ತಮಿಳುನಾಡಿನಲ್ಲಿ ಸೋತು ಸೊರಗಿದ ಡಿಎಂಕೆಗೆ ಮತ್ತೊಂದು ಆಘಾತ; 9 ವರ್ಷಗಳ ಮೈತ್ರಿ ಮುರಿದುಕೊಂಡ ಎಂಡಿಎಂಕೆ
ತಮಿಳುನಾಡಿನ ವಿಧಾನ ಸಭಾ ಚುನಾವಣೆ ಬಳಿಕ ಮಾಜಿ ಮುಖ್ಯಮತ್ರಿ ಎಂ.ಕೆ. ಸ್ಟಾಲಿನ್ ಅವರ ಡಿಎಂಕೆ ಪಕ್ಷಕ್ಕೆ ಮತ್ತೊಂದು ಆಘಾತವಾಗಿದೆ. ಡಿಎಂಕೆ ಜೊತೆಗಿನ 9 ವರ್ಷಗಳ ಮೈತ್ರಿಯನ್ನು ಎಂಡಿಎಂಕೆಯು ಔಪಚಾರಿಕವಾಗಿ ಕೊನೆಗೊಳಿಸಿದೆ. ಎಂಡಿಎಂಕೆಯನ್ನು ದುರ್ಬಲಗೊಳಿಸಲು ಪ್ರಯತ್ನಗಳು ನಡೆಯುತ್ತಿರುವುದರಿಂದ ಡಿಎಂಕೆ ಜೊತೆಗಿನ ಮೈತ್ರಿಕೂಟದಿಂದ ಹೊರಬರುತ್ತಿರುವುದಾಗಿ ಎಂಡಿಎಂಕೆ ಹೇಳಿದೆ.
ಸಂಗ್ರಹ ಚಿತ್ರ -
ಚೆನ್ನೈ: ತಮಿಳುನಾಡು ವಿಧಾನ ಸಭಾ ಚುನಾವಣೆಯಲ್ಲಿ (tamil nadu assembly election) ತೀವ್ರ ಮುಖಭಂಗ ಅನುಭವಿಸಿದ್ದ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ (M.K. stalin) ಅವರ ಡಿಎಂಕೆ (DMK) ಪಕ್ಷಕ್ಕೆ ಇದೀಗ ಮತ್ತೊಂದು ಹೊಡೆತ ಬಿದ್ದಿದೆ. ಡಿಎಂಕೆ ಜೊತೆಗಿನ ಒಂಬತ್ತು ವರ್ಷಗಳ ಮೈತ್ರಿಯನ್ನು ಎಂಡಿಎಂಕೆ (MDMK) ಔಪಚಾರಿಕವಾಗಿ ಕೊನೆಗೊಳಿಸಿದೆ. ಇದಕ್ಕೆ ಕಾರಣವನ್ನು ತಿಳಿಸಿರುವ ಎಂಡಿಎಂಕೆಯು, ಪಕ್ಷವನ್ನು ದುರ್ಬಲಗೊಳಿಸಲು ಪ್ರಯತ್ನಗಳು ನಡೆಯುತ್ತಿದೆ. ಹೀಗಾಗಿ ಶನಿವಾರ ನಡೆದ ಪಕ್ಷದ ಸಾಮಾನ್ಯ ಮಂಡಳಿ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ಡಿಎಂಕೆ ಜೊತೆಗಿನ ಮೈತ್ರಿ ಕೊನೆಗೊಳಿಸುತ್ತಿರುವುದಾಗಿ ತಿಳಿಸಿದೆ.
ಆಡಳಿತಾರೂಢ ಟಿವಿಕೆ ನೇತೃತ್ವದ ರಂಗವನ್ನು ಸೇರುವುದಾಗಿ ತಿಳಿಸಿರುವ ಎಂಡಿಎಂಕೆಯು ತನ್ನ ನಿರ್ಣಯಗಳಲ್ಲಿ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಸರ್ಕಾರದ ಕಾರ್ಯಗಳಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಕಾಯ್ದುಕೊಳ್ಳುವುದು ಮತ್ತು ಮೇಕೆದಾಟು ಅಣೆಕಟ್ಟು ಯೋಜನೆಯಂತಹ ವಿಷಯಗಳಲ್ಲಿ ತಮಿಳುನಾಡಿನ ಹಕ್ಕುಗಳನ್ನು ರಕ್ಷಿಸುವುದು ಸೇರಿದಂತೆ ಪ್ರಮುಖ ಚುನಾವಣಾ ಭರವಸೆಗಳನ್ನು ಈಡೇರಿಸುವಲ್ಲಿ ಅದು ಹೆಜ್ಜೆ ಇಟ್ಟಿರುವುದನ್ನು ಸ್ವಾಗತಿಸಿದೆ.
3 ದಿನಗಳ ಅಧಿಕೃತ ಭೇಟಿಗಾಗಿ ದ್ವೀಪ ರಾಷ್ಟ್ರ ಸೀಶೆಲ್ಸ್‌ಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿಗೆ ಭವ್ಯ ಸ್ವಾಗತ
ಟಿವಿಕೆ ಮೈತ್ರಿಕೂಟಕ್ಕೆ ಸೇರುವ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಪಕ್ಷ ನೀಡಿಲ್ಲ. ಆದರೆ ಎಂಡಿಎಂಕೆಯನ್ನು ದುರ್ಬಲಗೊಳಿಸಲು ಪ್ರಯತ್ನಗಳು ನಡೆದಿವೆ. ಆದ್ದರಿಂದ ಡಿಎಂಕೆ ನೇತೃತ್ವದ ಮೈತ್ರಿಕೂಟದಿಂದ ಪಕ್ಷವು ಹೊರಬರಬೇಕಾಯಿತು ಎಂದು ತಿಳಿಸಿದೆ.
ಎಂಡಿಎಂಕೆಯ ಆರೋಪವನ್ನು ನಿರಾಕರಿಸಿರುವ ಡಿಎಂಕೆಯ ಸೈಯದ್ ಹಫೀಜುಲ್ಲಾ, ಎಂಡಿಎಂಕೆಯು ವಿಧಾನಸಭೆ ಮತ್ತು ಸಂಸತ್ತಿನಲ್ಲಿ ಪ್ರಾತಿನಿಧ್ಯ ಪಡೆಯಲು ಡಿಎಂಕೆ ಕಾರಣ ಎಂದು ಹೇಳಿದೆ.
ವೈಕೋ ಅವರ ಮಗ ದುರೈ ವೈಕೋ ಅವರನ್ನು ಎಂಡಿಎಂಕೆಯಲ್ಲಿ ಸೇರಿಸಿಕೊಂಡಿರುವುದು ಅದು ದುರ್ಬಲಗೊಳ್ಳಲು ಮುಖ್ಯ ಕಾರಣವಾಗಿದೆ. ವೈಕೋ ಅವರು ರಾಜವಂಶ ರಾಜಕೀಯವನ್ನು ವಿರೋಧಿಸುವವರು. ಆದರೆ ವೈಕೋ ಅವರನ್ನು ಪಕ್ಷಕ್ಕೆ ಸೇರಿಸಿರುವುದು ಅವರ ಈ ನಿಲುವಿಗೆ ವಿರುದ್ಧವಾಗಿದೆ ಎಂದು ಅವರು ತಿಳಿಸಿದರು.
ಎಂಡಿಎಂಕೆಯು ಡಿಎಂಕೆ ಮೈತ್ರಿಕೂಟದಿಂದ ಹೊರಬಂದಿರುವುದು ಪಕ್ಷಕ್ಕೆ ಬಹುದೊಡ್ಡ ಹೊಡೆತವಾಗಿದೆ. 2026ರ ವಿಧಾನಸಭಾ ಚುನಾವಣೆಯಲ್ಲಿ ಎಂಡಿಎಂಕೆಯ ಇಬ್ಬರು ಶಾಸಕರು ಡಿಎಂಕೆಯೊಂದಿಗೆ ಉಳಿಯುವುದಾಗಿ ಹೇಳಿ ಎಂಡಿಎಂಕೆಯ ಸಾಮಾನ್ಯ ಮಂಡಳಿ ಸಭೆಯನ್ನು ಬಹಿಷ್ಕರಿಸಿದರು.
ಎಂಡಿಎಂಕೆ ಔಪಚಾರಿಕವಾಗಿ ಟಿವಿಕೆ ಜೊತೆ ಹೊಂದಾಣಿಕೆ ಮಾಡಿಕೊಂಡರೂ ಆಡಳಿತ ಪಕ್ಷದ ಶಾಸಕಾಂಗ ಬಲವು ತಕ್ಷಣವೇ ಹೆಚ್ಚಾಗುವುದಿಲ್ಲ. ಇದರಿಂದ ಯಾವುದೇ ಕ್ಷೇತ್ರದಲ್ಲಿ ಉಪಚುನಾವಣೆಗಳು ನಡೆಯುವ ಸಾಧ್ಯತೆ ಇಲ್ಲ.
ಟಿವಿಕೆ ಸರ್ಕಾರದ ವಿಶ್ವಾಸ ಮತಯಾಚನೆಯ ವೇಳೆ ಎಂಡಿಎಂಕೆ ಪಕ್ಷವು ಗೈರುಹಾಜರಾಗಿದ್ದಾಗಲೇ ಅದು ಡಿಎಂಕೆಯಿಂದ ಬೇರ್ಪಡುವ ಸೂಚನೆ ಕಂಡು ಬಂದಿತ್ತು. ಇದರ ಬಳಿಕ ಎಂಡಿಎಂಕೆ ಮುಖ್ಯಸ್ಥ ವೈಕೊ, ಅವರ ಮಗ ಮತ್ತು ಸಂಸದ ದುರೈ ವೈಕೊ ಮುಖ್ಯಮಂತ್ರಿ ವಿಜಯ್ ಮತ್ತು ಹಿರಿಯ ಟಿವಿಕೆ ನಾಯಕರ ಜೊತೆ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ಎಂಡಿಎಂಕೆಯು ಡಿಎಂಕೆಯೊಂದಿಗೆ ಮೈತ್ರಿ ಮುರಿದುಕೊಳ್ಳುವುದು ಸ್ಪಷ್ಟವಾಗಿತ್ತು.
ಎಂಡಿಎಂಕೆ ಒಂದು ವೇಳೆ ಟಿವಿಕೆ ಜೊತೆ ಸೇರಿದರೆ ಅದು ಕಾಂಗ್ರೆಸ್, ವಿಸಿಕೆ, ಐಯುಎಂಎಲ್ ನೊಂದಿಗೆ ಆಡಳಿತರೂಢ ಪಕ್ಷಕ್ಕೆ ಬೆಂಬಲ ನೀಡಿದಂತಾಗುತ್ತದೆ. ಕಾಂಗ್ರೆಸ್ ಇಬ್ಬರು ಸಚಿವರು, ವಿಸಿಕೆ ಮತ್ತು ಐಯುಎಂಎಲ್ ಸಂಪುಟದಲ್ಲಿ ತಲಾ ಒಬ್ಬ ಸಚಿವರನ್ನು ಟಿವಿಕೆ ತನ್ನ ಸಂಪುಟ ಸಭೆಯಲ್ಲಿ ಹೊಂದಿದೆ. ಇದರೊಂದಿಗೆ ಸಿಪಿಐ ಮತ್ತು ಸಿಪಿಎಂ ಅಲ್ಪಸಂಖ್ಯಾತ ಟಿವಿಕೆ ಸರ್ಕಾರಕ್ಕೆ ಬಾಹ್ಯ ಬೆಂಬಲವನ್ನು ನೀಡುತ್ತಿದೆ.
ಕೋತಿಗಳಿಗೆ ಆಹಾರ ಹಾಕುತ್ತಿದ್ದಾಗ ಅವಘಡ: ಬೆಟ್ಟದ ಮೇಲಿನ ದೇವಾಲಯದಿಂದ ಬಿದ್ದು ಮಹಿಳೆ ದುರ್ಮರಣ
ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ. ಕರುಣಾನಿಧಿಯವರ ಶಿಷ್ಯನಾಗಿರುವ ವೈಕೋ ಅವರ ಜನಪ್ರಿಯತೆ ಹೆಚ್ಚುತ್ತಿದ್ದ ಕಾರಣ ಅವರು ಕರುಣಾನಿಧಿಯವರ ಪುತ್ರ ಎಂ.ಕೆ. ಸ್ಟಾಲಿನ್ ಅವರಿಗೆ ಸವಾಲೊಡ್ಡಬಹುದು ಎಂಬ ಕಾರಣಕ್ಕೆ 1993ರಲ್ಲಿ ಅವರನ್ನು ಡಿಎಂಕೆಯಿಂದ ಹೊರಹಾಕಲಾಗಿತ್ತು.