ಸಿಜೆಪಿ ನಾಯಕರಿಗೆ ಬಿಗ್ ರಿಲೀಫ್; ಸೌರವ್ ದಾಸ್, ಅಶುತೋಷ್ ರಾಂಕಾ ಬಿಡುಗಡೆಗೆ ಕೋರ್ಟ್ ಸೂಚನೆ
CJP: ದೆಹಲಿಯ ಜಂತರ್ ಮಂತರ್ ಪ್ರವೇಶಿಸಿದ ಕಾರಣಕ್ಕೆ 7 ದಿನ ನ್ಯಾಯಾಂಗ ಬಂಧನದಲ್ಲಿದ್ದ ಕಾಕ್ರೋಚ್ ಜನತಾ ಪಾರ್ಟಿಯ ನಾಯಕರಾದ ಸೌರವ್ ದಾಸ್, ಅಶುತೋಷ್ ರಾಂಕಾ ಅವರಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ. ದೆಹಲಿ ನ್ಯಾಯಾಲಯ ಬುಧವಾರ (ಅಕ್ಟೋಬರ್ 21) ಅವರಿಬ್ಬರನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ.
ಸಾಂದರ್ಭಿಕ ಚಿತ್ರ -
ದೆಹಲಿ, ಅ. 21: ಅನುಮತಿ ಇಲ್ಲದಿದ್ದರೂ ದೆಹಲಿಯ ಜಂತರ್ ಮಂತರ್ ಪ್ರವೇಶಿಸಿದ ಕಾರಣಕ್ಕೆ 7 ದಿನ ನ್ಯಾಯಾಂಗ ಬಂಧನದಲ್ಲಿದ್ದ ಕಾಕ್ರೋಚ್ ಜನತಾ ಪಾರ್ಟಿಯ (CJP) ನಾಯಕರಾದ ಸೌರವ್ ದಾಸ್, ಅಶುತೋಷ್ ರಾಂಕಾ ಅವರಿಗೆ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ. ದೆಹಲಿ ನ್ಯಾಯಾಲಯ ಬುಧವಾರ (ಅಕ್ಟೋಬರ್ 21) ಅವರಿಬ್ಬರನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದೆ. ಸಿಜೆಪಿ ನಾಯಕರ ನ್ಯಾಯಾಂಗ ಬಂಧನವನ್ನು ಇನ್ನೂ 3 ದಿನಗಳಿಗೆ ವಿಸ್ತರಿಸಬೇಕು ಎನ್ನುವ ಪೊಲೀಸರ ಮನವಿಯನ್ನು ಸ್ಪೆಷಲ್ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ (SEM) ತಳ್ಳಿ ಹಾಕಿ ಬಿಡುಗಡೆಗೆ ಸೂಚನೆ ನೀಡಿದೆ.
ಸೌರವ್ ದಾಸ್, ಅಶುತೋಷ್ ರಾಂಕಾ ಅವರನ್ನು ಅಕ್ಟೋಬರ್ 13ರಂದು ವಶಕ್ಕೆ ಪಡೆಯಲಾಯಿತು. ಜಂತರ್ ಮಂತರ್‌ನ ಬೀಗ ಹಾಕಿದ ಗೇಟ್ ಅನ್ನು ಹತ್ತಿ ಅಕ್ರಮವಾಗಿ ಪ್ರವೇಶಿಸಿದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದರು. ಆರಂಭದಲ್ಲಿ ಅವರನ್ನು 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬಳಿಕ 2 ದಿನ ವಿಸ್ತರಿಸಲಾಗಿತ್ತು.
ಸಿಜೆಪಿ ನಾಯಕರ ಬಿಡುಗಡೆ:
🚨 SEM court has granted bail to Saurav Das and Ashutosh Ranka from judicial custody. https://t.co/OG3hKcgYDO
— Tejash (@lord_geopolitic) October 21, 2026
ಅಕ್ಟೋಬರ್ 19ರಂದು ವಿಸ್ತರಿಸಿದ 2 ದಿನಗಳ ಅವಧಿ ಅಕ್ಟೋಬರ್ 21ರಂದು ಮುಗಿದ ಹಿನ್ನೆಲೆಯಲ್ಲಿ ಸಿಜೆಪಿ ನಾಯಕರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.
ಕಸ್ಟಡಿ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ನಾಯಕರು
ಇದಕ್ಕೂ ಮೊದಲು ಸ್ಪೆಷಲ್ ಎಕ್ಸಿಕ್ಯೂಟಿವ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ತಮ್ಮ ನ್ಯಾಯಾಂಗ ಬಂಧನವನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಈ ಇಬ್ಬರು ನಾಯಕರು ಹಿಂಪಡೆದಿದ್ದರು. ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ಸುಬ್ರಮೊನಿಯಂ ಪ್ರಸಾದ್ ಅರ್ಜಿಯನ್ನು ವಿಚಾರಣೆಗೆ ಪರಿಗಣಿಸಲು ನಿರಾಕರಿಸಿದ್ದರಿಂದ ಅವರು ಈ ತೀರ್ಮಾನಕ್ಕೆ ಬಂದಿದ್ದರು.
ನ್ಯಾಯಾಂಗ ಕಸ್ಟಡಿ ವಿಸ್ತರಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಸಿಜೆಪಿಯ ಸೌರವ್ ದಾಸ್, ಆಶುತೋಷ್ ರಾಂಕಾ
ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ತಮ್ಮ ನ್ಯಾಯಾಂಗ ಬಂಧನವನ್ನು ವಿಸ್ತರಿಸಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಕೆಳಹಂತದ ಎಸ್ಇಎಂ ನ್ಯಾಯಾಲಯವು ಅವರು ಜಾಮೀನಿಗಾಗಿ ಸಲ್ಲಿಸಿದ್ದ ಖಾತರಿದಾರರ ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಲು ನಿರ್ಧರಿಸಿತ್ತು. ಹೀಗಾಗಿ ದೆಹಲಿ ಹೈಕೋರ್ಟ್ ನ್ಯಾ. ಸುಬ್ರಮೊನಿಯಂ ಪ್ರಸಾದ್ ಸದ್ಯಕ್ಕೆ ಅರ್ಜಿಯನ್ನು ಹಿಂಪಡೆಯುವಂತೆ ಸೂಚಿಸಿದ್ದರು.
ಸಿಜೆಪಿ ನಾಯಕರ ನಡೆ ಪ್ರಶ್ನಿಸಿದ ಕೋರ್ಟ್
ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ನಿಗದಿಪಡಿಸಿದ್ದ ಅನುಮತಿಯನ್ನು ರದ್ದುಗೊಳಿಸಿದ ಬಳಿಕವೂ ಅಲ್ಲಿಗೆ ಪ್ರವೇಶಿಸಲು ಯತ್ನಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಸೌರವ್ ದಾಸ್ ಮತ್ತು ಆಶುತೋಷ್ ರಾಂಕಾ ಅವರನ್ನು ದೆಹಲಿ ಹೈಕೋರ್ಟ್ ಬುಧವಾರ ತರಾಟೆಗೆ ತೆಗೆದುಕೊಂಡಿತ್ತು.
ಅನುಮತಿಯಿಲ್ಲದೆ ಬ್ಯಾರಿಕೇಡ್‌ಗಳನ್ನು ದಾಟಿ ಪ್ರತಿಭಟನೆ ನಡೆಸಲು ಮುಂದಾಗಿದ್ದ ನಾಯಕರ ವರ್ತನೆಯನ್ನು ನ್ಯಾಯಾಲಯ ಪ್ರಶ್ನಿಸಿದ್ದು, ಅರ್ಜಿದಾರರ ಪರ ವಕೀಲ ಅಭಿಕ್ ಚಿಮ್ನಿ ಅವರನ್ನು ಉದ್ದೇಶಿಸಿ, ಬ್ಯಾರಿಕೇಡ್‌ಗಳನ್ನು ಮುರಿದಾಗ ಇತರರೂ ಗುಂಪಾಗಿ ಸೇರಿಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿತ್ತು.
ಬ್ಯಾರಿಕೇಡ್ ಮುರಿಯುವುದೇಕೆ? ಸಿಜೆಪಿ ನಾಯಕರಿಗೆ ದೆಹಲಿ ಹೈಕೋರ್ಟ್ ತರಾಟೆ
ವಿದೇಶಗಳಲ್ಲಿ ನಡೆಯುತ್ತಿರುವ ಹಿಂಸಾಚಾರ ಮತ್ತು ಬೆಂಕಿ ಹಚ್ಚುವ ಘಟನೆಗಳನ್ನು ಉಲ್ಲೇಖಿಸಿದ ನ್ಯಾಯಾಲಯ, ಪ್ರತಿಭಟನೆ ಶಾಂತಿಯುತವಾಗಿರಬಹುದು ಎಂದು ಸಂಘಟಕರು ಹೇಳಿದರೂ, ಅನಗತ್ಯ ವ್ಯಕ್ತಿಗಳು ಗುಂಪಿಗೆ ಸೇರಿ ಪರಿಸ್ಥಿತಿಯನ್ನು ಹದಗೆಡಿಸುವ ಸಾಧ್ಯತೆಯಿರುತ್ತದೆ ಎಂಬುದಾಗಿ ಅಭಿಪ್ರಾಯಪಟ್ಟಿತ್ತು.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.