ದೆಹಲಿ ಮಾಲಿನ್ಯ ನಿಯಂತ್ರಣ: ಮೊದಲ ದಿನವೇ 1,500ಕ್ಕೂ ಹೆಚ್ಚು ಕಾರುಗಳಿಗೆ ಪ್ರವೇಶ ನಿರಾಕರಣೆ, 68 ಲಕ್ಷ ರೂ. ದಂಡ ವಸೂಲಿ
ಚಳಿಗಾಲದ ತೀವ್ರ ವಾಯು ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ದೆಹಲಿ ಸರ್ಕಾರ ಜಾರಿಗೆ ತಂದಿರುವ ಕಟ್ಟುನಿಟ್ಟಿನ ನಿಯಮಾವಳಿಗಳ ಮೊದಲ ದಿನವೇ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಭಾರಿ ಕಾರ್ಯಾಚರಣೆ ನಡೆಸಲಾಗಿದೆ. ನವೆಂಬರ್ 1 ರಿಂದ ದೆಹಲಿಯ ಗಡಿಭಾಗಗಳಲ್ಲಿ ಸಾರಿಗೆ ಇಲಾಖೆ ಹಾಗೂ ಸಂಚಾರಿ ಪೊಲೀಸರು ಜಂಟಿ ತಪಾಸಣೆ ಆರಂಭಿಸಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಚಳಿಗಾಲದ ತೀವ್ರ ವಾಯು ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ದೆಹಲಿ ಸರ್ಕಾರ ಜಾರಿಗೆ ತಂದಿರುವ ಕಟ್ಟುನಿಟ್ಟಿನ ನಿಯಮಾವಳಿಗಳ (Winter Action Plan) ಮೊದಲ ದಿನವೇ ನಿಯಮ ಉಲ್ಲಂಘಿಸಿದ ವಾಹನಗಳ ವಿರುದ್ಧ ಭಾರಿ (Delhi Pollution) ಕಾರ್ಯಾಚರಣೆ ನಡೆಸಲಾಗಿದೆ. ನಿಯಮ ಪಾಲಿಸದ ಒಟ್ಟು 1,539 ವಾಹನಗಳಿಗೆ ದೆಹಲಿ ಪ್ರವೇಶವನ್ನು ನಿರಾಕರಿಸಲಾಗಿದ್ದು, ನಿಯಮ ಉಲ್ಲಂಘಕರಿಂದ ಒಟ್ಟು 68.4 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.
ನವೆಂಬರ್ 1 ರಿಂದ ದೆಹಲಿಯ ಗಡಿಭಾಗಗಳಲ್ಲಿ ಸಾರಿಗೆ ಇಲಾಖೆ ಹಾಗೂ ಸಂಚಾರಿ ಪೊಲೀಸರು ಜಂಟಿ ತಪಾಸಣೆ ಆರಂಭಿಸಿದ್ದಾರೆ. ಮೊದಲ ದಿನವೇ ಸುಮಾರು 14,930 ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದ್ದು, ಈ ಪೈಕಿ ಶೇ. 10 ಕ್ಕೂ ಹೆಚ್ಚು ವಾಹನಗಳನ್ನು ಗಡಿಯಿಂದಲೇ ವಾಪಸ್ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ. ಸಿಂಧುತ್ವ ಹೊಂದಿರುವ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ ಇಲ್ಲದ ವಾಹನಗಳ ವಿರುದ್ಧ 566 ಚಲನ್‌ಗಳನ್ನು ದಾಖಲಿಸಲಾಗಿದ್ದು, 56.6 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಬಿಎಸ್-VI (BS-VI) ಮಾನದಂಡ ಹೊಂದಿರದ ಮತ್ತು ದೆಹಲಿಯ ಹೊರಗೆ ನೋಂದಣಿಯಾಗಿರುವ 1,539 ವಾಹನಗಳನ್ನು ತಡೆದು ವಾಪಸ್ ಕಳುಹಿಸಲಾಗಿದೆ. ನಿಯಮ ಮೀರಿ ಪ್ರವೇಶಿಸಲು ಯತ್ನಿಸಿದ ವಾಹನಗಳಿಗೆ 2 ಲಕ್ಷ ರೂ. ದಂಡ ವಿಧಿಸಿ, 62 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಅಷ್ಟೇ ಅಲ್ಲದೇ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಗಳಲ್ಲಿ ಧೂಳು ನಿಯಂತ್ರಣ ನಿಯಮ ಉಲ್ಲಂಘಿಸಿದ್ದಕ್ಕಾಗಿ 9.8 ಲಕ್ಷ ರೂಪಾಯಿ ಪರಿಸರ ಪರಿಹಾರ ದಂಡವನ್ನು ವಸೂಲಿ ಮಾಡಲಾಗಿದೆ.
ದೆಹಲಿ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮದ ಪ್ರಕಾರ, ಅಗತ್ಯ ಸೇವೆಗಳ ವಾಹನಗಳು, ಸಿಎನ್‌ಜಿ (CNG) ಮತ್ತು ಎಲೆಕ್ಟ್ರಿಕ್ (EV) ವಾಹನಗಳಿಗೆ ಮಾತ್ರ ಮುಕ್ತ ಪ್ರವೇಶ ಕಲ್ಪಿಸಲಾಗಿದೆ. ಹಳೆಯ ಬಿಎಸ್-IV ಡೀಸೆಲ್ ಮತ್ತು ಬಿಎಸ್-III ಪೆಟ್ರೋಲ್ ವಾಹನಗಳ ಸಂಚಾರದ ಮೇಲೆ ಕಟ್ಟುನಿಟ್ಟಿನ ನಿಗಾ ಇಡಲಾಗಿದೆ. ಮಾಲಿನ್ಯ ತಡೆಗಟ್ಟುವ ಈ ವಿಶೇಷ ತಪಾಸಣಾ ಅಭಿಯಾನವು ಮುಂಬರುವ ಜನವರಿ 31, 2027 ರವರೆಗೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.