ಮಾಘ ಮೇಳ 2026: ಮುಳ್ಳಿನ ಹಾಸಿಗೆ ಮೇಲೆ ಮಲಗಿದ ಕಾಂಟೆ ವಾಲೆ ಬಾಬಾ, ಇಲ್ಲಿದೆ ನೋಡಿ ವಿಡಿಯೊ
Magh Mela 2026: ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಾಘ ಮೇಳ 2026ರಲ್ಲಿ ಮುಳ್ಳುಗಳಿಂದ ತುಂಬಿದ ಹಾಸಿಗೆಯ ಮೇಲೆ ಮಲಗಿ ಭಕ್ತರಿಗೆ ದರ್ಶನ ನೀಡುತ್ತಿರುವ ಕಾಂಟೆ ವಾಲೆ ಬಾಬಾ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರ ಅನನ್ಯ ಸಾಧನೆ ಹಾಗೂ ದೃಢ ಸಂಕಲ್ಪದ ವಿಡಿಯೊ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮುಳ್ಳಿನ ಹಾಸಿಗೆ ಮೇಲೆ ಮಲಗಿರುವ ಕಾಂಟೆ ವಾಲೆ ಬಾಬಾ -
ಲಖನೌ, ಜ. 20: ಉತ್ತರ ಪ್ರದೇಶದ ಪ್ರಯಾಗ್‍ರಾಜ್‌ನಲ್ಲಿ (Prayagraj) ಮಾಘ ಮೇಳ (Magh Mela 2026) ನಡೆಯುತ್ತಿದ್ದು, ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸಂಗಮಿಸುವ ಸ್ಥಳದಲ್ಲಿ ಪವಿತ್ರ ಸ್ನಾನ ಮಾಡಲು ಪ್ರತಿದಿನ ಭಾರಿ ಜನಸಂದಣಿ ಕಂಡುಬರುತ್ತಿದೆ. 2025ರ ಕುಂಭಮೇಳದ ಸಮಯದಲ್ಲಿ ಕಂಡುಬಂದ ಜನಸ್ತೋಮದಂತೆ, ಈ ವರ್ಷದ ಮೇಳದಲ್ಲಿ ಕೂಡ ಭಾರಿ ಜನ ಸಂದಣಿ ಇದೆ. ಈ ಪ್ರದೇಶವು ಪ್ರಾರ್ಥನೆಗಳು, ಆಚರಣೆಗಳು ಮತ್ತು ಆಧ್ಯಾತ್ಮಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ.
ಇದೆಲ್ಲದರ ನಡುವೆ, ವ್ಯಕ್ತಿಯೊಬ್ಬರು ಮತ್ತೊಮ್ಮೆ ಎಲ್ಲರ ಗಮನ ಸೆಳೆದಿದ್ದಾರೆ. ಕಾಂಟೆ ವಾಲೆ ಬಾಬಾ ಎಂದೇ ಜನಪ್ರಿಯರಾಗಿರುವ ರಮೇಶ್ ಕುಮಾರ್ ಮಾಂಝಿ, ಚೂಪಾದ ಮುಳ್ಳಿನ ಹಾಸಿಗೆಯ ಮೇಲೆ ಮಲಗಿದ್ದಾರೆ. ಇದು ಅವರಿಗೇನು ಹೊಸದಲ್ಲ. ಜನರ ಶಾಂತಿ ಮತ್ತು ಸಂತೋಷಕ್ಕಾಗಿ ತೆಗೆದುಕೊಂಡ ಪ್ರತಿಜ್ಞೆಯ ಭಾಗವಾಗಿ ಅವರು ಕಳೆದ ಸುಮಾರು 40 ವರ್ಷಗಳಿಂದ ಈ ಪದ್ಧತಿಯನ್ನು ಅನುಸರಿಸುತ್ತಿದ್ದಾರೆ. ಕಳೆದ ವರ್ಷ ಮಹಾಕುಂಭ ಮೇಳದಲ್ಲಿ ವೈರಲ್ ಆದ ನಂತರ, ಮಾಂಝಿ ಈಗ ಮತ್ತೊಮ್ಮೆ ಮಾಘ ಮೇಳದ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದ್ದಾರೆ.
ಸ್ವರಕ್ಷಣೆಗಾಗಿ 2,500ಕ್ಕೂ ಹೆಚ್ಚು ಯುವಕರಿಗೆ ದೊಣ್ಣೆ ವಿತರಿಸಿದ ಉತ್ತರ ಪ್ರದೇಶ ಸಚಿವ
ಬಿಹಾರದ ಕಟಿಹಾರ್‌ನ ನಿವಾಸಿಯಾಗಿರುವ ಕಾಂಟೆ ವಾಲೆ ಬಾಬಾ ಪ್ರತಿಸಲ ಮಾಘ ಮೇಳ ಮತ್ತು ಕುಂಭಮೇಳಕ್ಕೆ ಹಾಜರಾಗುತ್ತಾರೆ. ಅವರು ಚೂಪಾದ ಮುಳ್ಳುಗಳಿಂದ ಮುಚ್ಚಿದ ಆಸನವನ್ನು ಸಿದ್ಧಪಡಿಸಿ, ಅದರ ಮೇಲೆ ಮಲಗಿ ಭಕ್ತರಿಗೆ ದರ್ಶನ ನೀಡುತ್ತಾರೆ. ದಿನವಿಡೀ ಅವರು ಡಮರು ವಾದ್ಯವನ್ನು ಬಾರಿಸುತ್ತ ಇರುತ್ತಾರೆ. ಅವರ ಸುತ್ತ ಜನರು ಸೇರಿಕೊಳ್ಳುತ್ತಿದ್ದು, ಇದನ್ನು ನೋಡಿದ ಅನೇಕರು ಅಚ್ಚರಿ ಮತ್ತು ಕುತೂಹಲಕ್ಕೆ ಒಳಗಾಗಿದ್ದಾರೆ.
ಇದು ಒಂದು ರೀತಿಯ ಧ್ಯಾನ. ಅತಿಯಾದ ನೋವು ಆಂತರಿಕ ಆಲೋಚನೆಗಳನ್ನು ತೆಗೆದುಹಾಕುತ್ತದೆ ಮತ್ತು ನಿಮ್ಮ ಮನಸ್ಸನ್ನು ನಿರಾಳವನ್ನಾಗಿ ಮಾಡುತ್ತದೆ. ಭಕ್ತಿಯ ಅತ್ಯಂತ ಕಷ್ಟದ ರೂಪ, ನೋವನ್ನು ಊಹಿಸಲೂ ಸಾಧ್ಯವಿಲ್ಲ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಇದು ಮನುಕುಲಕ್ಕೆ ಹೇಗೆ ಸಂತೋಷ ತರುತ್ತದೆ? ಇದರ ಬದಲು, ಅವರು ಯಾವುದಾದರೊಂದು ಕೌಶಲ್ಯವನ್ನು ಕಲಿತು ಅದರಿಂದ ಸ್ವಲ್ಪ ಹಣ ಸಂಪಾದಿಸಿ ಮಾನವೀಯತೆಗೆ ಸೇವೆ ಸಲ್ಲಿಸಬೇಕಿತ್ತು. ಇದಲ್ಲದಿದ್ದರೆ ಆಸ್ಪತ್ರೆಗಳಲ್ಲಿ ಅಥವಾ ಅನಾಥಾಶ್ರಮದಲ್ಲಿರುವ ಜನರಿಗೆ ಸಹಾಯ ಮಾಡಬಹುದಿತ್ತು. ಆದರೆ ಇಲ್ಲಿ ನಿಷ್ಪ್ರಯೋಜಕನಾಗಿ ಮಲಗಿದ್ದಾರೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ವಿಡಿಯೊ ವೀಕ್ಷಿಸಿ:
Meet 'Kanton Wale Baba' at Magh Mela who claims to be lying on a bed of thorns for past 4 decades.
— News Arena India (@NewsArenaIndia) January 17, 2026
He undertook the vow for welfare and happiness of mankind. pic.twitter.com/bOJuh9zHE3
ಇನ್ನು ಮಹಾ ಕುಂಭಮೇಳದಲ್ಲಿ ಸಮಯದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ್ದ ಕಾಂಟೆ ವಾಲೆ ಬಾಬಾ, ನಾನು ಗುರುವಿನ ಸೇವೆ ಮಾಡುತ್ತೇನೆ. ಗುರುಗಳು ನಮಗೆ ಜ್ಞಾನವನ್ನು ನೀಡಿದರು. ನಮಗೆ ಪೂರ್ಣ ಶಕ್ತಿಯನ್ನು ನೀಡಿದರು. ದೇವರ ಮಹಿಮೆಯೇ ನನಗೆ ಇದನ್ನೆಲ್ಲ ಮಾಡಲು ಸಹಾಯ ಮಾಡುತ್ತದೆ (ಮುಳ್ಳಿನ ಮೇಲೆ ಮಲಗುವುದು). ನಾನು ಕಳೆದ 40-50 ವರ್ಷಗಳಿಂದ ಪ್ರತಿ ವರ್ಷ ಈ ರೀತಿ ಮುಳ್ಳಿನ ಮೇಲೆ ಮಲಗುತ್ತೇನೆ. ಇದು ನನ್ನ ದೇಹಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂಬ ಕಾರಣಕ್ಕಾಗಿ ನಾನಿದನ್ನು ಮಾಡುತ್ತೇನೆ. ಅದು ನನಗೆ ಎಂದಿಗೂ ನೋವುಂಟು ಮಾಡುವುದಿಲ್ಲ. ನಾನು ಪಡೆಯುವ ದಕ್ಷಿಣೆಯಲ್ಲಿ ಅರ್ಧವನ್ನು ದಾನ ಮಾಡುತ್ತೇನೆ ಮತ್ತು ಉಳಿದದ್ದನ್ನು ನನ್ನ ಖರ್ಚುಗಳಿಗೆ ಬಳಸುತ್ತೇನೆ ಎಂದು ಹೇಳಿದ್ದರು.
ಅಂದಹಾಗೆ ಜನವರಿ 3ರಂದು ಪ್ರಯಾಗ್‌ರಾಜ್‌ನಲ್ಲಿ ಪ್ರಾರಂಭವಾದ ಮಾಘ ಮೇಳವು ಫೆಬ್ರವರಿ 15ರವರೆಗೆ ಮುಂದುವರಿಯುತ್ತದೆ. ಈ ಸಮಯದಲ್ಲಿ ಅನೇಕ ಭಕ್ತರು ಪವಿತ್ರ ಸ್ನಾನ ಮಾಡಲು ಸಂಗಮಕ್ಕೆ ಭೇಟಿ ನೀಡುತ್ತಾರೆ. ಮಕರ ಸಂಕ್ರಾಂತಿ ಮತ್ತು ಮೌನಿ ಅಮಾವಾಸ್ಯೆಯ ನಂತರ, ಜನವರಿ 23ರಂದು ಆಚರಿಸಲಾಗುವ ವಸಂತ ಪಂಚಮಿ ಮತ್ತು ಫೆಬ್ರವರಿ 1ರ ಮಾಘಿ ಪೂರ್ಣಿಮಾ, ಪ್ರಮುಖ ಸ್ನಾನದ ದಿನಗಳಲ್ಲಿ ಒಂದಾಗಿದೆ. ಮೇಳವು ಫೆಬ್ರವರಿ 15ರಂದು ಮಹಾ ಶಿವರಾತ್ರಿಯೊಂದಿಗೆ ಕೊನೆಗೊಳ್ಳುತ್ತದೆ.