ವಿಜಯಲಕ್ಷ್ಮೀ ಬಗ್ಗೆ ಕೀಳು ಪದಬಳಕೆ; ದೂರು ನೀಡಿದ ದರ್ಶನ್ ಪತ್ನಿ, ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಾಮೆಂಟ್ ಹಾಕಿದ ಕಿಡಿಗೇಡಿಗಳಿಗೆ ಸಂಕಷ್ಟ!
Vijayalakshmi Darshan: ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಮತ್ತು ಅಶ್ಲೀಲ ಕಾಮೆಂಟ್ ಮಾಡುತ್ತಿರುವವರ ವಿರುದ್ಧ ವಿಜಯಲಕ್ಷ್ಮೀ ದರ್ಶನ್ ಅವರು ಬುಧವಾರ (ಡಿ.25) ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ದ್ವೇಷದ ಸಂದೇಶಗಳ ಸ್ಕ್ರೀನ್‌ಶಾಟ್‌ಗಳನ್ನು ದಾಖಲೆಯಾಗಿ ನೀಡಿರುವ ಅವರು, ಇನ್ನು ಮುಂದೆ ಇಂತಹ ಕಿರುಕುಳವನ್ನು ಸುಮ್ಮನೆ ಸಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.
-
ಸಾಮಾಜಿಕ ಜಾಲತಾಣದಲ್ಲಿ ಸದ್ಯ ಸ್ಯಾಂಡಲ್‌ವುಡ್‌ನ ಫ್ಯಾನ್ ವಾರ್ ಯಾವ ಮಟ್ಟಕ್ಕೆ ಹೋಗಿದೆ ಎಂಬುದನ್ನು ನಾವೆಲ್ಲಾ ನೋಡುತ್ತಿದ್ದೇವೆ. ಇದರ ಮಧ್ಯೆ ಕಲಾವಿದರ ಬಗ್ಗೆ, ಅವರ ಕುಟುಂಬದವರ ಬಗ್ಗೆ ಅಶ್ಲೀಲವಾಗಿ ಕಾಮೆಂಟ್ ಹಾಕುವವರ ಸಂಖ್ಯೆಯೇನು ಕಮ್ಮಿ ಇಲ್ಲ. ನಟಿ ರಮ್ಯಾ ಅವರ ಬಗ್ಗೆ ಈ ರೀತಿ ಕೀಳು ಪದ ಬಳಕೆ ಮಾಡಿ, ಕಿಡಿಗೇಡಿಗಳು ಜೈಲು ಸೇರಿದ ಘಟನೆ ಇನ್ನೂ ಹಸಿರಾಗಿರುವಾಗಲೇ ಇದೀಗ ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ತಮ್ಮ ಬಗ್ಗೆ ಕೆಟ್ಟದಾಗಿ ಟ್ರೋಲ್ ಮಾಡುತ್ತಿರುವವರ ಮೇಲೆ ದೂರು ನೀಡಿದ್ದಾರೆ.
ಪೊಲೀಸರಿಗೆ ದೂರು ನೀಡಿದ ವಿಜಯಲಕ್ಷ್ಮೀ ದರ್ಶನ್
ವಿಜಯಲಕ್ಷ್ಮೀ ದರ್ಶನ್ ಅವರು ಬುಧವಾರ (ಡಿ.25) ಪೊಲೀಸರಿಗೆ ದೂರು ನೀಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಮಾಇರುವ ಅಶ್ಲೀಲ, ದ್ವೇಷದ ಕಾಮೆಂಟ್ ಹಾಗೂ ಮೆಸೇಜ್ಗಳ ಸ್ಕ್ರೀನ್‌ಶಾಟ್‌ಗಳನ್ನು ದಾಖಲೆ ಸಮೇತ ಸೈಬರ್ ಪೊಲೀಸರಿಗೆ ನೀಡಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸೈಬರ್ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ದೂರು ಸ್ವೀಕರಿಸಿ ವಿಜಯಲಕ್ಷ್ಮೀ ಅವರಿಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಜೊತೆಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲೂ ಈ ಸ್ಕ್ರೀನ್‌ಶಾಟ್‌ಗಳನ್ನು ವಿಜಯಲಕ್ಷ್ಮೀ ಹಂಚಿಕೊಂಡಿದ್ದಾರೆ.
ವಿಜಯಲಕ್ಷ್ಮೀ ದರ್ಶನ್ ಹೇಳಿದ್ದೇನು?
"ಎಲ್ಲಾ ವರ್ಗದ ಅಭಿಮಾನಿಗಳಿಗೆ... ನಿಮ್ಮ ಗುಣಮಟ್ಟವನ್ನು ಇಷ್ಟು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಮಾಹಿತಿಗಾಗಿ ತಿಳಿಸುತ್ತಿದ್ದೇನೆ, ಇಂತಹ ಅಕೌಂಟ್‌ಗಳ ವಿರುದ್ಧ ಈಗಾಗಲೇ ಪೊಲೀಸ್ ದೂರುಗಳನ್ನು ದಾಖಲಿಸಲಾಗಿದೆ. ಕಿರುಕುಳ ನೀಡುವುದನ್ನು ಇನ್ನು ಮುಂದೆ 'ಅಭಿಮಾನ' ಎಂದು ಕರೆಯಲು ಸಾಧ್ಯವಿಲ್ಲ - ಇದು ಖಂಡಿತ. ಕೀಳು ಭಾಷೆ ಬಳಸುತ್ತಿರುವ ಆ 'ಕ್ಲಾಸಿ ಹುಡುಗಿಯರಿಗೆ' ಮತ್ತು ತಾಯಿ, ಮರ್ಯಾದೆ ಹಾಗೂ ಕನಿಷ್ಠ ಸಭ್ಯತೆಯೇ ಇಲ್ಲದಂತೆ ನೇರವಾಗಿ ಆಕಾಶದಿಂದ ಉದುರಿ ಬಂದವರಂತೆ ಆಡುತ್ತಿರುವ ಆ 'ಕ್ಲಾಸಿ ಪುರುಷರಿಗೆ' ನನ್ನ ವಿಶೇಷ ಚಪ್ಪಾಳೆಗಳು" ಎಂದು ವಿಜಯಲಕ್ಷ್ಮೀ ದರ್ಶನ್ ಅವರು ಹೇಳಿದ್ದಾರೆ.
The Devil: ದರ್ಶನ್ ಅನುಪಸ್ಥಿತಿಯಲ್ಲಿ ಅಖಾಡಕ್ಕಿಳಿದ ವಿಜಯಲಕ್ಷ್ಮೀ; ʻಡೆವಿಲ್ʼ ಫ್ಯಾನ್ಸ್‌ಗೆ ನೀಡಿದ ಸಂದೇಶವೇನು?
ಪ್ರತಿಯೊಬ್ಬ ಮಹಿಳೆಯೂ ಗೌರವಕ್ಕೆ ಅರ್ಹಳು
"ಇಲ್ಲಿ ಯಾವುದೇ ವಿವರಣೆಯ ಅಗತ್ಯವಿಲ್ಲ. ನಾನು ಇವನ್ನೆಲ್ಲಾ ಸುಮ್ಮನೆ ಸಹಿಸಿಕೊಂಡು, ಇದು ಸಾಮಾನ್ಯ ಎಂದು ಸುಮ್ಮನಿರುವವಳಲ್ಲ. ಒಂದು ವೇಳೆ ಇಂತಹ ವರ್ತನೆ ನಿಮ್ಮ ದೃಷ್ಟಿಯಲ್ಲಿ ಸಾಮಾನ್ಯ ದಿನವೆಂದಾದರೆ, ದೇವರು ನಿಮಗೆ ಒಳ್ಳೆಯದು ಮಾಡಲಿ - ಇಂದಿಗೂ ಮತ್ತು ಮುಂದಿನ ದಿನಗಳಿಗೂ. ಇದು ಕೇವಲ ನನ್ನ ಬಗ್ಗೆ ಮಾತ್ರವಲ್ಲ. ಪ್ರತಿಯೊಬ್ಬ ಮಹಿಳೆಯೂ ಗೌರವಕ್ಕೆ ಅರ್ಹಳು ಎಂಬುದನ್ನು ನೆನಪಿಸುವ ಎಚ್ಚರಿಕೆ ಇದು.." ಎಂದು ವಿಜಯಲಕ್ಷ್ಮೀ ದರ್ಶನ್ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.
ವಿಜಯಲಕ್ಷ್ಮೀ ದರ್ಶನ್ ಪೋಸ್ಟ್
Vijaylakshmi Darshan Insta Story😊
— Ⓤನೌನ್_ಮಂದಿ💛❤️ (@unknown_trio) December 24, 2025
ಇದು ವಿಜಯಲಕ್ಷ್ಮಿ ದರ್ಶನ್ ಅವರ ಯುದ್ಧ☺️#DBoss #Darshan pic.twitter.com/UBFRlCQLf1
ಕೆಲ ದಿನಗಳ ಹಿಂದಷ್ಟೇ ತಮ್ಮ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡುತ್ತಿದ್ದ ಮತ್ತು ಕಿರುಕುಳ ನೀಡುತ್ತಿದ್ದ ಕೆಲವು ಅಕೌಂಟ್‌ಗಳ ವಿರುದ್ಧ ರಮ್ಯಾ ಅವರು ಕಾನೂನು ಕ್ರಮ ಕೈಗೊಂಡಿದ್ದರು. ಆ ಸಂಬಂಧ ಪೊಲೀಸರು ಅನೇಕರನ್ನು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.