ಅಸ್ಸಾಂನಲ್ಲಿ ಮುಂದವರಿದ ಮಳೆ ಅವಾಂತರ: ಭೀಕರ ಪ್ರವಾಹಕ್ಕೆ ಕೊಚ್ಚಿಹೋದ ರೈಲ್ವೆ ಹಳಿಗಳು; ಜನಜೀವನ ಅಸ್ತವ್ಯಸ್ತ
Assam Floods: ಅಸ್ಸಾಂನ ಪೂರ್ವ ಜಿಲ್ಲೆಗಳಾದ ಶಿವಸಾಗರ್, ಚರೈದೇವ್ ಮತ್ತು ಜೋರ್ಹಾಟ್‌ನಲ್ಲಿ ಭಾರಿ ಅವಾಂತರ ಸೃಷ್ಟಿಸಿರುವ ಪ್ರವಾಹದಿಂದ ಭಾರತೀಯ ರೈಲ್ವೆಯ ಮೂಲಸೌಕರ್ಯ ತೀವ್ರವಾಗಿ ಹಾನಿಗೊಳಗಾಗಿದೆ. ಚಾರೈಡಿಯೊ ಜಿಲ್ಲೆಯ ಸಿಮುಲ್ಗುರಿ ಜಂಕ್ಷನ್ ಮತ್ತು ಲಕ್ವಾ ನಿಲ್ದಾಣದ ನಡುವಿನ ರೈಲ್ವೆ ಹಳಿಯಲ್ಲಿ ದುರಸ್ತಿ ಕಾರ್ಯ ವೇಗವಾಗಿ ನಡೆಯುತ್ತಿದೆ.
ಅಸ್ಸಾಂನಲ್ಲಿ ಭಾರಿ ಪ್ರವಾಹ -
ದಿಸ್‌ಪುರ, ಆ. 1: ಅಸ್ಸಾಂನಲ್ಲಿ ಪ್ರವಾಹ ಪರಿಸ್ಥಿತಿ (Assam Floods) ಭೀಕರವಾಗಿ ಮುಂದುವರಿದಿದ್ದು, ಪೂರ್ವ ಜಿಲ್ಲೆಗಳಾದ ಶಿವಸಾಗರ್, ಚರೈದೇವ್ ಮತ್ತು ಜೋರ್ಹಾಟ್‌ನಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದೆ. ಇದರಿಂದ ಮೂಲ ಸೌಕರ್ಯಗಳ ಜತೆಗೆ ಭಾರತೀಯ ರೈಲ್ವೆಯ (Indian Railway) ಹಳಿಗಳು ತೀವ್ರವಾಗಿ ಹಾನಿಗೊಳಗಾಗಿವೆ. ಈಶಾನ್ಯ ಗಡಿನಾಡು ರೈಲ್ವೆಯ ಟಿನ್ಸುಕಿಯಾ ರೈಲ್ವೆ ವಿಭಾಗದ ವ್ಯಾಪ್ತಿಯಲ್ಲಿ ರೈಲು ಹಳಿಗಳು ಕೊಚ್ಚಿಹೋಗಿದ್ದರಿಂದ ಸಂಚಾರದಲ್ಲಿ ವ್ಯತ್ಯಯ ಕಂಡು ಬಂದಿದೆ.
ಜುಲೈ 19ರಂದು ಅಪ್ಪಳಿಸಿದ ಪ್ರವಾಹದ ಎರಡು ವಾರಗಳ ನಂತರ, ತಿನ್ಸುಕಿಯಾ ವಿಭಾಗದ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಧ್ವಂಸಗೊಂಡ ರೈಲ್ವೆ ಹಳಿಗಳನ್ನು ಪುನಃಸ್ಥಾಪಿಸಲು ರೈಲ್ವೆ ಎಂಜಿನಿಯರ್‌ಗಳು ಮತ್ತು ಕಾರ್ಮಿಕರು ಶ್ರಮಿಸುತ್ತಿದ್ದಾರೆ. ಪ್ರಸ್ತುತ ಶಿವಸಾಗರ್ ಜಿಲ್ಲೆಯಲ್ಲಿ ಪುನರ್‌ಸ್ಥಾಪನಾ ಕಾಮಗಾರಿ ನಡೆಯುತ್ತಿದೆ. ರೈಲ್ವೆ ಹಳಿಯನ್ನು ಸಾಧ್ಯವಾದಷ್ಟು ಬೇಗ ಪುನಃಸ್ಥಾಪಿಸಲು ರೈಲ್ವೆ ಇಲಾಖೆಯು ಹೆಚ್ಚಿನ ಸಂಖ್ಯೆಯಲ್ಲಿ ಸಿಬ್ಬಂದಿ ಹಾಗೂ ಯಂತ್ರೋಪಕರಣಗಳನ್ನು ನಿಯೋಜಿಸಿದೆ.
ಅಸ್ಸಾಂನಲ್ಲಿ ಪ್ರವಾಹಕ್ಕೆ ಕೊಚ್ಚಿ ಹೋದ ರೈಲ್ವೆ ಹಳಿಯ ದುರಸ್ತಿ:
Charaideo, Assam: Restoration work is underway on the damaged railway track between Simulguri Junction and Lakwa Station after a section was washed away by floods on July 19 pic.twitter.com/V7g8qYef1i
— IANS (@ians_india) July 30, 2026
ಮತ್ತೊಂದೆಡೆ, ಚಾರೈಡಿಯೊ ಜಿಲ್ಲೆಯ ಸಿಮುಲ್ಗುರಿ ಜಂಕ್ಷನ್ ಮತ್ತು ಲಕ್ವಾ ನಿಲ್ದಾಣದ ನಡುವಿನ ರೈಲ್ವೆ ಹಳಿಯಲ್ಲಿ ದುರಸ್ತಿ ಕಾರ್ಯ ವೇಗವಾಗಿ ನಡೆಯುತ್ತಿದೆ. ಈ ಮಾರ್ಗದಲ್ಲಿ ರೈಲು ಸೇವೆಗಳು ಶೀಘ್ರದಲ್ಲೇ ಪುನರಾರಂಭಗೊಳ್ಳಬಹುದು ಎಂದು ಸ್ಥಳೀಯರು ನಿರೀಕ್ಷಿಸಿದ್ದಾರೆ. ಆದರೆ ಹಾನಿಗೊಳಗಾದ ಹಳಿಗಳನ್ನು ಪುನಃಸ್ಥಾಪಿಸಲು ಇನ್ನೂ 3 ವಾರ ಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಅಸ್ಸಾಂ ಪ್ರವಾಹ: ಕರುವನ್ನು ರಕ್ಷಿಸಲು ಪ್ರವಾಹದಲ್ಲಿ ಜೀವದ ಹಂಗು ತೊರೆದು ಹೋರಾಡಿದ ವ್ಯಕ್ತಿ
ಜುಲೈ 19ರಂದು ರಾತ್ರಿ 9:45ರ ಸುಮಾರಿಗೆ ಡಿಖೋವ್ ಮತ್ತು ದಿರಾಕಾ ನದಿಗಳಲ್ಲಿ ಹಠಾತ್ ಪ್ರವಾಹದ ಉಕ್ಕಿ ಇಡೀ ಪ್ರದೇಶವನ್ನು ಮುಳುಗಿಸಿತು. ಸ್ವಲ್ಪ ಸಮಯದೊಳಗೆ, ಉಕ್ಕಿ ಹರಿದ ನೀರು 800 ಮೀಟರ್ ಉದ್ದದ ರೈಲು ಹಳಿಯನ್ನು ಕೊಚ್ಚಿಕೊಂಡು ಹೋಗಿತ್ತು.
ಈ ಭೀಕರ ಪ್ರವಾಹದಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹವು ಲೋನ್ಪುರಿಯಾ, ಭೋತೋರ್ಬರಿ, ದರಿಕಿಯಾಲ್, ಗೋಮೋಥ ಮತ್ತು ಅಭಯಪುರಿಯಾ ಸೇರಿ ಹಲವು ಗ್ರಾಮಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಮನೆಗಳು, ಕಟ್ಟಗಳು ಹಾನಿಗೊಳಗಾಗಿವೆ.
ಪ್ರವಾಹದಿಂದಾಗಿ ಈವರೆಗೆ ಮೃತಪಟ್ಟವರ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ನೂರಾರು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದೆ. ಏಳು ಪ್ರವಾಹ ಪೀಡಿತ ಜಿಲ್ಲೆಗಳಾದ ಶಿವಸಾಗರ್, ಚಾರೈಡಿಯೊ, ಗೋಲಾಘಾಟ್, ಜೋರ್ಹತ್, ನಾಗಾಂವ್, ಬಿಸ್ವಾನಾಥ್ ಮತ್ತು ಕಾಮರೂಪ್‌ನಲ್ಲಿ 3,00,031 ಜನರು ಇನ್ನೂ ಪ್ರವಾಹದಲ್ಲಿ ಸಿಲುಕಿದ್ದಾರೆ ಎಂದು ವಿಪತ್ತು ರಕ್ಷಣಾ ಪಡೆಗಳು ತಿಳಿಸಿವೆ.
ಕೇಂದ್ರದಿಂದ ಪರಿಹಾರದ ಭರವಸೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ (ಜುಲೈ 29) ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರೊಂದಿಗೆ ಪ್ರವಾಹ ಪರಿಸ್ಥಿತಿ ಮತ್ತು ನಡೆಯುತ್ತಿರುವ ಪರಿಹಾರ ಕಾರ್ಯಗಳ ಕುರಿತು ಚರ್ಚೆ ನಡೆಸಿದರು. ಮಾತುಕತೆಯ ವಿವರಗಳನ್ನು ಹಂಚಿಕೊಂಡ ಶರ್ಮಾ, ʼʼಗೃಹ ಸಚಿವರು ಪರಿಸ್ಥಿತಿಯ ಬಗ್ಗೆ ವಿಚಾರಿಸಿದರು ಮತ್ತು ಪುನರ್ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಸಹಾಯವನ್ನು ಭಾರತ ಸರ್ಕಾರವು ಮುಂದುವರಿಸಲಿದೆ ಎಂದು ಭರವಸೆ ನೀಡಿದ್ದಾರೆʼʼ ಎಂಬುದಾಗಿ ವಿವರಿಸಿದ್ದಾರೆ.