ಕರೂರು ಕಾಲ್ತುಳಿತ ಪ್ರಕರಣ; ಸಿಬಿಐನಿಂದ ವಿಜಯ್‌ಗೆ ಡ್ರಿಲ್, ವಿಚಾರಣೆಯಲ್ಲಿ ನಡೆದಿದ್ದೇನು?
Karur Stampede: ಕರೂರು ಕಾಲ್ತುಳಿತ ಪ್ರಕರಣದಲ್ಲಿ 41 ಮಂದಿ ಸಾವನ್ನಪ್ಪಿದ ಹಿನ್ನೆಲೆಯಲ್ಲಿ, ನಟ–ರಾಜಕಾರಣಿ ಹಾಗೂ ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ್ ದೆಹಲಿಯಲ್ಲಿ ಸಿಬಿಐ ವಿಚಾರಣೆಗೆ ಹಾಜರಾಗಿದ್ದಾರೆ. ಸುಪ್ರೀಂ ಕೋರ್ಟ್ ಆದೇಶದಂತೆ ಸಿಬಿಐ ತನಿಖೆ ನಡೆಸುತ್ತಿದ್ದು, ಕಾರ್ಯಕ್ರಮ ಆರಂಭ ಸಮಯ ಮತ್ತು ವಿಜಯ್ ಆಗಮನದ ನಡುವೆ ಸಂಭವಿಸಿದ ಏಳು ಗಂಟೆಗಳ ವಿಳಂಬವೇ ಜನಸಂದಣಿ ನಿಯಂತ್ರಣ ತಪ್ಪಲು ಕಾರಣವಾಯಿತೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ವಿಜಯ್ -
ನವದೆಹಲಿ: 41 ಜನರನ್ನು ಬಲಿ ಪಡೆದ ಕರೂರು ಕಾಲ್ತುಳಿತ (Karur Stampede) ಪ್ರಕರಣಕ್ಕೆ ಸಂಬಂಧಪಟ್ಟಂತೆ ನಟ-ತಮಿಳಿಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮುಖ್ಯಸ್ಥ, ನಟ ವಿಜಯ್(Actor-Politician Vijay) ಸೋಮವಾರ ದೆಹಲಿಯಲ್ಲಿ ಸಿಬಿಐ(CBI) ವಿಚಾರಣೆಗೆ ಹಾಜರಾಗಿದ್ದರು. ಸುಪ್ರೀಂ ಕೋರ್ಟ್ (Supreme Court) ಆದೇಶದಂತೆ ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸಿಬಿಐ ಈ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತ್ತು.
ತನಿಖೆಯ ಪ್ರಮುಖ ಅಂಶಗಳಲ್ಲೊಂದಾದ ಕಾರ್ಯಕ್ರಮ ಸ್ಥಳದಲ್ಲಿ ನಡೆದಿದೆ ಎನ್ನಲಾದ ಏಳು ಗಂಟೆಗಳ ವಿಳಂಬವನ್ನು ಪರಿಗಣಿಸಲಾಗಿದೆ. ಕಾರ್ಯಕ್ರಮ ನಿಗದಿತ ಸಮಯ ಮತ್ತು ವಿಜಯ್ ಅವರ ಆಗಮನದ ನಡುವೆ ಉಂಟಾದ ವ್ಯತ್ಯಾಸವೇ ಜನಸಂದಣಿ ಹೆಚ್ಚಾಗಲು ಮತ್ತು ನಿಯಂತ್ರಣ ಕಳೆದುಕೊಳ್ಳಲು ಕಾರಣವಾಗಿತೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸಿದ್ದಾರೆ.
ಜನಸಂದಣಿ ಸುಮಾರು 10,000ರಿಂದ 30,000ಕ್ಕೆ ಏರಿಕೆಯಾದ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರು ಸ್ಥಳೀಯ ಪೊಲೀಸ್ ಹಾಗೂ ಜಿಲ್ಲಾಡಳಿತದೊಂದಿಗೆ ಸಮರ್ಪಕವಾಗಿ ಸಮನ್ವಯ ಸಾಧಿಸಿದ್ದಾರೆಯೇ ಎಂಬುದನ್ನೂ ಸಿಬಿಐ ಪ್ರಶ್ನಿಸಿದೆ. ವಿಜಯ್ ಅವರ ಸಂಚಾರದಲ್ಲಿ ಹಾಗೂ ಅವರ ಪಕ್ಷದ ಕಾರ್ಯಕರ್ತರ ಚಲನವಲನದಲ್ಲಿ ಉಂಟಾದ ವಿಳಂಬಗಳು ಜನಸಂದಣಿಯ ಸ್ಥಿತಿಗತಿಗಳ ಮೇಲೆ ಬೀರಿದ ಪರಿಣಾಮವನ್ನೂ ಪರಿಶೀಲಿಸಲಾಗುತ್ತಿದೆ.
Thalapathy Vijay: ʻಜನ ನಾಯಗನ್ʼ ಚಿತ್ರಕ್ಕೆ ತಪ್ಪದ ಸಂಕಷ್ಟ, ಸದ್ಯಕ್ಕೆ ಸಿಗೋದಿಲ್ಲ ಸೆನ್ಸಾರ್ ಸರ್ಟಿಫಿಕೇಟ್; ಕೋರ್ಟ್‌ನಲ್ಲಿ ಮತ್ತೆ ಹೈಡ್ರಾಮಾ!
ಕಾರ್ಯಕ್ರಮಕ್ಕೆ ಪಡೆಯಲಾದ ಅನುಮತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಿಬಿಐ ಪರಿಶೀಲಿಸುತ್ತಿದ್ದು, ಕರೂರು ಕಾರ್ಯಕ್ರಮವನ್ನು ಯಾರು ಆಯೋಜಿಸಿದ್ದರು ಎಂಬುದರ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ. ಅಲ್ಲದೇ ಕಾರ್ಯಕ್ರಮದಲ್ಲಿ ಕುಡಿಯುವ ನೀರಿನ ಸೌಲಭ್ಯ, ಪ್ರವೇಶ-ನಿರ್ಗಮನ ದ್ವಾರಗಳು, ಮೂಲಭೂತ ಸೌಲಭ್ಯ ಹಾಗೂ ಉಂಟಾಗಬಹುದಾದ ಅಪಾಯದ ಬಗ್ಗೆ ವಿಜಯ್ ಅವರ ತಂಡ ಜಿಲ್ಲಾಡಳಿತದೊಂದಿಗೆ ಸಮನ್ವಯ ಸಾಧಿಸಿತ್ತೆ ಎಂಬುವುದು ತನಿಖೆಯ ಮತ್ತೊಂದು ಪ್ರಮುಖ ಅಂಶವಾಗಿದೆ
ವಿಜಯ್ ಅವರ ಕಾರವಾನ್ ವಾಹನ ಜನಸಂದಣಿಯ ಮಧ್ಯೆ ಹೇಗೆ ಸಂಚರಿಸಿತು, ಅದಕ್ಕೆ ಸ್ಥಳೀಯ ಪೊಲೀಸರ ಅನುಮತಿ ಇತ್ತೇ? ಕಾಲ್ತುಳಿತ ಘಟನೆ ಬಗ್ಗೆ ವಿಜಯ್ ಅವರಿಗೆ ಯಾವಾಗ ಮಾಹಿತಿ ಲಭಿಸಿತು ಮತ್ತು ಅದರ ನಂತರ ನಡೆದ ಘಟನೆಗಳ ಕ್ರಮ ಏನು ಎಂಬುದನ್ನೂ ತನಿಖೆ ಮಾಡಲಾಗುತ್ತಿದೆ. ಅವರು ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ ಹಾಗೂ ನಿರ್ಗಮಿಸಿದ ನಿಖರ ಸಮಯಗಳ ಕುರಿತ ಪ್ರಶ್ನೆಗಳೂ ವಿಚಾರಣೆಯ ಭಾಗವಾಗಿವೆ.
ಏನಿದು ಪ್ರಕರಣ?
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಡೆದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಪ್ರಚಾರ ಕಾರ್ಯಕ್ರಮದ ವೇಳೆ ಕಾಲ್ತುಳಿತ ಉಂಟಾಗಿ ಘಟನೆಯಲ್ಲಿ 41 ಮಂದಿ ಮೃತಪಟ್ಟು 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಘಟನೆಯು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು.
ಬಳಿಕ ತಮಿಳುನಾಡ ಪೊಲೀಸರು ಪ್ರಕರಣದ ತನಿಖೆ ನಡೆಸಿ ಅನೇಕ ಪ್ರಮುಖ ಅಂಶಗಳನ್ನು ಬೆಳಕಿಗೆ ತಂದಿತ್ತು. ಪ್ರಕರಣ ತೀವ್ರ ಕಾವು ಪಡೆದುಕೊಳ್ಳುತ್ತಿದ್ದಂತೇ ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿತ್ತು.
ತನಿಖೆಯ ಭಾಗವಾಗಿ, ಸಿಬಿಐ ನವದೆಹಲಿಯಲ್ಲಿ ಹಲವಾರು ಹಿರಿಯ ಟಿವಿಕೆ ನಾಯಕರನ್ನು ಈಗಾಗಲೇ ವಿಚಾರಣೆ ನಡೆಸಿದೆ. ತಮಿಳುನಾಡು ಸರ್ಕಾರದ ಲೋಪಗಳನ್ನು ಆರೋಪಿಸಿ ಪಕ್ಷದ ನಾಯಕರು ವಿಡಿಯೋ ದೃಶ್ಯಾವಳಿಗಳನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.
ಈ ಪ್ರಕರಣವನ್ನು ಸಿಬಿಐಗೆ ನೀಡಿದ ನಿರ್ಧಾರವನ್ನು ರದ್ದುಪಡಿಸುವಂತೆ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮನವಿ ಕೂಡ ಸಲ್ಲಿಸಿತ್ತು.
ಮನವಿಯಲ್ಲಿ ಸಿಬಿಐ ಮತ್ತು ಸುಪ್ರೀಂ ಕೋರ್ಟ್ ನೇಮಕ ಮಾಡಿದ ಮೇಲ್ವಿಚಾರಣಾ ಸಮಿತಿಯ ಅಧಿಕಾರವನ್ನು ತೆಗೆದುಹಾಕಲು ಯಾವುದೇ ಮಾನ್ಯ ಕಾರಣ ನೀಡಿಲ್ಲ ಎಂದು ಹೇಳಿದೆ.
ರಾಜ್ಯ ಸರ್ಕಾರ ಸಲ್ಲಿದ ಮನವಿಯಲ್ಲಿ ಹಲವು ಹೇಳಿಕೆಗಳು ಸುಳ್ಳು ಮತ್ತು ತಪ್ಪು ಮಾಹಿತಿ ನೀಡಲಾಗಿದೆ ಎಂದು ಟಿವಿಕೆ ಆರೋಪಿಸಿದೆ.