ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Su From So Box Office Collection: ಬಾಕ್ಸ್‌ ಆಫೀಸ್‌ನಲ್ಲಿ ತಗ್ಗುತ್ತಿಲ್ಲ ಸುಲೋಚನಾ ಹವಾ; 50 ಕೋಟಿ ರೂ. ಗಡಿ ದಾಟಿದ ʼಸು ಫ್ರಮ್‌ ಸೋʼ ಕಲೆಕ್ಷನ್‌

Su From So: ಸದ್ಯ ಸ್ಯಾಂಡಲ್‌ವುಡ್‌ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗದಲ್ಲೇ ಸಂಚಲನ ಮೂಡಿಸಿರುವ ʼಸು ಫ್ರಮ್‌ ಸೋʼ ಬಾಕ್ಸ್‌ ಆಫೀಸ್‌ನಲ್ಲಿ ಅಕ್ಷರಶಃ ಅಬ್ಬರಿಸುತ್ತಿದೆ. ರಿಲೀಸ್‌ ಆಗಿ 15 ದಿನಗಳಲ್ಲಿ 50 ಕೋಟಿ ರೂ. ಕ್ಲಬ್‌ಗೆ ಸೇರಿದ್ದು, ಬಜೆಟ್‌ಗಿಂತ ಬರೋಬ್ಬರಿ 10 ಪಟ್ಟು ಅಧಿಕ ಕಲೆಕ್ಷನ್‌ ಮಾಡಿದೆ.

50 ಕೋಟಿ ರೂ. ಗಡಿ ದಾಟಿದ ʼಸು ಫ್ರಮ್‌ ಸೋʼ ಕಲೆಕ್ಷನ್‌

Ramesh B Ramesh B Aug 9, 2025 4:51 PM

ಬೆಂಗಳೂರು: ʼಸು ಫ್ರಮ್‌ ಸೋʼ (Su From So) ಚಿತ್ರದ ಮೂಲಕ ಇಡೀ ಭಾರತೀಯ ಸಿನಿಮಾರಂಗವನ್ನೇ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡಿದ ಕರಾವಳಿ ಪ್ರತಿಭೆ ಜೆ.ಪಿ. ತುಮಿನಾಡ್‌ (J.P. Tuminad) ಸದ್ಯ ಎಲ್ಲರ ಗಮನ ಸೆಳೆದಿದ್ದಾರೆ. ಜತೆಗೆ ಸೋತು ಸೊರಗಿದ್ದ ಕನ್ನಡ ಚಿತ್ರರಂಗಕ್ಕೆ ಬಹುದೊಡ್ಡ ಗೆಲುವು ತಂದುಕೊಟ್ಟಿದ್ದಾರೆ. ಈ ವರ್ಷದ ಹಿಟ್‌ ಚಿತ್ರವಾಗಿ ʼಸುಲೋಚನಾ ಫ್ರಮ್‌ ಸೋಮೇಶ್ವರʼ ಆಲಿಯಾಸ್‌ ʼಸು ಫ್ರಮ್‌ ಸೋʼ ಹೊರಹೊಮ್ಮಿದ್ದು, ಬಾಕ್ಸ್‌ ಆಫೀಸ್‌ನಲ್ಲಿ (Su From So Box Office Collection) ತನ್ನ ಜೈತ್ರಯಾತ್ರೆ ಮುಂದುವರಿಸಿದೆ. ಕನ್ನಡ ಮಾತ್ರವಲ್ಲಿ ಚಿತ್ರದ ಮಲಯಾಳಂ ಮತ್ತು ತೆಲುಗು ಆವೃತ್ತಿಯೂ ರಿಲೀಸ್‌ ಆಗಿದ್ದು, ಅಲ್ಲಿಂದಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಹಾರರ್‌ ಕಾಮಿಡಿ ಚಿತ್ರ ಸದ್ಯ 50 ಕೋಟಿ ರೂ. ಗಡಿ ದಾಟಿ ಮುನ್ನುಗ್ಗುತ್ತಿದೆ.

ಜುಲೈ 25ರಂದು ʼಸು ಫ್ರಮ್‌ ಸೋʼ ರಿಲೀಸ್‌ ಆಯ್ತು. ಅದಾದ ಬಳಿಕ ಮಲಯಾಳಂ ಡಬ್‌ ಆವೃತ್ತಿ ಆಗಸ್ಟ್‌ 1ರಂದು ತೆರೆಕಂಡಿದೆ. ಇನ್ನು ತೆಲುಗು ವರ್ಷನ್‌ ಆಗಸ್ಟ್‌ 8ರಂದು ಬಿಡುಗಡೆಯಾಗಿದೆ. ಹೀಗೆ 3 ವಾರದ ಅಂತರದಲ್ಲಿ 3 ಭಾಷೆಗಳಲ್ಲಿ ರಿಲೀಸ್‌ ಆಗಿದೆ. ವಿಶೇಷ ಎಂದರೆ ಕನ್ನಡದ ಜತೆಗೆ ಮಲಯಾಳಂ ಮತ್ತು ತೆಲುಗು ಪ್ರೇಕ್ಷಕರನ್ನು ಸುಲೋಚನಾ ಸೂಜಿಗಲ್ಲಿನಂತೆ ಸೆಳೆದಿದ್ದು, ಕನ್ನಡದ ಈ ಚಿತ್ರಕ್ಕೆ ಬಹುಪರಾಕ್‌ ಹೇಳಿದ್ದಾರೆ.



ಈ ಸುದ್ದಿಯನ್ನೂ ಓದಿ: Su From So Movie: ಸ್ಯಾಂಡಲ್‌ವುಡ್‌ನಲ್ಲಿ ʼಸು ಫ್ರಮ್‌ ಸೋʼ ಮ್ಯಾಜಿಕ್‌; ಗೆಲುವಿಗೆ ಕಾರಣವೇನು?

15 ದಿನಗಳಲ್ಲಿ ಗಳಿಸಿದ್ದೆಷ್ಟು?

ʼಸು ಫ್ರಮ್‌ ಸೋʼ ಚಿತ್ರ ತೆರೆಕಂಡು 15 ದಿನ ಕಳೆದಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ಅಕ್ಷರಶಃ ಧೂಳೆಬ್ಬಿಸಿದೆ. ವಿದೇಶಗಳಲ್ಲಿಯೂ ಬಿಡುಗಡೆಯಾಗಿರುವ ಈ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ 50 ಕೋಟಿ ರೂ. ಗಡಿ ದಾಟಿದ್ದು, ಇದುವರೆಗೆ ಒಟ್ಟು 51.05 ಕೋಟಿ ರೂ. ಗಳಿಸಿದೆ ಎಂದು ವರದಿಯೊಂದು ತಿಳಿಸಿದೆ. ಬಹುತೇಕ ಹೊಸಬರೇ ಪ್ರಧಾನ ಪಾತ್ರ ನಿರ್ವಹಿಸಿರುವ ಈ ಚಿತ್ರದ ಬಜೆಟ್‌ ಸುಮಾರು 4.5 ಕೋಟಿ ರೂ. ಪ್ರಚಾರ, ಜಾಹೀರಾತಿಗೆ ಸುಮಾರು 1 ಕೋಟಿ ರೂ. ವ್ಯಯಿಸಲಾಗಿದೆ. ಹೀಗೆ ಒಟ್ಟು 5.5 ಕೋಟಿ ರೂ. ವೆಚ್ಚದಲ್ಲಿ ತಯಾರಾದ ಈ ಸಿನಿಮಾದ ಇದೀಗ ಬಜೆಟ್‌ಗಿಂತ ಸುಮಾರು 10 ಪಟ್ಟು ಅಧಿಕ ಕಲೆಕ್ಷನ್‌ ಮಾಡಿದೆ.

ಸ್ಯಾಕ್ನಿಲ್ಕ್ ವೆಬ್‌ಸೈಟ್‌ ಪ್ರಕಾರ, 15ನೇ ದಿನವಾದ ಆಗಸ್ಟ್‌ 8ರಂದು ಚಿತ್ರ ಬರೋಬ್ಬರಿ 3 ಕೋಟಿ ರೂ. ಗಳಿಸಿದ್ದು, ತನ್ನ ಹವಾ ಇನ್ನೂ ತಗ್ಗಿಲ್ಲ ಎನ್ನುವುದನ್ನು ಸಾರಿ ಹೇಳಿದೆ. ಇದೇ ರೀತಿ ಮುಂದುವರಿದರೆ 75 ಕೋಟಿ ರೂ. ಕ್ಲಬ್‌ ಸೇರುವ ಎಲ್ಲ ಸಾಧ್ಯತೆ ಇದೆ ಎಂದು ಬಾಕ್ಸ್‌ ಆಫೀಸ್‌ ತಜ್ಞರು ಊಹಿಸಿದ್ದಾರೆ.

ಉಳಿದ ಭಾಷೆಯ ಪ್ರತಿಕ್ರಿಯೆ ಹೇಗಿದೆ?

ಕರಾವಳಿಯ ಹಳ್ಳಿಯೊಂದರಲ್ಲಿ ನಡೆಯುವ ಘಟನೆಯನ್ನು ಸರಳವಾಗಿ, ಯಾವುದೇ ಆಡಂಬರವಿಲ್ಲದೆ ತೆರೆಮೇಲೆ ತಂದಿರುವ ನಿರ್ದೇಶಕ ಜೆ.ಪಿ. ತುಮಿನಾಡ್‌ ಹೊಸ ಮಾದರಿಯ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಮಲಯಾಳಂ ಪ್ರೇಕ್ಷಕರೂ ಜೈ ಎಂದಿದ್ದಾರೆ. ಮೂಲಗಳ ಪ್ರಕಾರ ಮಲಯಾಳಂ ಆವೃತ್ತಿ 7 ದಿನಗಳಲ್ಲಿ ಒಟ್ಟು 2.95 ಕೋಟಿ ರೂ. ಗಳಿಸಿದೆ. ಇನ್ನು ತೆಲುಗು ಅವೃತ್ತಿ ಮೊದಲ ದಿನ 2 ಕೋಟಿ ರೂ. ಗಳಿಸಿದ್ದು, ವೀಕೆಂಡ್‌ ದಿನಗಳಲ್ಲಿ ಕಲೆಕ್ಷನ್‌ ಹೆಚ್ಚಾಗುವ ಸಾಧ್ಯತೆ ಇದೆ.

ಹೊಸಬರ ಈ ಸಾಹಸಕ್ಕೆ ಬೆನ್ನುಲುಬಾಗಿ ನಿಂತವರು ರಾಜ್‌ ಬಿ. ಶೆಟ್ಟಿ. ʼಸು ಫ್ರಮ್‌ ಸೋʼ ಚಿತ್ರವನ್ನು ಶಶಿಧರ್‌ ಶೆಟ್ಟಿ, ರವಿ ರೈ ಜತೆ ಸೇರಿ ರಾಜ್‌ ಬಿ. ಶೆಟ್ಟಿ ನಿರ್ಮಿಸುವ ಜತೆಗೆ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಜೆ.ಪಿ. ತುಮಿನಾಡ್, ರಾಜ್‌ ಬಿ. ಶೆಟ್ಟಿ ಜತೆಗೆ ಪ್ರಕಾಶ್ ತುಮಿನಾಡ್, ಶನೀಲ್ ಗೌತಮ್‌, ದೀಪಕ್ ರೈ ಪಾಣಾಜೆ, ಮೈಮ್ ರಾಮದಾಸ್, ಸಂಧ್ಯಾ ಅರೆಕರೆ ಸೇರಿದಂತೆ ಬಹುತೇಕ ಕರಾವಳಿ ಕಲಾವಿದರೇ ಬಣ್ಣ ಹಚ್ಚಿರುವುದು ವಿಶೇಷ. ಜತೆಗೆ ಇದು ಹಿಂದಿ ಮತ್ತು ತಮಿಳಿಗೆ ರಿಮೇಕ್‌ ಮಾಡುವ ಕುರಿತೂ ಮಾತುಕತೆಯೂ ನಡೆಯುತ್ತಿದೆ.