ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಾರ್ಖಂಡ್‌ನಲ್ಲಿ ಕಂಟೈನರ್ ಲಾರಿಗೆ ಆಟೋ ಡಿಕ್ಕಿ: 7 ಮಂದಿ ದುರ್ಮರಣ, ಹಲವರಿಗೆ ಗಂಭೀರ ಗಾಯ

Road Accident: ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯ ಚಾಂದ್ವಾ ಪ್ರದೇಶದ ಡೇರ್ಹ್ ತಂಗ್ವಾ ಘಾಟ್‌ನಲ್ಲಿ ಕಂಟೈನರ್ ಲಾರಿ ಮತ್ತು ಆಟೋರಿಕ್ಷಾ ನಡುವೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಲ್ಲಿ ಕನಿಷ್ಠ 7 ಮಂದಿ ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಪಘಾತಕ್ಕೆ ಅತಿವೇಗ ಅಥವಾ ಚಾಲಕನ ನಿರ್ಲಕ್ಷ್ಯ ಕಾರಣವೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಜಾರ್ಖಂಡ್‌ನಲ್ಲಿ ಭೀಕರ ರಸ್ತೆ ಅಪಘಾತ: 7 ಮಂದಿ ಸಾವು

ಜಾರ್ಖಂಡ್‌ನಲ್ಲಿ ನಡೆದ ರಸ್ತೆ ಅಪಘಾತ -

Profile
Sushmitha Jain Aug 15, 2026 11:13 PM

ರಾಂಚಿ, ಆ. 15: ಜಾರ್ಖಂಡ್‌ನ ಲತೇಹಾರ್ ಜಿಲ್ಲೆಯಲ್ಲಿ ಶನಿವಾರ (ಆಗಸ್ಟ್‌ 15) ಸಂಜೆ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಕಂಟೈನರ್ ಲಾರಿ ಮತ್ತು ಆಟೋರಿಕ್ಷಾ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕನಿಷ್ಠ 7 ಮಂದಿ ಸ್ಥಳದಲ್ಲೇ ದುರ್ಮರಣ ಹೊಂದಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಚಾಂದ್ವಾ (Chandwa) ಪೊಲೀಸ್ ಠಾಣಾ ವ್ಯಾಪ್ತಿಯ ಡೇರ್ಹ್ ತಂಗ್ವಾ ಘಾಟ್ (Derh Tangwa Ghat) ಪ್ರದೇಶದಲ್ಲಿ ಈ ಭೀಕರ ದುರ್ಘಟನೆ ಸಂಭವಿಸಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಆಟೋರಿಕ್ಷಾ ಚಾಂದ್ವಾ ಕಡೆಯಿಂದ ತೆರಳುತ್ತಿದ್ದಾಗ ಎದುರಿನಿಂದ ಅತಿ ವೇಗವಾಗಿ ಬಂದ ಕಂಟೈನರ್ ಲಾರಿ ನಿಯಂತ್ರಣ ತಪ್ಪಿ ನೇರವಾಗಿ ಡಿಕ್ಕಿ ಹೊಡೆದಿದೆ. ಮುಖಾಮುಖಿ ಡಿಕ್ಕಿಯ ತೀವ್ರತೆ ಎಷ್ಟಿತ್ತೆಂದರೆ, ಆಟೋರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಹಲವು ಪ್ರಯಾಣಿಕರು ಕಂಟೈನರ್ ವಾಹನದ ಅಡಿಯಲ್ಲಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ಭಾರೀ ಶಬ್ದ ಕೇಳಿ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ್ದು, ತಕ್ಷಣವೇ ಪೊಲೀಸರಿಗೆ ಹಾಗೂ ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿದರು. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ರಕ್ಷಿಸುವ ಕಾರ್ಯ ತ್ವರಿತವಾಗಿ ಆರಂಭವಾಯಿತು.

ಪೊಲೀಸ್ ರಕ್ಷಣಾ ಕಾರ್ಯಾಚರಣೆ ಹಾಗೂ ಪರಿಹಾರ ಕಾರ್ಯ

ಮಾಹಿತಿ ತಿಳಿದ ತಕ್ಷಣ ಚಾಂದ್ವಾ ಪೊಲೀಸ್ ಠಾಣಾಧಿಕಾರಿ ಮನೋರಂಜನ್ ಪ್ರಸಾದ್ ಸಿಂಗ್ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ ತುರ್ತು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡರು. ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ನಜ್ಜುಗುಜ್ಜಾದ ವಾಹನದ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದವರನ್ನು ಹರಸಾಹಸಪಟ್ಟು ಹೊರತೆಗೆಯಲಾಯಿತು. ಗಂಭೀರವಾಗಿ ಗಾಯಗೊಂಡವರನ್ನು ತಕ್ಷಣವೇ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗಳಿಗೆ ರವಾನಿಸಲಾಯಿತು.

ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದು, ಗಾಯಗೊಂಡಿರುವ ಹಲವರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ದುರ್ಘಟನೆಯಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರ ನಿಖರ ಗುರುತು ಪತ್ತೆ ಹಚ್ಚುವ ಕಾರ್ಯವನ್ನು ಜಿಲ್ಲಾಡಳಿತ ಪ್ರಸ್ತುತ ನಡೆಸುತ್ತಿದೆ. ಆಟೋರಿಕ್ಷಾದಲ್ಲಿ ಒಟ್ಟು ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಎಂಬ ನಿಖರ ಸಂಖ್ಯೆಯನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.

ಘಟನೆಯಿಂದಾಗಿ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡು ಹಲವು ವಾಹನಗಳು ಟ್ರಾಫಿಕ್ ಜಾಮ್‌ನಲ್ಲಿ ಸಿಲಿಕಿಕೊಳ್ಳುವಂತಾಯಿತು. ಪೊಲೀಸರು ಕ್ರೇನ್ ಮೂಲಕ ಅಪಘಾತಕ್ಕೀಡಾದ ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಭೀಕರ ಅಪಘಾತಕ್ಕೆ ಅತಿವೇಗ ಕಾರಣವೇ ಅಥವಾ ಚಾಲಕನ ನಿರ್ಲಕ್ಷ್ಯವೇ ಎಂಬುದನ್ನು ತಿಳಿಯಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಸಮಗ್ರ ತನಿಖೆ ಮುಂದುವರಿಸಿದ್ದಾರೆ.