ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ನಾಲ್ಕನೇ ತರಗತಿಯ ಪರೀಕ್ಷಾ ಪತ್ರಿಕೆಯಲ್ಲಿ ಹಿಂದೂ ದೇವರಿಗೆ ಅವಮಾನವಾಗುವ ಪ್ರಶ್ನೆ; ಮುಖ್ಯ ಸಿಬ್ಬಂದಿ ಅಮಾನತು

Controversial Question: ಛತ್ತೀಸ್‌ಗಢದಲ್ಲಿ ನಡೆದ ನಾಲ್ಕನೇ ತರಗತಿಯ ಮಧ್ಯಾವಧಿ ಪರೀಕ್ಷೆಯಲ್ಲಿ ಒಂದು ವಿವಾದಾತ್ಮಕ ಪ್ರಶ್ನೆಪತ್ರಿಕೆಯು ವಿದ್ಯಾರ್ಥಿಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಕಳೆದ ವರ್ಷ ಜನವರಿ 6 ರಂದು ನಡೆದ ಪರೀಕ್ಷೆಯ ನಂತರ, ಪತ್ರಿಕೆಯ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡವು ಮತ್ತು ವೈರಲ್ ಆದವು.

ನಾಲ್ಕನೇ ತರಗತಿಯ ಪರೀಕ್ಷಾ ಪತ್ರಿಕೆಯಲ್ಲಿ ವಿವಾದಾತ್ಮಕ ಪ್ರಶ್ನೆ

ನಾಲ್ಕನೇ ತರಗತಿಯ ಪರೀಕ್ಷಾ ಪತ್ರಿಕೆಯಲ್ಲಿ ವಿವಾದಾತ್ಮಕ ಪ್ರಶ್ನೆ -

Priyanka P
Priyanka P Jan 12, 2026 7:22 PM

ರಾಯ್ಪುರ: ಛತ್ತೀಸ್‌ಗಢದಲ್ಲಿ (Chhattisgarh) 4ನೇ ತರಗತಿಯ ಪರೀಕ್ಷೆಯೊಂದು ವಿವಾದಕ್ಕೆ ಕಾರಣವಾಗಿದೆ. ನಿಯಮಿತ ಮಧ್ಯಾವಧಿ ಇಂಗ್ಲಿಷ್ ಪರೀಕ್ಷೆಯಲ್ಲಿ ಒಂದು ಬಹು ಆಯ್ಕೆಯ (multiple-choice) ಪ್ರಶ್ನೆಯು ರಾಜ್ಯವ್ಯಾಪಿ ವಿವಾದವಾಗಿ ಮಾರ್ಪಟ್ಟಿದೆ. ರಾಯ್‌ಪುರ ವಿಭಾಗದ ಹಲವಾರು ಜಿಲ್ಲೆಗಳಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಬಳಸಲಾದ ಪ್ರಶ್ನೆ ಪತ್ರಿಕೆಯಲ್ಲಿ, ‘ಮೋನಾ ನಾಯಿಯ ಹೆಸರೇನು?’ ಎಂದು ಕೇಳಲಾಗಿತ್ತು. ನಾಲ್ಕು ಆಯ್ಕೆಗಳು ಬಾಲಾ, ಶೇರು, ರಾಮ್, ಮತ್ತು ಮೇಲಿನ ಯಾವುದೂ ಅಲ್ಲ ಎಂಬುದನ್ನು ನೀಡಲಾಗಿದೆ.

ಕಳೆದ ವರ್ಷ ಜನವರಿ 6 ರಂದು ನಡೆದ ಪರೀಕ್ಷೆಯ ನಂತರ, ಪತ್ರಿಕೆಯ ಫೋಟೋಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡವು ಮತ್ತು ವೈರಲ್ ಆದವು. ಸಾಕುಪ್ರಾಣಿಗಳ ಹೆಸರಿನ ಸಂದರ್ಭದಲ್ಲಿ ರಾಮ್ ಅನ್ನು ಬಳಸುವುದರಿಂದ ಧಾರ್ಮಿಕ ಭಾವನೆಗಳಿಗೆ ನೋವುಂಟಾಗುತ್ತದೆ ಎಂದು ಹೇಳಿದ ಹಿಂದೂ ಸಂಘಟನೆಗಳಿಂದ ತೀವ್ರ ಆಕ್ಷೇಪಣೆಗಳು ವ್ಯಕ್ತವಾಗಿದ್ದವು.

ನೌಕಾಪಡೆಯ ಮಾಜಿ ಮುಖ್ಯಸ್ಥ, ಪತ್ನಿಗೆ ನೋಟಿಸ್; SIRಗಾಗಿ ಹೆಚ್ಚಿನ ದಾಖಲೆ ಕೇಳಿದ ಚುನಾವಣಾ ಅಧಿಕಾರಿಗಳು!

ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸುವ ಕಾರ್ಯವನ್ನು ಸಹಾಯಕ ಯೋಜನಾ ಸಂಯೋಜಕ (APC) ಸಂಪದ ಬೋಸ್ ಅವರಿಗೆ ವಹಿಸಲಾಗಿತ್ತು. ಅವರು ಐದು ಶಿಕ್ಷಕರ ತಜ್ಞರ ಸಮಿತಿಯ ಮೂಲಕ ಪತ್ರಿಕೆಯನ್ನು ಸಿದ್ಧಪಡಿಸಿದರು. ವಿವಾದ ಭುಗಿಲೆದ್ದ ನಂತರ, ಬೋಸ್ ಅವರು ಹಂಚಿಕೊಂಡಿದ್ದ ಪಿಡಿಎಫ್‍ನಿಂದ ಯಾವುದೇ ಪತ್ರಿಕೆಗಳು ಇನ್ನೂ ಮುದ್ರಿಸಲ್ಪಟ್ಟಿಲ್ಲ ಎಂದು ಹೇಳಿಕೆ ನೀಡಿದ್ದು, ಅಂತಿಮ ಪ್ರಶ್ನೆಪತ್ರಿಕೆ ಹೇಗೆ ಮುದ್ರಣ ಹಾಗೂ ವಿತರಣೆ ಹಂತಕ್ಕೆ ತಲುಪಿತು ಎಂಬುದರ ಕುರಿತು ಪ್ರಶ್ನೆಗಳು ಉದ್ಭವಿಸಿವೆ.

ವಿಷಯ ಉಲ್ಬಣಗೊಳ್ಳುತ್ತಿದ್ದಂತೆ, ರಾಯ್‌ಪುರ ಜಿಲ್ಲಾ ಶಿಕ್ಷಣ ಅಧಿಕಾರಿ ಐದು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಿದರು. ಇದು ಪ್ರಶ್ನೆಪತ್ರಿಕೆಯ ತಯಾರಿ, ಮಿತೀಕರಣ (moderation) ಮತ್ತು ಅಂತಿಮ ಮುದ್ರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿತು. ವಿವಾದಾತ್ಮಕ ಆಯ್ಕೆಯು ವಿದ್ಯಾರ್ಥಿಗಳಿಗೆ ವಿತರಿಸಲಾದ ಪತ್ರಿಕೆಯಲ್ಲಿ ಸೇರಿಸಲ್ಪಟ್ಟಿದೆ ಎಂದು ವರದಿ ತೀರ್ಮಾನಿಸಿದೆ.

ತನಿಖೆಯಲ್ಲಿ ಸರ್ಕಾರದ ಪ್ರಾಥಮಿಕ ಶಾಲೆ, ನಕ್ತೀ (ಖಾಪ್ರಿ), ತಿಲ್ದಾದ ಮುಖ್ಯ ಶಿಕ್ಷಕಿ ಶಿಖಾ ಸೋನಿ ಅವರನ್ನು ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದವರೆಂದು ಗುರುತಿಸಲಾಗಿದೆ. ಹಾಗೆಯೇ ರಾಯ್ಪುರ್‌ನ ಫಾಫಡಿಹ್‌ನ SEGES ಹಿರಿಯ ಪ್ರೌಢಶಾಲೆಯ ಗುತ್ತಿಗೆ ಸಹಾಯಕ ಶಿಕ್ಷಕಿ ನಮ್ರತಾ ವರ್ಮಾ ಅವರನ್ನು ಮಾಡರೇಟರ್ ಎಂದು ಗುರುತಿಸಲಾಗಿದೆ. ಇಬ್ಬರೂ ಶಿಕ್ಷಕರು ಲಿಖಿತ ಸ್ಪಷ್ಟನೆ ನೀಡಿ ಕ್ಷಮೆಯಾಚಿಸಿದ್ದಾರೆ.

ಪ್ರಾಥಮಿಕ ತನಿಖೆಯ ನಂತರ, ಶಿಕ್ಷಣ ಇಲಾಖೆಯು ಪತ್ರಿಕೆಯನ್ನು ಸಿದ್ಧಪಡಿಸಿದ ಮುಖ್ಯೋಪಾಧ್ಯಾಯಿನಿಯನ್ನು ಅಮಾನತುಗೊಳಿಸಿದೆ. ಮಾಡರೇಟರ್ ಶಿಕ್ಷಕರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶಿಖಾ ಸೋನಿ ತಮ್ಮ ಹೇಳಿಕೆಯಲ್ಲಿ, RAMU ಎಂದು ಟೈಪ್ ಮಾಡಲು ಉದ್ದೇಶಿಸಿದ್ದರು. ಆದರೆ ಟೈಪ್ ಮಾಡುವಾಗ U ಅಕ್ಷರವನ್ನು ಬಿಟ್ಟುಬಿಡಲಾಯಿತು. ಇದರ ಪರಿಣಾಮವಾಗಿ RAM ಎಂದು ಮುದ್ರಿಸಲಾಯಿತು. ಅವರು ಇದನ್ನು ಉದ್ದೇಶಪೂರ್ವಕವಲ್ಲದ ದೋಷ ಎಂದು ಹೇಳಿ ಕ್ಷಮೆಯಾಚಿಸಿದರು. ಮಾಡರೇಟರ್ ನಮ್ರತಾ ವರ್ಮಾ ಅವರು ಸ್ವೀಕರಿಸಿದ ಸೆಟ್‌ನಲ್ಲಿನ ಆಯ್ಕೆಗಳನ್ನು ಅವು ಇದ್ದಂತೆಯೇ ಉಳಿಸಿಕೊಳ್ಳಲಾಗಿದೆ ಮತ್ತು ಮಾಡರೇಶನ್ ವೇಳೆ ಆ ದೋಷ ಗಮನಕ್ಕೆ ಬರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ವಿವಾದವು ಆಡಳಿತಾತ್ಮಕ ಜಗಳಕ್ಕೂ ಕಾರಣವಾಯಿತು. ಮಹಾಸಮುಂದ್ ಡಿಇಒ ವಿಜಯ್ ಲಹ್ರೆ ಅವರು ತಮ್ಮ ಜಿಲ್ಲೆಯಲ್ಲಿ ನಡೆದ ಅರ್ಧ ವಾರ್ಷಿಕ ಪರೀಕ್ಷೆಯ ಸಮಯದಲ್ಲಿ ಈ ವಿಷಯ ಬೆಳಕಿಗೆ ಬಂದಿತು ಎಂದು ತಿಳಿಸಿದ್ದಾರೆ. ಪ್ರಶ್ನೆ ಪತ್ರಿಕೆಯಲ್ಲಿ ರಾಮ್ ಎಂಬ ಉಲ್ಲೇಖ ಕಂಡುಬಂದ ತಕ್ಷಣವೇ ಆ ಆಯ್ಕೆಯನ್ನು ತೆಗೆದುಹಾಕಿ, ಪರ್ಯಾಯ ಪ್ರಶ್ನೆಪತ್ರಿಕೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು ಎಂದು ಅವರು ಹೇಳಿದರು. ಜೊತೆಗೆ, ತಮ್ಮ ಜಿಲ್ಲೆಯಲ್ಲಿ ತಯಾರಿಸಲಾದ ಪ್ರಶ್ನೆಪತ್ರಿಕೆ ಮುದ್ರಣಗೊಂಡದ್ದು ಅಲ್ಲ ಎಂಬುದನ್ನು ಅವರು ಸ್ಪಷ್ಟಪಡಿಸಿದ್ದಾರೆ.

ಇದು ಮುದ್ರಣ ದೋಷವಾಗಿದ್ದು, ಮುದ್ರಣಾಲಯವು ಬೇರೆ ಸೆಟ್‌ನ ಪ್ರಶ್ನೆಪತ್ರಿಕೆಯನ್ನು ಬಳಸಿದೆ ಎಂದು ಲಹ್ರೆ ಆರೋಪಿಸಿದರು. ಈ ಕುರಿತು ಮುದ್ರಣಾಲಯಕ್ಕೆ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, ಯಾರಾದ್ದಾದರೂ ಭಾವನೆಗಳಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸಿದರು. ಜೊತೆಗೆ, ತಾವು ಹಿಂದೂ ಧರ್ಮದವರಾಗಿದ್ದು, ಶ್ರೀರಾಮನ ಭಕ್ತನಾಗಿದ್ದೇನೆ, ಯಾರನ್ನೂ ಅವಮಾನಿಸುವ ಉದ್ದೇಶ ನನ್ನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಯ್‌ಪುರದ ಸಾರ್ವಜನಿಕ ಶಿಕ್ಷಣ ನಿರ್ದೇಶನಾಲಯ (ಡಿಪಿಐ) ಡಿಇಒ ವಿಜಯ್ ಲಹ್ರೆ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ, ಈ ಲೋಪದ ಬಗ್ಗೆ ವಿವರಣೆ ಕೇಳಿದೆ.