ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಉಗ್ರರ ನೇಮಕಾತಿಗಾಗಿ ದೆಹಲಿ ಭೇಟಿ: ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಲಷ್ಕರ್ ಯೋಜನೆ ಹೇಗಿತ್ತು? ತನಿಖೆ ವೇಳೆ ಬಯಲಾಯ್ತು ಭೀಕರ ಸಂಚು

Terror Activities: ಲಷ್ಕರ್-ಎ-ತೈಬಾ ಮಾಡ್ಯೂಲ್ ಭಯೋತ್ಪಾದಕ ಸಂಚನ್ನು ದೆಹಲಿ ಪೊಲೀಸ್ ವಿಶೇಷ ದಳ ಭೇದಿಸಿದೆ. ತರಬೇತಿ ಪಡೆದ ಬಂಧಿತ ಎಲ್‌ಇಟಿ ಭಯೋತ್ಪಾದಕ ಶಬೀರ್ ಅಹ್ಮದ್ ಲೋನ್, ಬಾಂಗ್ಲಾದೇಶದಿಂದ ಮಾಡ್ಯೂಲ್ ಕಾರ್ಯಾಚರಣೆಯನ್ನು ನಿರ್ವಹಿಸುತ್ತಿದ್ದನೆಂದು ಹೇಳಲಾಗಿದೆ. ಲೋನ್ ಆಗಾಗ ದೆಹಲಿ ಮತ್ತು ಭಾರತದ ಇತರ ಭಾಗಗಳಿಗೆ ಭೇಟಿ ನೀಡುತ್ತಿದ್ದ.

ಉಗ್ರನ ಬಂಧನದ ಬಳಿಕ ಹೊರಬಿತ್ತು ಮತ್ತಷ್ಟು ʼಸ್ಫೋಟಕʼ ರಹಸ್ಯ

ಭಾರತದಲ್ಲಿ ಭಯೋತ್ಪಾದನಾ ಚಟುವಟಿಕೆ ನಡೆಸಲು ಲಷ್ಕರ್ ಯೋಜನೆ -

Priyanka P
Priyanka P Feb 23, 2026 6:59 PM

ದೆಹಲಿ, ಫೆ. 23: ಭಾನುವಾರ (ಫೆಬ್ರವರಿ 22) ಲಷ್ಕರ್-ಎ-ತೈಬಾ (LET) ಮಾಡ್ಯೂಲ್ ಭಯೋತ್ಪಾದಕ ಸಂಚನ್ನು ದೆಹಲಿ ಪೊಲೀಸ್ ವಿಶೇಷ ದಳ (Delhi special police force) ಭೇದಿಸಿದೆ. ಬಳಿಕ ಬಾಂಗ್ಲಾದೇಶ ಮೂಲದ ಹ್ಯಾಂಡ್ಲರ್ ಶಬೀರ್ ಅಹ್ಮದ್ ಲೋನ್ ಸುದ್ದಿಯಲ್ಲಿದ್ದಾನೆ. ತರಬೇತಿ ಪಡೆದ ಎಲ್‌ಇಟಿ ಭಯೋತ್ಪಾದಕ ಲೋನ್, ಬಾಂಗ್ಲಾದೇಶದಿಂದ ಮಾಡ್ಯೂಲ್ ಕಾರ್ಯಾಚರಣೆಯನ್ನು (Terror Activities) ನಿರ್ವಹಿಸುತ್ತಿದ್ದನೆಂದು ಹೇಳಲಾಗಿದೆ.

ಲೋನ್ ಆಗಾಗ ದೆಹಲಿ ಮತ್ತು ಭಾರತದ ಇತರ ಭಾಗಗಳಿಗೆ ಭೇಟಿ ನೀಡುತ್ತಿದ್ದ. ಅಲ್ಲದೆ ಬಾಂಗ್ಲಾದೇಶಿ ಪ್ರಜೆಗಳ ನೇಮಕಾತಿಗೆ ಅನುಕೂಲ ಮಾಡಿಕೊಡುತ್ತಿದ್ದ. ಭಾರತದಲ್ಲಿ ಬಾಂಗ್ಲಾ ಪ್ರಜೆಗಳನ್ನು ಅಕ್ರಮವಾಗಿ ವಾಸಿಸುವಂತೆ ಮಾಡುವುದು ಮತ್ತು ಅವರನ್ನು ಮೂಲಭೂತವಾದಿಗಳನ್ನಾಗಿ ಪರಿವರ್ತಿಸುವುದು ಆತನ ಪಿತೂರಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಲ್ಲಿ ಲೋನ್ ಭೇಟಿ ನೀಡಿದ ಕೊನೆಯ ಸ್ಥಳ ಶಾಹೀನ್ ಬಾಗ್ ಎಂದು ಮೂಲಗಳು ತಿಳಿಸಿವೆ. ಈ ಭೇಟಿಗಳ ಸಮಯದಲ್ಲಿ ಲೋನ್ ಪಡೆದ ಲಾಜಿಸ್ಟಿಕಲ್ ಬೆಂಬಲವನ್ನು ಗುರುತಿಸಲು ವಿಶೇಷ ಘಟಕವು ಅವನ ಸ್ಥಳೀಯ ಜಾಲವನ್ನು ಪರಿಶೀಲಿಸುತ್ತಿದೆ. ಫೆಬ್ರವರಿ 22ರಂದು ಮಾಡ್ಯೂಲ್ ಭೇದಿಸಿದ ಅಧಿಕಾರಿಗಳು ಏಳು ಬಾಂಗ್ಲಾದೇಶಿ ಪ್ರಜೆಗಳು ಸೇರಿದಂತೆ ಎಂಟು ಮಂದಿಯನ್ನು ಬಂಧಿಸಿದ್ದಾರೆ.

ಬಲೂಚಿಸ್ತಾನದಲ್ಲಿ 145 ಭಯೋತ್ಪಾದಕರು, 17 ಭದ್ರತಾ ಸಿಬ್ಬಂದಿ ಸಾವು

ದೆಹಲಿಯ ಹಲವು ಸ್ಥಳಗಳಲ್ಲಿ ಭಯೋತ್ಪಾದಕ ಬುರ್ಹಾನ್ ವಾನಿ, ಪಾಕಿಸ್ತಾನ ಮತ್ತು ಭಯೋತ್ಪಾದನಾ ಪರ ಪೋಸ್ಟರ್‌ಗಳನ್ನು ಹಾಕುವಲ್ಲಿ ಈ ಗುಂಪು ಸಕ್ರಿಯವಾಗಿ ಭಾಗಿಯಾಗಿರುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ. ಆ ನಂತರ ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಸಂಘಟಿತ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಫೆಬ್ರವರಿ 8ರಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಶಿಫ್ಟ್ ಇನ್‌ಚಾರ್ಜ್ ಸುಪ್ರೀಂ ಕೋರ್ಟ್ ಮೆಟ್ರೋ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ ನಂತರ ತನಿಖೆ ಆರಂಭಿಸಲಾಯಿತು. ಜನಪಥ್ ಮೆಟ್ರೋ ನಿಲ್ದಾಣದಲ್ಲಿ ಪಾಕ್ ಪರ ಮತ್ತು ಭಯೋತ್ಪಾದಕ ಪರ ಪೋಸ್ಟರ್‌ಗಳನ್ನು ಅಂಟಿಸಲಾಗಿರುವ ಬಗ್ಗೆ ದೂರು ಸಲ್ಲಿಸಲಾಗಿತ್ತು. ನಂತರ ದೆಹಲಿಯ ಇತರ ಸ್ಥಳಗಳಲ್ಲಿಯೂ ಇದೇ ರೀತಿಯ ಪೋಸ್ಟರ್‌ಗಳು ಕಂಡುಬಂದವು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ವಿಶೇಷ ಘಟಕ) ಪ್ರಮೋದ್ ಸಿಂಗ್ ಕುಶ್ವಾ ಹೇಳಿದರು.

ಇತ್ತೀಚಿನ ಬಾಂಗ್ಲಾದೇಶದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಸಂಪರ್ಕ ಹೊಂದಿರುವ ಲಷ್ಕರ್-ಎ-ತೈಬಾ ಉಗ್ರರ ಚಟುವಟಿಕೆಗಳನ್ನು ಈಗಾಗಲೇ ಗಮನಿಸುತ್ತಿದ್ದ ಸ್ಪೆಷಲ್ ಸೆಲ್, ಗುಪ್ತಚರ ಮಾಹಿತಿ ಸಂಗ್ರಹ ಮತ್ತು ತಾಂತ್ರಿಕ ನಿಗಾವಹಿಕೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.

ಫೆಬ್ರವರಿ 15ರಂದು ದಾಳಿ ನಡೆಸಿ, ಪಶ್ಚಿಮ ಬಂಗಾಳದ ಮಾಲ್ಡಾ ನಿವಾಸಿ ಉಮರ್ ಫಾರೂಕ್ (31) ಮತ್ತು ಬಾಂಗ್ಲಾದೇಶ ಮೂಲದ ರೋಬಿಯುಲ್ ಇಸ್ಲಾಂ (31) ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಯಿತು.

ಭಾರತದಲ್ಲಿ ಶಬೀರ್ ಅಹ್ಮದ್ ಲೋನ್‌ನ ಭಯೋತ್ಪಾದಕ ಜಾಲ

ವಿಚಾರಣೆ ವೇಳೆ, ಬಂಧಿತ ಫಾರೂಕ್ 2025ರ ಮಾರ್ಚ್‌ನಲ್ಲಿ ಲೋನ್‌ನನ್ನು ಭೇಟಿ ಮಾಡಿ ಅವನಿಂದ ಪ್ರಭಾವಿತನಾಗಿದ್ದ ಎಂಬುದು ತಿಳಿದುಬಂದಿದೆ. ಲೋನ್ ಭಾರತದಲ್ಲಿ ಉಗ್ರ ಚಟುವಟಿಕೆಗಳನ್ನು ಮುನ್ನಡೆಸಲು ಫಾರೂಕ್‌ನನ್ನು ನೇಮಿಸಿದ್ದು, ಭಾರತೀಯ ಗುರುತನ್ನು ಪಡೆದುಕೊಂಡಿದ್ದ ಬಾಂಗ್ಲಾದೇಶ ಮೂಲದವರ ಸಹಾಯ ಪಡೆಯುವಂತೆ ಸೂಚಿಸಿದ್ದ ಎಂದು ತಿಳಿದುಬಂದಿದೆ.

ಲೋನ್‌ನ ನಿರ್ದೇಶನದಂತೆ, ಫಾರೂಕ್ ಕೋಲ್ಕತ್ತಾದಲ್ಲಿ ಅಡಗು ತಾಣವನ್ನು ಬಾಡಿಗೆ ಪಡೆದು, ಅದನ್ನು ಭಯೋತ್ಪಾದಕ ಚಟುವಟಿಕೆಗಳ ಆಧಾರ ಕೇಂದ್ರವಾಗಿ ಬಳಸಲು ಮುಂದಾಗಿದ್ದಾನೆ. ಜತೆಗೆ, ಸ್ಥಳೀಯವಾಗಿ ಶಸ್ತ್ರಾಸ್ತ್ರಗಳನ್ನು ಪಡೆಯಲು ಮೂಲಗಳನ್ನು ಹುಡುಕಲು ಆರಂಭಿಸಿದ್ದಾನೆ.

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಭಯೋತ್ಪಾದನೆ ಗುಂಪು ಎಂದು ಘೋಷಿಸಿದ ಕೆನಡಾ

ಫೆಬ್ರವರಿ 6ರಂದು ಫಾರೂಕ್ ಮತ್ತು ರೋಬಿಯುಲ್ ಇಸ್ಲಾಂ ಕೋಲ್ಕತ್ತಾದಿಂದ ಪಾಟ್ನಾ ಮೂಲಕ ದೆಹಲಿಗೆ ತೆರಳಿದ್ದರು. ಫೆಬ್ರವರಿ 7ರ ರಾತ್ರಿ ಅವರು ದೆಹಲಿಯ 10 ಸ್ಥಳಗಳಲ್ಲಿ ಪಾಕಿಸ್ತಾನ ಪರ ಮತ್ತು ಭಯೋತ್ಪಾದನಾ ಪರ ಪೋಸ್ಟರ್‌ಗಳನ್ನು ಅಂಟಿಸಿ, ಕೃತ್ಯದ ವಿಡಿಯೊಗಳನ್ನು ರೆಕಾರ್ಡ್ ಮಾಡಿ ಲೋನ್‌ಗೆ ಕಳುಹಿಸಿದರು. ಫೆಬ್ರವರಿ 8ರಂದು ಅವರು ರೈಲಿನಲ್ಲಿ ಕೋಲ್ಕತ್ತಾಗೆ ಮರಳಿದರು.

ಶೋಧದ ಸಮಯದಲ್ಲಿ, ಆರೋಪಿಗಳ ಬಾಡಿಗೆ ವಸತಿಗೃಹಗಳಿಂದ ಭಯೋತ್ಪಾದನಾ ಪರ ಪೋಸ್ಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಎಕೆ-47 ರೈಫಲ್ ಮತ್ತು ಗ್ರೆನೇಡ್‌ಗಳು ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ಲೋನ್‌ನನ್ನು 2007ರಲ್ಲಿ ದೆಹಲಿ ಪೊಲೀಸರ ವಿಶೇಷ ಘಟಕ ಬಂಧಿಸಿತ್ತು ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶ್ರೀನಗರದ ಕಂಗನ್‌ನ ಲೋನ್ 2018ರಲ್ಲಿ ತಿಹಾರ್ ಜೈಲಿನಿಂದ ಬಿಡುಗಡೆಯಾದ ನಂತರ ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದ. ದೇಶದಲ್ಲಿ ಅಕ್ರಮವಾಗಿ ವಾಸಿಸುವ ಬಾಂಗ್ಲಾದೇಶಿಗಳ ಸ್ಲೀಪರ್ ಸೆಲ್‌ಗಳನ್ನು ಸಕ್ರಿಯಗೊಳಿಸುವ ಮೂಲಕ ಭಾರತದಲ್ಲಿ ಎಲ್‌ಇಟಿಯ ಭಯೋತ್ಪಾದಕ ಜಾಲವನ್ನು ಪುನರುಜ್ಜೀವನಗೊಳಿಸಲು ಕೆಲಸ ಮಾಡುತ್ತಿದ್ದ.

ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶಿ ಪ್ರಜೆಗಳನ್ನು ಭಯೋತ್ಪಾದಕ ಯೋಜನೆಗಳಿಗಾಗಿ ನೇಮಿಸಿಕೊಳ್ಳಲು ಲೋನ್‌ಗೆ ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್‌ಐ) ಬೆಂಬಲ ಮತ್ತು ಹಣಕಾಸು ಒದಗಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಬಂಧನದಿಂದ ಆಗಬಹುದಾಗಿದ್ದ ದೊಡ್ಡ ದುರಂತವೊಂದು ತಪ್ಪಿದೆ.