ಕೇತನ್ ಅಗರ್ವಾಲ್ ಸಾವಿನ ಬಗ್ಗೆ ಅಪಹಾಸ್ಯ ಮಾಡಿದ ದಂತ ವೈದ್ಯೆ; ಸುಶಿಕ್ಷತ ಸಮಾಜ ಎತ್ತ ಸಾಗುತ್ತಿದೆ? ನೆಟ್ಟಿಗರಿಂದ ಆತಂಕ
Dentist Suspended: ಕೇತನ್ ಅಗರ್ವಾಲ್ ಅವರ ಸಾವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಪಹಾಸ್ಯ ಮಾಡಿದ ಆರೋಪದ ಮೇಲೆ ಅಖಿಲ ಭಾರತ ದಂತ ವಿದ್ಯಾರ್ಥಿಗಳು ಮತ್ತು ಶಸ್ತ್ರಚಿಕಿತ್ಸಕರ ಸಂಘ ದಂತ ವೈದ್ಯೆ ಡಾ. ಮುಸ್ಕಾನ್ ಸೋನಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಕಾಲ ಅಮಾನತುಗೊಳಿಸಿದೆ.
ದಂತವೈದ್ಯೆ ಡಾ. ಮುಸ್ಕಾನ್ ಸೋನಿ (ಸಂಗ್ರಹ ಚಿತ್ರ) -
ನವದೆಹಲಿ, ಜು. 1: ಕೇತನ್ ಅಗರ್ವಾಲ್ ಸಾವಿನ (Ketan Agarwal's Death) ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ದಂತ ವೈದ್ಯೆಯನ್ನು ಐದು ವರ್ಷಗಳ ಕಾಲ ಅಮಾನತು ಮಾಡಲಾಗಿದೆ. ಕೇತನ್ ಅಗರ್ವಾಲ್ ಅವರ ಸಾವನ್ನು ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಅಪಹಾಸ್ಯ ಮಾಡಿದ ಆರೋಪದ ಮೇಲೆ ಅಖಿಲ ಭಾರತ ದಂತ ವಿದ್ಯಾರ್ಥಿಗಳು ಮತ್ತು ಶಸ್ತ್ರಚಿಕಿತ್ಸಕರ ಸಂಘ (All India Dental Students and Surgeons Association), ಮಧ್ಯ ಪ್ರದೇಶದ ದಂತವೈದ್ಯೆ ಡಾ. ಮುಸ್ಕಾನ್ ಸೋನಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಕಾಲ ಅಮಾನತುಗೊಳಿಸಿದೆ. ಅನುಚಿತ, ಆಕ್ರಮಣಕಾರಿ ಮತ್ತು ಅಗೌರವ ಎಂದು ಬಣ್ಣಿಸಿದ ಹೇಳಿಕೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಘ ತಿಳಿಸಿದೆ.
ಅಮಾನತು ಆದೇಶದಲ್ಲಿ, ʼʼಮಧ್ಯ ಪ್ರದೇಶದ AIDSA ಖಜಾಂಚಿಯಾಗಿ ನೇಮಕಗೊಂಡಿದ್ದ ಡಾ. ಮುಸ್ಕಾನ್ ಸೋನಿ ಶಿಸ್ತು ಉಲ್ಲಂಘನೆಯ ಕೃತ್ಯಗಳನ್ನು ಎಸಗಿರುವುದು ಮತ್ತು ದಿವಂಗತ ಕೇತನ್ ಅಗರ್ವಾಲ್ ಅವರ ಬಗ್ಗೆ ಅತ್ಯಂತ ಸೂಕ್ತವಲ್ಲದ, ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ಹೇಳಿಕೆನೀಡಿರುವುದು ಕಂಡುಬಂದಿದೆ. ಇದು AIDSAನ ಸಂವಿಧಾನ, ನಡಾವಳಿ ಸಂಹಿತೆ ಮತ್ತು ನೈತಿಕ ಮೌಲ್ಯಗಳ ಸ್ಪಷ್ಟ ಉಲ್ಲಂಘನೆಯಾಗಿದೆʼʼ ಎಂದು ತಿಳಿಸಲಾಗಿದೆ.
ಡಾ. ಸೋನಿಯನ್ನು ಐದು ವರ್ಷಗಳ ಕಾಲ AIDSAಯ ಎಲ್ಲ ಹುದ್ದೆಗಳು, ಕಚೇರಿಗಳು, ಜವಾಬ್ದಾರಿಗಳು, ಸಮಿತಿಗಳು, ಸದಸ್ಯತ್ವಗಳು ಮತ್ತು ಪ್ರತಿಯೊಂದು ಅಧಿಕೃತ ಪಾತ್ರದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ ಎಂದು ಸಂಘ ತಿಳಿಸಿದೆ. ಈ ಅವಧಿಯಲ್ಲಿ, ಆಕೆ ಸಂಘದ ಯಾವುದೇ ಚಟುವಟಿಕೆಯನ್ನು ಪ್ರತಿನಿಧಿಸಲು ಅಥವಾ ಭಾಗವಹಿಸಲು, ಅದಕ್ಕೆ ಸಂಬಂಧಿಸಿದ ಯಾವುದೇ ಹಕ್ಕುಗಳು ಅಥವಾ ಜವಾಬ್ದಾರಿಗಳನ್ನು ಚಲಾಯಿಸಲು ಅಥವಾ ಯಾವುದೇ ಹುದ್ದೆಯನ್ನು ಹೊಂದಲು, ಸ್ಪರ್ಧಿಸಲು ಅಥವಾ ನೇಮಕಗೊಳ್ಳಲು ಅನುಮತಿ ನೀಡುವುದಿಲ್ಲ. ಸಕ್ಷಮ ಪ್ರಾಧಿಕಾರವು ಆದೇಶವನ್ನು ಬದಲಿಸದ ಅಥವಾ ರದ್ದುಗೊಳಿಸದ ಹೊರತು ಅಮಾನತು ಐದು ವರ್ಷಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಿಯಾ ಸಹೋದರನ ವಿರುದ್ಧ 10 ಕೋಟಿ ರುಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಿದ ವಕೀಲ
ಕೇತನ್ ಅಗರ್ವಾಲ್ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿರುವಂತೆಯೇ ಈ ಕ್ರಮ ಕೈಗೊಳ್ಳಲಾಗಿದೆ. ಜೂನ್ 18ರಂದು ಲೋಹಗಢ ಕೋಟೆಯಲ್ಲಿ ಕೇತನ್ ಅಗರ್ವಾಲ್ ಅವರನ್ನು ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರೇಮಿ ಚೇತನ್ ಚೌಧರಿ ಹತ್ಯೆ ಮಾಡಿದ್ದರು. ಸಿಯಾ ಮತ್ತು ಚೇತನ್ ಇಬ್ಬರೂ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
ಕೇತನ್ ಜೂನ್ 18ರ ಬೆಳಗ್ಗೆ ಮನೆಯಿಂದ ಹೊರಟು ಕೋಟೆಗೆ ಹೋಗುವ ಮೊದಲು ಪುಣೆ-ಮುಂಬೈ ಹೆದ್ದಾರಿಯಲ್ಲಿರುವ ಕಿವಾಲೆ ಸೇತುವೆಯಿಂದ ಸಿಯಾಳನ್ನು ಪಿಕ್ ಮಾಡಿದ್ದರು. ಆರಂಭದಲ್ಲಿ ಕೇತನ್ ಸಾವು ಆಕಸ್ಮಿಕ ಎಂದು ಭಾವಿಸಲಾಗಿತ್ತು. ಆದರೆ ಕೇತನ್ ಕುಟುಂಬವು ಅನುಮಾನಗೊಂಡು ಪೊಲೀಸ್ ದೂರು ದಾಖಲಿಸಿತು. ತನಿಖೆಯಲ್ಲಿ ಸಿಯಾ ಮತ್ತು ಚೇತನ್ ಕೊಲೆಗೆ ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.