ಒಡಿಶಾದಲ್ಲಿ 120 ಕಿ.ಮೀ. ವ್ಯಾಪ್ತಿಯ ಪಿನಾಕಾ ರಾಕೆಟ್ ಪರೀಕ್ಷೆ ಯಶಸ್ವಿ; ಭಾರತದ ರಕ್ಷಣಾ ವ್ಯವಸ್ಥೆ ಇನ್ನಷ್ಟು ಬಲಿಷ್ಠ
ಒಡಿಶಾದ ಚಾಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ಸೋಮವಾರ ಪಿನಾಕಾ ಲಾಂಗ್ ರೇಂಜ್ ಗೈಡೆಡ್ ರಾಕೆಟ್ (LRGR 120) ನ ಮೊದಲ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು. ಪರೀಕ್ಷೆಯಲ್ಲಿ 120 ಕಿ.ಮೀ. ವ್ಯಾಪ್ತಿಯ ಪಿನಾಕಾ ರಾಕೆಟ್ ತನ್ನ ಎಲ್ಲ ಕುಶಲತೆಯನ್ನು ಪ್ರದರ್ಶಿಸಿದೆ.
(ಸಂಗ್ರಹ ಚಿತ್ರ) -
ನವದೆಹಲಿ: ಪಿನಾಕಾ ಲಾಂಗ್ ರೇಂಜ್ ಗೈಡೆಡ್ ರಾಕೆಟ್ (Pinaka Long Range Guided Rocket 120) ನ ಮೊದಲ ಹಾರಾಟ ಪರೀಕ್ಷೆಯನ್ನು ಸೋಮವಾರ ಒಡಿಶಾದ (odisha) ಚಾಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ (Integrated Test Range) ಯಶಸ್ವಿಯಾಗಿ ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ 120 ಕಿ.ಮೀ. ವ್ಯಾಪ್ತಿಯ ಪಿನಾಕಾ ರಾಕೆಟ್ (Pinaka rocket test) ತನ್ನ ಸಂಪೂರ್ಣ ಕುಶಲತೆಯನ್ನು ಪ್ರದರ್ಶಿಸಿತ್ತು. ರಕ್ಷಣಾ ಸ್ವಾಧೀನ ಮಂಡಳಿ ಸಭೆಯ ಬಳಿಕ ಭಾರತೀಯ ಸೇನೆಗೆ ಪಿನಾಕಾ ರಾಕೆಟ್ ಪರೀಕ್ಷೆಗೆ ಅನುಮೋದನೆ ನೀಡಿದ ಬಳಿಕ ಇದರ ಪ್ರಯೋಗವನ್ನು ನಡೆಸಲಾಗಿದೆ.
ರಕ್ಷಣಾ ಸ್ವಾಧೀನ ಮಂಡಳಿ ಸೋಮವಾರ ಬೆಳಗ್ಗೆ ಸಭೆ ನಡೆಸಿದ ಬಳಿಕ ಭಾರತೀಯ ಸೇನೆಯು ಒಡಿಶಾದ ಚಾಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್‌ನಲ್ಲಿ ಪಿನಾಕಾ ಲಾಂಗ್ ರೇಂಜ್ ಗೈಡೆಡ್ ರಾಕೆಟ್ ನ ಮೊದಲ ಹಾರಾಟ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. 120 ಕಿ.ಮೀ ವ್ಯಾಪ್ತಿಯ ಈ ರಾಕೆಟ್‌ನ ಮೊದಲ ಪ್ರಯೋಗದಲ್ಲಿ ಅದು ತನ್ನ ಸಂಪೂರ್ಣ ಕುಶಲತೆಯನ್ನು ಪ್ರದರ್ಶಿಸಿದೆ.
ಸಮಯಕ್ಕೆ ಸರಿಯಾಗಿ ನಿಖರ ಗುರಿಯನ್ನು ಸಾಧಿಸಿದ ರಾಕೆಟ್, ತನ್ನ ಕುಶಲತೆಯನ್ನು ಪ್ರದರ್ಶಿಸಿ ಅದರ ಗರಿಷ್ಠ ವ್ಯಾಪ್ತಿಯನ್ನು ಯಶಸ್ವಿಯಾಗಿ ತಲುಪಿದೆ. ರಾಕೆಟ್ ಹಾರಾಟ ಪರೀಕ್ಷೆಗೆ ಸಂಬಂಧಿಸಿ ನಿಯೋಜಿಸಲಾದ ಎಲ್ಲಾ ಶ್ರೇಣಿಯ ಉಪಕರಣಗಳು ಅದರ ದಾರಿಯುದ್ದಕ್ಕೂ ಹಾರಾಟವನ್ನು ಟ್ರ್ಯಾಕ್ ಮಾಡಿದವು.
ಪಿನಾಕಾ ಮಲ್ಟಿಪಲ್ ಲಾಂಚರ್ ರಾಕೆಟ್ ಸಿಸ್ಟಮ್ (ಎಂಎಲ್‌ಆರ್‌ಎಸ್) ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಇದು ದೀರ್ಘ ಶ್ರೇಣಿಯ ಫಿರಂಗಿ ಶಸ್ತ್ರವಾಗಿದೆ ಇದನ್ನು ಆರ್ಮಮೆಂಟ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೊರೇಟರಿಯು ವಿನ್ಯಾಸಗೊಳಿಸಿದ್ದು, ಇದರ ಹಾರಾಟ ಪರೀಕ್ಷೆಗೆ ಐಟಿಆರ್ ಮತ್ತು ಪ್ರೂಫ್ ಆಂಡ್ ಎಕ್ಸ್‌ಪರಿಮೆಂಟಲ್ ಎಸ್ಟಾಬ್ಲಿಷ್‌ಮೆಂಟ್ ಸಹಯೋಗ ನೀಡಿದೆ.
ತ್ವರಿತ ಪ್ರತಿಕ್ರಿಯೆ ಮತ್ತು ನಿಖರತೆಗೆ ಹೆಸರುವಾಸಿಯಾದ ಪಿನಾಕಾ ವ್ಯವಸ್ಥೆಯು ಆಧುನಿಕ ಯುದ್ಧ ಮಾದರಿಯಲ್ಲಿ ಭಾರತೀಯ ಸೇನೆಯ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ಪಿನಾಕಾ ಲಾಂಚರ್‌ನಿಂದ ಉಡಾವಣೆ ಮಾಡಲಾದ ಈ ರಾಕೆಟ್ ಅದರ ಬಹುಮುಖತೆಯನ್ನು ಪ್ರದರ್ಶಿಸಿದ್ದು, ಒಂದೇ ಲಾಂಚರ್‌ನಿಂದ ವಿಭಿನ್ನ ಶ್ರೇಣಿಗಳ ಪಿನಾಕಾ ರೂಪಾಂತರಗಳ ಉಡಾವಣಾ ಸಾಮರ್ಥ್ಯವನ್ನು ತೋರಿಸಿತ್ತು.
DRDO successfully conducted maiden flight test of Pinaka Long Range Guided Rocket (LRGR-120) at ITR Chandipur. Achieving a range of 120 km with textbook precision, the rocket demonstrated all planned in-flight manoeuvres.
— Ministry of Defence, Government of India (@SpokespersonMoD) December 30, 2025
Read here: https://t.co/krP00OZcPn@rajnathsingh… pic.twitter.com/HfUot0RJMk
ಪಿನಾಕಾ ರಾಕೆಟ್ ಪ್ರಯೋಗ ಯಶಸ್ವಿಯಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಈ ಸಾಧನೆಗಾಗಿ ಡಿಆರ್‌ಡಿಒಗೆ ಅಭಿನಂದನೆ ಸಲ್ಲಿಸಿದ್ದಾರೆ.
ದೀರ್ಘ ಶ್ರೇಣಿಯ ಮಾರ್ಗದರ್ಶಿ ರಾಕೆಟ್ ಆಗಿರುವ ಪಿನಾಕಾ ರಾಕೆಟ್ ಪ್ರಯೋಗ ಯಶಸ್ವಿಯಿಂದ ಇದು ಸಶಸ್ತ್ರ ಪಡೆಗಳ ಸಾಮರ್ಥ್ಯವನ್ನು ವೃದ್ಧಿಸಲಿದೆ ಮತ್ತು ಇದೊಂದು ಗೇಮ್-ಚೇಂಜರ್ ಎಂದು ಹೇಳಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಮತ್ತು ಡಿಆರ್‌ಡಿಒ ಅಧ್ಯಕ್ಷ ಡಾ. ಸಮೀರ್ ವಿ ಕಾಮತ್ ಅವರು ಕೂಡ ರಾಕೆಟ್ ಪ್ರಯೋಗವನ್ನು ವೀಕ್ಷಿಸಿ ತಂಡವನ್ನು ಅಭಿನಂದಿಸಿದರು.
ಪಿನಾಕಾದ ದೀರ್ಘ ಶ್ರೇಣಿಯ ಆವೃತ್ತಿಗಳು ಸಿದ್ಧವಾದ ತಕ್ಷಣ ಭಾರತೀಯ ಸೇನಾ ಪಡೆಯು ಇತರ ಪರ್ಯಾಯ ಶಸ್ತ್ರಾಸ್ತ್ರಗಳ ಯೋಜನೆಗಳನ್ನು ಕೈಬಿಡುವ ಸಾಧ್ಯತೆ ಇದೆ. ಇದು ದೇಶೀಯ ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ ಅತಿದೊಡ್ಡ ಸಾಧನೆಯಾಗಲಿದೆ ಎಂದು ಈಗಾಗಲೇ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ತಿಳಿಸಿದ್ದಾರೆ.
ಪಿನಾಕಾವನ್ನು ಈಗಾಗಲೇ ಅರ್ಮೇನಿಯಾ ಖರೀದಿಸಿದೆ. ಅಲ್ಲದೇ ಫ್ರಾನ್ಸ್ ಸೇರಿದಂತೆ ಇನ್ನು ಹಲವು ಯುರೋಪಿಯನ್ ರಾಷ್ಟ್ರಗಳು ಖರೀದಿಗೆ ಆಸಕ್ತಿ ತೋರಿಸುತ್ತಿವೆ. ಹೀಗಾಗಿ ರಫ್ತು ವಲಯದಲ್ಲಿ ಪಿನಾಕಾ ಛಾಪು ಮೂಡಿಸಲಿದೆ.