ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಕ್ಯಾಂಟರ್ ಪಲ್ಟಿ: 12 ಮಂದಿ ಬಲಿ, 16ಕ್ಕೂ ಹೆಚ್ಚು ಮಂದಿಗೆ ಗಾಯ
Road Accident: ತೀರ್ಥಯಾತ್ರೆ ಮುಗಿಸಿ ವಾಪಸಾಗುತ್ತಿದ್ದ 12 ಯಾತ್ರಿಕರು ಅಪಘಾತಕ್ಕೆ ಬಲಿಯಾಗಿದ್ದಾರೆ. ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಕ್ಯಾಂಟರ್ ಉರುಳಿಬಿದ್ದ ಪರಿಣಾಮ 12 ಜನರು ಮೃತಪಟ್ಟು, 16ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬಾಗ್‌ಪತ್ ಜಿಲ್ಲೆಯ ಪೂರ್ವ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿದೆ.
ಉತ್ತರ ಪ್ರದೇಶದಲ್ಲಿ ನಡೆದ ಭೀಕರ ರಸ್ತೆ ಅಪಘಾತಕ್ಕೆ 12 ಮಂದಿ ಬಲಿ -
ಲಖನೌ, ಸೆ. 7: ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಕ್ಯಾಂಟರ್ ಉರುಳಿಬಿದ್ದ ಪರಿಣಾಮ 12 ಜನರು ಮೃತಪಟ್ಟು, 16ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಾಗ್‌ಪತ್ ಜಿಲ್ಲೆಯ ಪೂರ್ವ ಪೆರಿಫೆರಲ್ ಎಕ್ಸ್‌ಪ್ರೆಸ್‌ವೇಯಲ್ಲಿ ನಡೆದಿದೆ. ರಾಜಸ್ಥಾನದ ಬಗದ್ ಧಾಮ್‌ಗೆ ತೀರ್ಥಯಾತ್ರೆ ಮುಗಿಸಿ ಯಾತ್ರಿಕರು ಬುಡೌನ್‌ಗೆ ಹಿಂತಿರುಗುತ್ತಿದ್ದಾಗ ಈ ಅಪಘಾತ (Accident) ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಗ್‌ಪತ್ ಜಿಲ್ಲಾ ಕೇಂದ್ರದಿಂದ 15 ಕಿ.ಮೀ. ದೂರದಲ್ಲಿರುವ ಖೇಕ್ರಾ ಕೊಟ್ವಾಲಿ ಪ್ರದೇಶದ ಬಸಿ ಮತ್ತು ಬಡಾ ಗ್ರಾಮಗಳ ನಡುವೆ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬುಡೌನ್‌ನಿಂದ 32 ಭಕ್ತರನ್ನು ಕರೆದೊಯ್ಯುತ್ತಿದ್ದ ಕ್ಯಾಂಟರ್, ವಿಭಜಕಕ್ಕೆ ಡಿಕ್ಕಿ ಹೊಡೆದು ಮಗುಚಿ ಬಿದ್ದಿದೆ. ಈ ವೇಳೆ ಭಯಭೀತರಾದ ಯಾತ್ರಿಕರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸ್ಥಳದಲ್ಲೇ ಆರು ಜನರು ಮೃತಪಟ್ಟಿದ್ದರೆ ಉಳಿದ ಆರು ಮಂದಿ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು
ಮಾಹಿತಿ ತಿಳಿದ ಕೂಡಲೇ ಪೊಲೀಸರು ಮತ್ತು ತುರ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಿದರು. ಈ ಪೈಕಿ ಗಂಭೀರ ಗಾಯಗೊಂಡ ಹದಿನೆಂಟು ಜನರನ್ನು ನಂತರ ಮೀರತ್‌ನ ಉನ್ನತ ವೈದ್ಯಕೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೀರತ್‌ನ ವೈದ್ಯಕೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಆರು ಮಂದಿ ಮೃತಪಟ್ಟರು. ಇದರಿಂದಾಗಿ ಸಾವಿನ ಸಂಖ್ಯೆ 12ಕ್ಕೆ ಏರಿದೆ ಎಂದು ಎಸ್‌ಎಸ್‌ಪಿ ರಾಯ್ ಸೂರಜ್ ರಾಯ್ ದೃಢಪಡಿಸಿದರು.
ಮಧ್ಯಪ್ರದೇಶದಲ್ಲಿ ಭೀಕರ ಬಸ್ ಅಪಘಾತ: ಬೆಂಗಳೂರಿನ ಪೊಲೀಸ್ ಇನ್ಸ್ಪೆಕ್ಟರ್ ಸೇರಿ ನಾಲ್ವರ ಸಾವು
ಮೃತರನ್ನು ಮುನ್ನಿ ದೇವಿ (55), ಸುಗದ್ಪಾಲ್ (40), ಸಾಧು (60), ರಾಮೇಶ್ವರ ಯಾದವ್ (60), ಪ್ರೇಮ್ ಸಿಂಗ್ (40) ಮತ್ತು ಏಳು ವರ್ಷದ ಜಿತೇಂದ್ರ ಎಂದು ಗುರುತಿಸಲಾಗಿದೆ. ಉಳಿದ ಮೃತರ ಗುರುತು ಪತ್ತೆಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ವಾಹನವು ಇದ್ದಕ್ಕಿದ್ದಂತೆ ಪಲ್ಟಿಯಾದಾಗ ಹೆಚ್ಚಿನ ಪ್ರಯಾಣಿಕರು ನಿದ್ರಿಸುತ್ತಿದ್ದರು ಎಂದು ಗಾಯಗೊಂಡ ಪ್ರಯಾಣಿಕರಲ್ಲಿ ಒಬ್ಬರಾದ ಕುನ್ವರ್ಪಾಲ್ ಹೇಳಿದರು. “ನಾವೆಲ್ಲರೂ ಮಲಗಿದ್ದಾಗ ಹಿಂದಿನಿಂದ ಬಂದ ವಾಹನ ಡಿಕ್ಕಿ ಹೊಡೆದು ಕ್ಯಾಂಟರ್ ಇದ್ದಕ್ಕಿದ್ದಂತೆ ಪಲ್ಟಿಯಾಯಿತು. ಈ ವೇಳೆ ಎಲ್ಲರೂ ಜೋರಾಗಿ ಕೂಗಿಕೊಂಡರುʼʼ ಎಂದು ಅವರು ಹೇಳಿದರು.
ಹಿಂದಿನಿಂದ ಬರುತ್ತಿದ್ದ ವಾಹನವು ಕ್ಯಾಂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಅದು ಸಮತೋಲನ ತಪ್ಪಿ ಪಲ್ಟಿಯಾಗಿದೆ ಎಂದು ಚಾಲಕ ತಿಳಿಸಿದ್ದಾನೆ. ಪೊಲೀಸರು ಅಪಘಾತಕ್ಕೆ ಏನು ಕಾರಣ ಎಂಬ ಬಗ್ಗೆ ತನಿಖೆ ಮಾಡುತ್ತಿದ್ದಾರೆ.
ಯಾತ್ರಿಕರು ಬುಡೌನ್‌ನಲ್ಲಿರುವ ತಮ್ಮ ಗ್ರಾಮದಿಂದ ರಾಜಸ್ಥಾನಕ್ಕೆ ಪ್ರಯಾಣಿಸಿ, ಮನೆಗೆ ಹಿಂತಿರುಗುತ್ತಿದ್ದಾಗ ಬಾಗ್‌ಪತ್‌ನಲ್ಲಿ ಅಪಘಾತ ಸಂಭವಿಸಿದೆ. ಎಲ್ಲ ಪ್ರಯಾಣಿಕರು ಒಂದೇ ಗ್ರಾಮಕ್ಕೆ ಸೇರಿದವರು. ಗ್ರಾಮಸ್ಥರು ಸುಮಾರು ಎರಡು ದಶಕಗಳಿಂದ ರಾಜಸ್ಥಾನಕ್ಕೆ ತೀರ್ಥಯಾತ್ರೆಗಳನ್ನು ಕೈಗೊಳ್ಳುತ್ತಿದ್ದರು. ಇದುವರೆಗೂ ಪ್ರಯಾಣದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಆದರೀಗ ಭೀಕರ ಅಪಘಾತ ಸಂಭವಿಸಿರುವುದು ಗ್ರಾಮದಲ್ಲಿ ಮೌನ ಆವರಿಸಿದೆ.