Artificial Intelligence: ಉದ್ಯೋಗವನ್ನೇ ಕಸಿದು ಕೊಳ್ಳುತ್ತಿರುವ AI? ಕೃತಕ ಬುದ್ಧಿಮತ್ತೆಗೆ ಹೊಂದಿಕೊಳ್ಳಲು ಹೆಣಗಾಡುತ್ತಿದೆಯಾ ಭಾರತದ IT ಕ್ಷೇತ್ರ?
ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತ ಮಾಹಿತಿ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯವಾಗಿ ಅಭಿವೃದ್ದಿ ಹೊಂದುತ್ತಿದೆ. ವರ ಹಾಗೂ ಶಾಪ ಎರಡೂ ಇದೆ ಎಂಬತೆ, ಕೃತಕ ಬುದ್ಧಿಮತ್ತೆ ಭಾರತದ ಉದ್ಯಮ ವಲಯಕ್ಕೆ ಭಾರೀ ಹೊಡೆತವನ್ನು ನೀಡುತ್ತಿದೆ.


ನವದೆಹಲಿ: ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತ ಮಾಹಿತಿ ತಂತ್ರಜ್ಞಾನ ಹಾಗೂ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯವಾಗಿ ಅಭಿವೃದ್ದಿ ಹೊಂದುತ್ತಿದೆ. ವರ ಹಾಗೂ ಶಾಪ ಎರಡೂ ಇದೆ ಎಂಬತೆ, ಕೃತಕ ಬುದ್ಧಿಮತ್ತೆ (Artificial Intelligence) ಭಾರತದ ಉದ್ಯಮ ವಲಯಕ್ಕೆ ಭಾರೀ ಹೊಡೆತವನ್ನು ನೀಡುತ್ತಿದೆ. ತಾಜಾ ನಿದರ್ಶನ ಎಂಬಂತೆ ಇತ್ತೀಚೆಗಷ್ಟೇ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಏಕಾ ಏಕಿ ತನ್ನ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸುವ ಆದೇಶ ಹೊರಡಿಸಿದೆ. ಭಾರತದ ಅತಿದೊಡ್ಡ ಐಟಿ ಸೇವೆಗಳ ಪೂರೈಕೆದಾರ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ 2026 ರ ಹಣಕಾಸು ವರ್ಷದಲ್ಲಿ ತನ್ನ ಉದ್ಯೋಗಿಗಳನ್ನು ಶೇಕಡಾ 2 ರಷ್ಟು ಕಡಿಮೆ ಮಾಡಲಿದೆ ಎಂದು ತಿಳಿದು ಬಂದಿದೆ. ವರ್ಷಕ್ಕೆ 5.8 ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ನೇಮಿಸಿಕೊಳ್ಳುವ ಭಾರತೀಯ ಐಟಿ ಉದ್ಯಮವು ಕವಲುದಾರಿಯಲ್ಲಿ ಬಂದು ನಿಂತಿದೆ.
AI ಮೇಲಿನ ಹೆಚ್ಚಿನ ಅವಲಂಬನೆ ಉದ್ಯೋಗಿಗಳನ್ನು ಆತಂಕಕ್ಕೀಡುಮಾಡಿದೆ. ಸಾಫ್ಟ್‌ವೇರ್ ಅಭಿವೃದ್ಧಿ ಮತ್ತು ಐಟಿ ಸೇವೆ ಸೇರಿದಂತೆ ಹಲವು ವಿಭಾಗಗಳು ಈಗಾಗಲೇ ಕೃತಕ ಬುದ್ಧಿಮತ್ತೆಯ ಆಧಾರದ ಮೇಲೆ ನಡೆಯುತ್ತಿದೆ. ಕೋಡಿಂಗ್, ಮಾರ್ಕೆಟಿಂಗ್, ಅಷ್ಟೇ ಅಲ್ಲದೆ ದತ್ತಾಂಶಗಳ ನಮೂದು (ಡಾಟಾ ಎಂಟ್ರಿ), ಬ್ಯಾಂಕ್ ವಹಿವಾಟು ಸೇರಿದಂತೆ ಬಹುಪಾಲು ಕ್ಷೇತ್ರವನ್ನು ಎಐ ಆವರಿಸಿದೆ. ವರದಿಗಳ ಪ್ರಕಾರ ಎಐ ತಂತ್ರಜ್ಞಾನ ಮಾನವರಿಗಿಂತ ಶೇ 30 ರಷ್ಟು ಬೇಗ ಕೆಲಸವನ್ನು ಮುಗಿಸುತ್ತದೆ. ಹೀಗಾಗಿ ಕಂಪನಿಗಳು ಉದ್ಯೋಗಿಗಳನ್ನು ಕೈ ಬಿಡುತ್ತಿವೆ.
ಎಐ ವೇಗ ಪಡೆಯುತ್ತಿರುವುದೇಕೆ?
ಹೊಸ ಹೊಸ ಕೃತಕ ಬುದ್ಧಿಮತ್ತೆ ಟೂಲ್‌ಗಳು ಬಂದಿದ್ದು, IT ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಬರುತ್ತಿವೆ. ವರದಿಗಳ ಪ್ರಕಾರ ಕೃತಕ ಬುದ್ಧಿಮತ್ತೆಯು (AI) ಗ್ರಾಹಕ ಸೇವಾ ವಲಯದ ಉದ್ಯೋಗಗಳನ್ನು ಸಂಪೂರ್ಣವಾಗಿ ತೆಗೆದುಹಾಕಲಿವೆ. ಅಲ್ಲದೆ, ವೈದ್ಯಕೀಯ ಕ್ಷೇತ್ರದಲ್ಲಿ AI ಮಾನವರಿಗಿಂತಲೂ (ವೈದ್ಯರಿಗಿಂತ) ಉತ್ತಮವಾಗಿ ರೋಗಗಳನ್ನು ಪತ್ತೆ ಮಾಡಬಲ್ಲದು. ವಿಶ್ವ ನಾಯಕರು AI ಸಲಹೆಗಳನ್ನು ಅನುಸರಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಬಹಳ ವೇಗವಾಗಿ ಕಾರ್ಯ ನಿರ್ವಹಿಸುವುದು ಮಾತ್ರವಲ್ಲದೇ ತಪ್ಪಿಲ್ಲದೇ ಕೆಲಸ ಮಾಡುತ್ತದೆ.
ಜಾಗತಿಕವಾಗಿ 80,000ಕ್ಕೂ ಅಧಿಕ ಟೆಕ್ ಉದ್ಯೋಗಿಗಳ ವಜಾ !
ಜಾಗತಿಕ ತಂತ್ರಜ್ಞಾನ ವಲಯದ ಉದ್ಯೋಗ ಕಡಿತವನ್ನು ಮೇಲ್ವಿಚಾರಣೆ ಮಾಡುವ Layoffs.fyi ದತ್ತಾಂಶ ಒಂದನ್ನು ಹಂಚಿಕೊಂಡಿದ್ದು, 2025 ರಲ್ಲಿ 169 ಕಂಪನಿಗಳಲ್ಲಿ 80,000 ಕ್ಕೂ ಹೆಚ್ಚು ತಂತ್ರಜ್ಞಾನ ವೃತ್ತಿಪರರು ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಹೊರಹಾಕಿದೆ. ಮೈಕ್ರೋಸಾಫ್ಟ್, 2025 ರಲ್ಲಿ 15,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ವಜಾಗೊಳಿಸಿದೆ. ಇಂಟೆಲ್ ಕಂಪನಿಯು 25,000, ಪ್ಯಾನಸೋನಿಕ್ 10,000, ಮೈಕ್ರೋಸಾಫ್ಟ್ 6500, ಮೆಟಾ 3600, ಅಮೆಜಾನ್ 14000, ಐಬಿಎಂ 8000, ಗೂಗಲ್ 500 ,ಎಚ್‌ಪಿ 6000, ನಿಸ್ಸಾನ್ 20000, ಸ್ಟಾರ್‌ಬಕ್ಸ್ 1100 ಸಿಬ್ಬಂದಿಯನ್ನು ವಜಾಗೊಳಿಸಿವೆ. ಇದರ ಜತೆಗೆ ವಾಲ್‌ಮಾರ್ಟ್, ಬಾಷ್‌ನಂತಹ ಕಂಪನಿಗಳು ಸಹ ಕಾಸ್ಟ್ ಕಟ್ಟಿಂಗ್‌ಗೆ ಮುಂದಾಗಿದ್ದು, ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡಲು ಯೋಚಿಸಿದೆ
AI ತಂತ್ರಜ್ಞರಿಗೆ ಡಿಮಾಂಡ್
ಹಲವಾರು ಕಂಪನಿಗಳು AI ತಂತ್ರಜ್ಞರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿವೆ. ಕೆಲಸ ಕಳೆದುಕೊಳ್ಳುವುದನ್ನು ತಪ್ಪಿಸಲು ಉದ್ಯೋಗಿಗಳಿಗೆ ಕಂಪನಿ ಮಾರ್ಗಸೂಚಿಗಳನ್ನು ನೀಡಿದೆ ಎಂದು ಹೊಸ ವರದಿಗಳು ತಿಳಿಸಿವೆ. ಉದ್ಯೋಗಿಗಳು AI ಕ್ಷೇತ್ರದಲ್ಲಿ ಪರಿಣತಿ ಹೊಂದಿರಬೇಕು, AI ಪರಿಣತಿಯನ್ನು ಇನ್ನು ಮುಂದೆ ಹೆಚ್ಚುವರಿ ಕೌಶಲ್ಯವೆಂದು ಪರಿಗಣಿಸದೆ, ಕಡ್ಡಾಯ ಎಂದು ಸೂಚನೆಯನ್ನು ನೀಡಿದೆ.
ಹೊಸ ಅವಕಾಶಗಳು
ಇಂತಹ ತಂತ್ರಜ್ಞಾನದಿಂದ ಕೇವಲ ಕುತ್ತು ಮಾತ್ರ ಅಲ್ಲ, ಸಾವಿರಾರು ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಆರೋಗ್ಯ, ಶಿಕ್ಷಣ, ಸೇವಾ ವಲಯಯ ಸೇರಿದಂತೆ ಸಾಕಷ್ಟು ಉದ್ಯೋಗಗಳು ಎಐ ಮೂಲಕ ಸೃಷ್ಟಿಯಾಗುತ್ತವೆ. ಹೊಸದಾಗಿ ಉದ್ಯಮ ಪ್ರಾರಂಭಿಸುವವರಿಗೆ ಈ ತಂತ್ರಜ್ಞಾನ ವರವಾಗಿ ಪರಿಣಮಿಸಲಿದೆ