ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʼʼಅರುಣಾಚಲ ಪ್ರದೇಶ ಯಾವತ್ತಿದ್ದರೂ ಭಾರತಕ್ಕೆ ಸೇರಿದ್ದುʼʼ: ಚೀನಾಕ್ಕೆ ವಿದೇಶಾಂಗ ಸಚಿವಾಲಯದಿಂದ ತಿರುಗೇಟು

India Responds to China’s Objection: ಅರುಣಾಚಲ ಪ್ರದೇಶದ 27 ಸ್ಥಳಗಳು ಮತ್ತು ವೈಶಿಷ್ಟ್ಯಗಳನ್ನು ಭಾರತದ ಅಧಿಕೃತ ನಕ್ಷೆಯಲ್ಲಿ ಅವುಗಳ ಪ್ರಮಾಣಿತ ಹೆಸರಿಂದ ಗುರುತಿಸುವ ಭಾರತದ ಕ್ರಮಕ್ಕೆ ಚೀನಾ ಆಕ್ಷೇಪಣೆ ವ್ಯಕ್ತಪಡಿಸಿದೆ. ಇದೀಗ ಚೀನಾದ ನಡೆಯನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತಿರಸ್ಕರಿಸಿದೆ. ಅರುಣಾಚಲ ಪ್ರದೇಶದ ಕೆಲವು ಸ್ಥಳಗಳನ್ನು ಚೀನಾ ಪದೇ ಪದೆ ಮರುನಾಮಕರಣ ಮಾಡುತ್ತಿದೆ.

ಅರುಣಾಚಲ ಪ್ರದೇಶ ವಿಚಾರಕ್ಕೆ ಚೀನಾ ಆಕ್ಷೇಪ; ಭಾರತ ತಿರುಗೇಟು

ಸಾಂದರ್ಭಿಕ ಚಿತ್ರ -

Priyanka P
Priyanka P Aug 11, 2026 8:30 PM

ನವದೆಹಲಿ, ಆ. 11: ಅರುಣಾಚಲ ಪ್ರದೇಶದ (Arunachal Pradesh) 27 ಸ್ಥಳಗಳು ಮತ್ತು ವೈಶಿಷ್ಟ್ಯಗಳನ್ನು ಭಾರತದ ಅಧಿಕೃತ ನಕ್ಷೆಯಲ್ಲಿ ಅವುಗಳ ಪ್ರಮಾಣಿತ ಹೆಸರುಗಳಿಂದ ಗುರುತಿಸುವ ಭಾರತದ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚೀನಾದ ನಡೆಯನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯವು (Ministry of External Affairs) ತಿರಸ್ಕರಿಸಿದೆ. ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಅಂಗವಾಗಿದ್ದು, ಈ ವಾಸ್ತವವನ್ನು ಯಾವತ್ತೂ ಬದಲಾಯಿಸಲು ಸಾಧ್ಯವಿಲ್ಲ ಎಂದು ಮತ್ತೊಮ್ಮೆ ಪುನರುಚ್ಚರಿಸಿದೆ.

“ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಅಂಗ. ಇದು ಸತ್ಯವಾಗಿದ್ದು, ಯಾವುದೇ ಕಾರಣಕ್ಕೂ ಈ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಚೀನಾದ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದರು.

ಭಾರತದ ಭಾಗವಾಗಿರುವ ಅರುಣಾಚಲ ಪ್ರದೇಶದ ಕೆಲವು ಸ್ಥಳಗಳನ್ನು ಚೀನಾ ಪದೇ ಪದೆ ಮರುನಾಮಕರಣ ಮಾಡುತ್ತಿದೆ. ಕಳೆದ ವಾರ ಭಾರತದ ಅಧಿಕೃತ ನಕ್ಷೆಯಲ್ಲಿ ರಾಜ್ಯದ 27 ಸ್ಥಳಗಳು ಮತ್ತು ವೈಶಿಷ್ಟ್ಯಗಳನ್ನು ಅವುಗಳ ಪ್ರಮಾಣಿತ ಹೆಸರುಗಳಿಂದ ಔಪಚಾರಿಕವಾಗಿ ಗುರುತಿಸಲಾಗಿದೆ.

ಮತ್ತೆ ಬಾಲ ಬಿಚ್ಚಿದ ಚೀನಾ; ಭಾರತದತ್ತ ಮುಖ ಮಾಡಿ ಜೆ-20 ಯುದ್ಧ ವಿಮಾನಗಳ ನಿಯೋಜನೆ

ಅರುಣಾಚಲ ಪ್ರದೇಶದ ಸ್ಥಳಗಳಿಗೆ ಮರುನಾಮಕರಣ ಮಾಡುವ ಚೀನಾದ ಕ್ರಮವನ್ನು ಭಾರತ ಪ್ರತಿ ಬಾರಿಯೂ ಸ್ಪಷ್ಟವಾಗಿ ತಿರಸ್ಕರಿಸಿದೆ. ಅಂತಹ ಕ್ರಮಗಳು ವ್ಯರ್ಥ ಮತ್ತು ಅಸಂಬದ್ಧ ಎಂದು ಹೇಳಿದೆ. ರಾಜ್ಯವು ಈ ಹಿಂದೆಯೂ, ಈಗಲೂ, ಇನ್ನು ಮುಂದೆಯೂ ಯಾವಾಗಲೂ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯುತ್ತದೆ ಎಂಬ ನಿರಾಕರಿಸಲಾಗದ ವಾಸ್ತವವನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದೆ.

ಭಾರತದ ಅಧಿಕೃತ ನಕ್ಷೆಯಲ್ಲಿ ಔಪಚಾರಿಕವಾಗಿ ಗುರುತಿಸಲಾಗಿರುವ 27 ಸ್ಥಳಗಳಲ್ಲಿ ವಾಸ್ತವ ನಿಯಂತ್ರಣ ರೇಖೆ (LAC) ಉದ್ದಕ್ಕೂ ಇರುವ ಲಾಂಗ್ ಜು ಕೂಡ ಸೇರಿದೆ. 1959ರಲ್ಲಿ ಚೀನಾದ ಪಡೆಗಳು ಈ ಪ್ರದೇಶವನ್ನು ಪ್ರವೇಶಿಸಿದಾಗ ಭಾರತ–ಚೀನಾ ನಡುವೆ ಸಂಘರ್ಷ ಆರಂಭವಾಯಿತು.

27 ಸ್ಥಳಗಳನ್ನು ಗುರುತಿಸುವ ಭಾರತದ ಕ್ರಮವನ್ನು ಕಾನೂನುಬಾಹಿರ, ಅಮಾನ್ಯ ಮತ್ತು ಅನೂರ್ಜಿತ ಎಂದು ಚೀನಾ ಹೇಳಿತ್ತು. “ಭಾರತವು ಕಾನೂನುಬಾಹಿರವಾಗಿ ಸ್ಥಾಪಿಸಿರುವ ಎಂದು ಕರೆಯಲಾಗುವ ಅರುಣಾಚಲ ಪ್ರದೇಶವನ್ನು ಚೀನಾ ಮಾನ್ಯ ಮಾಡುವುದಿಲ್ಲ” ಎಂದು ಅಲ್ಲಿನ ವಿದೇಶಾಂಗ ಸಚಿವಾಲಯದ ವಕ್ತಾರ ಗುವೊ ಜಿಯಾಕುನ್ ಹೇಳಿದ್ದರು.

ಚೀನಾ ದೀರ್ಘಕಾಲದಿಂದ ಬಳಸುತ್ತಿರುವ ಹೆಸರನ್ನು ಪ್ರಮಾಣಿತ ಹೆಸರು ಎಂದು ಕರೆಯಲ್ಪಡುವ ಮೂಲಕ ಬದಲಾಯಿಸಲು ಪ್ರಯತ್ನಿಸುವ ಭಾರತದ ಕ್ರಮವು ಕಾನೂನುಬಾಹಿರ ಮತ್ತು ಅನೂರ್ಜಿತ ಎಂದು ಅವರು ವಿದೇಶಾಂಗ ಸಚಿವಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿತ್ತು. ಇದನ್ನು ಭಾರತವು ಇದೀಗ ಕಟುವಾಗಿ ಖಂಡಿಸಿದೆ.