ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಗ ಮುರಳಿ ಕೃಷ್ಣ ಜೊತೆ ತಮಿಳಿನ ಸೂಪರ್‌ ಹಿಟ್‌ ʻ96ʼ ಸಿನಿಮಾದಲ್ಲಿ ನಟಿಸಿದ್ದ ಎಸ್‌. ಜಾನಕಿ; ಅಂದು ಅಭಿಮಾನಿಗಳಿಗೆ ಆಗಿದ್ದ ನಿರಾಸೆ ಏನ್‌ ಗೊತ್ತಾ?

8 ವರ್ಷಗಳ ಹಿಂದೆ ವಿಜಯ್ ಸೇತುಪತಿ ನಟನೆಯ '96' ಚಿತ್ರದಲ್ಲಿ ಜಾನಕಮ್ಮ ತಮ್ಮ ದಿವಂಗತ ಪುತ್ರ ಮುರಳಿ ಕೃಷ್ಣ ಅವರೊಂದಿಗೆ ನಟಿಸಿದ್ದರು. ನಾಲ್ಕು ನಿಮಿಷಗಳ ಅಪರೂಪದ ದೃಶ್ಯವನ್ನು ಚಿತ್ರದಿಂದ ಕತ್ತರಿಸಿ ತೆಗೆದುಹಾಕಲಾಗಿತ್ತು, ಇದು ಅಂದು ಅಭಿಮಾನಿಗಳಿಗೆ ತೀವ್ರ ನಿರಾಸೆ ಮೂಡಿಸಿತ್ತು.

ʻ96ʼ ಚಿತ್ರದಲ್ಲಿ ನಟಿಸಿದ್ದ ಜಾನಕಿ; ಆದ್ರೆ ಫ್ಯಾನ್ಸ್‌ಗೆ ಬೇಜಾರಾಗಿದ್ದೇಕೆ?

-

Avinash GR
Avinash GR Jul 12, 2026 4:41 PM

ಸುಮಾರು 50 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದರೂ ಎಂದಿಗೂ ಬೆಳ್ಳಿಪರದೆಯ ಮೇಲೆ ಬರುವ ಮನಸ್ಸು ಮಾಡದ ಗಾನಕೋಗಿಲೆ ಎಸ್. ಜಾನಕಿ ಅವರು, 8 ವರ್ಷಗಳ ಹಿಂದೆ ತಮಿಳಿನ ಸೂಪರ್ ಹಿಟ್ ಸಿನಿಮಾ ‘96’ರಲ್ಲಿ ನಟಿಸುವ ಮೂಲಕ ಅಚ್ಚರಿ ಮೂಡಿಸಿದ್ದರು.

ವಿಜಯ್ ಸೇತುಪತಿ ಮತ್ತು ತ್ರಿಶಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದ, ಸಿ. ಪ್ರೇಮ್‌ಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ಎಸ್. ಜಾನಕಿ ಅವರು ತಮ್ಮ ನೈಜ ವ್ಯಕ್ತಿತ್ವದಲ್ಲೇ (ಎಸ್. ಜಾನಕಿ ಆಗಿಯೇ) ಕ್ಯಾಮಿಯೋ ಪಾತ್ರವೊಂದರಲ್ಲಿ ಮಿಂಚಿದ್ದರು. 4 ನಿಮಿಷಕ್ಕೂ ಹೆಚ್ಚು ಅವಧಿಯ ಆ ಹೃದಯಸ್ಪರ್ಶಿ ದೃಶ್ಯದಲ್ಲಿ ಜಾನಕಮ್ಮ ಅವರೊಂದಿಗೆ ಅವರ ದಿವಂಗತ ಪುತ್ರ ಮುರಳಿ ಕೃಷ್ಣ ಕೂಡ ಕಾಣಿಸಿಕೊಂಡಿದ್ದರು.

ಆದರೆ, ದುರಾದೃಷ್ಟವಶಾತ್ ಸಿನಿಮಾ ಬಿಡುಗಡೆಯಾದಾಗ ಸಿನಿಮಾದ ಅವಧಿ ಜಾಸ್ತಿಯಾಗುತ್ತದೆ ಎಂಬ ಕಾರಣಕ್ಕೆ ಈ ದೃಶ್ಯವನ್ನು ಎಡಿಟಿಂಗ್ ಟೇಬಲ್‌ನಲ್ಲಿ ಕತ್ತರಿಸಲಾಗಿತ್ತು. ಬೆಳ್ಳಿತೆರೆಯಲ್ಲಿ ಜಾನಕಮ್ಮ ಮತ್ತು ಅವರ ಮಗನನ್ನು ಒಟ್ಟಿಗೆ ನೋಡಲಾಗದೇ ಇದ್ದದ್ದು ಅಭಿಮಾನಿಗಳಿಗೆ ತೀವ್ರ ನಿರಾಸೆ ಉಂಟುಮಾಡಿತ್ತು. ತದನಂತರ ಚಿತ್ರತಂಡ ಈ ಡಿಲೀಟ್ ಆದ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಾಗ, "ಇಷ್ಟೊಂದು ಅದ್ಭುತವಾದ ದೃಶ್ಯವನ್ನು ಚಿತ್ರದಿಂದ ಏಕೆ ತೆಗೆದುಹಾಕಲಾಯಿತು?" ಎಂದು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರು.

ಅಷ್ಟಕ್ಕೂ ಆ ದೃಶ್ಯದಲ್ಲಿ ಏನಿತ್ತು?

'96' ಚಿತ್ರದಲ್ಲಿ ನಟಿ ತ್ರಿಶಾ ಅವರು ನಿರ್ವಹಿಸಿದ 'ಜಾನು' ಪಾತ್ರದ ಪೂರ್ಣ ಹೆಸರು 'ಎಸ್. ಜಾನಕಿ ದೇವಿ' ಎಂದಾಗಿರುತ್ತದೆ. ಸಾಕ್ಷಾತ್ ಗಾಯಕಿ ಎಸ್. ಜಾನಕಿ ಅವರ ಮೇಲಿನ ಅಭಿಮಾನದಿಂದಲೇ ಆ ಪಾತ್ರಕ್ಕೆ ಆ ಹೆಸರು ಇಡಲಾಗಿರುತ್ತದೆ ಹಾಗೂ ಚಿತ್ರದಲ್ಲಿ ಜಾನು ಕೇವಲ ಜಾನಕಮ್ಮನ ಹಾಡುಗಳನ್ನು ಮಾತ್ರ ಹಾಡುತ್ತಿರುತ್ತಾಳೆ.

S Janaki: ಸರ್ಕಾರ ಎಸ್. ಜಾನಕಿ ನೆನಪಿಗಾಗಿ ಸ್ಮಾರಕ ನಿರ್ಮಾಣ ಮಾಡಲಿ: ಬಸವರಾಜ ಬೊಮ್ಮಾಯಿ

ಕಥೆಯ ಪ್ರಕಾರ, ಹಳೆಯ ವಿದ್ಯಾರ್ಥಿಗಳ ಸಮ್ಮಿಲನಕ್ಕಾಗಿ ಸಿಂಗಾಪುರದಿಂದ ಬರುವ ಜಾನು (ತ್ರಿಶಾ) ಮತ್ತು ರಾಮ್ (ವಿಜಯ್ ಸೇತುಪತಿ) ರಾತ್ರಿ ವೇಳೆ ನಡೆದುಕೊಂಡು ಹೋಗುವಾಗ ಎಸ್. ಜಾನಕಿ ಅವರ ಮನೆಯ ಮುಂದೆ ಬರುತ್ತಾರೆ. ಮನೆಯ ಮುಂದೆ ನಿಂತು ತ್ರಿಶಾ ಫೋಟೋ ತೆಗೆದುಕೊಳ್ಳುತ್ತಿರುವಾಗ, ಎಸ್. ಜಾನಕಿ ಅವರು ತಮ್ಮ ಮಗ ಮುರಳಿ ಕೃಷ್ಣ ಅವರೊಂದಿಗೆ ಕಾರಿನಲ್ಲಿ ಅಲ್ಲಿಗೆ ಆಗಮಿಸುತ್ತಾರೆ. ನಾನು ಮತ್ತು ಜಾನು ನಿಮ್ಮ ದೊಡ್ಡ ಅಭಿಮಾನಿ ಎಂದು ರಾಮ್ ಪರಿಚಯಿಸಿಕೊಂಡಾಗ, ಜಾನಕಮ್ಮ ಇಬ್ಬರನ್ನೂ ಪ್ರೀತಿಯಿಂದ ಮನೆಗೆ ಆಹ್ವಾನಿಸುತ್ತಾರೆ.

ತ್ರಿಶಾ ಅವರ ಪೋಸ್ಟ್

ಜಾನು ಕೇವಲ ನಿಮ್ಮ ಹಾಡುಗಳನ್ನು ಮಾತ್ರ ಹಾಡುತ್ತಾಳೆ ಎಂದು ರಾಮ್ ಹೇಳಿದಾಗ, "ನನ್ನ ಹಾಡುಗಳನ್ನು ಮಾತ್ರ ಹಾಡಿದರೆ ಸಾಲದು, ಎಲ್ಲರ ಹಾಡುಗಳನ್ನೂ ಹಾಡಬೇಕು" ಎಂದು ಹೇಳುತ್ತಾ ಚೆನ್ನಾಗಿ ಹಾಡಲು ಕೆಲವು ಅಮೂಲ್ಯ ಸಲಹೆಗಳನ್ನು ಜಾನುಗೆ ಜಾನಕಮ್ಮ ನೀಡುತ್ತಾರೆ. ಬಳಿಕ ಇಬ್ಬರೂ ಒಟ್ಟಿಗೆ ಹಾಡೊಂದನ್ನೂ ಗುನುಗುತ್ತಾರೆ. ದೃಶ್ಯದ ಕೊನೆಯಲ್ಲಿ ಜಾನುಳನ್ನು ಅಪ್ಪಿ ಆಶೀರ್ವದಿಸಿ, ಹೆಸರೇನು ಎಂದು ಜಾನಕಮ್ಮ ಕೇಳುತ್ತಾರೆ. ಆಗ ತ್ರಿಶಾ ಪಾತ್ರವು, 'ಎಸ್. ಜಾನಕಿ' ಎನ್ನುತ್ತಾರೆ. ಆಗ 'ಅದು ನನ್ನ ಹೆಸರಲ್ಲವೇ?' ಎಂದು ಜಾನಕಮ್ಮ ಆಶ್ಚರ್ಯದಿಂದ ಮರುಪ್ರಶ್ನಿಸಿದಾಗ, 'ಎಸ್. ಜಾನಕಿ ದೇವಿ' ಎಂದು ಪೂರ್ಣ ಹೆಸರನ್ನು ಜಾನು ಹೇಳುತ್ತಾಳೆ. ಈ ಮುದ್ದಾದ ದೃಶ್ಯ ಚಿತ್ರದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿತ್ತು.

S Janaki: ಗಾನಕೋಗಿಲೆ ಎಸ್.ಜಾನಕಿ ಅಸ್ತಂಗತ; ಪ್ರಧಾನಿ ಮೋದಿ ಸಂತಾಪ

ಜಾನಕಮ್ಮನ ಅಗಲಿಕೆಗೆ ಕಂಬನಿ ಮಿಡಿದ ನಟಿ ತ್ರಿಶಾ

ಎಸ್. ಜಾನಕಿ ಅವರ ನಿಧನದ ಬೆನ್ನಲ್ಲೇ ನಟಿ ತ್ರಿಶಾ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. "ನನ್ನ ಅತ್ಯಂತ ವಿಶೇಷವಾದ ಸಿನಿಮಾವೊಂದರಲ್ಲಿ ನಿಮ್ಮ ಹೆಸರಿನ ಪಾತ್ರವನ್ನು ಮಾಡಲು ಸಾಧ್ಯವಾಗಿದ್ದು ನನ್ನ ಜೀವನದ ಅತಿ ದೊಡ್ಡ ಗೌರವಗಳಲ್ಲಿ ಒಂದಾಗಿ ಎಂದೆಂದಿಗೂ ಉಳಿಯುತ್ತದೆ. ನಿಮ್ಮನ್ನು ಹತ್ತಿರದಿಂದ ತಿಳಿಯಲು ಮತ್ತು ನಿಮ್ಮ ಪ್ರೀತಿಯನ್ನು ಗಳಿಸಲು ಸಾಧ್ಯವಾಗಿದ್ದನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ. ನಿಮ್ಮ ಅಪ್ಪುಗೆಗೆ, ದಯೆಗೆ, ನಗುವಿಗೆ ಮತ್ತು ಅತ್ಯಂತ ದೊಡ್ಡ ಕಲಾವಿದರು ಎಷ್ಟು ವಿನಮ್ರರಾಗಿರುತ್ತಾರೆ ಎಂಬುದನ್ನು ನೆನಪಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಧ್ವನಿ ಎಂದೆಂದಿಗೂ ಅಮರ. ಶಾಂತಿಯಿಂದ ವಿಶ್ರಾಂತಿ ಪಡೆಯಿರಿ ಜಾನಕಿಯಮ್ಮ, ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ" ಎಂದು ತ್ರಿಶಾ ಕಂಬನಿ ಮಿಡಿದಿದ್ದಾರೆ.