2026 ಚುನಾವಣೆ ಫಲಿತಾಂಶ; ಸಮೀಕ್ಷೆ ಹೇಳಿದೆ ಕಾಂಗ್ರೆಸ್ ಭವಿಷ್ಯ
ಕೇರಳ, ಪಶ್ಚಿಮ ಬಂಗಾಳ, ಅಸ್ಸಾಂ, ತಮಿಳುನಾಡು, ಪುದುಚೇರಿಯ ವಿಧಾನ ಸಭಾ ಚುನಾವಣಾ ಫಲಿತಾಂಶ ಸೋಮವಾರ ಘೋಷಣೆಯಾಗಲಿದೆ. ಈ ಬಾರಿ ಎಲ್ಲಾ ರಾಜ್ಯಗಳಲ್ಲೂ ಬಿಜೆಪಿ ನೇರ ಪ್ರತಿಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರೆ, ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ. ರಾಜ್ಯವಾರು ಕಾಂಗ್ರೆಸ್ ಸ್ಥಿತಿ ಹೇಗಿದೆ? ಎಲ್ಲಿ ಗೆಲ್ಲುವ ಭರವಸೆ ಇದೆ ? ಅಂತಿಮ ಕ್ಷಣದ ಸಮೀಕ್ಷೆ ಹೇಳುವುದೇನು? ಎಂಬುದರ ಕುರಿತು ಮಾಹಿತಿ ಇಲ್ಲಿದೆ.
ಸಂಗ್ರಹ ಚಿತ್ರ -
ಬೆಂಗಳೂರು: ನಾಲ್ಕು ರಾಜ್ಯಗಳಾದ ಕೇರಳ (Kerala), ಪಶ್ಚಿಮ ಬಂಗಾಳ (west bengal), ಅಸ್ಸಾಂ (assam), ತಮಿಳುನಾಡು (tamil nadu) ಮತ್ತು ಒಂದು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿ (puducherry) ವಿಧಾನ ಸಭಾ ಚುನಾವಣೆ (Assembly election) 2026ರ ಫಲಿತಾಂಶ (election results 2026) ಸೋಮವಾರ ಸಂಜೆಯೊಳಗೆ ಘೋಷಣೆಯಾಗಲಿದೆ. ಮತ ಎಣಿಕೆ ಕಾರ್ಯ ನಡೆಯುವ ಮುನ್ನ ಬಿಡುಗಡೆಯಾಗಿರುವ ಸಮೀಕ್ಷೆಯ ಪ್ರಕಾರ ದೇಶಾದ್ಯಂತ ಮತದಾರ ವಿಭಿನ್ನ ರೀತಿಯಲ್ಲಿ ಮತ ಚಲಾಯಿಸಿರುವ ವಿಶ್ವಾಸವನ್ನು ಕಾಂಗ್ರೆಸ್ ವ್ಯಕ್ತಪಡಿಸಿದ್ದು,ಇದು ತನಗೆ ಆಶಾದಾಯಕವಾಗಿರಲಿದೆ ಎಂದು ಊಹಿಸಿದೆ. ಕೇರಳದಲ್ಲಿ ಸರ್ಕಾರ ರಚಿಸುವ ಕನಸು ಕಾಣುತ್ತಿದ್ದರೆ, ತಮಿಳುನಾಡಿನಲ್ಲೂ ಬಲ ಸಿಗುವ ನಿರೀಕ್ಷೆ ಹೊಂದಿದೆ. ಇನ್ನು ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಕಳಪೆ ಫಲಿತಾಂಶದ ನಿರೀಕ್ಷೆಯಲ್ಲಿದೆ.
ತಮಿಳುನಾಡು ಚುನಾವಣೆ: 62 ಮತ ಎಣಿಕೆ ಕೇಂದ್ರಗಳ ಭದ್ರತೆಗೆ ಲಕ್ಷಕ್ಕೂ ಹೆಚ್ಚು ಸಿಬ್ಬಂದಿ
ಕೇರಳದಲ್ಲಿ ಹೆಚ್ಚಿನ ಭರವಸೆ
ಈ ಬಾರಿ ಕಾಂಗ್ರೆಸ್ ಗೆ ಕೇರಳ ಬಲ ತುಂಬಲಿದೆ ಎನ್ನುತ್ತದೆ ಸಮೀಕ್ಷೆ ವರದಿಗಳು. ಮೂರು ಪ್ರಮುಖ ಸಂಸ್ಥೆಗಳು ಬಿಡುಗಡೆ ಮಾಡಿರುವ ಸಮೀಕ್ಷೆ ಪ್ರಕಾರ ಕೇರಳದಲ್ಲಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಮತ್ತೆ ಅಧಿಕಾರಕ್ಕೆ ಬರುವ ಸೂಚನೆ ಇದೆ.
ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯು ಯುಡಿಎಫ್‌ಗೆ ಭರವಸೆ ನೀಡಿದ್ದು, 140 ಸದಸ್ಯರ ವಿಧಾನಸಭೆಯಲ್ಲಿ ಅದು 78–90 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಿದೆ. ಪೀಪಲ್ಸ್ ಪಲ್ಸ್ ಮೈತ್ರಿಕೂಟವು 75–85 ಸ್ಥಾನ, ಮ್ಯಾಟ್ರಿಜ್ 70–75 ಸ್ಥಾನ ಸಿಗುವ ಭರವಸೆ ನೀಡಿದೆ. ಹೀಗಾಗಿ ಇಲ್ಲಿ ಯುಡಿಎಫ್ ಸುಲಭವಾಗಿ ಬಹುಮತ ಗಳಿಸುವ ವಿಶ್ವಾಸ ಕಾಂಗ್ರೆಸ್ ಹೊಂದಿದೆ.
ಏಪ್ರಿಲ್ 9 ರಂದು ನಡೆದ ಮತದಾನದಲ್ಲಿ ಕೇರಳದಲ್ಲಿ ಶೇಕಡಾ 78.23 ರಷ್ಟು ಮತದಾನವಾಗಿದೆ. ಇದು 1987ರ ಅನಂತರದ ರಾಜ್ಯದಲ್ಲಿ ನಡೆದಿರುವ ಅತ್ಯಧಿಕ ಮತದಾನವಾಗಿದೆ. ಒಂದು ವೇಳೆ ಇಲ್ಲಿ ಯುಡಿಎಫ್ ಗೆದ್ದರೆ ಕಾಂಗ್ರೆಸ್ ನಾಯಕ ವಿಡಿ ಸತೀಸನ್ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ.
ತಮಿಳುನಾಡಿನಲ್ಲಿ ಬಲ ಸಿಗುವ ನಿರೀಕ್ಷೆ
ಕಾಂಗ್ರೆಸ್ ಮತ್ತು ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟಕ್ಕೆ ತಮಿಳುನಾಡಿನಲ್ಲಿ ವಿಜಯ ಮಾಲೆ ಸಿಗುವ ಭರವಸೆಯನ್ನು ಸಮೀಕ್ಷೆ ವರದಿಗಳು ನೀಡಿವೆ. ಮ್ಯಾಟ್ರಿಜ್ ಪ್ರಕಾರ ಡಿಎಂಕೆ ಮೈತ್ರಿಕೂಟಕ್ಕೆ 122–132 ಸ್ಥಾನಗಳು, ಪೀಪಲ್ಸ್ ಪಲ್ಸ್ ಪ್ರಕಾರ 125–145 ಸ್ಥಾನಗಳು ಸಿಗುವ ನಿರೀಕ್ಷೆ ಇದೆ. ಇಲ್ಲಿ ಬಹುಮತಕ್ಕೆ ಕೇವಲ 118 ಸ್ಥಾನಗಳು ಬೇಕಿದೆ. ತಮಿಳುನಾಡಿನಲ್ಲಿ ಡಿಎಂಕೆ ಗೆದ್ದರೆ ಕಾಂಗ್ರೆಸ್ ಗೆ ದಕ್ಷಿಣದಲ್ಲಿ ಬಲ ಸಿಕ್ಕಂತಾಗುತ್ತದೆ.
ಪುದುಚೇರಿಯಲ್ಲಿ ಹಿನ್ನಡೆ
ಪುದುಚೇರಿ ಕೇಂದ್ರಾಡಳಿತ ಪ್ರದೇಶದ 30 ಸ್ಥಾನಗಳಲ್ಲಿ ಎನ್‌ಡಿಎಗೆ ಬಹುಮತದ ನಿರೀಕ್ಷೆ ಇದ್ದರೂ ಇಲ್ಲಿ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟವು 6 ರಿಂದ 11 ಸ್ಥಾನಗಳನ್ನು ಗಳಿಸುವ ನಿರೀಕ್ಷೆಯಿದೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಇದು ಪಕ್ಷದ ಸುಧಾರಣೆಯಾಗಿದೆ. ಇಲ್ಲಿ ಬಹುಮತಕ್ಕೆ 16 ಸ್ಥಾನ ಅಗತ್ಯವಿದೆ.
ಅಸ್ಸಾಂನಲ್ಲಿ ವಿಫಲ
ಇಲ್ಲಿ ಹಿಮಾಂತ ಬಿಸ್ವಾ ಶರ್ಮಾ ನೇತೃತ್ವದ ಆಡಳಿತವು ಬಿಜೆಪಿ ನೇತೃತ್ವದ ಎನ್‌ಡಿಎಗೆ ಮೂರನೇ ಅವಧಿಗೆ ಆಯ್ಕೆಯಾಗುವ ನಿರೀಕ್ಷೆ ಹೆಚ್ಚಾಗಿದೆ. ಇಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗುವ ಸಾಧ್ಯತೆಯನ್ನು ಸಮೀಕ್ಷೆಗಳು ಹೊರಹಾಕಿವೆ. ಆಕ್ಸಿಸ್ ಮೈ ಇಂಡಿಯಾ ಪ್ರಕಾರ ಕಾಂಗ್ರೆಸ್‌ಗೆ 24 ರಿಂದ 36, ಮ್ಯಾಟ್ರಿಜ್ ಪ್ರಕಾರ 25 ರಿಂದ 32 ಮತ್ತು ಪೀಪಲ್ಸ್ ಪಲ್ಸ್ ಪ್ರಕಾರ 22 ರಿಂದ 26 ಸ್ಥಾನಗಳು ಸಿಗುವ ನಿರೀಕ್ಷೆ ಇದೆ. ಇಲ್ಲಿನ ಬಹುಮತ ಸ್ಥಾನ 64 ಆಗಿದೆ.
ಕೇರಳಂನಲ್ಲಿ ದೇಶದ ಕೊನೆಯ ಎಡರಂಗ ಸರ್ಕಾರವೂ ಪತನ? ನಾಳೆ ಹೊರ ಬೀಳಲಿದೆ ಫಲಿತಾಂಶ
ಪಶ್ಚಿಮ ಬಂಗಾಳದಲ್ಲಿ ನಿರಾಶೆ ಖಚಿತ
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯವಾದರೂ ಅಚ್ಚರಿ ಇಲ್ಲ. ಸಮೀಕ್ಷೆಗಳ ಪ್ರಕಾರ ಇಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಕೂಡ ಗೆಲ್ಲುವ ನಿರೀಕ್ಷೆ ಇಲ್ಲ. ಗೆದ್ದರೂ ಗರಿಷ್ಠ 3–5 ಸ್ಥಾನಗಳು ಮಾತ್ರ ಎಂದು ಹೇಳಿದೆ.