕ್ಕೆ ಧನ್ಯವಾದಗಳು
"ಸಂಧ್ಯಾರಾಗಂ ಧಾರಾವಾಹಿಯ ಚಿತ್ರೀಕರಣಕ್ಕೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ, ಪ್ರೊಡಕ್ಷನ್ ಹೌಸ್ ಜೊತೆ ಚರ್ಚಿಸಿ ಪರಸ್ಪರ ಒಪ್ಪಿಗೆಯ ಮೇರೆಗೆ ನಾನು ಹೊರಬಂದೆ. ಆ ಕಷ್ಟದ ಸಮಯದಲ್ಲಿ ಇಡೀ ತಂಡ ನನಗೆ ಬಹಳ ಸಾಥ್ ನೀಡಿತು. ಸದಾ ಸಂಪರ್ಕದಲ್ಲಿದ್ದು ನನ್ನ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿದ ಸಂಧ್ಯಾರಾಗಂ ತಂಡಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು. ಐ ಮಿಸ್ ಯೂ ಆಲ್" ಎಂದು ದುರ್ಗಶ್ರೀ ಹೇಳಿದ್ದಾರೆ.