ದೆಹಲಿ ಬಳಿಕ ಬಿಹಾರ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ದುರಂತ: ನಾಲ್ವರು ಸಾವು
ದೆಹಲಿಯ ಮಾಳವಿಯ ನಗರದ ರೆಸ್ಟೋರೆಂಟ್ ನಲ್ಲಿ ಬೆಂಕಿ ದುರಂತ ಸಂಭವಿಸಿ 21 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಇದೀಗ ಬಿಹಾರದ ಆಸ್ಪತ್ರೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ನಾಲ್ವರು ಸಾವನ್ನಪ್ಪಿದ್ದಾರೆ. ಮುಜಫರ್‌ಪುರ ಜಿಲ್ಲೆಯ ಪ್ರಸಾದ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಗುರುವಾರ ಬೆಂಕಿ ಕಾಣಿಸಿಕೊಂಡಿದೆ.
ಸಂಗ್ರಹ ಚಿತ್ರ -
ಬಿಹಾರ: ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ (bihar hospital) ಗುರುವಾರ ಬೆಂಕಿ (fire accident) ಕಾಣಿಸಿಕೊಂಡು ನಾಲ್ವರು ಸಾವನ್ನಪ್ಪಿದ್ದಾರೆ. ದೆಹಲಿಯ (delhi) ಮಾಳವೀಯ ನಗರದ ರೆಸ್ಟೋರೆಂಟ್‌ನಲ್ಲಿ ಬುಧವಾರ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಇದರಲ್ಲಿ ವಿದೇಶಿಯರು ಸೇರಿದಂತೆ 21 ಮಂದಿ ಸಾವನ್ನಪ್ಪಿದ್ದರು. ಈ ದುರಂತ ಸಂಭವಿಸಿದ ಮರುದಿನವೇ ಬಿಹಾರದ ಮುಜಫರ್‌ಪುರ ಜಿಲ್ಲೆಯ ಪ್ರಸಾದ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಬೆಂಕಿ ಕಾಣಿಸಿಕೊಂಡಿದ್ದು, ನಾಲ್ವರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಕೆಲವು ವರದಿಗಳ ಪ್ರಕಾರ ಐಸಿಯು ವಾರ್ಡ್‌ನಲ್ಲಿದ್ದ 10 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಆಸ್ಪತ್ರೆಯ ಐಸಿಯು ವಾರ್ಡ್ ನಲ್ಲಿ ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣ ತಿಳಿದುಬಂದಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಪ್ರಾಥಮಿಕ ತನಿಖೆ ವರದಿ ತಿಳಿಸಿದೆ.
ಗಲ್ಫ್ ಉದ್ವಿಗ್ನತೆ ಮಧ್ಯೆ ಕುವೈತ್ ವಿಮಾನ ನಿಲ್ದಾಣದ ಮೇಲೆ ಇರಾನ್ ಡ್ರೋನ್, ಕ್ಷಿಪಣಿ ದಾಳಿ: ಭಾರತೀಯ ಮೂಲದ ಪ್ರಜೆ ಸಾವು
ಈ ಕುರಿತು ಮಾಹಿತಿ ನೀಡಿರುವ ಮುಜಫರ್‌ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಬ್ರತ್ ಕುಮಾರ್ ಸೇನ್, ಮುಜಫರ್‌ಪುರ ಜಿಲ್ಲೆಯ ಪ್ರಸಾದ್ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ ಕಾಣಿಸಿಕೊಂಡು ಹಲವಾರು ಮಂದಿ ಸಾವನ್ನಪ್ಪಿದ್ದಾರೆ. ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷವೇ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ತಂಡಗಳು ಆಗಮಿಸಿದ್ದು, ಬೆಂಕಿಯನ್ನು ನಿಯಂತ್ರಿಸಿವೆ ಎಂದು ಹೇಳಿದರು.
ದೆಹಲಿಯ ಮಾಳವೀಯ ನಗರದ ಲೆಮನ್ ಗ್ರೀನ್ ರೆಸ್ಟೋರೆಂಟ್ ನಲ್ಲಿ ಬುಧವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡು 21 ಮಂದಿ ಸಾವನ್ನಪ್ಪಿದ ಮರುದಿನವೇ ಬಿಹಾರದಲ್ಲಿ ಈ ದುರಂತ ಸಂಭವಿಸಿದೆ. ಬೆಳಗ್ಗೆ 8.50ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ಪಕ್ಕದಲ್ಲಿದ್ದ ರೆಸ್ಟೋರೆಂಟ್ ಗೂ ವ್ಯಾಪಿಸಿಕೊಂಡಿತ್ತು. ಕಿರಿದಾದ ಪ್ರದೇಶದಲ್ಲಿದ ಇಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಪರದಾಡಬೇಕಾಯಿತು. ಈ ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದು. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಜಫರ್‌ಪುರ ಜಿಲ್ಲೆಯ ಪ್ರಸಾದ್ ಆಸ್ಪತ್ರೆಯಲ್ಲಿ ಸಂಭವಿಸಿದ ಬೆಂಕಿ ದುರಂತಕ್ಕೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಈ ಕುರಿತು ಸಾಮಾಜಿಕ ಮಾಧ್ಯಮದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ದುಃಖಿತ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ದೇವರು ಅಗಲಿದ ಆತ್ಮಗಳಿಗೆ ಶಾಂತಿ ನೀಡಲಿ ಮತ್ತು ಈ ಕಷ್ಟದ ಸಮಯದಲ್ಲಿ ಕುಟುಂಬಗಳಿಗೆ ಶಕ್ತಿ ನೀಡಲಿ ಎಂದು ಹೇಳಿರುವ ಅವರು, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದರು.
ದೇಶದ ಇತಿಹಾಸದಲ್ಲಿ ನಡೆದ ಅತೀ ಭೀಕರ ಅಗ್ನಿ ದುರಂತಗಳಿವು
ಸ್ಥಳೀಯ ಆಡಳಿತವು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಗಾಯಾಳುಗಳ ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ತಿಳಿಸಿದ್ದಾರೆ.