ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಸುಪ್ರೀಂ ಕೋರ್ಟ್‌ಗೆ ಇಂಡಿಯಾ ಒಕ್ಕೂಟದ ಮೆರವಣಿಗೆ ಇಂದು; ದೆಹಲಿಯಲ್ಲಿ ಬಿಗಿ ಭದ್ರತೆ, 6 ಮೆಟ್ರೋ ನಿಲ್ದಾಣ ಬಂದ್‌

INDIA Bloc Protest: ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಆಗ್ರಹಿಸಿ ದೆಹಲಿಯಲ್ಲಿ ಸೋಮವಾರ ಕಾಂಗ್ರೆಸ್‌ ನೇತೃತ್ವದಲ್ಲಿ ಮೆರವಣಿಗೆ ನಡೆಯಲಿದೆ. ಸುಪ್ರೀಂ ಕೋರ್ಟ್‌ಗೆ ನಡೆಯಲಿರುವ ಈ ಮೆವಣಿಗೆಯಲ್ಲಿ ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಕಾಂಗ್ರೆಸ್‌ ನಾಯಕರು ಭಾಗವಹಿಸಲಿದ್ದಾರೆ.

ಕಾಂಗ್ರೆಸ್‌ ನೇತೃತ್ವದ ಇಂಡಿಯಾ ಒಕ್ಕೂಟದ ಮೆರವಣಿಗೆ ಇಂದು

-

Ramesh Ballamoole
Ramesh Ballamoole Oct 12, 2026 9:03 AM

ದೆಹಲಿ, ಅ. 12: ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ (Gyanesh Kumar) ರಾಜೀನಾಮೆಗೆ ಆಗ್ರಹಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸಿಜೆಪಿ ಬಳಿಕ ಇದೀಗ ವಿಪಕ್ಷಗಳ ಇಂಡಿಯಾ ಒಕ್ಕೂಟ ಮತ್ತೊಂದು ಸುತ್ತಿನ ಹೋರಾಟಕ್ಕೆ ಸಜ್ಜಾಗಿದೆ. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ಸೋಮವಾರ (ಅಕ್ಟೋಬರ್‌ 12) ʼಚಲೋ ದಿಲ್ಲಿ-ಪ್ರಜಾಪ್ರಭುತ್ವಕ್ಕಾಗಿ ಮೆರವಣಿಗೆʼ (Chalo Delhi - March for Democracy) ಘೋಷಣೆಯಡಿ ಸುಪ್ರೀಂ ಕೋರ್ಟ್‌ಗೆ (Supreme Court) ಮೆರವಣಿಗೆ ನಡೆಸಲಿವೆ. ಈ ಹಿನ್ನೆಲೆಯಲ್ಲಿ ಸೆಂಟ್ರಲ್‌ ದಿಲ್ಲಿಯ 6 ಮೆಟ್ರೋ ಸೇಷನ್‌ ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ. ಅಕ್ಟೋಬರ್‌ 10ರ ಸಿಜೆಪಿ ಪ್ರತಿಭಟನೆ ಹಿನ್ನೆಲೆಯಲ್ಲಿ ದೆಹಲಿ ಮೆಟ್ರೋ ರೈಲ್‌ ಕಾರ್ಪೋರೇಷನ್‌ (DMRC) 45 ಮೆಟ್ರೋ ಸ್ಟೇಷನ್‌ ಸ್ಥಗಿತಗೊಳಿಸಿತ್ತು.

"ಭದ್ರತಾ ಕಾರಣಗಳಿಂದಾಗಿ ಅಕ್ಟೋಬರ್ 12ರ ಬೆಳಗ್ಗೆ 6ರಿಂದ ಸಂಜೆ 4ರವರೆಗೆ ದೆಹಲಿಯ 6 ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನವನ್ನು ಮುಚ್ಚಲಾಗುತ್ತದೆ. ಅದಾಗ್ಯೂ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಇಂಟರ್‌ಚೇಂಜ್ ಸೌಲಭ್ಯ ಲಭ್ಯವಿರುತ್ತದೆ" ಎಂದು ಡಿಎಂಆರ್‌ಸಿ ಪ್ರಕಟಣೆಯಲ್ಲಿ ತಿಳಿಸಿದೆ.

ದೆಹಲಿಯಲ್ಲಿ ಬಿಗಿ ಭದ್ರತೆ:



ಮೆಟ್ರೋ ಬಂದ್‌ ಮಾಡದಂತೆ ಸುಪ್ರೀಂ ಸೂಚನೆ

ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ವಾರದ ರಜಾದಿನವಾದ ಭಾನುವಾರವೂ ಕಲಾಪ ನಡೆಸಿ ಸ್ಪಷ್ಟ ನಿರ್ದೇಶನ ನೀಡಿ ಅಕ್ರಮವಾಗಿ ಯಾರನ್ನೂ ಬಂಧಿಸಬಾರದು, ಮೆಟ್ರೋ ಮತ್ತು ಇಂಟರ್‌ನೆಟ್‌ ಸೇವೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡೊಕೊಳ್ಳಬೇಕೆಂದು ದೆಹಲಿ ಪೊಲೀಸರಿಗೆ ನಿರ್ದೇಶನ ನೀಡಿತ್ತು.

ರಾಹುಲ್‌ ಭೇಟಿ ನಿರಾಕರಿಸಿದೆ ಸಿಜೆಐ

ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಭೇಟಿಗೆ ಮುಂದಾದ ರಾಹುಲ್‌ ಗಾಂಧಿ ಅವರಿಗೆ ತೀವ್ರ ನಿರಾಸೆಯಾಗಿದೆ. ರಾಹುಲ್‌ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭೇಟಿಯಾಗಲು ಸಮಯ ಕೋರಿದ್ದರು. ಆದರೆ ಈ ವಿಚಾರ ಈಗಾಗಲೇ ಸುಪ್ರೀಂ ಕೋರ್ಟ್‌ನ ಪರಿಶೀಲನೆಯಲ್ಲಿದೆ ಎಂಬ ಕಾರಣಕ್ಕೆ ಭಾನುವಾರ (ಅಕ್ಟೋಬರ್‌ 11) ಮುಖ್ಯ ನ್ಯಾಯಮೂರ್ತಿ ಭೇಟಿಯನ್ನು ನಿರಾಕರಿಸಿದರು.

ಮೆಟ್ರೋ ಸಂಚಾರ ಸಹಜ, ಜನರ ಮುಕ್ತ ಸಂಚಾರಕ್ಕೆ ಅವಕಾಶ: ದೆಹಲಿ ನಿರ್ಬಂಧಗಳ ಬಗ್ಗೆ ಸುಪ್ರೀಂ ಕೋರ್ಟ್‌ನ 5 ನಿರ್ದೇಶನಗಳು

ಸೋಮವಾರದ ಮೆರವಣಿಗೆ ಮಧ್ಯಾಹ್ನ 1.30ಕ್ಕೆ ಕನ್ನಾಟ್ ಪ್ಲೇಸ್-ಬರಾಖಂಬಾ ರಸ್ತೆ ಜಂಕ್ಷನ್‌ನಿಂದ ಆರಂಭವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿನ ಅಕ್ರಮಗಳು ಮತ್ತು ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಆಂದೋಲನದ ಒಂದು ಭಾಗವಾಗಿ ಈ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಕರ್ನಾಟಕ ಸೇರಿ ವಿವಿಧ ರಾಜ್ಯಗಳ ಕಾಂಗ್ರೆಸ್‌ ನಾಯಕರು ಇದರಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ರಾಹುಲ್‌ ಗಾಂಧಿ ಹೇಳಿದ್ದೇನು?

ಭಾನುವಾರ ಈ ಬಗ್ಗೆ ಎಕ್ಸ್‌ನಲ್ಲಿ ಮಾಹಿತಿ ನೀಡಿರುವ ರಾಹುಲ್‌ ಗಾಂಧಿ, ʼʼಶನಿವಾರ ದೇಶದ ಯುವಕರು ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ಬಂದರು. ಅವರು ದ್ವೇಷ ಅಥವಾ ಕೋಪದಿಂದಲ್ಲ, ಪ್ರೀತಿಯಿಂದ ಬಂದರು. ಆದರೆ ಅವರನ್ನು ಪೊಲೀಸರು ಮತ್ತು ಬಿಜೆಪಿ ಗೂಂಡಾಗಳು ಹೊಡೆದರು. ಇದು ನಮಗೆ ಬೇಕಾದ ಭಾರತವಲ್ಲ" ಎಂದು ಹೇಳಿದ್ದರು.

"ನರೇಂದ್ರ ಮೋದಿ, ಅಮಿತ್ ಶಾ, ಅಜಿತ್ ದೋವಲ್ ಮತ್ತು ಮೋಹನ್ ಭಾಗವತ್ ಭಾರತದ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ. ಈ ಹೇಡಿಗಳು ನಮ್ಮನ್ನು ಬೆದರಿಸಲಾರರು. ಅವರು ದಾರಿ ಬಿಟ್ಟು ಸರಿದುಹೋಗಲೇಬೇಕು. ನಾವು ಪ್ರೀತಿ, ಸಹೋದರತ್ವ ಮತ್ತು ದೇಶಭಕ್ತಿಯೊಂದಿಗೆ ಒಟ್ಟಾಗಿ ಮುನ್ನಡೆಯುತ್ತೇವೆ. ಭಯಪಡಬೇಡಿ. ನಾಳೆ ಇಡೀ ಭಾರತವೇ ಸುಪ್ರೀಂ ಕೋರ್ಟ್‌ನತ್ತ ಮೆರವಣಿಗೆ ನಡೆಸಲಿದೆ" ಎಂದಿದ್ದರು.

500ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದ ಕ್ರಮ ಖಂಡಿಸಿದ ಮಲ್ಲಿಕಾರ್ಜುನ ಖರ್ಗೆ

ದೆಹಲಿಗೆ ಕಾಂಗ್ರೆಸ್‌ ನಾಯಕರು ದೌಡು

ದೆಹಲಿಯಲ್ಲಿ ಕಾಂಗ್ರೆಸ್‌ ಆಯೋಜಿಸಿರುವ ಪ್ರತಿಭಟನೆಯಲ್ಲಿ ಕರ್ನಾಟಕದ ಎಲ್ಲ ಕೈ ಪಡೆಯ ಶಾಸಕರು ಮತ್ತು ಸಚಿವರು ಕಡ್ಡಾಯವಾಗಿ ಹಾಜರಾಗಬೇಕು ಎನ್ನುವ ಸಂದೇಶದ ಬೆನ್ನಲ್ಲೇ ಕಾಂಗ್ರೆಸ್‌ ನಾಯಕರು ದೆಹಲಿಗೆ ತೆರಳಿದ್ದಾರೆ.

ದೇಶದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.