ಕಾಕ್ರೋಚ್ ಜನತಾ ಪಾರ್ಟಿಗೆ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಬೆಂಬಲ ಸಿಕ್ಕರೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕೇವಲ 1,200 ಮಂದಿ!
ನೀಟ್, ಸಿಬಿಎಸ್‌ಇ ಪರೀಕ್ಷೆಗಳಲ್ಲಿ ಅಕ್ರಮ ವಿರೋಧಿಸಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷವು ದೆಹಲಿಯ ಜಂತರ್ ಮಂತರ್ ನಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ 1,200 ಮಂದಿ ಭಾಗಿಯಾಗಿದ್ದರು. ಪ್ರತಿಭಟನೆಯ ನೇತೃತ್ವವ ವಹಿಸಲು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಅಮೆರಿಕದಿಂದ ಆಗಮಿಸಿದ್ದರು.
ಸಂಗ್ರಹ ಚಿತ್ರ -
ನವದೆಹಲಿ: ಭಾರಿ ಕುತೂಹಲ ಮೂಡಿಸಿದ ಕಾಕ್ರೋಚ್ ಜನತಾ ಪಕ್ಷದ (Cockroach Janata Party) ಪ್ರತಿಭಟನೆಯಲ್ಲಿ (CJP Protest) ಶನಿವಾರ 1,200 ಮಂದಿ ಭಾಗಿಯಾಗಿದ್ದರು. ನೀಟ್, ಸಿಬಿಎಸ್‌ಇ ಪರೀಕ್ಷೆಗಳಲ್ಲಿ ಅಕ್ರಮ ವಿರೋಧಿಸಿ, ಶಿಕ್ಷಣ ಸಚಿವ (Union Education Minister) ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್ ಜನತಾ ಪಕ್ಷವು ದೆಹಲಿಯ ಜಂತರ್ ಮಂತರ್ (Jantar Mantar) ನಲ್ಲಿ ಶನಿವಾರ ಪ್ರತಿಭಟನೆಯನ್ನು ನಡೆಸಿತ್ತು. ಇದರ ನೇತೃತ್ವವನ್ನು ವಹಿಸಲು ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಅಮೆರಿಕದಿಂದ ಆಗಮಿಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ದೊರೆತ ಬೆಂಬಲ ಬೀದಿಯಲ್ಲಿ ನಡೆಸುವ ಪ್ರತಿಭಟನೆಗೂ ಸಿಗಬಹುದು ಎನ್ನುವ ನಿರೀಕ್ಷೆ ಮೂಡಿಸಿದ್ದ ಕಾಕ್ರೋಚ್ ಜನತಾ ಪಕ್ಷದ ಪ್ರತಿಭಟನೆ ನೀರಸ ಪ್ರತಿಕ್ರಿಯೆ ದೊರೆತಿದೆ. ಮೇ ತಿಂಗಳ ಮಧ್ಯ ಭಾಗದಲ್ಲಿ ಸಾಮಾಜಿಕ ಮಾಧ್ಯಮದ ಇನ್ ಸ್ಟಾಗ್ರಾಮ್ ನಲ್ಲಿ ಹುಟ್ಟಿಕೊಂಡ ಸಿಜೆಪಿಗೆ ಭಾರಿ ಬೆಂಬಲ ವ್ಯಕ್ತವಾಗಿತ್ತು. ಆದರೆ ಅದು ಹೊರಗೆ ಜನರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಆದರೂ ಇದು ಒಂದು ಮೈಲುಗಲ್ಲಾಗಿ ಗುರುತಿಸಲ್ಪಟ್ಟಿದೆ.
ಮೋದಿ ವಿರೋಧಿ ಜನಾಂದೋಲನಕಾರರು ಮುಂದೆ ಅವರ ಅಭಿಮಾನಿ ಆಗೋದ್ಯಾಕೆ?
ವಿಡಂಬನಾತ್ಮಕ ಅಭಿಯಾನವಾಗಿ ರೂಪುಗೊಂಡ ಪಕ್ಷದ ಪ್ರತಿಭಟನೆಯಲ್ಲಿ 1,200ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ 2 ಕೋಟಿಗೂ ಹೆಚ್ಚು ಅನುಯಾಯಿಗಳನ್ನು ಗಳಿಸಿರುವ ಪಕ್ಷವು ಪ್ರಮುಖ ರಾಜಕಾರಣಿಗಳು, ಸಾಮಾಜಿಕ ಕಾರ್ಯಕರ್ತರ ಬೆಂಬಲ ಪಡೆದಿತ್ತು. ಇದರ ಬಳಿಕ ಶಕ್ತಿ ಪ್ರದರ್ಶನದ ಸಲುವಾಗಿ ದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಭಾರಿ ಜನ ಸೇರುವ ನಿರೀಕ್ಷೆ ಉಂಟಾಗಿತ್ತು.
ಸಿಜೆಪಿ ಪಕ್ಷದ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್, ಹಿರಿಯ ನಾಯಕರಾದ ಮನೀಶ್ ಸಿಸೋಡಿಯಾ, ಜರ್ನೈಲ್ ಸಿಂಗ್, ಪಕ್ಷದ ಮಾಜಿ ಸದಸ್ಯರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್, ತೃಣಮೂಲ ಕಾಂಗ್ರೆಸ್ ಸಂಸದೆ ಸಾಗರಿಕಾ ಘೋಷ್ ಸೇರಿದಂತೆ ಹಲವಾರು ಮಂದಿ ಬೆಂಬಲ ಸೂಚಿಸಿದ್ದರು.
ಪ್ರತಿಭಟನೆ ಪರಿಣಾಮ
ಸಿಜೆಪಿ ನಾಯಕರು ಪ್ರತಿಭಟನೆ ನಡೆಸಿ ನೀಟ್, ಸಿಬಿಎಸ್‌ಇ ಸೇರಿದಂತೆ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮಗಳ ಬಗ್ಗೆ ರಾಷ್ಟ್ರದ ಗಮನ ಸೆಳೆದರು. ಇತ್ತೀಚಿಗೆ ನಡೆದಿರುವ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧವಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಹೊಣೆಗಾರರನ್ನಾಗಿ ಮಾಡಿ ರಾಜೀನಾಮೆ ಸಲ್ಲಿಸಬೇಕೆಂದು ಒತ್ತಾಯಿಸಿದರು. ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ರೀತಿಯ ಸುಧಾರಣೆಗೆ ಕರೆ ನೀಡಿದರು.
ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರೊಂದಿಗೆ ಹಲವಾರು ಶಾಲಾ ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದರು. ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಏಳು ದಿನಗಳ ಗಡುವು ನೀಡಿದ್ದು, ಇದನ್ನು ತಪ್ಪಿದರೆ ಮುಂದೆ ಭಾರಿ ಪ್ರಮಾಣದಲ್ಲಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಿಜೆಪಿ ಪ್ರತಿಭಟನೆಗೆ ಬೆಂಬಲ ನೀಡಿರುವ ಸಾಮಾಜಿಕ ಕಾರ್ಯಕರ್ತೆ ಸೋನಮ್ ವಾಂಗ್ಚುಕ್ ಮತ್ತು ಹಲವಾರು ವಿರೋಧ ಪಕ್ಷದ ನಾಯಕರು ಇದು ಯುವಕರ ಕೋಪ ಮತ್ತು ಹತಾಶೆಯ ಅಭಿವ್ಯಕ್ತಿ ಎಂದು ಹೇಳಿದ್ದಾರೆ.
ಕುವೈತ್‌ನಿಂದಲೇ ವಾಟ್ಸ್‌ಆ್ಯಪ್‌ನಲ್ಲಿ ತ್ರಿವಳಿ ತಲಾಖ್ ಕಳುಹಿಸಿದ ಪತಿ; ಪೊಲೀಸ್ ದೂರು ನೀಡಿದ ಮಹಿಳೆ
ಸಿಜೆಪಿ ಪ್ರತಿಭಟನೆಗೆ ದೇಶ, ವಿದೇಶದ ರಾಜಕೀಯ ನಾಯಕರ ಕುಮ್ಮಕ್ಕು ಇರುವ ಆರೋಪಗಳು ಕೇಳಿ ಬಂದಿವೆ. ಅಭಿಜೀತ್ ದೀಪ್ಕೆ ಅವರು ಭಾರತಕ್ಕೆ ಬಂದ ಮೇಲೆ ಮೊದಲು ಕರೆ ಮಾಡಿದ್ದು ಸಿಪಿಐ ನಾಯಕಿ ಬೃಂದಾ ಕಾರಟ್ ಅವರಿಗೆ ಎನ್ನಲಾಗುತ್ತಿದೆ. ಅಲ್ಲದೇ ಸಿಜೆಪಿ ವಕ್ತಾರ ಸೌರವ್ ದಾಸ್ ಮತ್ತು 2020ರ ದೆಹಲಿ ಗಲಭೆಗೆ ಸಂಬಂಧಿಸಿದ ಕಾರ್ಯಕರ್ತರ ನಡುವಿನ ಸಂಪರ್ಕವಿದೆ ಎಂದು ಮಾಜಿ ಸೈನಿಕ ಲಕ್ಕಿ ಬಿಶ್ಟ್ ಆರೋಪಿಸಿದ್ದಾರೆ.