ದೇವಸ್ಥಾನದಲ್ಲಿ ಮೀನು ಪ್ರಸಾದ ಸೇವಿಸಿದ ಬಂಗಾಳ ಸಿಎಂ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ವಿವಾದ ಅಂತ್ಯ
Suvendu Adhikari Eats Fish Prasad: ಕೋಲ್ಕತ್ತಾದ ಪ್ರಸಿದ್ಧ ಹಾಗೂ ಶತಮಾನಗಳ ಇತಿಹಾಸವಿರುವ ಕಾಳಿಘಾಟ್ ದೇವಸ್ಥಾನದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಮೀನಿನ ಊಟ ಸೇವಿಸಿದ್ದಾರೆ. ಬಂಗಾಳದ ಶಕ್ತಿ ಆರಾಧನೆಯಲ್ಲಿ ತಾಯಿ ಕಾಳಿಗೆ ಮೀನಿನ ನೈವೇದ್ಯ (ಮತ್ಸ್ಯ ಭೋಗ್) ಅರ್ಪಿಸುವುದು ಅತ್ಯಂತ ಪವಿತ್ರ ಸಂಪ್ರದಾಯವಾಗಿದೆ.
ದೇವಸ್ಥಾನದಲ್ಲಿ ಮೀನು ಪ್ರಸಾದ ಸೇವಿಸಿದ ಪಶ್ಚಿಮ ಬಂಗಾಳ ಸಿಎಂ ಸುವೇಂದು ಅಧಿಕಾರಿ -
ಕೋಲ್ಕತ್ತಾ, ಸೆ.11: ದೇಶದ ಇತರ ಭಾಗಗಳಲ್ಲಿ ದೇವಸ್ಥಾನದ ಆವರಣದಲ್ಲಿ ಮಾಂಸಾಹಾರ ಸೇವಿಸುವುದು ಧಾರ್ಮಿಕ ಮುಖಂಡರ ಆಕ್ರೋಶಕ್ಕೆ ಕಾರಣವಾಗುತ್ತದೆ. ಅಲ್ಲದೆ, ಮಾಂಸ ಮತ್ತು ಮೊಟ್ಟೆಗಳನ್ನು ಹೊರತುಪಡಿಸಿದ ಸಾತ್ವಿಕ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಲು ಒತ್ತಾಯಿಸಲಾಗುತ್ತದೆ. ಆದರೆ, ಪಶ್ಚಿಮ ಬಂಗಾಳದ (West Bengal) ಕೆಲವು ದೇವಸ್ಥಾನಗಳಲ್ಲಿ ಮಾಂಸಾಹಾರ ಸೇವನೆ ಮಾಡಲಾಗುತ್ತದೆ. ಇದು ಶತಮಾನಗಳ ಇತಿಹಾಸವಿರುವ ಒಂದು ಧಾರ್ಮಿಕ ಸಂಪ್ರದಾಯವಾಗಿದೆ. ಇದೀಗ ಬಂಗಾಳ ಸಿಎಂ ಸುವೇಂದು ಅಧಿಕಾರಿ (Suvendu Adhikari) ಅವರು ಮೀನಿನ ಊಟ ಸೇವಿಸಿದ್ದಾರೆ.
ಕೋಲ್ಕತ್ತಾದ ಪ್ರಸಿದ್ಧ ಹಾಗೂ ಶತಮಾನಗಳ ಇತಿಹಾಸವಿರುವ ಕಾಳಿಘಾಟ್ ದೇವಸ್ಥಾನದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಮೀನಿನ ಊಟ ಸೇವಿಸಿದ್ದಾರೆ. ಬಂಗಾಳದ ಶಕ್ತಿ ಆರಾಧನೆಯಲ್ಲಿ ತಾಯಿ ಕಾಳಿಗೆ ಮೀನಿನ ನೈವೇದ್ಯ (ಮತ್ಸ್ಯ ಭೋಗ್) ಅರ್ಪಿಸುವುದು ಅತ್ಯಂತ ಪವಿತ್ರ ಸಂಪ್ರದಾಯವಾಗಿದೆ. ಸಿಎಂ ಅವರ ಈ ಭೇಟಿ ಮತ್ತು ಅಲ್ಲಿನ ರಾಜಕೀಯ ಬೆಳವಣಿಗೆಗಳು ಈಗ ಭಾರಿ ಚರ್ಚೆಗೆ ಗ್ರಾಸವಾಗಿವೆ. ಯಾಕೆಂದರೆ, ದುರ್ಗಾ ಪೂಜೆಯ ಸಮಯದಲ್ಲಿ ಮಾಂಸಾಹಾರ ಸೇವಿಸುವ ಬಂಗಾಳಿ ಹಿಂದೂಗಳಿಗೆ ಅರ್ಚಕರೊಬ್ಬರು ಎಚ್ಚರಿಕೆ ನೀಡಿದ್ದರು.
ವಿಡಿಯೋ ನೋಡಿ
Fish tastes even better when it's part of a temple bhog. Bengalis will vouch for it.https://t.co/53ydIISFwM pic.twitter.com/IjdPQHDLlM
— Chandrajit Mitra (@chandrajit_) September 11, 2026
ಶಾಕ್ತ ಹಿಂದೂಗಳು ಅತ್ಯಂತ ಪವಿತ್ರವೆಂದು ಪರಿಗಣಿಸುವ ಕೌಶಿಕಿ ಅಮಾವಾಸ್ಯೆಯ ಸಂದರ್ಭದಲ್ಲಿ ಸುವೇಂದು ಅಧಿಕಾರಿ ಅವರು ಗುರುವಾರ (ಸೆ.10) ಸಂಜೆ ಕಾಳಿಘಾಟ್ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಅಲ್ಲಿ ಅವರು ನೆಲದ ಮೇಲೆ ಕುಳಿತು ಪ್ರಸಾದ ಸ್ವೀಕರಿಸುತ್ತಿರುವ ವಿಡಿಯೊವೊಂದು ವೈರಲ್ ಆಗಿತ್ತು. ಆ ಭೋಜನದ ತಟ್ಟೆಯಲ್ಲಿ ಕಾಳಿಘಾಟ್ ಪ್ರಸಾದದ ಅತ್ಯಂತ ಪ್ರಮುಖ ಆಕರ್ಷಣೆಯಾದ ಮೀನಿನ ಖಾದ್ಯವಿತ್ತು. ಇದರೊಂದಿಗೆ ಕರಿದ ಮೀನು (fried fish) ಮತ್ತು ಬಾಸಂತಿ ಪುಲಾವ್ (ಹಳದಿ ಬಣ್ಣದ ಅನ್ನ) ಕೂಡ ಇತ್ತು.
ಪಶ್ಚಿಮ ಬಂಗಾಳದಲ್ಲಿ 5 ರುಪಾಯಿಗೆ ಮೀನೂಟ: ಭರ್ಜರಿ ಯೋಜನೆ ಘೋಷಿಸಿದ ಮುಖ್ಯಮಂತ್ರಿ ಸುವೇಂದು ಅಧಿಕಾರಿ
ಕಾಳಿಘಾಟ್‌ನಲ್ಲಿ ಪ್ರಧಾನ ದೇವತೆಯಾದ ಕಾಳಿಗೆ, ಮೀನು ಮತ್ತು ಮೇಕೆ ಮಾಂಸವನ್ನು ಅರ್ಪಿಸುವ ಸಂಪ್ರದಾಯವಿದೆ. ನಂತರ ಭಕ್ತರು ನೈವೇದ್ಯವನ್ನು ಸೇವಿಸುತ್ತಾರೆ.
ಉತ್ತರ ಭಾರತದ ರಾಜ್ಯಗಳ ಸಸ್ಯಾಹಾರಿ ಆಹಾರ ಪದ್ಧತಿಯನ್ನು ಮಾಂಸಾಹಾರ ಪ್ರಿಯ ಬಂಗಾಳದ ಮೇಲೆ ಹೇರಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು, ಬಿಜೆಪಿಯನ್ನು ನಿರಂತರವಾಗಿ ಟೀಕಿಸುತ್ತಾ ಬಂದಿದ್ದವು. ಆದರೆ, ಈ ಆರೋಪಗಳನ್ನು ಮೊದಲಿನಿಂದಲೂ ತಿರಸ್ಕರಿಸುತ್ತಾ ಬಂದಿರುವ ಬಿಜೆಪಿ, ಇದೀಗ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರ ಕಾಳಿಘಾಟ್ ದೇವಸ್ಥಾನದ ಭೇಟಿಯ ಮೂಲಕ ಪ್ರತ್ಯುತ್ತರ ನೀಡಿದೆ.
ಕೌಶಿಕಿ ಅಮಾವಾಸ್ಯೆಯ ಅಂಗವಾಗಿ ಕಾಳಿಘಾಟ್ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ತಾಯಿ ಕಾಳಿಗೆ ಅರ್ಪಿಸಲಾಗುವ ಸಾಂಪ್ರದಾಯಿಕ ಮೀನಿನ ಪ್ರಸಾದವನ್ನು ಸವಿದಿರುವ ವಿಡಿಯೊವನ್ನು ಮುಂದಿಟ್ಟುಕೊಂಡಿರುವ ಬಿಜೆಪಿ, ಬಂಗಾಳದಲ್ಲಿ ದೀರ್ಘಕಾಲದಿಂದ ನಡೆಯುತ್ತಿದ್ದ ಸಸ್ಯಾಹಾರ ಮತ್ತು ಮಾಂಸಾಹಾರದ ರಾಜಕೀಯ ಚರ್ಚೆಗೆ ಮುಕ್ತಾಯ ಹಾಡಲು ಬಯಸಿದೆ.
ಈ ಕುರಿತು ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, "ಈ ವಿವಾದವು ಎಲ್ಲಿ ಕೊನೆಗೊಳ್ಳಬೇಕೋ ಅಲ್ಲೇ ಕೊನೆಗೊಳ್ಳಲಿ. ಕಾಳಿಘಾಟ್‌ನಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಬಂಗಾಳದ ನಂಬಿಕೆ, ಸಂಪ್ರದಾಯಗಳು ಮತ್ತು ಜೀವನ ವಿಧಾನವನ್ನು ಗೌರವಿಸುತ್ತಾ ಮಾತೆ ಕಾಳಿಯ ಸಾಂಪ್ರದಾಯಿಕ ಮತ್ಸ್ಯ ಭೋಗ್ ಅನ್ನು ಸ್ವೀಕರಿಸಿದ್ದಾರೆ. ಅವರ ನಾಯಕತ್ವದಲ್ಲಿ ಬಿಜೆಪಿ ಯಾವಾಗಲೂ ಬಂಗಾಳದ ಹಿತಾಸಕ್ತಿ, ಬಂಗಾಳದ ಸಂಪ್ರದಾಯಗಳು ಮತ್ತು ಬಂಗಾಳಕ್ಕೆ ಯಾವುದು ಸರಿಯೋ ಅದರ ಪರವಾಗಿ ದೃಢವಾಗಿ ನಿಲ್ಲುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.