ಕೇರಳಂನ ಕ್ರೈಸ್ತ ಪ್ರಾರ್ಥನಾ ಮಂದಿರದಲ್ಲಿ ಹದಿಹರೆಯದ ಬಾಲಕನ ಮೇಲೆ ಹಲ್ಲೆ; ಶಿಕ್ಷಣ ಕೊಡಿಸುವುದಾಗಿ ಹೇಳಿ ಕರೆತಂದು ದೌರ್ಜನ್ಯ
Assault Allegations: ಕೇರಳಂನ ಪತ್ತನತಿಟ್ಟಂ ಜಿಲ್ಲೆಯ ಪ್ರಾರ್ಥನಾ ಮಂದಿರಲ್ಲಿ ಪಾದ್ರಿ ನೇತೃತ್ವದ ಕ್ರೈಸ್ತ ಸಂಘಟನೆಗೆ ಸಂಬಂಧಿಸಿದ ಸಂಸ್ಥೆಯ ಸಿಬ್ಬಂದಿ 17 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ -
ತಿರುವನಂತಪುರಂ, ಜೂ. 21: ಕೇರಳಂನ (Keralam) ಪತ್ತನಂತ್ತಿಟ್ಟ ಜಿಲ್ಲೆಯ ಓಮಳ್ಳೂರು ಪ್ರದೇಶದಲ್ಲಿರುವ ಕ್ರೈಸ್ತ ಪ್ರಾರ್ಥನಾ ಸಭಾಂಗಣದ ಹೊರಗೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪಾದ್ರಿ ನೇತೃತ್ವದ ಕ್ರೈಸ್ತ ಸಂಘಟನೆಗೆ ಸಂಬಂಧಿಸಿದ ಸಂಸ್ಥೆಯ ಸಿಬ್ಬಂದಿ 17 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು (BJP Workers) ಪ್ರತಿಭಟನೆ ನಡೆಸಿದ್ದಾರೆ. ಓಮಳ್ಳೂರಿನ ಎಲೋಹಿಮ್ ಗ್ಲೋಬಲ್ ಆರಾಧನಾ ಕೇಂದ್ರವು ಈ ಪ್ರಾರ್ಥನಾ ಸಭೆಯನ್ನು ಆಯೋಜಿಸಿತ್ತು.
ಎರಡೂ ಗುಂಪುಗಳು ಸಭಾಂಗಣದ ಹೊರಗೆ ಜಮಾಯಿಸಿದ್ದರಿಂದ, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಸಭೆಗೆ ಆಗಮಿಸಿದ ಭಕ್ತರು ಬೈಬಲ್‌ಗಳನ್ನು ಹಿಡಿದು ಹೊರಗೆ ನಿಂತು, ತಮಗೆ ಪ್ರವೇಶಿಸಲು ಮತ್ತು ಪೂಜೆ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು. ನಂತರ ಅವರನ್ನು ಆವರಣದೊಳಗೆ ಬಿಡಲಾಯಿತು, ಪ್ರಾರ್ಥನೆಗಳು ಮುಂದುವರಿಯಿತು.
ಎಲೋಹಿಮ್ ಗ್ಲೋಬಲ್ ಆರಾಧನಾ ಕೇಂದ್ರದ ಸಿಬ್ಬಂದಿ ಅಲ್ಲಿ ತಂಗಿದ್ದ ಹದಿಹರೆಯದವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪದ ಮೇಲೆ ಪೊಲೀಸ್ ತನಿಖೆ ನಡೆಯುತ್ತಿರುವ ಮಧ್ಯೆಯೇ ಈ ಪ್ರತಿಭಟನೆ ನಡೆದಿದೆ. ಮಕ್ಕಳ ಕಲ್ಯಾಣ ಸಮಿತಿಯ ಪ್ರಾಥಮಿಕ ವಿಚಾರಣೆಯಲ್ಲಿ ಕೇಂದ್ರದಲ್ಲಿರುವ ಇತರ ಮಕ್ಕಳು ಸಹ ಇದೇ ರೀತಿಯ ದೌರ್ಜನ್ಯಕ್ಕೊಳಗಾಗಿರಬಹುದು ಎಂಬ ಸೂಚನೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಚಿತ ಬಸ್ ಉದ್ಘಾಟನೆ ವೇಳೆ ಕೇರಳಂ ಸಚಿವೆ ಬಿಂದು ಕೃಷ್ಣ ತಲೆ ಮೇಲೆ ಬಿದ್ದ ಬಿಸಿ ಬಿಸಿ ಪಾಯಸ
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಅವರನ್ನು ಸಂಸ್ಥೆಯ ವ್ಯವಸ್ಥಾಪಕ ರೇಜಿ ಮತ್ತು ಉದ್ಯೋಗಿಗಳಾದ ಬೆನ್ನಿ ಮತ್ತು ಸಿಜು ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಇಡುಕ್ಕಿ ಜಿಲ್ಲೆಯ ಅನಕ್ಕರ ಮೂಲದ ಬಡ ಕುಟುಂಬವೊಂದರ ಬಾಲಕನ ಶಿಕ್ಷಣ ಮತ್ತು ಭವಿಷ್ಯದ ಉದ್ಯೋಗಕ್ಕೆ ಬೆಂಬಲ ನೀಡುವ ಭರವಸೆ ನೀಡಲಾಗಿತ್ತು.
ಹೀಗಾಗಿ ಕೆಲವು ತಿಂಗಳಿಂದ ಕೇಂದ್ರದಲ್ಲಿ ತಂಗಿದ್ದ. ಅವನಿಗೆ ಶೈಕ್ಷಣಿಕ ಬೆಂಬಲ ನೀಡಲಾಗಿಲ್ಲ ಮತ್ತು ಬದಲಾಗಿ ಸಂಸ್ಥೆಯಲ್ಲಿ ಕೆಲಸ ಮಾಡಲು ಒತ್ತಾಯಿಸಲಾಗಿದೆ ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಈ ಸಂಬಂಧ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಮತ್ತು ಭಾರತೀಯ ನ್ಯಾಯ ಸಂಹಿತಾದ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಿಜೆಪಿ ಮಹಿಳಾ ಕಾರ್ಯಕರ್ತರು ಸೇರಿ ಪ್ರತಿಭಟನಾಕಾರರು ಮಾತನಾಡಿ, ʼʼಧಾರ್ಮಿಕ ಪೂಜೆಯನ್ನು ವಿರೋಧಿಸುತ್ತಿಲ್ಲ. ಆದರೆ ಧಾರ್ಮಿಕ ಚಟುವಟಿಕೆಗಳ ಸೋಗಿನಲ್ಲಿ ನಡೆಸುತ್ತಿರುವ ಶೋಷಣೆ ಮತ್ತು ಕ್ರೌರ್ಯದ ವಿರುದ್ಧ ಆಂದೋಲನ ನಡೆಸುತ್ತಿದ್ದೇವೆʼʼ ಎಂದು ಹೇಳಿದರು. ಆರ್ಥಿಕ ಲಾಭಕ್ಕಾಗಿ ದುರ್ಬಲ ಜನರನ್ನು ವೃದ್ಧಾಶ್ರಮಗಳು ಮತ್ತು ಸಂಸ್ಥೆಗೆ ಸಂಬಂಧಿಸಿದ ಇತರ ಕೇಂದ್ರಗಳಿಗೆ ಕರೆತರಲಾಗುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.