ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕೊಲೆ ಯತ್ನ ಪ್ರಕರಣ: ಉತ್ತರ ಪ್ರದೇಶದಲ್ಲಿ ಟಿಎಂಸಿ ಮಾಜಿ ಶಾಸಕ ಅರೆಸ್ಟ್‌

Attempt to Murder Case: ಸುಲಿಗೆ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್‌ನ ಮಾಜಿ ಶಾಸಕರೊಬ್ಬರನ್ನು ಪಶ್ಚಿಮ ಬಂಗಾಳ ಪೊಲೀಸರ ತಂಡವು ಉತ್ತರ ಪ್ರದೇಶದಲ್ಲಿ ಬಂಧಿಸಿದೆ. 2025ರ ಜೂನ್ 6ರಂದು ದಾಸ್ ವಿರುದ್ಧ ಸುಲಿಗೆ, ಕ್ರಿಮಿನಲ್ ಬೆದರಿಕೆ ಮತ್ತು ಕೊಲೆಯತ್ನ ಸೇರಿ ಹಲವು ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಉತ್ತರ ಪ್ರದೇಶದಲ್ಲಿ ಟಿಎಂಸಿ ಮಾಜಿ ಶಾಸಕನ ಬಂಧನ

ಟಿಎಂಸಿ ಮಾಜಿ ಶಾಸಕ ಖೋಕೋನ್ ದಾಸ್ (ಸಂಗ್ರಹ ಚಿತ್ರ) -

Priyanka P
Priyanka P Jun 1, 2026 6:52 PM

ಲಖನೌ, ಜೂ. 1: ಸುಲಿಗೆ ಮತ್ತು ಕೊಲೆ ಯತ್ನ ಪ್ರಕರಣದಲ್ಲಿ ತೃಣಮೂಲ ಕಾಂಗ್ರೆಸ್‌ನ ಮಾಜಿ ಶಾಸಕರೊಬ್ಬರನ್ನು ಪಶ್ಚಿಮ ಬಂಗಾಳ (West Bengal) ಪೊಲೀಸರ ತಂಡವು ಉತ್ತರ ಪ್ರದೇಶದಲ್ಲಿ (Uttar Pradesh) ಬಂಧಿಸಿದೆ. ಪಶ್ಚಿಮ ಬಂಗಾಳದ ಬುರ್ದ್ವಾನ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಟಿಎಂಸಿ ಮಾಜಿ ಶಾಸಕ ಖೋಕೋನ್ ದಾಸ್ ಅವರನ್ನು ಉತ್ತರ ಪ್ರದೇಶದ ಪ್ರಯಾಗ್‌ರಾಜ್ ಜಿಲ್ಲೆಯ ಹಂಡಿಯಾ ಟೋಲ್ ಪ್ಲಾಜಾ ಬಳಿ ಬಂಧಿಸಲಾಯಿತು. ಸ್ಥಳೀಯ ಹಂಡಿಯಾ ಪೊಲೀಸರ ಸಹಾಯದಿಂದ ಬುರ್ದ್ವಾನ್ ಪೊಲೀಸರು ಈ ಕಾರ್ಯಾಚರಣೆಯನ್ನು ನಡೆಸಿದರು (Crime News).

2025ರ ಜೂನ್ 6ರಂದು ದಾಸ್ ವಿರುದ್ಧ ಸುಲಿಗೆ, ಕ್ರಿಮಿನಲ್ ಬೆದರಿಕೆ ಮತ್ತು ಕೊಲೆಯತ್ನ ಸೇರಿ ಹಲವು ಆರೋಪಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಹಲವು ದಿನಗಳಿಂದ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದರು.

ದಾಸ್ ದೆಹಲಿಯಿಂದ ಕೋಲ್ಕತ್ತಾಗೆ ಟೊಯೋಟಾ ಫಾರ್ಚೂನರ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬ ಮೂಲಗಳಿಂದ ಮಾಹಿತಿ ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸುಳಿವು ದೊರೆತ ಮೇರೆಗೆ ಅಧಿಕಾರಿಗಳು ಟೋಲ್ ಪ್ಲಾಜಾ ಬಳಿ ಕಾದು ಕುಳಿತು ವಾಹನ ಬಂದಾಗ ತಡೆದರು. ಎಸ್‌ಯುವಿಯಲ್ಲಿ ಪ್ರಯಾಣಿಸುತ್ತಿದ್ದ ಇತರ ಮೂವರು ಪ್ರಯಾಣಿಕರೊಂದಿಗೆ ದಾಸ್ ಅವರನ್ನು ವಶಕ್ಕೆ ಪಡೆಯಲಾಯಿತು. ಈ ಬಂಧನದಿಂದ ಪಶ್ಚಿಮ ಬಂಗಾಳ ಪೊಲೀಸರು ಆರಂಭಿಸಿದ್ದ ಅಂತಾರಾಜ್ಯ ಶೋಧ ಕಾರ್ಯಾಚರಣೆ ಕೊನೆಗೊಂಡಿತು.

ಅಭಿಷೇಕ್ ಬ್ಯಾನರ್ಜಿ ಹಲ್ಲೆ ಪ್ರಕರಣ: ಐವರ ಬಂಧನದ ಬಳಿಕ ಸ್ಪೋಟಕ ಸತ್ಯ ಬಹಿರಂಗ

ಬಂಧನದ ನಂತರ, ದಾಸ್ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಟ್ರಾನ್ಸಿಟ್ ರಿಮಾಂಡ್ ಮಂಜೂರು ಮಾಡಿದ್ದು, ಮುಂದಿನ ತನಿಖೆಗಾಗಿ ಅವರನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲು ಪೊಲೀಸ್ ತಂಡಕ್ಕೆ ಅನುಮತಿ ನೀಡಿದೆ. ನಂತರ ಪೊಲೀಸ್ ತಂಡವು ಆರೋಪಿಯನ್ನು ಪಶ್ಚಿಮ ಬಂಗಾಳಕ್ಕೆ ಕರೆದೊಯ್ದಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜಕೀಯ ಹಿನ್ನೆಲೆ

ಖೋಕೋನ್ ದಾಸ್ ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಜನಪ್ರಿಯ ನಾಯಕರಾಗಿದ್ದರು. 2021ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ತೃಣಮೂಲ ಕಾಂಗ್ರೆಸ್ ಶಾಸಕನಾಗಿ ಬುರ್ದ್ವಾನ್ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಆದರೆ 2026ರ ವಿಧಾನಸಭಾ ಚುನಾವಣೆಯಲ್ಲಿ ಸೋತರು. ಸೋಲಿನ ಹೊರತಾಗಿಯೂ, ದಾಸ್ ಸ್ಥಳೀಯ ರಾಜಕೀಯ ಮತ್ತು ಪಕ್ಷದ ವ್ಯವಹಾರಗಳಲ್ಲಿ ಸಕ್ರಿಯರಾಗಿದ್ದರು.

ಮಾಜಿ ಶಾಸಕನ ವಿರುದ್ಧ ಸುಲಿಗೆ, ಬೆದರಿಕೆ ಮತ್ತು ಕೊಲೆಯತ್ನ ಸೇರಿ ಹಲವು ಆರೋಪಗಳನ್ನು ಎದುರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಆರೋಪದ ಮೇರೆಗೆ ಎಫ್‌ಐಆರ್ ದಾಖಲಾಗಿದ್ದು, ನಂತರದ ಶೋಧ ಕಾರ್ಯಾಚರಣೆ ಉತ್ತರ ಪ್ರದೇಶದಲ್ಲಿ ಅವರ ಬಂಧನಕ್ಕೆ ಕಾರಣವಾಯಿತು.