Parishad Election: ಚಿಂತಾಮಣಿಯಲ್ಲಿ ಶೇ.75.61ರಷ್ಟು ಮತ ಚಲಾವಣೆ; ಪಕ್ಷೇತರ ಅಭ್ಯರ್ಥಿ ಬರೀದ್ ಪಡೆದ ಮತಗಳ ಬಗ್ಗೆ ಕುತೂಹಲ
ಚಿಂತಾಮಣಿಯ ವಕೀಲ ಬರೀದ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಅವರು ಪಡೆಯುವ ಮತಗಳ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ. ಕಾಂಗ್ರೆಸ್ ಮತ್ತು ಎನ್ಡಿಎ ಅಭ್ಯರ್ಥಿ ಗಳ ನಡುವೆ ಪ್ರಮುಖ ಪೈಪೋಟಿ ಇದೆ ಎಂಬ ಚರ್ಚೆಗಳ ನಡುವೆಯೇ ಬರೀದ್ ಅವರ ಮತಗಳಿಕೆ ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಗಮನ ಸೆಳೆದಿದೆ.
-
ಚಿಂತಾಮಣಿ: ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಶುಕ್ರವಾರ ಚಿಂತಾಮಣಿ ತಾಲೂಕಿನಲ್ಲಿ ಬಿರುಸಿನಿಂದ ಹಾಗೂ ಶಾಂತಿಯುತವಾಗಿ ನಡೆಯಿತು. ತಾಲೂಕಿನಲ್ಲಿ ಶೇ.75.61ರಷ್ಟು ಮತದಾನವಾಗಿದ್ದು, ಪದವೀಧರ ಮತದಾರರು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ಕೈವಾರ, ಉಪ್ಪರಪೇಟೆ, ಮುರುಗಮಲ್ಲ ಹಾಗೂ ಮುಂಗಾನಹಳ್ಳಿಯಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ತಾಲೂಕಿನಲ್ಲಿ ಒಟ್ಟು 7,654 ಪದವೀಧರ ಮತದಾರರಿದ್ದು, ಮತದಾನ ಪ್ರಕ್ರಿಯೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಪೂರ್ಣಗೊಂಡಿತು.
ಆಗ್ನೇಯ ಪದವೀಧರ ಕ್ಷೇತ್ರದ ವ್ಯಾಪ್ತಿಯಲ್ಲಿ ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕಬಳ್ಳಾ ಪುರ ಹಾಗೂ ಕೋಲಾರ ಜಿಲ್ಲೆಗಳು ಸೇರಿವೆ. ಚುನಾವಣಾ ಕಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ ಹುಲಿಕುಂಟೆಮಠ್, ಎನ್ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಸೇರಿದಂತೆ ಒಟ್ಟು ಒಂಬತ್ತು ಮಂದಿ ಸ್ಪರ್ಧಿಸಿದ್ದಾರೆ.
ಚಿಂತಾಮಣಿಯ ವಕೀಲ ಬರೀದ್ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿದ್ದು, ಅವರು ಪಡೆಯುವ ಮತಗಳ ಬಗ್ಗೆ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿದೆ. ಕಾಂಗ್ರೆಸ್ ಮತ್ತು ಎನ್ಡಿಎ ಅಭ್ಯರ್ಥಿಗಳ ನಡುವೆ ಪ್ರಮುಖ ಪೈಪೋಟಿ ಇದೆ ಎಂಬ ಚರ್ಚೆಗಳ ನಡುವೆಯೇ ಬರೀದ್ ಅವರ ಮತಗಳಿಕೆ ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದು ಗಮನ ಸೆಳೆದಿದೆ.
ಶಾಸಕ ಡಾ. ಎಂ.ಸಿ. ಸುಧಾಕರ್, ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ರಾಮಚಂದ್ರ ಗೌಡ ಹಾಗೂ ಬಿಜೆಪಿ ಮುಖಂಡ ವೇಣುಗೋಪಾಲ್ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಮತದಾನ ಶಾಂತಿಯುತವಾಗಿ ನಡೆಯಲು ಪೊಲೀಸರು ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಿದ್ದರು.
ಒಟ್ಟಾರೆ, ಚಿಂತಾಮಣಿ ತಾಲೂಕಿನಲ್ಲಿ ಮತದಾನ ಪ್ರಕ್ರಿಯೆ ಸುಸೂತ್ರವಾಗಿ ಮುಕ್ತಾಯಗೊಂಡಿತು.