ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vijayalakshmi Darshan: ಅನಗತ್ಯ ಮಾತಿಗೆ ಬ್ರೇಕ್ ಹಾಕಲು ಮಾಸ್ಟರ್‌ ಪ್ಲ್ಯಾನ್; ಧನ್ವೀರ್‌ ವಿರುದ್ಧ ಇಂಜಂಕ್ಷನ್ ಅಸ್ತ್ರ ಬಿಟ್ಟ ನಟ ದರ್ಶನ್‌!

Actor Darshan: ಪರಪ್ಪನ ಅಗ್ರಹಾರ ಜೈಲಿನಿಂದಲೇ ನಟ ಧನ್ವೀರ್ ವಿರುದ್ಧ ಸಿವಿಲ್ ಕೋರ್ಟ್‌ನಲ್ಲಿ ಪ್ರತಿಬಂಧಕಾಜ್ಞೆ ಕೋರಿ ನಟ ದರ್ಶನ್‌ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗನ ವಿರುದ್ಧ ಸಾರ್ವಜನಿಕವಾಗಿ ನಿರಾಧಾರ ಹೇಳಿಕೆ ನೀಡಿ ತೇಜೋವಧೆ ಮಾಡದಂತೆ ತಡೆಯಲು ಈ ಕಾನೂನು ಅಸ್ತ್ರ ಪ್ರಯೋಗಿಸಲಾಗಿದೆ.

ಜೈಲಿನಿಂದಲೇ ಧನ್ವೀರ್‌ಗೆ ದರ್ಶನ್ ಶಾಕ್; ಕುಟುಂಬಕ್ಕಾಗಿ D Boss ಕಾನೂನು ಸಮರ

-

Avinash GR
Avinash GR Oct 29, 2026 6:19 PM

ಸ್ಯಾಂಡಲ್‌ವುಡ್‌ನಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ನಟ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಜಟಾಪಟಿ ಇದೀಗ ಹೊಸ ಆಯಾಮ ಪಡೆದುಕೊಂಡಿದೆ. ಇಷ್ಟು ದಿನ ತೆರೆಮರೆಯಲ್ಲಿ ‘ವಿಜಯಲಕ್ಷ್ಮಿ ವರ್ಸಸ್ ಧನ್ವೀರ್’ ಎಂಬಂತಿದ್ದ ಕಿತ್ತಾಟ, ಈಗ ಅಧಿಕೃತವಾಗಿ ನೇರ ‘ದರ್ಶನ್ ವರ್ಸಸ್ ಧನ್ವೀರ್’ ಕದನವಾಗಿ ಮಾರ್ಪಟ್ಟಿದೆ. ಒಂದು ಕಾಲದಲ್ಲಿ ತಮಗೆ ಅತ್ಯಂತ ಆಪ್ತನಾಗಿದ್ದ ಧನ್ವೀರ್ ವಿರುದ್ಧ ಪರಪ್ಪನ ಅಗ್ರಹಾರ ಜೈಲಿನಿಂದಲೇ ಕಾನೂನು ಸಮರ ಸಾರಿರುವ ನಟ ದರ್ಶನ್, ನ್ಯಾಯಾಲಯದಲ್ಲಿ ಪ್ರತಿಬಂಧಕಾಜ್ಞೆ (ಇಂಜಂಕ್ಷನ್) ಕೋರಿ ಅರ್ಜಿ ಸಲ್ಲಿಸಿದ್ದಾರೆ.

ʻನನಗೇ ದ್ರೋಹ ಬಗೆದಿದ್ದಾನೆʼ ಎಂದ್ರಾ ದರ್ಶನ್‌?

ಇತ್ತೀಚೆಗಷ್ಟೇ ನಟ ಜೈದ್ ಖಾನ್ ಹಾಗೂ ವಿಜಯಲಕ್ಷ್ಮಿ ಅವರು ಜೈಲಿನಲ್ಲಿರುವ ದರ್ಶನ್ ಅವರನ್ನು ಭೇಟಿ ಮಾಡಿ ಈ ಎಲ್ಲಾ ಬೆಳವಣಿಗೆಗಳ ಕುರಿತು ಸುದೀರ್ಘ ಮಾತುಕತೆ ನಡೆಸಿದ್ದರು. ಈ ಭೇಟಿಯ ಬೆನ್ನಲ್ಲೇ ಆಕ್ಷನ್ ಪ್ಲ್ಯಾನ್ ರೂಪಿಸಿರುವ ದರ್ಶನ್, ತಮ್ಮ ವಕೀಲ ರಂಗನಾಥ್ ರೆಡ್ಡಿ ಮೂಲಕ ಸಿವಿಲ್ ಕೋರ್ಟ್‌ಗೆ ದಾವೆ ಹೂಡಿದ್ದಾರೆ. ಅರ್ಜಿಯಲ್ಲಿ ಧನ್ವೀರ್ ವಿರುದ್ಧ ಗಂಭೀರ ಸ್ವರೂಪದ ಆಪಾದನೆಗಳನ್ನು ಮಾಡಲಾಗಿದ್ದು, "ನನ್ನ ಹೆಸರು ಹೇಳಿಕೊಂಡು ಬೆನ್ನಿಗೇ ಚೂರಿ ಹಾಕಿದ್ದಾನೆ. ನನ್ನ ಫ್ಯಾನ್ ಬೇಸ್ ತನ್ನ ಸ್ವಂತ ಬೆಳವಣಿಗೆಗೆ ಮೆಟ್ಟಿಲಾಗಿ ಬಳಸಿಕೊಂಡು ಕೊನೆಗೆ ನನಗೇ ದ್ರೋಹ ಬಗೆದಿದ್ದಾನೆ. ಕಾನೂನಾತ್ಮಕವಾಗಿ ಹೋರಾಟ ಮಾಡುತ್ತೇನೆ ಎಂದು ನಂಬಿಸಿ, ಅಂತಿಮವಾಗಿ ನಡುನೀರಿನಲ್ಲಿ ಕೈಬಿಟ್ಟು ಮೋಸ ಮಾಡಿದ್ದಾನೆ" ಎಂದು ದರ್ಶನ್ ದೂರಿದ್ದಾರೆ.

Actor Darshan: ಸವಲತ್ತು ಕೋರಿದ ದರ್ಶನ್‌ ಅರ್ಜಿ 9ಕ್ಕೆ ಮುಂದೂಡಿಕೆ, ʼಉಮೇಶ್‌ ರೆಡ್ಡಿಗೆ ಕೊಟ್ಟ ಸೌಲಭ್ಯ ದರ್ಶನ್‌ಗೆ ಏಕಿಲ್ಲ?ʼ ಎಂದ ವಕೀಲರು

ಇಂಜಂಕ್ಷನ್ ಆರ್ಡರ್ ನೀಡುವಂತೆ ಅರ್ಜಿ

ಮುಖ್ಯವಾಗಿ, ತಮ್ಮ ಕುಟುಂಬದ ವಿಚಾರದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು ಮತ್ತು ತೇಜೋವಧೆ ಮಾಡಬಾರದು ಎಂಬ ಖಡಕ್ ನಿಲುವಿಗೆ ದರ್ಶನ್ ಬಂದಿದ್ದಾರೆ. "ಯಾವುದೇ ಕಾರಣಕ್ಕೂ ಆತ ನನ್ನ ಪತ್ನಿ ಮತ್ತು ಮಗನ ಬಗ್ಗೆ ಎಲ್ಲೂ ಮಾತನಾಡಬಾರದು ಹಾಗೂ ಮಾಧ್ಯಮಗಳ ಮುಂದೆ ನಿರಾಧಾರ ಹೇಳಿಕೆಗಳನ್ನು ನೀಡಬಾರದು" ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ನಿಟ್ಟಿನಲ್ಲಿ ಧನ್ವೀರ್ ಮಾಧ್ಯಮಗಳಲ್ಲಿ ಅಥವಾ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡದಂತೆ ತಕ್ಷಣವೇ ನಿರ್ಬಂಧಕಾಜ್ಞೆ (ಇಂಜಂಕ್ಷನ್ ಆರ್ಡರ್) ಹೊರಡಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ.

ಮಾನಸಿಕ ತೇಜೋವಧೆಗೆ ಗುರಿಪಡಿಸಲಾಗಿದೆ

ಈ ಕಾನೂನು ಹೋರಾಟದ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ದರ್ಶನ್ ಪರ ವಕೀಲ ರಂಗನಾಥ್ ರೆಡ್ಡಿ, "ಕಳೆದ ನಾಲ್ಕೈದು ದಿನಗಳಿಂದ ನಟ ದರ್ಶನ್ ಹಾಗೂ ಅವರ ಕುಟುಂಬದವರ ತೇಜೋವಧೆ ಯಾವ ರೀತಿ ನಡೆಯುತ್ತಿದೆ ಎಂಬುದನ್ನು ವಿರೋಧಿಸಿ, ಇನ್ನು ಮುಂದೆ ಇಂತಹ ಕೃತ್ಯಗಳು ನಡೆಯಬಾರದು ಎಂಬ ಉದ್ದೇಶದಿಂದ ಪ್ರತಿಬಂಧಕಾಜ್ಞೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ದರ್ಶನ್ ಹೆಸರನ್ನು ಯಾವ ರೀತಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಮತ್ತು ಅವರ ಕುಟುಂಬವನ್ನು ಹೇಗೆ ಮಾನಸಿಕ ತೇಜೋವಧೆಗೆ ಗುರಿಪಡಿಸಲಾಗಿದೆ ಎಂಬುದು ಇದರಲ್ಲಿನ ಪ್ರಮುಖ ಅಂಶಗಳು. ದರ್ಶನ್ ಅವರ ಅಭಿಮಾನಿ ಬಳಗವನ್ನೇ ದುರ್ಬಳಕೆ ಮಾಡಿಕೊಂಡು ಬೆಳೆಯಲು ಯತ್ನಿಸಿದ್ದು, ಮೊದಲು ನಂಬಿಕೆ ಗಳಿಸಿ ಬಳಿಕ ನಡುನೀರಿನಲ್ಲಿ ಕೈಬಿಟ್ಟಿರುವ ವಿಚಾರಗಳನ್ನು ಅರ್ಜಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ" ಎಂದು ತಿಳಿಸಿದ್ದಾರೆ.

ಜೈಲಿನಲ್ಲಿದ್ದರೂ ತಮ್ಮ ಕುಟುಂಬದ ಗೌರವ ಹಾಗೂ ಹಿತಾಸಕ್ತಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಸಂಪೂರ್ಣ ಅಲರ್ಟ್ ಆಗಿರುವ ನಟ ದರ್ಶನ್, ಧನ್ವೀರ್‌ಗೆ ಕಾನೂನಿನ ಮೂಲಕವೇ ಕಡಿವಾಣ ಹಾಕಲು ಮುಂದಾಗಿದ್ದಾರೆ. ಈ ದಿಢೀರ್ ಬೆಳವಣಿಗೆ ಸ್ಯಾಂಡಲ್‌ವುಡ್ ಅಂಗಳದಲ್ಲಿ ಮತ್ತಷ್ಟು ಸಂಚಲನ ಮೂಡಿಸಿದೆ.