ʻಎಂದಿಗೂ ನಾನು ಸ್ಕ್ರಿಪ್ಟ್‌ಗೆ ಅಂಟಿಕೊಳ್ಳುವುದಿಲ್ಲ..ʼ; ʻಟಾಕ್ಸಿಕ್ʼ ಸಿನಿಮಾ ರಿಲೀಸ್ ಆದ್ಮೇಲೆ ನಿರ್ದೇಶಕಿ ಗೀತು ಮೋಹನ್‌ದಾಸ್ ಬಗ್ಗೆ ಭಾರಿ ಚರ್ಚೆ!
ʻಟಾಕ್ಸಿಕ್ʼ ಸಿನಿಮಾದ ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಹಳೆಯ ಸಂದರ್ಶನದ ವಿಡಿಯೋವೊಂದು ‘ಟಾಕ್ಸಿಕ್’ ಬಿಡುಗಡೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ನಡುವೆ, ಅವರ, "ನಾನು ಬರೆಯುವುದೇ ಒಂದು, ಶೂಟ್ ಮಾಡುವುದೇ ಇನ್ನೊಂದು" ಎಂಬ ಹೇಳಿದೆ ಮುನ್ನೆಲೆಗೆ ಬಂದಿವೆ. ಈ ಎಲ್ಲ ಚರ್ಚೆಗಳ ಹೊರತಾಗಿಯೂ, ಯಶ್ ನಟನೆಯ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ದಾಖಲೆ ಬರೆದಿದೆ.
-
ʻರಾಕಿಂಗ್ ಸ್ಟಾರ್ʼ ಯಶ್ ನಟನೆಯ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭವನ್ನೇ ಪಡೆದುಕೊಂಡಿದೆ. ಆದರೆ, ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ನಿರ್ದೇಶಕಿ ಗೀತು ಮೋಹನ್‌ದಾಸ್ ಅವರ ಹಳೆಯ ಸಂದರ್ಶನವೊಂದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಮುನ್ನೆಲೆಗೆ ಬಂದಿದೆ. ಸಿನಿಮಾ ನಿರ್ಮಾಣದ ತಮ್ಮ ವಿಭಿನ್ನ ಶೈಲಿಯ ಕುರಿತು ಅವರು ಈ ಹಿಂದೆ ನೀಡಿದ್ದ ಹೇಳಿಕೆಗಳು ಈಗ ನೆಟ್ಟಿಗರ ಚರ್ಚೆಗೆ ಕಾರಣವಾಗಿವೆ.
ಎಂದಿಗೂ ಸ್ಕ್ರಿಪ್ಟ್‌ಗೆ ಅಂಟಿಕೊಳ್ಳುವುದಿಲ್ಲ
"ನಾನು ಬರೆಯುವ ಸಿನಿಮಾದ ಸ್ಕ್ರಿಪ್ಟೇ ಬೇರೆ, ಕೊನೆಗೆ ಶೂಟ್ ಮಾಡುವ ಅಥವಾ ಎಡಿಟ್ ಮಾಡುವ ಚಿತ್ರವೇ ಬೇರೆ" ಎಂದು ಅವರು ಹೇಳಿದ್ದ ವಿಡಿಯೋ ತುಣುಕನ್ನು ನೆಟ್ಟಿಗರು ಹಂಚಿಕೊಳ್ಳುತ್ತಿದ್ದಾರೆ. ‘ಟಾಕ್ಸಿಕ್’ ಚಿತ್ರೀಕರಣ ಆರಂಭವಾಗುವುದಕ್ಕೂ ಮುನ್ನ ನೀಡಿದ್ದ ಹಳೆಯ ಸಂದರ್ಶನದಲ್ಲಿ, ಗೀತು ತಮ್ಮ ಸೃಜನಶೀಲ ಪ್ರಕ್ರಿಯೆ ಹಾಗೂ ಚಿತ್ರೀಕರಣ ಮತ್ತು ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿ ತಮ್ಮ ಸಿನಿಮಾಗಳು ಹೇಗೆ ಬದಲಾಗುತ್ತವೆ ಎಂಬುದರ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. "ನಾನು ಬರೆಯುವುದೇ ಒಂದು, ಶೂಟ್ ಮಾಡುವುದೇ ಇನ್ನೊಂದು, ಎಡಿಟ್ ಮಾಡುವುದು ಮತ್ತೊಂದು. ಕೊನೆಗೆ ಸಿನಿಮಾ ಹೊರಬಂದಾಗ ನನಗೆ ಖುಷಿಯಾಗುತ್ತದೆ. ನಾನು ಎಂದಿಗೂ ಕೇವಲ ಸ್ಕ್ರಿಪ್ಟ್‌ಗೆ ಮಾತ್ರ ಅಂಟಿಕೊಳ್ಳುವುದಿಲ್ಲ.." ಎಂದು ಅವರು ಹೇಳಿದ್ದರು.
ನಿರ್ಮಾಪಕರಿಗೆ ಮಾಹಿತಿ ಕೊಡುವ ಗೀತು
ಅಷ್ಟೇ ಅಲ್ಲದೆ, ಮೂಲ ಸ್ಕ್ರಿಪ್ಟ್‌ನಲ್ಲಿ ಓದಿದ್ದಕ್ಕಿಂತ ಅಂತಿಮ ಸಿನಿಮಾ ಭಿನ್ನವಾಗಿರಬಹುದು ಎಂಬ ವಿಷಯವನ್ನು ಮೊದಲೇ ನಿರ್ಮಾಪಕರಿಗೆ ಸ್ಪಷ್ಟವಾಗಿ ತಿಳಿಸುವುದಾಗಿಯೂ ಗೀತು ಮೋಹನ್‌ದಾಸ್ ವಿವರಿಸಿದ್ದರು. ‘ಟಾಕ್ಸಿಕ್’ ಬಿಡುಗಡೆಯಾದ ಬೆನ್ನಲ್ಲೇ ಈ ಹಳೆಯ ಹೇಳಿಕೆಗಳು ವ್ಯಾಪಕ ಗಮನ ಸೆಳೆಯುತ್ತಿವೆ; ವಿಶೇಷವಾಗಿ ಚಿತ್ರದ ನಿರ್ದೇಶನ ಮತ್ತು ನಿರೂಪಣೆಯ ಕುರಿತು ಆನ್‌ಲೈನ್‌ನಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಇದು ವೈರಲ್ ಆಗಿದೆ.
ಇದನ್ನು ʻಟಾಕ್ಸಿಕ್ʼ ಬಗ್ಗೆ ಹೇಳಿದ್ದಲ್ಲ!
ಆದಾಗ್ಯೂ, ಈ ಸಂದರ್ಶನದಲ್ಲಿ ಗೀತು ಅವರು ನಿರ್ದಿಷ್ಟವಾಗಿ ‘ಟಾಕ್ಸಿಕ್’ ಚಿತ್ರದ ಬಗ್ಗೆ ಮಾತನಾಡಿರಲಿಲ್ಲ ಹಾಗೂ ಅದರ ಕೆಲಸಗಳು ಆರಂಭವಾಗುವುದಕ್ಕೂ ಮುನ್ನವೇ ಈ ಹೇಳಿಕೆ ನೀಡಿದ್ದರು ಎಂಬುದು ಗಮನಾರ್ಹ. ಈ ಚಿತ್ರಕ್ಕೆ ಗೀತು ಮತ್ತು ಯಶ್ ಇಬ್ಬರೂ ಜಂಟಿಯಾಗಿ ಕಥೆ-ಚಿತ್ರಕಥೆ ಬರೆದಿರುವುದರಿಂದ, ನಿರ್ದೇಶಕಿಯ ಈ ಕಾರ್ಯವೈಖರಿ ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ.
ಗೀತು ಮೋಹನ್‌ದಾಸ್ ಅವರ ಹಳೇ ವಿಡಿಯೋ ವೈರಲ್
#GeetuMohandas about #ToxicTheMovie's Inconsistency 👀pic.twitter.com/GITLDCHlp9 https://t.co/GITLDCHlp9 https://t.co/759BKDVXd7
— OTT STREAM UPDATES (@newottupdates) August 26, 2026
ಭರ್ಜರಿ ಓಪನಿಂಗ್ ಪಡೆದ ʻಟಾಕ್ಸಿಕ್ʼ
ಟೀಕೆಗಳ ನಡುವೆಯೂ ‘ಟಾಕ್ಸಿಕ್’ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ಬಲವಾದ ಓಪನಿಂಗ್ ದಾಖಲಿಸಿದೆ. ಈ ಚಿತ್ರವು ಮೊದಲ ದಿನವೇ ವಿಶ್ವಾದ್ಯಂತ 140 ಕೋಟಿ ರೂಪಾಯಿಗಳಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಭಾರತದಲ್ಲೇ ಸರಿಸುಮಾರು 120 ಕೋಟಿ ರೂ. ಗಳಿಕೆ ಆಗಿದೆ ಎಂದು ವರದಿಯಾಗಿದೆ. ಯಶ್ ಅವರಿಗಿರುವ ಅಪಾರ ಅಭಿಮಾನಿ ಬಳಗವೇ ಇಷ್ಟೊಂದು ದೊಡ್ಡ ಓಪನಿಂಗ್ ಆಗೋದಕ್ಕೆ ಪ್ರಮುಖ ಕಾರಣವಾಗಿದೆ.
Toxic Movie: ʼಟಾಕ್ಸಿಕ್ʼ ಹೊಸ ದಾಖಲೆಗಳನ್ನು ಸೃಷ್ಟಿಸಲಿ: ಯಶ್‌ಗೆ ಶುಭ ಹಾರೈಸಿದ ಕರವೇ ಅಧ್ಯಕ್ಷ ನಾರಾಯಣಗೌಡ
ಗೀತು ಮೋಹನ್‌ದಾಸ್ ನಿರ್ದೇಶನದ ‘ಟಾಕ್ಸಿಕ್’ ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಗ್ಯಾಂಗ್‌ಸ್ಟರ್ ಆ್ಯಕ್ಷನ್ ಡ್ರಾಮಾವನ್ನು ಯಶ್ ಅವರ ‘ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್’ ಹಾಗೂ ‘ಕೆವಿಎನ್ ಪ್ರೊಡಕ್ಷನ್ಸ್’ ಜಂಟಿಯಾಗಿ ನಿರ್ಮಿಸಿವೆ.