ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸದ್ಗುರುಗಳ ಕುರಿತಾದ ನಕಲಿ ಸುದ್ದಿಗಳ ವಿರುದ್ಧ ಕ್ರಮ ಕೈಗೊಳ್ಳಲು ಗೂಗಲ್‌ಗೆ ದೆಹಲಿ ಹೈಕೋರ್ಟ್‌ ಸೂಚನೆ

Isha Foundation: ಸದ್ಗುರುಗಳ ನಕಲಿ ಬಂಧನದ ಜಾಹೀರಾತುಗಳ ವಿಷಯವಾಗಿ ತನ್ನ ತಂತ್ರಜ್ಞಾನವನ್ನು ಬಳಸಲು ನ್ಯಾಯಾಲಯವು ಗೂಗಲ್ ಸಂಸ್ಥೆಗೆ ಆದೇಶಿಸಿದ್ದು, ಯಾವುದೇ ತಾಂತ್ರಿಕ ಮಿತಿಗಳು ಅಥವಾ ಆಕ್ಷೇಪಣೆಗಳಿದ್ದರೆ ಕಾರಣಗಳನ್ನು ವಿವರಿಸುವ ಪ್ರಮಾಣಪತ್ರವನ್ನು ಸಲ್ಲಿವಂತೆ ಸೂಚನೆ ನೀಡಿದೆ.

ಸದ್ಗುರುಗಳ ಕುರಿತಾದ ನಕಲಿ ಸುದ್ದಿಗಳ ವಿರುದ್ಧ ಕ್ರಮಕ್ಕೆ ಸೂಚನೆ

-

Ramesh B Ramesh B Oct 21, 2025 7:51 PM

ದೆಹಲಿ, ಅ. 21: ಸದ್ಗುರುಗಳ (Sadhguru) ನಕಲಿ ಬಂಧನದ ಜಾಹೀರಾತುಗಳ ವಿಷಯವಾಗಿ ತನ್ನ ತಂತ್ರಜ್ಞಾನವನ್ನು ಬಳಸಲು ನ್ಯಾಯಾಲಯವು ಗೂಗಲ್ (Google) ಸಂಸ್ಥೆಗೆ ಆದೇಶಿಸಿದ್ದು, ಯಾವುದೇ ತಾಂತ್ರಿಕ ಮಿತಿಗಳು ಅಥವಾ ಆಕ್ಷೇಪಣೆಗಳಿದ್ದರೆ ಕಾರಣಗಳನ್ನು ವಿವರಿಸುವ ಪ್ರಮಾಣಪತ್ರವನ್ನು ಸಲ್ಲಿವಂತೆ ಹೇಳಿದೆ. ಸದ್ಗುರುಗಳ ಎ.ಐ. ನಿರ್ಮಿತ ಚಿತ್ರಗಳನ್ನು ಬಳಸುವ ನಕಲಿ ಜಾಹೀರಾತುಗಳನ್ನು ತಡೆಯಲು ತಂತ್ರಜ್ಞಾನವನ್ನು ಬಳಸಬೇಕು ಎಂದು ಅಕ್ಟೋಬರ್ 14ರಂದು ದೆಹಲಿ ಹೈಕೋರ್ಟ್ (Delhi High Court) ಗೂಗಲ್ ಸಂಸ್ಥೆಗೆ ನಿರ್ದೇಶಿಸಿದೆ.

ಗೂಗಲ್‌ನ ವಿಡಿಯೊ ಮಾಧ್ಯಮವಾದ ಯೂಟ್ಯೂಬ್‌ನಲ್ಲಿ ಸದ್ಗುರುಗಳ ನಕಲಿ ಬಂಧನದ ಜಾಹೀರಾತು ಸೇರಿದಂತೆ ದಾರಿತಪ್ಪಿಸುವ ಎ.ಐ. ಡಿಫೇಕ್‌ ಸುದ್ದಿ ಹರಿದಾಡುತ್ತಿವೆ. ಸದ್ಗುರುಗಳ ಹೆಸರು, ಚಿತ್ರ ಮತ್ತು ವಿಡಿಯೊಗಳ ನಿರಂತರ ದುರುಪಯೋಗವನ್ನು ತಡೆಯುವಲ್ಲಿ ಗೂಗಲ್‌ ವಿಫಲವಾಗಿರುವುದನ್ನು ಉಲ್ಲೇಖಿಸಿ ಸದ್ಗುರು ಮತ್ತು ಈಶ ಫೌಂಡೇಶನ್ ಪದಾಧಿಕಾರಿಗಳು ಕೋರ್ಟ್‌ ಮೆಟ್ಟಿಲೇರಿದ್ದರು.

ಈಶ ಫೌಂಡೇಶನ್‌ನ ಎಕ್ಸ್‌ ಪೋಸ್ಟ್‌:



ನ್ಯಾಯಮೂರ್ತಿ ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರ ಏಕ ನ್ಯಾಯಾಧೀಶರ ಪೀಠವು ಗೂಗಲ್ ಸಂಸ್ಥೆಗೆ ಸದ್ಗುರುಗಳ ನಕಲಿ ಬಂಧನವನ್ನು ತೋರಿಸುವಂತಹ ಜಾಹೀರಾತುಗಳ ಪ್ರಕಟಣೆಯನ್ನು ನಿಲ್ಲಿಸಬೇಕು ಎಂದು ಹೇಳಿತು. ʼʼಈ ಸಮಸ್ಯೆಯನ್ನು ಪರಿಹರಿಸಲು ತಂತ್ರಜ್ಞಾನವನ್ನು ಬಳಸಬೇಕು. ಒಂದುವೇಳೆ ತಂತ್ರಜ್ಞಾನದ ಬಳಕೆಗೆ ಸಂಬಂಧಿಸಿದಂತೆ ಯಾವುದೇ ಮಿತಿಗಳು ಅಥವಾ ಆಕ್ಷೇಪಣೆಗಳಿದ್ದರೆ ಕಾರಣಗಳನ್ನು ವಿವರಿಸುವ ಪ್ರಮಾಣಪತ್ರವನ್ನು ಸಲ್ಲಿಸಬೇಕುʼʼ ಎಂದು ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ತಿಳಿಸಿದರು. ಇಂತಹ ಮಾಹಿತಿಯನ್ನು ತೆಗೆಯುವಂತೆ ಈಶ ಫೌಂಡೇಶನ್ ಗೂಗಲ್ ಸಂಸ್ಥೆಯನ್ನು ಪದೇ ಪದೆ ಸಂಪರ್ಕಿಸುವ ಬದಲು ಎರಡೂ ಸಂಸ್ಥೆಗಳು ಭೇಟಿಯಾಗಿ ಸಂಯುಕ್ತವಾಗಿ ಸಮಸ್ಯೆಯನ್ನು ಚರ್ಚಿಸಿ ಪರಿಹಾರವನ್ನು ಕಂಡುಕೊಳ್ಳುವಂತೆ ನ್ಯಾಯಾಲಯವು ನಿರ್ದೇಶನ ನೀಡಿದೆ.

ಬಂಧನ, ಮರಣ ಇತ್ಯಾದಿ ನಕಾರಾತ್ಮಕ ಘಟನೆಗಳನ್ನು ಬಳಸಿಕೊಂಡು ತಪ್ಪು ಮಾಹಿತಿ ನೀಡುವ ಜಾಹೀರಾತುಗಳನ್ನು ಪ್ರಕಟಿಸುವುದರ ವಿರುದ್ಧ ಗೂಗಲ್‌ ನಿಯಮ ಇದೆ. ಆದರೆ ಸದ್ಗುರು ವಿಚಾರದಲ್ಲಿ ಗೂಗಲ್‌ ಆ ನೀತಿಯನ್ನು ಅನುಸರಿಸುತ್ತಿಲ್ಲವೆಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು. ಹಿಂದೆ ತೆಗೆದುಹಾಕಲಾದ ಮಾಹಿತಿಯಂತೆಯೇ ಇರುವ ವಿಚಾರವನ್ನು ಪೂರ್ವಭಾವಿಯಾಗಿ ಗುರುತಿಸಲು ಸ್ವಯಂಚಾಲಿತ ಅಥವಾ ಇತರ ವಿಧಾನಗಳು ಸೇರಿದಂತೆ ತಂತ್ರಜ್ಞಾನ-ಆಧಾರಿತ ಕ್ರಮಗಳನ್ನು ನಿಯೋಜಿಸುವುದು ಗೂಗಲ್‌ನ ಕರ್ತವ್ಯ ಎಂದು ಸಹ ಸೂಚಿಸಲಾಯಿತು.

ಸದ್ಗುರುಗಳ ವ್ಯಕ್ತಿಗತ ಹಕ್ಕುಗಳನ್ನು ನಕಲಿ ಮತ್ತು ದಾರಿ ತಪ್ಪಿಸುವ ವಿಡಿಯೊಗಳು, ಪೋಸ್ಟ್‌ಗಳು ಮತ್ತು ಜಾಹೀರಾತುಗಳೊಂದಿಗೆ ಉಲ್ಲಂಘಿಸುತ್ತಿರುವ ಎಲ್ಲ ಚಾನೆಲ್‌ಗಳು ಮತ್ತು ಸಾಮಾಜಿಕ ಮಾಧ್ಯಮದ ಕೆಲವರ ವಿರುದ್ಧ ಮೊಕದ್ದಮೆ ಹೂಡುವ ಮೂಲಕ ಸದ್ಗುರು ಮತ್ತು ಈಶ ಫೌಂಡೇಶನ್‌ ಪದಾಧಿಕಾರಿಗಳು ದೆಹಲಿ ಹೈಕೋರ್ಟ್‌ ಸಂಪರ್ಕಿಸಿದ್ದರು. 2025ರ ಮೇ 30ರಂದು ಕೋರ್ಟ್‌ ಸದ್ಗುರುಗಳ ವ್ಯಕ್ತಿಗತ ಹಕ್ಕುಗಳಿಗೆ ರಕ್ಷಣೆ ನೀಡಿತ್ತು ಮತ್ತು ಅಂತಹ ಉಲ್ಲಂಘನೆಯ ಚಾನೆಲ್‌ಗಳು ಮತ್ತು ವಿಷಯವನ್ನು ತೆಗೆದು ಹಾಕುವಂತೆ ಮತ್ತು ನಿಷ್ಕ್ರಿಯಗೊಳಿಸುವಂತೆ ಗೂಗಲ್ ಸಂಸ್ಥೆಗೆ ನಿರ್ದೇಶನ ನೀಡಿತ್ತು.

ನ್ಯಾಯಾಲಯದ ಆದೇಶದ ಹೊರತಾಗಿಯೂ, ಯೂಟ್ಯೂಬ್‌ನಲ್ಲಿ ನಕಲಿ ಜಾಹೀರಾತು, ಮಾಹಿತಿ ಕಂಡುಬಂದಿವೆ. ಇವುಗಳಲ್ಲಿ ಸದ್ಗುರುಗಳ ಬಂಧನದ ಸುಳ್ಳು ಮಾಹಿತಿ ಹಾಗೂ ವಂಚನೆಯ ಜಾಹೀರಾತುಗಳು ಮತ್ತು ನಕಲಿ ಹೂಡಿಕೆ ಯೋಜನೆಗಳನ್ನು ಪ್ರಚಾರ ಮಾಡುವುದನ್ನು ತೋರಿಸುವ ವಿಕೃತ ವಿಡಿಯೊಗಳು ಸೇರಿವೆ.

ʼʼಸದ್ಗುರುಗಳ ಹೆಸರಿನಲ್ಲಿರುವ ಸಾರ್ವಜನಿಕ ನಂಬಿಕೆಯನ್ನು ಕುತಂತ್ರದಿಂದ ಬಳಸಿಕೊಂಡು, ತಪ್ಪು ಮಾಹಿತಿ ನೀಡುವ ಶೀರ್ಷಿಕೆಯ ಜಾಹೀರಾತುಗಳು ಪ್ರಸಾರ ಮಾಡಲಾಗುತ್ತಿದೆ. ಈ ಡಿಫೇಕ್‌ ಮತ್ತು ಮೋಸದ ಜಾಹೀರಾತುಗಳ ನಿರಂತರ ಪ್ರಸಾರವು ವ್ಯಾಪಕ ಗೊಂದಲ ಮತ್ತು ಕಳವಳವನ್ನು ಉಂಟು ಮಾಡಿದೆ. ಸಾವಿರಾರು ಸ್ವಯಂಸೇವಕರು ಮತ್ತು ಸಾರ್ವಜನಿಕರು ಸದ್ಗುರುಗಳ ಬಂಧನದ ಸುಳ್ಳು ಹೇಳಿಕೆಗಳನ್ನು ಪರಿಶೀಲಿಸಲು ಸಂಪರ್ಕಿಸುತ್ತಿದ್ದಾರೆ. ಅಂತಹ ಸಂಘಟಿತ ತಪ್ಪು ಮಾಹಿತಿಯು ಸದ್ಗುರುಗಳ ಘನತೆಗೆ ಹಾನಿ ಉಂಟು ಮಾಡುತ್ತದೆ, ಸಾರ್ವಜನಿಕ ನಂಬಿಕೆಯನ್ನು ದುರ್ಬಲಗೊಳಿಸುತ್ತದೆ ಮತ್ತು ಡಿಜಿಟಲ್ ಮಾಧ್ಯಮದ ಸಮಗ್ರತೆಯನ್ನು ಅಪಾಯಕ್ಕೆ ಸಿಲುಕಿಸುತ್ತದೆʼʼ ಎಂದು ಸದ್ಗುರ್‌ ಫೌಡೆಂಷನ್‌ನ ಮೂಲಗಳು ತಿಳಿಸಿವೆ.

ಅಂತಹ ವಂಚನೆಯ ಮಾಹಿತಿಯನ್ನು ತೆಗೆದುಹಾಕಲು ಮತ್ತು ಈ ಮೋಸದ ಜಾಲಕ್ಕೆ ಜನ ಬಲಿಯಾಗದಂತೆ ನೋಡಿಕೊಳ್ಳಲು ಈಶ ಫೌಂಡೇಶನ್ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳುವುದನ್ನು ಮುಂದುವರಿಸಿದೆ. ಸದ್ಗುರುಗಳನ್ನು ಬಂಧಿಸಲಾಗಿದೆ ಎಂದು ಸುಳ್ಳಾಗಿ ಹೇಳಿಕೊಳ್ಳುವ ಯೂಟ್ಯೂಬ್‌ನಲ್ಲಿರುವ ಯಾವುದೇ ನಕಲಿ ಸುದ್ದಿ ಅಥವಾ ವಿಡಿಯೊಗಳನ್ನು ಸ್ಕ್ಯಾಮ್ ಅಥವಾ ಮಿಸ್‌ಲೀಡಿಂಗ್‌ ಎಂದು ಗುರುತಿಸುವ ಮೂಲಕ ವರದಿ ಮಾಡುವಂತೆ ಮತ್ತು ಜಾಗರೂಕರಾಗಿರುವಂತೆ ಈಶ ಫೌಂಡೇಶನ್ ಸಾರ್ವಜನಿಕರಿಗೆ ಕರೆ ನೀಡಿದೆ.