Air Pollution: ಭಾರತದಲ್ಲಿ ಸ್ವಚ್ಛ ಗಾಳಿಗೆ ಬರ- ನಿತ್ಯ ಬಲಿಯಾಗ್ತಿರುವ ಭಾರತೀಯರೆಷ್ಟು ಗೊತ್ತಾ?
ಭಾರತದ ನಗರಗಳಲ್ಲಿ ವಿಪರೀತ ವಾಯುಮಾಲಿನ್ಯ ಆಗುತ್ತಿದ್ದು ಇಲ್ಲಿನ ಜನರನ್ನು ವಾಯುಮಾಲಿನ್ಯದ ಅಪಾಯದಿಂದ ಪಾರು ಮಾಡಲು ಭಾರತ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಯನ್ನು ಪಾಲಿಸಲೇ ಬೇಕಾದ ಅನಿವಾರ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಮತ್ತು ಸಾರ್ವಜನಿಕ ಆರೋಗ್ಯ ತಜ್ಞೆ ಡಾ. ಸೌಮ್ಯ ಎಚ್ಚರಿಸಿದ್ದಾರೆ.
ವಾಯು ಮಾಲಿನ್ಯಕ್ಕೆ ಬಲಿಯಾಗುತ್ತಿದ್ದಾರೆ ಹಲವು ಭಾರತೀಯರು(ಸಾಂದರ್ಭಿಕ ಚಿತ್ರ) -
ನವದೆಹಲಿ: ವಿಶ್ವವನ್ನೇ ಕಾಡುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ವಾಯು ಮಾಲಿನ್ಯವೂ(Air Pollution) ಒಂದು. ಭಾರತವೂ(India) ಸಹ ಈ ಸಮಸ್ಯೆಯಿಂದ ಹೊರತಾಗಿಲ್ಲ. ನಮ್ಮ ದೇಶದ ಹಲವಾರು ನಗರಗಳು ಗಂಭೀರ ವಾಯುಮಾಲಿನ್ಯ ಸಮಸ್ಯೆಯಿಂದ ಕಂಗೆಟ್ಟಿದ್ದು ಇದರಿಂದಾಗಿ ಆ ನಗರಗಳಲ್ಲಿ ವಾಸಿಸುತ್ತಿರುವ ಜನರು ಗಂಭೀರ ಆರೋಗ್ಯ ಸಮಸ್ಯೆಗಳನ್ನು(Health Issues) ಎದುರಿಸುತ್ತಿರುವುದು ಕಳವಳಕಾರಿ ವಿಚಾರವೇ ಸರಿ.
ಭಾರತದ ಹಲವೆಡೆಗೆಳೆಲ್ಲಿ ಈ ವಾಯು ಮಾಲಿನ್ಯ ಸಮಸ್ಯೆ ಯಾವ ಪರಿಸ್ಥಿತಿಯನ್ನು ಮುಟ್ಟಿದೆ ಎಂದರೆ ಇದಕ್ಕ ಪರಿಹಾರ ಕಂಡುಕೊಳ್ಳಲಾಗದ ಸ್ಥಿತಿಗೆ ಈ ಸಮಸ್ಯೆ ಮುಟ್ಟಿದೆ ಎಂದರೆ ಇದರ ತೀವ್ರತೆಯನ್ನು ನಾವು ಊಹಿಸಿಕೊಳ್ಳಬಹುದಾಗಿದೆ. ವಾಯುಮಾಲಿನ್ಯ ಸಮಸ್ಯೆ ಸದ್ದಿಲ್ಲದ ಮಾರಿಯಂತೆ ಪ್ರತೀದಿನ ಸಾವಿರಾರು ಜೀವಗಳನ್ನು ಕೊಲ್ಲುತ್ತಿದೆ.
ಈ ಗಂಭೀರ ಸಮಸ್ಯೆಯ ಕುರಿತಾಗಿ ಮತ್ತು ಇದು ಉಂಟು ಮಾಡುತ್ತಿರುವ ದುಷ್ಪರಿಣಾಮಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಮಾಜಿ ಮುಖ್ಯ ವಿಜ್ಞಾನಿ ಮತ್ತು ಸಾರ್ವಜನಿಕ ಆರೋಗ್ಯ ತಜ್ಞೆ ಡಾ. ಸೌಮ್ಯ ಸ್ವಾಮಿನಾಥನ್(Dr Soumya Swaminathan) ಮಾಧ್ಯಮ ಸಂದರ್ಶನದಲ್ಲಿ ಹಲವಾರು ಗಂಭೀರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ತುರ್ತಾಗಿ ರಾಷ್ಟ್ರೀಯ ಸ್ವಚ್ಛ ವಾಯು ಮಂಡಳಿಯನ್ನು ರಚಿಸುವಂತೆ ಅವರು ಇದೇ ಸಂದರ್ಭದಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ. ವಿಷಯುಕ್ತ ಗಾಳಿಯಿಂದಾಗಿ ಜನರ ಶ್ವಾಸಕೋಶ, ಹೃದಯ ಮತ್ತು ಮಕ್ಕಳ ಬೆಳವಣಿಗೆ ಹೊಂದುತ್ತಿರುವ ಮೆದುಳಿನ ಮೇಲೆಯೂ ಗಂಭೀರ ಪರಿಣಾಮ ಬೀರುತ್ತಿರುವ ಬಗ್ಗೆಯೂ ಅವರೂ ಗಮನ ಸೆಳೆದಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಗೃಹ ಪ್ರವೇಶ ಆಚರಣೆಯಲ್ಲಿ ಗೋಮಾತೆ ಬದಲಿಗೆ ಆಟಿಕೆ ಹಸು: ಇದೇ ಮಾಡರ್ನ್ ಇಂಡಿಯಾ ಎಂದ ನೆಟ್ಟಿಗರು
ಭಾರತದಲ್ಲಿ ವಾಯು ಮಾಲಿನ್ಯ ಗಂಭೀರವಾದ ಮಟ್ಟಕ್ಕೆ ತಲುಪಿದ್ದು ಇದರಿಂದಾಗಿ ಹೃದಯಾಘಾತ, ಪಾರ್ಶ್ವವಾಯು, ಡಿಮೆನ್ಷಿಯಾ ಮತ್ತು ಕ್ಯಾನ್ಸರ್ ನಂತಹ ಗಂಭೀರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ ಎಂದು ಸ್ವಾಮಿನಾಥನ್ ಶಾಕಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನೊಂದು ಕಳವಳಕಾರಿ ವಿಚಾರವನ್ನು ಬಹಿರಂಗಗೊಳಿಸಿರುವ ಸ್ವಾಮಿನಾಥನ್, ಭಾರತದ ವಾಯು ಗುಣಮಟ್ಟವು ಡಬ್ಲ್ಯು.ಹೆಚ್.ಒ. ನಿಗದಿಪಡಿಸಿರುವ ಸುರಕ್ಷಿತ ಮಟ್ಟಕ್ಕಿಂತ ತುಂಬಾ ಕಡಿಮೆ ಇರುವ ವಿಚಾರನ್ನೂ ಸಹ ಅವರು ಹೊರಗೆಡಹಿದ್ದಾರೆ. ಜಾಗತಿಕ ವಾಯು ಸುರಕ್ಷಿತ ಮಟ್ಟ 5 ಯುಜಿ/ಎಂ3 ಆಗಿದ್ದು, ಭಾರತದಲ್ಲಿ ಈ ಮಟ್ಟ ಪಿಎಂ 2.5ಗೆ 40 ಯುಜಿ/ಎಂ3 ಇದ್ದು ಇದು ಜಾಗತಿಕ ಸುರಕ್ಷಾ ಮಟ್ಟಕ್ಕಿಂತ ಬಹಳ ದುರ್ಬಲವಾಗಿರುವುದು ನಿಜವಾಗಿಯೂ ಕಳವಳಕಾರಿ ವಿಚಾರವಾಗಿದೆ.
ನಿರಂತರವಾಗಿ ಕಲುಷಿತ ಗಾಳಿಯನ್ನು ಸೇವಿಸುವವರಲ್ಲಿ, ಅವರು ಧೂಮಪಾನಿಗಳಾಗಿಲ್ಲದಿದ್ದರೂ ಸಹ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ ಎಂದು ಅವರು ಹೇಳಿದ್ದಾರೆ. ‘ಇದು ದಿನವೊಂದಕ್ಕೆ 20 ಅಥವಾ 30 ಸಿಗರೇಟ್ ಗಳನ್ನು ಸೇದುವುದಕ್ಕೆ ಸಮ’ ಎಂದು ಸ್ವಾಮಿನಾಥನ್ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೇ ಈ ಸಮಸ್ಯೆಗೆ ನವಜಾತ ಶಿಶುಗಳು ಮತ್ತು ಮಕ್ಕಳು ಬಹಳ ಬೇಗನೆ ಒಳಗಾಗುತ್ತಾರಂತೆ.
ಮಕ್ಕಳ ತಜ್ಞೆಯೂ ಆಗಿರುವ ಸ್ವಾಮಿನಾಥನ್ ಹೇಳುವ ಪ್ರಕಾರ, ವಾಯು ಮಾಲಿನ್ಯವು ತನ್ನ ಪ್ರಭಾವವನ್ನು ತಾಯಿಯೊಬ್ಬಳ ಗರ್ಭಾವಸ್ಥೆಯಲ್ಲೇ ಬೀರುತ್ತದೆ, ಅಧ್ಯಯನಗಳ ಪ್ರಕಾರ ಕಡಿಮೆ ತೂಕದ ಶಿಶುಗಳ ಜನನ ಮತ್ತು ಅವಧಿಪೂರ್ವ ಶಿಶುಗಳ ಜನನ ಪ್ರಮಾಣ ಹೆಚ್ಚುವಲ್ಲಿ ವಾಯುಮಾಲಿನ್ಯದ ಕೊಡುಗೆ ಪ್ರಮುಖವಾಗಿದೆ. ‘ಇದು ಕೇವಲ ನವಜಾತ ಶಿಶುಗಳ ಶ್ವಾಸಕೋಶ ಬೆಳವಣಿಗೆಯ ಮೇಲೆ ಪ್ರಭಾವ ಬೀರುವುದು ಮಾತ್ರವಲ್ಲದೇ, ಮಿದುಳಿನ ಬೆಳವಣಿಗೆ ಮೇಲೆಯೂ ಇದು ದುಷ್ಪರಿಣಾಮವನ್ನು ಬೀರುತ್ತದೆ’ ಎಂದು ಸ್ವಾಮಿನಾಥನ್ ಆಘಾತಕಾರಿ ಮಾಹಿತಿಯನ್ನು ಹೊರಗೆಡಹಿದ್ದಾರೆ.
ಈ ಸುದ್ದಿಯನ್ನೂ ಓದಿ: WHO Alert: ಕಲುಷಿತ ಭಾರತೀಯ ಕೆಮ್ಮಿನ ಸಿರಪ್ ಬಗ್ಗೆ ಎಚ್ಚರ: ವಿಶ್ವ ಆರೋಗ್ಯ ಸಂಸ್ಥೆ
ಇಷ್ಟು ಮಾತ್ರವಲ್ಲದೇ, ಮನೆಯೊಳಗಿನ ವಾಯುಮಾಲಿನ್ಯವೂ ಸಹ ವಾತಾವರಣದ ಮಾಲಿನ್ಯದಷ್ಟೇ ಕೆಡುಕನ್ನುಂಟು ಮಾಡುತ್ತದೆ ಎಂಬುದು ಇವರ ಅಭಿಪ್ರಾಯವಾಗಿದೆ. ‘ಎಲ್.ಪಿ.ಜಿ. ದುಬಾರಿಯಾಗಿರುವ ಕಾರಣ ನಮ್ಮ ದೇಶದಲ್ಲಿ ಇಂದಿಗೂ ಹಲವಾರು ಮನೆಗಳಲ್ಲಿ ಅಡುಗೆ ಮಾಡಲು ಕಟ್ಟಿಗೆ ಒಲೆಗಳನ್ನು ಅಥವಾ ಬೆರಣಿಯನ್ನು ಬಳಸಲಾಗುತ್ತಿದೆ. ಇದರಿಂದಾಗಿ ಆ ಮನೆಯ ಮಹಿಳೆಯರು ಮತ್ತು ಮಕ್ಕಳು ಗಂಬೀರ ಸ್ವರೂಪದಲ್ಲಿ ವಾಯುಮಾಲಿನ್ಯದ ಪ್ರಕೋಪಕ್ಕೆ ತುತ್ತಾಗುತ್ತಿದ್ದಾರೆ.
ಸ್ಟೇಟ್ ಆಫ್ ಗ್ಲೋಬಲ್ ಏರ್ 2024 ವರದಿಗಳ ಪ್ರಕಾರ, 2021ರಲ್ಲಿ ಭಾರತದಲ್ಲಿ 5 ವರ್ಷಕ್ಕಿಂತ ಕೆಳಗಿನ ಪ್ರಾಯದ ಸುಮಾರು 1.7 ಲಕ್ಷ ಮಕ್ಕಳು ವಾಯು ಮಾಲಿನ್ಯದ ಕಾರಣದಿಂದ ಸಾವಿಗೀಡಾಗಿದ್ದಾರೆ. ಇದು ನಮ್ಮ ದೇಶದಲ್ಲಿ ಗಂಬೀರ ಸ್ವರೂಪದಲ್ಲಿರುವ ವಾಯು ಮಾಲಿನ್ಯದ ಸಮಸ್ಯೆಯ ತೀವ್ರತೆಯನ್ನು ಸೂಚಿಸುತ್ತದೆ ಎಂದು ಸ್ವಾಮಿನಾಥನ್ ಅಭಿಪ್ರಾಯಪಟ್ಟಿದ್ದಾರೆ.
ಸ್ವಚ್ಛ ಗಾಳಿಯ ಮೇಲೆ ಮಾಡುವಂತಹ ಹೂಡಿಕೆ ಕೇವಲ ನೈತಿಕತೆ ಅಥವಾ ವೈದ್ಯಕೀಯಕ್ಕೆ ಸಂಬಂಧಿಸಿದ ವಿಚಾರವಲ್ಲ, ಬದಲಿಗೆ ಆರ್ಥಿಕತೆಯ ದೃಷ್ಟಿಯಿಂದಲೂ ಇದು ಪ್ರಯೋಜನಕಾರಿಗಾಗಿದೆ. ‘ವಿಶ್ವ ಬ್ಯಾಂಕ್ ಎಸ್ಟಿಮೇಟ್ ಮಾಡಿರುವ ಪ್ರಕಾರ ವಾಯು ಮಾಲಿನ್ಯವನ್ನು ಸ್ವಚ್ಛಗೊಳಿಸುವ ವಿಚಾರದಲ್ಲಿ ಮಾಡುವ ಪ್ರತಿ ಒಂದು ಡಾಲರ್ ಹೂಡಿಕೆ ಆರು ಡಾಲರ್ ಪ್ರತಿಫಲವನ್ನು ನೀಡುತ್ತದೆ’ ಎಂದು ಆಕೆ ಹೇಳಿದ್ದಾರೆ.
ಭಾರತವು ವಾಯುಮಾಲಿನ್ಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದು, ಜನರ ಆರೋಗ್ಯ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ನಮ್ಮ ಸರಕಾರಗಳು ಪೂರಕವಾಗಿ ಕೆಲಸ ಮಾಡುತ್ತಿದೆ ಎಂದೂ ಸ್ವಾಮಿನಾಥನ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ. ಕೊನೆಯದಾಗಿ, ‘ನಾವೀಗ ಕಾರ್ಯಪ್ರವೃತ್ತರಾದರೆ, ಭಾರತದಲ್ಲಿ ಪ್ರತೀ ಮಗುವೂ ಸ್ವಚ್ಛ ಗಾಳಿಯನ್ನು ಉಸಿರಾಡಬಹುದು’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.