ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fake Identity: ದೇವಸ್ಥಾನದಲ್ಲಿ ನಕಲಿ ಗುರುತಿನಿಂದ ವಾಸಿಸುತ್ತಿದ್ದ 55 ವರ್ಷದ ಮುಸ್ಲಿಂ ವ್ಯಕ್ತಿಯ ಬಂಧನ

ಬಾಬಾ ಬೆಂಗಾಲಿ ಉರ್ಫ್ ಬಾಲಕ್‌ನಾಥ್ ಎಂದು ವೇಷ ತೊಟ್ಟು ಜನರನ್ನು ಯಾಮಾರಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಇಮಾಮುದ್ದೀನ್ ಅನ್ಸಾರಿ ಎಂಬ ಮುಸ್ಲಿಂ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ನಕಲಿ ಗುರುತಿನಡಿ ಎರಡು ವರ್ಷಗಳಿಂದ ದೇವಸ್ಥಾನದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ.

ಬಾಲಕ್‌ನಾಥ್ ಹೆಸರಲ್ಲಿ ದೋಖಾ; ಮುಸ್ಲಿಂ ವ್ಯಕ್ತಿಯ ಬಂಧನ

ನಕಲಿ ಬಾಬಾ ಬೆಂಗಾಲಿ ಉರ್ಫ್ ಬಾಲಕ್‌ನಾಥ್

Profile Sushmitha Jain Aug 5, 2025 6:25 PM

ಲಖನೌ: ಉತ್ತರ ಪ್ರದೇಶದ (Uttar Pradesh) ಶಾಮ್ಲಿಯ ಠಾಣಾ ಭವನ ವ್ಯಾಪ್ತಿಯ ಮಂತಿ ಹಸನ್‌ಪುರ ಗ್ರಾಮದ ಶನಿ ಮಂದಿರದಲ್ಲಿ ಬಾಬಾ ಬೆಂಗಾಲಿ ಉರ್ಫ್ ಬಾಲಕ್‌ನಾಥ್ ಎಂಬ ನಕಲಿ ಗುರುತಿನಡಿ (‌Fake Identity) ಎರಡು ವರ್ಷಗಳಿಂದ ವಾಸಿಸುತ್ತಿದ್ದ 55 ವರ್ಷದ ಪಶ್ಚಿಮ ಬಂಗಾಳದ (West Bengal) ಇಮಾಮುದ್ದೀನ್ ಅನ್ಸಾರಿ ಎಂಬ ಮುಸ್ಲಿಂ ವ್ಯಕ್ತಿಯನ್ನು ಬಂಧಿಸಲಾಗಿದೆ. ಠಾಣಾ ಭವನ ಪೊಲೀಸರಿಗೆ ಆತನ ನಿಜವಾದ ಗುರುತಿನ ಬಗ್ಗೆ ಮಾಹಿತಿ ದೊರೆತ ನಂತರ ವಿಚಾರಣೆಗಾಗಿ ವಶಕ್ಕೆ ಪಡೆಯಲಾಯಿತು.

ನಕಲಿ ದಾಖಲೆಗಳು ಪತ್ತೆ

ಶೋಧದ ವೇಳೆ, ಪೊಲೀಸರು ಇಮಾಮುದ್ದೀನ್‌ನಿಂದ ಮೂರು ಆಧಾರ್ ಕಾರ್ಡ್‌ಗಳು ಮತ್ತು ಒಂದು ಪ್ಯಾನ್ ಕಾರ್ಡ್‌ ವಶಪಡಿಸಿಕೊಂಡಿದ್ದಾರೆ. ಒಂದು ಆಧಾರ್ ಕಾರ್ಡ್‌ನಲ್ಲಿ 'ಬಂಗಾಲಿ ನಾಥ್' ಎಂಬ ಹೆಸರು ಮತ್ತು ಸಹರಾನ್‌ಪುರದ ದೇವಸ್ಥಾನದ ವಿಳಾಸವಿತ್ತು. ಇತರ ಎರಡು ಆಧಾರ್ ಕಾರ್ಡ್‌ಗಳು ಮತ್ತು ಪ್ಯಾನ್ ಕಾರ್ಡ್‌ನಲ್ಲಿ ಆತನ ನಿಜವಾದ ಹೆಸರು ಇಮಾಮುದ್ದೀನ್ ಅನ್ಸಾರಿ ಮತ್ತು ಪಶ್ಚಿಮ ಬಂಗಾಳದ ಅಲಿಪುರದ್ವಾರ ಜಿಲ್ಲೆಯ ವಿಳಾಸವಿತ್ತು. ಶಾಮ್ಲಿಯ ಎಸ್‌ಪಿ ರಾಮ್‌ಸೇವಕ್ ಗೌತಮ್, "ನಕಲಿ ದಾಖಲೆಗಳನ್ನು ತಯಾರಿಸಿದ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೈರಾನಾ ಕೋರ್ಟ್‌ನಲ್ಲಿ ಆತನನ್ನು ಹಾಜರುಪಡಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ" ಎಂದು ತಿಳಿಸಿದ್ದಾರೆ.

ತನಿಖೆ ಆರಂಭ

ಪೊಲೀಸರು ಇಮಾಮುದ್ದೀನ್‌ನ ಹಿನ್ನೆಲೆ ಮತ್ತು ವಿಳಾಸವನ್ನು ಖಚಿತಪಡಿಸಲು ಪಶ್ಚಿಮ ಬಂಗಾಳಕ್ಕೆ ತಂಡವನ್ನು ಕಳುಹಿಸಿದ್ದಾರೆ. ಆತನಿಗೆ ಈ ಹಿಂದೆ ಯಾವುದೇ ಅಪರಾಧದ ದಾಖಲೆ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು ಮತ್ತು ನಕಲಿ ಆಧಾರ್ ಕಾರ್ಡ್ ಹೇಗೆ ಪಡೆಯಲಾಯಿತು ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಆತನ ಹೆಸರನ್ನು ಅಧಿಕೃತ ದಾಖಲೆಗಳಲ್ಲಿ ಬದಲಾಯಿಸಲು ಇತರ ವ್ಯಕ್ತಿಗಳು ಸೇರಿಕೊಂಡಿದ್ದಾರಾ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ಸುದ್ದಿಯನ್ನು ಓದಿ: Self Harming Case: ಈ ಬಾರಿ ರಾಕಿ ಕಟ್ಟಲು ಆಗಲ್ಲ... ತಮ್ಮನಿಗೆ ಪತ್ರ ಬರೆದಿಟ್ಟು ಅಕ್ಕ ಆತ್ಮಹತ್ಯೆ

ಇದುವರೆಗೆ ಯಾವುದೇ ಸಂದಿಗ್ಧ ದಾಖಲೆಗಳು, ಬ್ಯಾಂಕ್ ಖಾತೆಗಳು ಅಥವಾ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಸಿಕ್ಕಿಲ್ಲ. ಈ ವಿಷಯವನ್ನು ಸಂಪೂರ್ಣವಾಗಿ ತನಿಖೆ ಮಾಡಲಾಗುವುದು ಮತ್ತು ಸತ್ಯಾಂಶಗಳ ಆಧಾರದ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಪಿ ಗೌತಮ್ ಹೇಳಿದ್ದಾರೆ.

ಹಿಂದೂ ಸಂಘಟನೆಗಳ ಆಕ್ರೋಶ

ಈ ಘಟನೆಯು ಸ್ಥಳೀಯ ಹಿಂದೂ ಸಂಘಟನೆಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾ ಮಠ ಮಂದಿರದ ಮುಖ್ಯಸ್ಥ ಭರತ್ ಭೂಷಣ್ ಈ ವಿಷಯವನ್ನು "ಅನಿರೀಕ್ಷಿತ ಮತ್ತು ಗಂಭೀರ" ಎಂದು ಕರೆದು, ಪೊಲೀಸರಿಂದ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ದೇವಸ್ಥಾನ ಸಂಸ್ಥೆಗಳು ಜಿಲ್ಲೆಯಾದ್ಯಂತ ಇಂತಹ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಲು ಆರಂಭಿಸುವುದಾಗಿ ತಿಳಿಸಿದ್ದಾರೆ. ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಸೇವಾ ಮುಖ್ಯಸ್ಥ ವಿನ್ನಿ ರಾಣಾ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಲು ರಾಣಾ ಕೂಡ ಈ ಕೃತ್ಯವನ್ನು ಖಂಡಿಸಿದ್ದಾರೆ. "ಗ್ರಾಮೀಣ ಪ್ರದೇಶಗಳಲ್ಲಿ ಸನ್ಯಾಸಿ ವೇಷದಲ್ಲಿ ಇರುವವರ ಮೇಲೆ ನಮ್ಮ ಕಾರ್ಯಕರ್ತರು ನಿಗಾ ಇಡಲಿದ್ದಾರೆ. ಸನಾತನದ ವಿರುದ್ಧ ಯಾವುದೇ ಷಡ್ಯಂತ್ರ ಯಶಸ್ವಿಯಾಗಲು ಬಿಡುವುದಿಲ್" ಎಂದು ಶಾಲು ರಾಣಾ ಹೇಳಿದ್ದಾರೆ.