ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮಲಯಾಳಂ ರಿಯಾಲಿಟಿ ಶೋದಲ್ಲಿ ಕನ್ನಡ ಹಾಡು ನೆನಪಿಸಿಕೊಂಡಿದ್ದ ಗಾಯಕಿ ಜಾನಕಿ; ಹಳೆ ವಿಡಿಯೊ ಮತ್ತೆ ವೈರಲ್‌

S Janaki: ಸಾವಿರಾರು ಸೂಪರ್‌ ಹಿಟ್‌ ಕನ್ನಡ ಹಾಡುಗಳ ಮೂಲಕ ಚಿತ್ರಪ್ರೇಮಿಗಳ ಮನಗೆದ್ದ ಗಾಯಕಿ ಎಸ್‌. ಜಾನಕಿ ಇನ್ನಿಲ್ಲ. 88 ವರ್ಷದ ಅವರು ಜುಲೈ 11ರಂದು ಮೈಸೂರಿನಲ್ಲಿ ಅಸ್ತಂಗತರಾದರು. 4 ರಾಷ್ಟ್ರ ಪ್ರಸಸ್ತಿ ಮುಡಿಗೇರಿಸಿಕೊಂಡಿದ್ದ ಅವರು ತಮ್ಮ ವೃತ್ತಿ ಜೂವನದ ಅತಯಂತ ಕಠಿಣ ಹಾಡನ್ನು ಮಲಯಾಳಂ ರಿಯಾಲಿಟಿ ಶೋದಲ್ಲಿ ಪ್ರಸ್ತಾವಿಸಿದ್ದರು. ಆ ವಿಡಿಯೊ ಮತ್ತೆ ವೈರಲ್‌ ಆಗಿದೆ.

ಮಲಯಾಳಂ ಶೋದಲ್ಲಿ ಕನ್ನಡ ಹಾಡು ನೆನಪಿಸಿಕೊಂಡಿದ್ದ ಜಾನಕಿ

ಎಸ್‌. ಜಾನಕಿ (ಸಂಗ್ರಹ ಚಿತ್ರ) -

Ramesh Ballamoole
Ramesh Ballamoole Jul 12, 2026 4:02 PM

ಬೆಂಗಳೂರು, ಜು. 12: ಕನ್ನಡ ಸೇರಿ ವಿವಿಧ ಭಾಷೆಗಳ ಕೋಟ್ಯಂತರ ಚಿತ್ರಪ್ರೇಮಿಗಳ, ಸಂಗೀತ ಆರಾಧಕರ ಮನ ಗೆದ್ದ ಗಾಯಕಿ ಎಸ್‌. ಜಾನಕಿ (S Janaki) ಯುಗಾಂತ್ಯವಾಗಿದೆ. ಗಾನ ಕೋಗಿಲೆ ಎಂದೇ ಅಭಿಮಾನಿಗಳಿಂದ ಗುರುತಿಸಿಕೊಂಡಿದ್ದ ಅವರು ಶನಿವಾರ (ಜುಲೈ 11) ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿರನಿದ್ರೆಗೆ ಜಾರಿದರು. 88 ವರ್ಷದ ಅವರಿಗೆ ಹೃದಯ ಸ್ತಂಭನವಾಗಿತ್ತು (ಕಾರ್ಡಿಯಾಕ್‌ ಅರೆಸ್ಟ್‌). ಆಂಧ್ರ ಪ್ರದೇಶದ ಮೂಲದವರಾದರೂ ಜಾನಕಿ ಅವರಿಗೆ ಕನ್ನಡ, ಕರ್ನಾಟಕದ ಮೇಲೆ ವಿಶೇಷ ಒಲವಿತ್ತು. ಎಲ್ಲೇ ಹೋದರೂ ಕನ್ನಡ, ಕನ್ನಡ ಹಾಡನ್ನು ಪ್ರಸ್ತಾವಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಮಲಯಾಳಂನ ಏಷ್ಯಾನೆಟ್‌ ಚಾನಲ್‌ನಲ್ಲಿ ಪ್ರಸಾರವಾಗುತ್ತಿದ್ದ ಸ್ಟಾರ್‌ ಸಿಂಗರ್‌ ಸಿಂಗಿಂಗ್‌ ರಿಯಾಲಿಟಿ ಶೋದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಜಾನಕಿ ಅಲ್ಲಿ ತಾವು ಹಾಡಿದ ಕನ್ನಡದ ಹಾಡೊಂದನ್ನು ಪ್ರಸ್ತಾವಿಸಿದ್ದರು. ಸದ್ಯ ಈ ಹಳೆ ವಿಡಿಯೊ ಮತ್ತೆ ವೈರಲ್‌ ಆಗಿದೆ.

ವಿಶೇಷ ಎಂದರೆ ಎಸ್.‌ ಜಾನಕಿ ಶಾಸ್ತ್ರೀಯ ಸಂಗೀತವನ್ನು ಶಾಸ್ತ್ರಬದ್ಧವಾಗಿ ಕಲಿಯದಿದ್ದರೂ ಎಂತಹದ್ದೇ ಹಾಡನ್ನಾದರೂ ಲೀಲಾಜಾಲವಾಗಿ ಹಾಡುತ್ತಿದ್ದರು. ಇದೇ ಕಾರಣಕ್ಕೆ ಅವರಿಗೆ ಹಿನ್ನೆಲೆ ಗಾಯನಕ್ಕೆ 4 ರಾಷ್ಟ್ರ ಪ್ರಶಸ್ತಿ ಸಂದಿದೆ. ಹೀಗಿದ್ದರೂ ವೃತ್ತಿ ಜೀವನದಲ್ಲೇ ಕಠಿಣ ಎನಿಸಿದ ಹಾಡು ಕನ್ನಡದ ʼಹೇಮಾವತಿʼ ಚಿತ್ರದ ʼಶಿವ ಶಿವ ಎನ್ನದ...ʼ ಹಾಡು ಎಂದು ಅವರು ಅನೇಕ ಬಾರಿ ಹೇಳಿದ್ದರು. ಈ ಬಗ್ಗೆ ಅವರು ರಿಯಾಲಿಟಿ ಶೋದಲ್ಲಿ ಅನುಭವ ಹಂಚಿಕೊಂಡಿದ್ದರು.

ಎಸ್‌. ಜಾನಕಿ ಅವರ ವಿಡಿಯೊ:



1977ರಲ್ಲಿ ತೆರೆಕಂಡ ʼಹೇಮಾವತಿʼ ಚಿತ್ರಕ್ಕೆ ಎಲ್‌. ವೈದ್ಯನಾಥನ್‌ ಸಂಗೀತ ಸಂಯೋಜಿಸಿದ್ದರು. ಈ ಹಾಡಿನ ಬಗ್ಗೆ ಜಾನಕಿ ಸ್ಟಾರ್‌ ಸಿಂಗರ್‌ ವೇದಿಕೆಯಲ್ಲಿ ನೆನಪಿಸಿಕೊಂಡಿದ್ದು ಹೀಗೆ: ʼʼಹೇಮಾವತಿʼ ಕನ್ನಡ ಚಿತ್ರದಲ್ಲಿ ಹಾಡೊಂದಕ್ಕೆ ಧ್ವನಿ ನೀಡಿದ್ದೆ. ʼಶಿವ ಶಿವ ಎನ್ನದʼ ಈ ಹಾಡು ಥೋಡಿ, ಅಭೋಗಿ ರಾಗದಲ್ಲಿತ್ತು. ನನಗೆ ಶಾಸ್ತ್ರೀಯ ಸಂಗೀತ ಅಷ್ಟೇನೂ ಗೊತ್ತಿಲ್ಲ. ಹಾಗಿದ್ದರೂ ಹಾಡನ್ನು ಸುಲಭವಾಗಿ ಹಾಡುತ್ತಿದ್ದೆ. ಆದರೆ ಈ ಹಾಡು ನನಗೆ ಕಠಿಣ ಎನಿಸಿತು. ಸ್ಟು ಡಿಯೋಕ್ಕೆ ಹೋಗುವ ತನಕ ನನಗೆ ಯಾವ ಹಾಡೆಂದು ಗೊತ್ತಿರಲಿಲ್ಲʼʼ ಎಂದು ನೆನಪಿಸಿಕೊಂಡಿದ್ದರು.

ಕನ್ನಡ ಚಿತ್ರ ಸಂಗೀತಕ್ಕೆ ಗಾನ ಕೋಗಿಲೆ ಜಾನಕಿ ಕೊಡುಗೆಯ ಮೆಲುಕು

ಮುಂದುವರಿದು, ʼʼಹಾಡು ನೋಡುತ್ತಿದ್ದಂತೆ ಬೆಚ್ಚಿ ಬಿದ್ದೆ. ಹೀಗಾಗಿ ನಾನು ತ್ಯಾಗರಾಜ ಸ್ವಾಮಿ ಮತ್ತು ರಾಘವೇಂದ್ರ ಸ್ವಾಮಿ ಅವರನ್ನು ಧ್ಯಾನಿಸಿಕೊಂಡು ಹಾಡು ಹೇಳುವ ಶಕ್ತಿ ನೀಡುವಂತೆ ಪ್ರಾರ್ಥಿಸಿದೆ. ವಯಲಿನ್‌ ನುಡಿಸುತ್ತಿದ್ದ ಎಂ.ಎಸ್‌. ಗೋಪಾಲಕೃಷ್ಣನ್‌ ಕೂಡ ಈ ಹಾಡು ಭಾರಿ ಕಷ್ಟ ಇದೆ. ಇದನ್ನು ವಯಲಿನ್‌ನಲ್ಲಿ ನುಡಿಸೋಣ ಎಂದರು. ಆದರೆ ಸಂಗೀತ ನಿರ್ದೇಶಕ ವೈದ್ಯನಾಥನ್‌ ಇದಕ್ಕೆ ಒಪ್ಪಲಿಲ್ಲ. ಜಾನಕಿ ಹಾಡುತ್ತಾರೆ ಎಂದು ಹಠ ಹಿಡಿದರು. ಈ ಹಾಡನ್ನು ಬದಲಾಯಿಸಿ ಎಂದು ಹೇಳಲು ನನಗೆ ಸ್ವಾಭಿಮಾನ ಅಡ್ಡಿಬಂತು. ಕೊನೆಗೆ ಹಾಡಿದೆ. ಒಂದು ರಾಗವನ್ನು ತ್ಯಾಗರಾಜ ಸ್ವಾಮಿ, ಮತ್ತೊಂದು ರಾಗವನ್ನು ರಾಘವೇಂದ್ರ ಸ್ವಾಮಿ ಹಾಡಿದರು. ನಾನು ಹಾಡಿದ್ದಲ್ಲ. ನನ್ನ ಧ್ವನಿಯಲ್ಲಿ ಅವರು ಹಾಡಿದರುʼʼ ಎಂದು ತಿಳಿಸಿದ್ದರು.

ಇದೇ ವೇಳೆ ಜಡ್ಜ್‌ ಆಗಿದ್ದ ಖ್ಯಾತ ಗಾಯಕಿ ಕೆ.ಎಸ್‌. ಚಿತ್ರಾ, ʼʼಈ ಹಾಡನ್ನು ವೇದಿಕೆಯಲ್ಲಿ ಪ್ಲೇ ಮಾಡಿ. ಹಾಡು ಎಷ್ಟು ಕಠಿಣ, ಹೇಗೆಲ್ಲ ವಾಯ್ಸ್‌ ಮೊಡ್ಯುಲೇಷನ್‌ ಮಾಡಬೇಕೆಂದು ಸ್ಪರ್ಧಿಗಳು ಅರ್ಥ ಮಾಡಿಕೊಳ್ಳಲಿʼʼ ಎಂದು ಹೇಳಿದ್ದರು. ಅದರಂತೆ ʼಹೇಮಾವತಿʼ ಚಿತ್ರದ ʼಶಿವ ಶಿವ ಎನ್ನದʼ ಹಾಡು ಮಲಯಾಳಂ ರಿಯಾಲಿಟಿ ಶೋದಲ್ಲಿ ಪ್ರಸಾರವಾಯ್ತು.

ಈ ಒಂದು ಕಾರಣಕ್ಕೆ ಅಂದು ಪದ್ಮ ಭೂಷಣ ಪ್ರಶಸ್ತಿ ನಿರಾಕರಿಸಿದ್ದ ಗಾಯಕಿ ಎಸ್‌. ಜಾನಕಿ

ಈ ಹಾಡನ್ನು ದೇವರೇ ನನ್ನೊಳಗೆ ನಿಂತು ಹಾಡಿದ ಎಂದು ಜಾನಕಿ ವಿನಯದಿಂದ ಹೇಳಿದ್ದರು. ಈ ಹಾಡಿಗೆ ರಾಷ್ಟ್ರ ಪ್ರಶಸ್ತಿ ಬರಬೇಕಿತ್ತು ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸದ್ಯ ಜಾನಕಿ ಅವರ ಈ ವಿಡಿಯೊ ಮತ್ತೆ ಮುನ್ನೆಲೆಗೆ ಬಂದಿದೆ.

ಮನರಂಜನೆಯ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.