Bigg Boss Kannada 13: ವಿಮಾನದಲ್ಲೇ ಶುರುವಾಯ್ತು ಜಟಾಪಟಿ; ಮಾಡರ್ನ್ ಮಹಾಕವಿಗೆ ಟಕ್ಕರ್ ಕೊಟ್ಟ ಗಗನ್ ಚಿನ್ನಪ್ಪ!
ಬಿಗ್ ಬಾಸ್ ಕನ್ನಡ 13ರ ಸ್ಪರ್ಧಿಗಳು ವಿಮಾನದಲ್ಲೇ ತೀವ್ರ ವಾಕ್ಸಮರಕ್ಕೆ ಆರಂಭಿಸಿದ್ದಾರೆ. ಮನೆ ಪ್ರವೇಶಿಸುವ ಮುನ್ನವೇ ನೀಡಲಾದ ಸೂಟ್‌ಕೇಸ್ ಟಾಸ್ಕ್ ಹದಿನಾರು ಸ್ಪರ್ಧಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಮಾಡರ್ನ್ ಮಹಾಕವಿ ಮಂಜನ ಅತಿಯಾದ ಮಾತಿಗೆ ಗಗನ್ ಚಿನ್ನಪ್ಪ, ಜಗ್ಗಾ ಮಮ್ಮಿ ಹಾಗೂ ತಾಂಡವ್ ರಾಮ್ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
-
ಬಿಗ್ ಬಾಸ್ ಕನ್ನಡ ಸೀಸನ್ 13ರ ಮನೆಗೆ 16 ಮಂದಿ ಸ್ಪರ್ಧಿಗಳನ್ನು ಕಿಚ್ಚ ಸುದೀಪ್ ಕಳುಹಿಸಿಕೊಟ್ಟಿದ್ದಾರೆ. ಈ ಬಾರಿ 'ಏವಿಯೇಷನ್ ಥೀಮ್'ನಲ್ಲಿ ಶೋ ಆರಂಭವಾಗಿದ್ದು, ಸ್ಪರ್ಧಿಗಳಿನ್ನೂ ವಿಮಾನದಲ್ಲೇ ಇದ್ದಾರೆ. ಯಾರೂ ಮನೆಯೊಳಗೆ ಕಾಲಿಟ್ಟಿಲ್ಲ; ಆದರೆ ವಿಮಾನದಲ್ಲೇ ಕುಳಿತು ಜಟಾಪಟಿ ಶುರುಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣವಾಗಿದ್ದು ಬಿಗ್ ಬಾಸ್ ನೀಡಿದ ಆ ಒಂದು ಟಾಸ್ಕ್!
ಅಡ್ಡ ಮಾತಾಡಬೇಡ ಎಂದ ಗಗನ್
"ಇಷ್ಟವಾಗದ ಸಹಪ್ರಯಾಣಿಕರ ಫೋಟೋವನ್ನು ಸೂಟ್‌ಕೇಸ್‌ಗೆ ಅಂಟಿಸಿ, ವಿಮಾನದಿಂದ ಹೊರಹಾಕಬೇಕು" ಎಂಬ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದಾರೆ. ಇದನ್ನು ಕೇಳಿದ ಸ್ಪರ್ಧಿಗಳು, "ಇದು ಅನಿರೀಕ್ಷಿತ" ಎಂದು ಬೆಚ್ಚಿಬಿದ್ದಿದ್ದಾರೆ. ಈ ವೇಳೆ ಗಗನ್ ಚಿನ್ನಪ್ಪ ಅವರು ಎಲ್ಲರೆದುರು ನಿಂತು ಮಾತನಾಡಲು ಮುಂದಾದಾಗ, ಮಧ್ಯ ಪ್ರವೇಶಿಸಿದ 'ಮಾಡರ್ನ್ ಮಹಾಕವಿ' ಮಂಜನಿಗೆ ಗಗನ್ ಖಡಕ್ ಕೌಂಟರ್ ಕೊಟ್ಟಿದ್ದಾರೆ. "ನನ್ನ ಸರದಿ ಬಂದಾಗ ನಾನು ಮಾತನಾಡುತ್ತೇನೆ, ಮಧ್ಯದಲ್ಲಿ ಅಡ್ಡ ಮಾತಾಡಬೇಡ" ಎಂದು ಎಚ್ಚರಿಕೆ ನೀಡಿದ್ದಾರೆ.
ಖಾಲಿ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದಂತೆ...
ನಂತರ ಮಂಜ, "ನನ್ನ ಪಾಡಿಗೆ ನಾನು ಮಾತನಾಡುತ್ತಿದ್ದೇನೆ..." ಎಂದು ಸಮರ್ಥಿಸಿಕೊಳ್ಳಲು ಮುಂದಾದಾಗ, ಗಗನ್ ಮತ್ತಷ್ಟು ಸಿಟ್ಟಿಗೆದ್ದು "ಮಾತನಾಡಬೇಡ!" ಎಂದು ಗದರಿದ್ದಾರೆ. ಇತ್ತ ಜಗ್ಗಾ ಮಮ್ಮಿ ಕೂಡ, "ಮಂಜಣ್ಣ ಮಿತಿ ಮೀರಿ ಆಡಬಾರದು, ಬೇರೆಯವರಿಗೆ ನೋವಾಗುವ ಹಾಗೆ ನಡೆದುಕೊಳ್ಳಬಾರದು..." ಎಂದು ಅಸಮಾಧಾನ ಹೊರಹಾಕಿದ್ದಾರೆ. ಆ ಬಳಿಕ ತಾಂಡವ್ ರಾಮ್, "ಖಾಲಿ ಡಬ್ಬಕ್ಕೆ ಕಲ್ಲು ಹಾಕಿ ಅಲ್ಲಾಡಿಸಿದಂತೆ ಗಡ ಗಡ ಅಂತ ಮಾತನಾಡುತ್ತಲೇ ಇದ್ದಾರೆ" ಎಂದು ಮಂಜನಿಗೆ ಟಾಂಗ್ ಕೊಟ್ಟಿದ್ದಾರೆ.
ನನಗೆ ಉರಿಸಿಯೇ ಅಭ್ಯಾಸ
ಇದಕ್ಕೆ ಪ್ರತ್ಯುತ್ತರ ನೀಡಿದ ಮಂಜ, "ನಾವು ಚಿನ್ನದ ಡಬ್ಬ, ಅವರಿಗೆ ಗೊತ್ತಾಗಿಲ್ಲ. ತೆಗಳುವವರಿಗೆಲ್ಲ ಚಿನ್ನದ ಬೆಲೆ ತಿಳಿಯಲ್ಲ..." ಎಂದಿದ್ದಾರೆ. ತಕ್ಷಣವೇ ಗಗನ್ ಚಿನ್ನಪ್ಪ, "ಜಾಸ್ತಿ ಉರಿದುಕೊಳ್ಳಬೇಡ ಚಿನ್ನ" ಎನ್ನಲು, ಅದಕ್ಕೆ ಮಂಜ "ನನಗೆ ಉರಿಸಿಯೇ ಅಭ್ಯಾಸ, ಧಗ ಧಗ ಧಗ..." ಎಂದು ಕಿಚಾಯಿಸಿದ್ದಾರೆ. ಆದರೆ ಗಗನ್ ಚಿನ್ನಪ್ಪ ಮಾತ್ರ, "ನೀನು ಎಷ್ಟೇ ಪ್ರಯತ್ನಿಸಿದರೂ ನನಗೇನೂ ತಟ್ಟಲ್ಲ..." ಎಂದು ತಿರುಗೇಟು ನೀಡಿದ್ದಾರೆ. ಒಟ್ಟಿನಲ್ಲಿ ಮೊದಲ ದಿನದ ಸಂಚಿಕೆಯಲ್ಲೇ ಭರ್ಜರಿ ಜಟಾಪಟಿ ನಡೆದಿರುವುದು ಸ್ಪಷ್ಟವಾಗಿದೆ.