ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧನ್ವೀರ್‌ಗೆ ಮತ್ತೊಂದು ಬಿಗ್‌ ಶಾಕ್‌ ಕೊಟ್ಟ ವಿಜಯಲಕ್ಷ್ಮೀ ದರ್ಶನ್‌; ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ದೂರು ದಾಖಲು!

Vijayalakshmi Darshan: ನಟ ಧನ್ವೀರ್ ಹಾಗೂ ವಿಜಯಲಕ್ಷ್ಮೀ ದರ್ಶನ್ ನಡುವಿನ ಕಾನೂನು ಸಂಘರ್ಷ ತಾರಕಕ್ಕೇರಿದೆ. ಸಾರ್ವಜನಿಕವಾಗಿ ಆಧಾರರಹಿತ ಹೇಳಿಕೆ ನೀಡಿ ಕುಟುಂಬದ ಗೌರವಕ್ಕೆ ಧಕ್ಕೆ ತಂದಿದ್ದಾರೆಂದು ಆರೋಪಿಸಿ, ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಟ ಧನ್ವೀರ್ ವಿರುದ್ಧ ವಿಜಯಲಕ್ಷ್ಮೀ ಕ್ರಿಮಿನಲ್ ಮಾನನಷ್ಟ ದೂರು ಸಲ್ಲಿಸಿದ್ದಾರೆ.

ಧನ್ವೀರ್ ವಿರುದ್ಧ ಸಿಡಿದೆದ್ದ ವಿಜಯಲಕ್ಷ್ಮೀ ದರ್ಶನ್! ಮಾನನಷ್ಟ ಕೇಸ್ ದಾಖಲು

-

Avinash GR
Avinash GR Nov 2, 2026 12:56 PM

ನಟ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ನಡುವಿನ ವಾಕ್ಸಮರ ಮತ್ತು ಕಾನೂನು ಸಂಘರ್ಷ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ತಮ್ಮ ಕುಟುಂಬದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡದಂತೆ ಈ ಹಿಂದೆಯೇ ವಿಜಯಲಕ್ಷ್ಮೀ ಅವರು ಧನ್ವೀರ್ ವಿರುದ್ಧ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ಪಡೆದುಕೊಂಡಿದ್ದರು. ಅಲ್ಲದೆ, ಅವರ ಆಪ್ತರು ನೀಡಿದ ದೂರಿನ ಮೇರೆಗೆ ಈಗಾಗಲೇ ಧನ್ವೀರ್ ವಿರುದ್ಧ ಎಫ್‌ಐಆರ್‌ಗಳು ಸಹ ದಾಖಲಾಗಿವೆ. ಈ ಬೆಳವಣಿಗೆಗಳ ಬೆನ್ನಲ್ಲೇ, ಇದೀಗ ವಿಜಯಲಕ್ಷ್ಮೀ ದರ್ಶನ್ ಅವರು ಧನ್ವೀರ್‌ಗೆ ಮತ್ತೊಂದು ಶಾಕ್ ನೀಡಿದ್ದು, ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ದೂರು ದಾಖಲಿಸಿದ್ದಾರೆ.

ತಮ್ಮ ತೇಜೋವಧೆಯಾಗಿದೆ ವಿಜಯಲಕ್ಷ್ಮೀ

ಬೆಂಗಳೂರಿನ 37ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ACMM) ನ್ಯಾಯಾಲಯದಲ್ಲಿ ವಿಜಯಲಕ್ಷ್ಮೀ ಅವರು ಈ ಖಾಸಗಿ ಕ್ರಿಮಿನಲ್ ದೂರನ್ನು ಸಲ್ಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 356(2)ರ ಅಡಿಯಲ್ಲಿ ಮಾನನಷ್ಟ ಮೊಕದ್ದಮೆ ಹೂಡಲಾಗಿದ್ದು, ನಟ ಧನ್ವೀರ್ ಸಾರ್ವಜನಿಕವಾಗಿ ತಮ್ಮ ಘನತೆ ಮತ್ತು ಕುಟುಂಬದ ಗೌರವಕ್ಕೆ ಧಕ್ಕೆ ತರುವಂತಹ ಆಧಾರರಹಿತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ. ಧನ್ವೀರ್ ನೀಡಿದ ಇಂತಹ ಮಾನಹಾನಿಕರ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿ, ವ್ಯಾಪಕವಾಗಿ ಪ್ರಸಾರಗೊಂಡಿರುವುದರಿಂದ ಸಮಾಜದಲ್ಲಿ ತಮ್ಮ ತೇಜೋವಧೆಯಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

Vijayalakshmi Darshan: ಅನಗತ್ಯ ಮಾತಿಗೆ ಬ್ರೇಕ್ ಹಾಕಲು ಮಾಸ್ಟರ್‌ ಪ್ಲ್ಯಾನ್; ಧನ್ವೀರ್‌ ವಿರುದ್ಧ ಇಂಜಂಕ್ಷನ್ ಅಸ್ತ್ರ ಬಿಟ್ಟ ನಟ ದರ್ಶನ್‌!

ಕೋರ್ಟ್‌ಗೆ ವಿಜಯಲಕ್ಷ್ಮೀ ಮನವಿ ಏನು?

ತಮ್ಮ ಆರೋಪಗಳನ್ನು ಸಾಬೀತುಪಡಿಸಲು ಅಗತ್ಯವಿರುವ ಆಡಿಯೋ-ವಿಡಿಯೋ ರೆಕಾರ್ಡಿಂಗ್‌ಗಳು, ಎಲೆಕ್ಟ್ರಾನಿಕ್ ದಾಖಲೆಗಳು ಹಾಗೂ ಹೇಳಿಕೆಗಳ ಟ್ರಾನ್ಸ್‌ಕ್ರಿಪ್ಟ್‌ಗಳನ್ನು ಬಲವಾದ ಸಾಕ್ಷ್ಯಗಳಾಗಿ ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ವಿಜಯಲಕ್ಷ್ಮೀ ತಿಳಿಸಿದ್ದಾರೆ. ಜೊತೆಗೆ, ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲು ಅವಕಾಶ ಕಲ್ಪಿಸಬೇಕು ಎಂದು ನ್ಯಾಯಪೀಠಕ್ಕೆ ಕೋರಿದ್ದಾರೆ.

ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 222(1)ರ ಅಡಿಯಲ್ಲಿ ತಮ್ಮ ಖಾಸಗಿ ದೂರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು ಹಾಗೂ ಅದೇ ಕಾಯ್ದೆಯ ಸೆಕ್ಷನ್ 227ರ ಅನ್ವಯ ಆರೋಪಿ ಧನ್ವೀರ್‌ಗೆ ಕೋರ್ಟ್ ಸಮನ್ಸ್ ಜಾರಿಗೊಳಿಸಿ ವಿಚಾರಣೆಗೆ ಹಾಜರಾಗುವಂತೆ ಆದೇಶಿಸಬೇಕೆಂದು ವಿಜಯಲಕ್ಷ್ಮೀ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಸದ್ಯ ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯವು ವಿಚಾರಣೆಯನ್ನು ಮುಂದಿನ ದಿನಗಳಿಗೆ ನಿಗದಿಪಡಿಸಿದ್ದು, ಧನ್ವೀರ್‌ಗೆ ಮತ್ತಷ್ಟು ಕಾನೂನು ಸಂಕಷ್ಟ ಹೆಚ್ಚು ಸಾಧ್ಯತೆ ದಟ್ಟವಾಗಿದೆ.